ಆದಪ್ಪ ಹೆಂಬಾ ಮಸ್ಕಿ ಕವಿತೆ-ತಿನ್ನು ಬಾರೋ ಒಡೆಯ

ಕಾವ್ಯ ಸಂಗಾತಿ

ತಿನ್ನು ಬಾರೋ ಒಡೆಯ

ಆದಪ್ಪ ಹೆಂಬಾ ಮಸ್ಕಿ

ಕಲ್ಲಾಗಿರುವ ದೇವರಲಿ
ನನ್ನದೊಂದರಿಕೆ
“ಜಳಕವ ಮಾಡಿ
ವಿಭೂತಿಯ ಧರಿಸಿ
ಪರಿಶುದ್ಧ ಮೀಸಲಿನ
ಪಕ್ವಾನ್ನ ತಂದಿರುವೆ
ಕಾಣುತಿಲ್ಲವೆ ನಿನಗೆ ?
ಕುಳಿತಿರುವೆ ಏಕೆ ?
ತಿನ್ನು ಬಾರೋ ಒಡೆಯ
ನಾ ತಂದ ಎಡೆಯ” ||

“ಚಿತ್ತವೆಲ್ಲೋ ಏನೋ
ಭಕ್ತಿಯೆಲ್ಲೋ ಏನೋ
ನೆತ್ತಿಯ ಮೇಲೆ
ಹೊತ್ತು ತಂದಿಹೆನು
ಇಷ್ಟವೋ ಕಷ್ಟವೋ
ಅಪ್ಪ ತೋರಿದ ದಾರಿ
ಬಂದಿಹೆನು ತಂದಿಹೆನು
ತಿನ್ನು ಬಾರೋ ಒಡೆಯ
ನಾ ತಂದ ಎಡೆಯ” ||

“ಉಂಬುವರ ಲೆಕ್ಕಿಸಿಯೇ
ರಸದೂಟ ಮಾಡಿರುವೆ
ನೀನೂ ಲೆಕ್ಕದಲುಂಟು
ಚಿಂತೆ ಬೇಡ
ನಸುನಗುತ
ತಿನ್ನು ಬಾರೋ ಒಡೆಯ
ನಾ ತಂದ ಎಡೆಯ” ||

“ಅಷ್ಟಕ್ಕೂ ನಿನ್ನ ತಟ್ಟೆಗೆ
ನಾನು ಇಕ್ಕುವುದು ಎಷ್ಡು ?
ನೀ ಬಂದು ಅದನು
ತಿನ್ನುವುದು ಇನ್ನೆಷ್ಟು ?
ನಿಜ ನೀ ದೇವರಂಥವನು
ಮಹಾ ಮೌನಿ
ತಡಮಾಡಬೇಡ ತಣ್ಣಗಾದೀತು
ತಿನ್ನು ಬಾರೋ ಒಡೆಯ
ನಾ ತಂದ ಎಡೆಯ” ||

ನನ್ನರಿಕೆಯ ಮನ್ನಿಸಿ
ಗುಡಿ ಬಿಟ್ಟು ಗಡಿ ದಾಟಿ
ಒಡೆಯ ಹೊರಬರಲಿಲ್ಲ
ನಾ ತಂದ
ಎಡೆಯನ್ನು ತಿನ್ನಲಿಲ್ಲ
ಮೂಕ ದೇವ!
ಒಳಗಿನಿಂದಲೇ ಪಿಸುಗುಟ್ಟಿದನು
ಮಾತೊಂದನು,
“ಭಾವ ಬುತ್ತಿಯೇನಲ್ಲ ನಿನದು, ಭಯದ ಭಕ್ತಿ
ನೀನಲ್ಲೆ ಇರು
ನಾನಿಲ್ಲೆ ಇರುವೆ
ಇರಲಿ ಅಂತರ
ನನಗೂ ನಿನಗೂ”
ನಮಿಸುತ್ತ ತಿನ್ನದಾ ಒಡೆಯನಿಗೆ
ನಾ ನಡೆದೆ ಆಸೆಗಣ್ಣಲಿ
ನನ್ನ ಮನೆಗೆ ||


ಆದಪ್ಪ ಹೆಂಬಾ ಮಸ್ಕಿ

2 thoughts on “ಆದಪ್ಪ ಹೆಂಬಾ ಮಸ್ಕಿ ಕವಿತೆ-ತಿನ್ನು ಬಾರೋ ಒಡೆಯ

Leave a Reply

Back To Top