ಇಳೆಯ ನಲಿವಿಗೆ ಮಳೆಯೆ ಕಾರಣ.ಕೆ. ಎನ್. ಚಿದಾನಂದ

ವಿಶೇಷ ಲೇಖನ

ಇಳೆಯ ನಲಿವಿಗೆ ಮಳೆಯೆ ಕಾರಣ.

ಕೆ. ಎನ್. ಚಿದಾನಂದ

ಇಳೆಗಿಳಿದ ಮಳೆಯ ಬಲದಿಂದ ಭೂತಾಯ ಮೊಗದಲ್ಲಿ ಚೆಲುವಿನ ನಗುವು . ವಸುಂಧರೆ ನಗುತಾಳೆ, ನಲಿಯುತಾಳೆ, ಸಂತಸದಿ ಸಡಗರವ ಸಂಭ್ರಮಿಸಿ ಉತ್ಸಾಹದಿ ಉತ್ಸವಗಳ ಅನುಭವಿಸುತಾಳೆ. ನುಡಿ ಪೂಜೆ ಗುಡಿಪೂಜೆಗಳ ಘಂಟಾನಾದದಿ ಹರ್ಷವನ್ನು ಪಡುತಾಳೆ. ಓಡುವ ಮೇಘಗಳು ನಿಂತು ಹರಸಿ ಸುರಿಸಿದ ವರ್ಷಧಾರೆಗೆ ಸಂಪೂರ್ಣ ಧರೆಯ ದೇವಿಯು ಮಿಂದೆದ್ದ ಭವ್ಯ ಸುಂದರಿಯಾಗಿ ಕಾಣುತಾಳೆ. ನವಿರಾದ ಹಸಿರಲ್ಲಿ ಚೆನ್ನಾದ ಚೆಲುವನ್ನು ಹೊಮ್ಮಿಸುತ ಪಾವಿತ್ರ್ಯ ಪೂರ್ಣ ಒಲವಿನ ಉಡುಗೊರೆಯ ಸಿರಿಧರೆಯ ಮಡಿಲಲ್ಲಿ ನಲಿದಾಡುತಿರುವ ಕೂಸು ಕಂದಮ್ಮಗಳಿಗೆ ನೀಡುತ್ತಾ ನಭೋ ಮಂಡಲದ ಮಿನುಗು ತಾರೆಗಳಂತೆ ಫಳಫಳನೆ ಹೊಳೆಯುತಿರಲು ಚೆಲುವಿನ ಸೊಬಗಿಗೇನು ಕಮ್ಮಿ?

ವರ್ಷಧಾರೆಯ ಒಲವಿಗೆ ಹರ್ಷವದು ಹೊಮ್ಮುತಿದೆ. ಎಲ್ಲೆಡೆಯು ಮೂಡುತಿದೆ ಚೆಲುವು. ಶೃಂಗಾರ ರಸ ಕಾವ್ಯ ಕಟ್ಟುವಿಕೆಗೆ ಇಳೆಗಿಳಿದ ಮಳೆಯೇ ಕಾರಣವು ಎಂಬುದು ನೆನಪಿರಲಿ. ಇಳೆಗಿಳಿದ ಮಳೆಯ ಬಲದಿಂದ ಪ್ರಕೃತಿ ಮಾತೆಯ ಸೊಬಗು ಇಮ್ಮಡಿಸಿದೆ. ಪ್ರಾಯದ ಹುಡುಗಿಯ ಮನದಲ್ಲಿ ಮೊದಲ ಪ್ರೇಮವು ಅಂಕುರಿಸಿದಂತೆ ನಿಸರ್ಗದ ಎಲ್ಲ ಗಿಡಮರಗಳಲ್ಲಿ ನವಿರಾದ ಹಸಿರು ಅಂಕುರಿಸಿದೆ. ತೂಗಾಡುವ ತೆಂಗು ಕಂಗುಗಳು ಮಾತೆ ನಿಸರ್ಗ ದೇವಿಗೆ ಚಾಮರವ ಬೀಸುವಂತೆ ಕಾಣುತಿದೆ. ವರ್ಷಧಾರೆಯ ಬಲದಿಂದ ಗಿಡಗಿಡದಲೂ ಮೊಗ್ಗುಗಳು ಹೂವಾಗಿ ಅರಳಿವೆ. ಹೂವುಗಳು ಕಾಯಾಗಿವೆ. ಕಾಯಿಗಳು ಸಿಹಿಯಾದ ಹಣ್ಣಾಗಿವೆ. ರಸಭರಿತ ಹಣ್ಣುಗಳು ಕಣ್ಣುಗಳ ನೋಟಕ್ಕೆ ಆಟವಾಗಿವೆ. ರಸಭರಿತ ಹಣ್ಣುಗಳು ನಾಲಿಗೆಯ ಸವಿರುಚಿಗೆ ಊಟವಾಗಿವೆ. ಹೀಗಿರಲು ಸಂದರ್ಭ, ಉಂಡು ಕೊಂಡಾಡುವ ಜನರಿಗೇನು ಕಮ್ಮಿ ?

ಇಳೆಗಿಳಿದ ಮಳೆಯ ಬಲದಿಂದ ಜಾತ್ರೆ ಜಾಂಬೂರಿಗಳು ನಡೆಯುತ್ತಿವೆ. ಭೂಮಾತೆಯ ಬಲದಿಂದ ಗೋಮಾತೆಯರು ಸವಿಯಾದ ಅಮೃತವನ್ನು ನೀಡುತ್ತಿದ್ದಾರೆ. ಸುಗ್ಗಿಯ ಹಾಡು ಕುಣಿತಗಳು ಮೇಳೈಸಿವೆ. ಇಳೆಯಲ್ಲಿ ಇಮ್ಮಡಿಸಿದ ಇಳುವರಿಯ ಬೆಳೆಯಿಂದ ಜನರ ಮನದಲ್ಲಿ ಮೊಗದಲ್ಲಿ ನಗುವೆಂಬ ಹೂವು ಅರಳಿದೆ. ಕಾಂಚಾಣ ದೇವಿಯು ಎಲ್ಲ ಹಸ್ತಗಳಲ್ಲೂ ಪ್ರತ್ಯಕ್ಷವಾಗಿ ಸಂತಸದ ನಲಿವಿಗೆ ಕಾರಣವಾಗಿಹಳು. ಅಂಗಡಿ ಮುಂಗಟ್ಟುಗಳು , ವಿಧವಿಧದ ಮಾರುಕಟ್ಟೆಗಳು ವ್ಯಾಪಾರ ವಹಿವಾಟುಗಳು ಚೆನ್ನಾಗಿವೆ. ಧರೆಯ ಜನರೆಲ್ಲ ಸಿರಿಯ ಸಂಪನ್ನರಾಗಿ ಬದುಕುತಿರಲು ಸಂತಸದ ನಗುವಿಗೇನು ಕಮ್ಮಿ ?

ಇಳೆಗಿಳಿದ ಮಳೆಯ ಬಲದಿಂದ ಮುಂಜಾನೆಯ ಮುಗಿಲ ಮಲ್ಲಿಗೆಯೆನಿಸಿದ ಚೆಂದದ ಸೂರ್ಯೋದಯವು ವೈವಿಧ್ಯಮಯವಾದ ಚೆಲುವಿನಿಂದ ಅನಾವರಣಗೊಂಡಿದೆ. ರವಿಯ ಎಳೆಗಿರಣಗಳ ಹೊಂಬಿಸಿಲ ತಾಪವು ಜೀವಿಗಳ ಮೈ ಮನಗಳಿಗೆ ಹಿತವೆಸಿದೆ. ವರ್ಣಮಯ ಧರೆಯ ಸಿರಿಯ ಸೊಬಗು ಸ್ವರ್ಗವನ್ನೆ ನಾಚಿಸುವಂತಿದೆ. ಮುಂಬೆಳಗಿನ ಹಕ್ಕಿಗಳ ಚಿಲಿಪಿಲಿಯ ಕಲರವವು ಸಂಗೀತ ವಾದ್ಯ ಗೋಷ್ಠಿಗಳನ್ನು ನಡೆಸುವಂತಿದೆ. ಹೀಗಿರಲು ಪಕೃತಿ ಮಾತೆಯು, ಕೋಗಿಲೆಗಳಂತೆ ಹಾಡುವ ಗಾನ ಗಂಧರ್ವರಿಗೇನು ಕಮ್ಮಿ? ಕಾವ್ಯಗಳು ಕಟ್ಟುವ ಜೀವ ಕವಿವರ್ಯರ ಭಾವಗಳಿಗೇನು ಕಮ್ಮಿ ?

ಇಳೆಗಿಳಿದ ಮಳೆಯ ಬಲದಿಂದ ಸರ್ವ ಕ್ಷೇತ್ರಗಳಲ್ಲೂ ನವ ಚೇತನವು ಮೂಡಿದೆ. ಬಡತನವ ನೀಗಿಸುವ, ಸಿರಿತನವ ಹೆಚ್ಚಿಸುವ ಶಕ್ತಿ ಇಳೆಗಿಳಿದ ಮಳೆಯ ಬಲದಿಂದ ಮಾತ್ರ ಸಾಧ್ಯ. ಸಿರಿಧರೆಯ ಚೆಲುವಿಗೆ, ಒಲವಿಗೆ , ಗೆಲುವಿಗೆ ಇಳೆಗಿಳಿದ ಮಳೆಯೆ ಕಾರಣವು . ಗುರುವರ್ಯರ ವಿದ್ಯಾ ಸಂಪನ್ನತೆಗೂ, ಬುದ್ಧಿ ವರ್ಯರ ಹಿತ ಚಿಂತನೆಗಳಿಗೂ ಇಳೆಗಿಳಿದ ಮಳೆಯೆ ಕಾರಣವು . ಮನೆಮನೆಗಳಲ್ಲೂ , ಮನಮನಗಳಲ್ಲೂ , ಉಲ್ಲಾಸದ ಉತ್ಸಾಹದ ಹೊಂಬೆಳಕಿನ ಆಶಾಕಿರಣಗಳು ಕುಡಿಯೊಡೆದು ಬೆಳೆಯುತಿವೆ. ಸರ್ವೇ ಜನಾಃ ಸುಖಿನೋ ಭವಂತು ಎಂಬಾಶಯಕೆ ಇಳೆಗಿಳಿದ ಮಳೆಯ ಬಲವೇ ಕಾರಣವು.


ಕೆ. ಎನ್. ಚಿದಾನಂದ

Leave a Reply

Back To Top