ಡಾ.ಜಿ.ಪಿ.ಕುಸುಮ ಮುಂಬೈ ಕವಿತೆ-ಹುಟ್ಟಿ ಬಂದ ಮೇಲೆ!

ಕಾವ್ಯ ಸಂಗಾತಿ

ಹುಟ್ಟಿ ಬಂದ ಮೇಲೆ!

ಡಾ.ಜಿ.ಪಿ.ಕುಸುಮ ಮುಂಬೈ

ಹುಟ್ಟಿ ಬಂದ ಮೇಲೆ
ಸುತ್ತ ಬೆಳೆಸಿಟ್ಟ ಬೇಲಿಯೊಳಗಷ್ಟೇ
ಸುತ್ತಾಡಿ
ನಿನ್ನ ಬೇಟೆಗೆ ದೊರಕುತ್ತಾ
ಕದ್ದು ಕದ್ದು ಕಣ್ಣು ತೇವಗೊಳಿಸಿ
ನನ್ನ ನಾ ಬಂಧಿಸಿಕೊಂಡು
ಪೊರಕೆಯಾದಂತಹ ಹೇಡಿತನಕ್ಕೆ
ನಾಚಿಕೆಯಾಗುತ್ತಿದೆ.

ನೀನು ತೋರಿಸುತ್ತಾ ಬಂದಿರುವ
ಕನ್ನಡಿಯಲ್ಲೇ
ಮುಖ ಮೆದುಳನ್ನು
ಅದ್ದಿ ತೆಗೆದವಳು
ಈಗ ಬೇಲಿಯೊಂದಿಗೆ ಕಾದಾಡಿ
ಬಯಲಾಗಿದ್ದೇನೆ ನೋಡು
ಬದಲಾಗಿಲ್ಲ ನೀನು.

ಚೀತ್ಕಾರಗಳು ಮುಗಿದಿಲ್ಲ
ಚಿತೆಗೇರಿದವಳ
ಮೇಲೆ ಭುಗಿಲೇಳುತ್ತಿರುವ
ಬೆಂಕಿಯ ನಾಲಗೆ
ಎದೆ ಒಡೆವ ಸದ್ದು
ಎದ್ದು ಹಾರುವ ಬೂದಿಯ ಕಣ ಕಣ
ನನ್ನದೇ ಎಂದು ಅನ್ನಿಸುವಾಗಿನ ಕ್ಷಣ

ಚಿಂದಿಯಾಗಿಸಿದರೆ ನನ್ನ
ದೊಂದಿಯಾಗಿ ಉರಿಯಬಲ್ಲೆ
ಭೂಮಿತೂಕದ ನನ್ನ ಸಹನೆಗೆ
ತಿಲಾಂಜಲಿ ನೀಡಬಲ್ಲೆ
ನಿನ್ನ ಕಲ್ಲು ಹೃದಯವ
ಕುಕ್ಕಿ ಕುಕ್ಕಿ ಒಡೆವ ರಣಹದ್ದು
ನಾನಾಗುವೆ.

ಸಿಡಿಯಬಲ್ಲೆ
ನಿನ್ನ ಅಡ್ಡಡ್ಡ ಮಲಗಿಸಬಲ್ಲೆ
ಯುಗ ಯಾವುದಾದರೇನು?
ನೆಲಮುಗಿಲ ನಡುವೆ
ನಿನ್ನ ರೆಕ್ಕೆಗೆ ಕಡ್ಡಿ ಗೀರಬಲ್ಲೆ
ದುರ್ಗೆಯಾಗಿ ನಿನ್ನ
ಹಗಲನ್ನು ಎಚ್ಚರಿಸಿ
ಕಾಯಬಲ್ಲೆ ಬಯಲಲ್ಲಿ
ನಿನ್ನ ಎದುರುಗೊಳ್ಳಲು.


3 thoughts on “ಡಾ.ಜಿ.ಪಿ.ಕುಸುಮ ಮುಂಬೈ ಕವಿತೆ-ಹುಟ್ಟಿ ಬಂದ ಮೇಲೆ!

  1. ಡಾ. ಕುಸುಮ ಅವರೆ, ನಿಮ್ಮ “ಹುಟ್ಟಿ ಬಂದ ಮೇಲೆ” ಕವನ ಇತ್ತೀಚೆಗೆ ನಾನು ಓದಿದ ಒಂದು ಅತ್ಯುತ್ತಮ ಬರವಣಿಗೆ. ಧನ್ಯವಾದ ನಿಮಗೆ.

  2. ಶಹಬ್ಭಾಸ್ ಡಾ. ಕುಸುಮಾ. ಅಗತ್ಯ ಮೈಗೂಡಿಸಿಕೊಳ್ಳ ಬೇಕಾದ ವೈಚಾರಿಕ ಭಾವಾಭಿವ್ಯಕ್ತಿ.

Leave a Reply

Back To Top