ಎ.ಎನ್.ರಮೇಶ್.ಗುಬ್ಬಿ- ಪ್ರೇಮದ ಹನಿಗಳು

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ.

ಪ್ರೇಮದ ಹನಿಗಳು

ಅಕ್ಷರ ಪ್ರಣತೆ.!

ಗೆಳತಿ ಕಾವ್ಯವಲ್ಲವಿದು
ಎದೆಯ ಭಾವನೈವೇದ್ಯ.!
ಬರಿಯ ಪದ್ಯವಲ್ಲವಿದು
ಒಲವ ದೀಪದೇದೀಪ್ಯ.!

(ನಿ)ವೇದನೆ.!

ಎಲ್ಲರೆದುರು ಸುಖಾಸುಮ್ಮನೆ
ಉದುರಿಸಬೇಡ ನಗೆಮುತ್ತು
ನೆನಪಿರಲಿ ಗೆಳತಿ ಅದು..
ನನ್ನೆದೆಯ ಅಮೂಲ್ಯ ಸಂಪತ್ತು.!

ಧ್ಯಾನ.!

ನನ್ನಯ ಎದೆಯ ಹಕ್ಕಿಗೆ
ನಿನ್ನ ಹೆಸರಿನದೇ ಧ್ಯಾನ
ನೆನಪಿನಂಬರದ ಚುಕ್ಕಿಗಳ
ಎಣಿಕೆಯಲ್ಲೇ ತಲ್ಲೀನ.!

ಮನವಿ..!

ನಿನ್ನಯ ಕಳ್ಳನೋಟಕ್ಕೆ
ಅರ್ಧ ಜೀವವಾಗಿದ್ದೇನೆ
ಮತ್ತೆ ತುಂಟನಗೆ ಬೀರಿ
ಪೂರ್ಣ ಸಾಯಿಸಬೇಡ.!

ಒಗಟು..!

ಸೋಲೇ ಇಲ್ಲದ ಒಲವಿನಲಿ
ಗೆಲುವಿನ ಹಂಬಲವೇಕೆ.?
ಸೋಲು ಗೆಲುವಿನ ಹಂಗಿಲ್ಲದೆ
ಆರಾಧಿಸುವ ಅನುರಾಗದಲಿ
ಬಲಾಬಲಗಳ ಬೆಂಬಲವೇಕೆ.?

ಪರಿಹಾರ..!

ನಿನ್ನ ಸಮಯ ಪಾಲನೆಗೂ
ನಿತ್ಯ ನನ್ನ ಕಾಯುವಿಕೆಗೂ
ಹೊಂದುವುದಿಲ್ಲ ಲಕ್ಕಾಚಾರ.!
ಹಾಗಾಗಿ ಬಿಚ್ಚಿಟ್ಟು ಬರುತ್ತೇನೆ
ಸದಾ ನನ್ನಯ ಕೈಗಡಿಯಾರ.!


Leave a Reply

Back To Top