ಅಮ್ಮ ನಾ ನಿನ್ನೊಳಗೊ..ನೀ ನನ್ನೊಳಗೊ…. ಗೀತಾಮಂಜು ಬೆಣ್ಣೆಹಳ್ಳಿ

ಲೇಖನ ಸಂಗಾತಿ

ಅಮ್ಮ ನಾ ನಿನ್ನೊಳಗೊ..ನೀ ನನ್ನೊಳಗೊ…

ಗೀತಾಮಂಜು ಬೆಣ್ಣೆಹಳ್ಳಿ

ಅವ್ವಾ ನಾ ಬರ್ಲಾ… ಹುಷಾರಾಗಿ ಬಸ್ಸತ್ತು. ಎಲ್ಲರೂ ಹತ್ತಿದ ಮ್ಯಾಲೆ ನೀ ಕಂಡಕ್ಟರ್ ನ ಮುದ್ದಾಪುರಕ್ಕೆ ಹೋಗುತ್ತಾ…? ಅಂತ ಒಂದ್ಸಲ ಕೇಳಿ ಬಸ್ಸತ್ತು. ನಾ ಇದ್ದು ಬಸ್ಸತ್ಸಿ ಹೋಗ್ಬೇಕು ಅಂತಿದ್ದೆ, ನಿನ್ನ ಅಳಿಯ, ಮಕ್ಕಳು ಸ್ಕೂಲಿಗೆ ಹೋಗ್ತಾವೆ ನಿಮ್ಮ ಅವ್ವನ್ನ ಬಸ್ಟ್ಯಾಂಡಿಗೆ ಬಿಟ್ಟು ಜಲ್ದಿ ಬಾ…. ಅಂತ ಹೇಳ್ಯಾನ…ಅದಕ್ಕ ನಾ ಹೋಗ್ತಿನವ್ವ , ಇಲ್ಲ ಅಂದ್ರೆ ಆ ಮನಸ ಸುಮ್ನೆ…ಸಿಡಿ…ಸಿಡಿ… ಅಂತಾನೆ, ಬರ್ಲಾ ಅವ್ವ..? ಅಂತ ಒಂದೇ ಸುಮ್ಮನೆ ಎಲ್ಲಾ ಗುತ್ತಿಗೆ ಹಿಡ್ಕೊಂಡೋಳಂತೆ. ಒಂದೇ ಉಸಿರಿಗೆ ಹೇಳಿ ಮುಗ್ಸಿದ್ಲು.  ಆದ್ರೆ ಅವಳು ಹೋಗ್ತೀನಿ ಅಂತ ಬಾಯಲ್ಲಿ ಹೇಳ್ತಿದ್ರು..ಕಣ್ಣಲ್ಲಿ ಮಾತ್ರ ಆ ದನಿಯನ್ನು ಚದುರಿಸಿ ನಿಲ್ಲುವ ಅದೆಂತದ್ದೋ…ಹೇಳಲಾಗದ ಅವ್ಯಕ್ತ ಭಾವದ ಬೀಸಣಿಗೆ ಗಾಳಿ ಹಾಕುತ್ತಲೇ ಇತ್ತು.  ಸಾಂಮ್ರಾಣಿಯ ಬಟ್ಟಲಲ್ಲಿ ಕೆಂಡಕ್ಕೆ ಸುಳಿವ ಸುಳಿಗಾಳಿಯಂತೆ ಈ ತನುಗಾಳಿಯ ಸಿಂಚನದ ಹನಿಗಳು ನನಗೂ ಮತ್ತು ನನ್ನ ಪಕ್ಕ ಕೂತಿದ್ದ ಮತ್ತೊಂದು ಹೆಂಗರಳಿಗೂ ತಾಕದೆ ಇರಲಿಲ್ಲ..

           ಪೂರ್ವಪರ ಏನೆಂದು ತಿಳಿಯದೆ ಪ್ರತಿಕ್ರಿಯಿಸುವಂತ ಯಾವ ಸಾಹಸಕ್ಕೂ ಇಳಿಯದೆ, ನಾನು ಬಸ್ಸಿಗಾಗಿ ಕಾಯುತ್ತಿದ್ದೆ.  ಆದರೆ ನನ್ನ ಪಕ್ಕ ಕೂತಿದ್ದ ಆ ಜೀವ ಅಲ್ಲಿನ ಯಾವುದನ್ನೂ ಲೆಕ್ಕಿಸದೆ, ತಡೆಯಲಾಗದೆ,  ತುಡಿತದಲ್ಲಿ ಅವ್ವ ಯಾವ ಊರಿಗೆ ಹೋಗಬೇಕು..?  ಎಂದ್ಲು..,,ಹಿಂದಿನ ಜನ್ಮದ ಕರುಳ ಬಂಧ… ಕಾತರಿಸಿ ಇಂದು ಕಲೆತುಕೊಂಡಂತೆ. ಎದುರಿಗಿದ್ದ ಅವ್ವನ ಪಕ್ಕದಲ್ಲಿ ಮನೆಗೆಂದು ಹೊರಟ  ಮಗಳು.. ನಮ್ಮವ್ವ  ಹೇಳಿ ಎಲ್ಲಿ ದಣಿಯುವಳೋ…. ಎಂಬಂತೆ….ಅಕ್ಕ ನಮ್ಮವ್ವ..ಇಲ್ಲೇ ಮುದ್ದಾಪುರಕ್ಕೆ ಹೋಗಬೇಕು ನೀವು ಯಾವ ಕಡೆ ಹೋಗ್ತೀರಿ…?ಅಂದ್ಲು, ನಾನು..ಆ ಕಡೆ ಬಸ್ಸಿಗೆ ಕಾಯ್ತಿದ್ದೀನಿ . ಮುದ್ದಾಪುರದ ಮುಂದಕ್ಕೆ  ಹೋಗ್ಬೇಕು ಅಂದ್ಲು . ಹಂಗಾದ್ರೆ ನಮ್ಮವ್ವನನ್ನು..ವಸಿ ಬಸ್ಸಲ್ಲಿ ಜೊತೆ ಕೂರ್ಸಕೊಂಡು,  ಕರ್ಕೊಂಡು ಹೋಗ್ತೀರಾ ಅಂದಾಗ.., ನೀ,.ಹೋಗವ್ವ ಹೆಣ್ಮಕ್ಕಳ ಜನ್ಮನೇ …ಇಷ್ಟು…ಆ ದೇವ್ರು ಅದೇನಂತ ಹೆಣ್ಣಿಗೆ

ಜೀವತುಂಬ್ಯಾನೋ…ಏನೋ…ಅವಂನ್ಗೆ… ಚೆಂದ ನೋಡು…ಈಗ್..ನೀ ಹೋಗವ್ವ..ನಾ ಕರ್ಕೊಂಡು ಹೋಗ್ತೀನಿ. ಈ ಅವ್ನನ್ನ ನೋಡಿದ್ರೆ ನಮ್ಮವ್ವನೇ ಎದುರಿಗೆ ಬಂದಂಗಾಯ್ತು….. ” ತಾಯಿ ಇದ್ರೇನೆ ಹೆಣ್ಮಕ್ಳ ಬಾಳಿಗೆ ಒಂದ್ ಕಳೆ ಇರುತ್ತೆ ನೋಡ್ “
ನಾನ್ ಪಾಪಿ ಕಣವ್ವ….ನಮ್ಮವ್ವನ್ನ ಕಳ್ಕೊಂಡೆ… ಅಂತ ಹೇಳ್ತಾ.. ಹೇಳ್ತಾ.. ಬರೋ ಕಣ್ಣೀರನ್ನು ಒತ್ತಿಕ್ಕಲು ಪ್ರಯತ್ನಿಸಿದರೂ,,ಅವ್ವನ ಪ್ರೀತಿಯ ಸೆಳೆತ ನಿಲ್ಲಬೇಕಲ್ಲ ಫಳಕ್ಕೆಂದು ಕೆನ್ನೆಯಿಂದ ಹರಿದು ಕತ್ತನ್ನು ಸ್ಪರ್ಶಿಸಿ ಒಂದು ಸುಧೀರ್ಘನಿಟ್ಟುಸಿರಲ್ಲಿ ಬಿಕ್ಕಿದವು. ಇದನ್ನು ನೋಡಿದ ಅವ್ವನ ಕರುಳು ಬಿಸಿಲಿಗೆ ಬಿದ್ದ ಮೀನಿನಂತೆ… ವಿಲ… ವಿಲ..ಎಂದು ಒದ್ದಾಡಿತು.. ಕಂದ … ಅಳಬೇಡ ಕಣೋ..ಹೆಣ್ಣು ಮಕ್ಕಳಂದ್ರೆ ಎಲ್ಲ ಒಂದೇನೇ……ತಾಳ್ಕೊಂಡು… ಬಾಳ್ಬೇಕು…ಸುಮಕ್ಕಿರು..ತಾಯಿ. ಎಲ್ಲರಿಗೂ, ಆ ಭಗವಂತ ಇದ್ದಾನೆ,… ಎಂದು ಹೇಳ್ತಾ… ಮನೆಗೆ ಹೊರಟಿದ್ದ ಮಗಳನ್ನು .. ನೀ ಮನೆಗ್ ನಡೆಯವ್ವ..ನಾನು ಈ ಮಗಳ ಜೊತೆ ಊರಿಗೆ ಹೋಗ್ತೀನಿ.  ಹೋದ್ಮೇಲೆ ತಮ್ಮನ ಹತ್ರ ಫೋನ್ ಮಾಡಿಸ್ತೀನಿ. ಅಂದು ಹೇಳಿ ಕಳಿಸಿದಳು.  ಇದನ್ನೆಲ್ಲ ಬಿಡುಗಣ್ಣು ಬಿಟ್ಕೊಂಡು ನೋಡ್ತಾ… ನೋಡ್ತಾ…ಎಲ್ಲಿದ್ದೀನಿ ಅನ್ನೋದರ ಪರಿವೇ ಇಲ್ಲದೆ ಕೂತಿದ್ದ ನಾನು, ಕಣ್ಣಲ್ಲಿ ಸರಿದಾಡುತ್ತಿದ್ದ ಹನಿಗಳನ್ನು ನಾಜೂಕಾಗಿ ಯಾರಿಗೂ ಗೊತ್ತಾಗದಂತೆ ತಡೆಯಬೇಕೆಂದು ಕೊಂಡ್ರೂ…ಕರುಳನ್ನೇ ಕತ್ತರಿಸಿಟ್ಟಂತಹ…ಅದೇ ಆ ಅವ್ವನ ಪ್ರೀತಿಯ ಮುಂದೆ ಶರಣಾಗಿ….ಕಣ್ತುಂಬಿ ಬಂತು.ಆದರೂ ಅದನ್ನು ತೋರಿಸಿಕೊಳ್ಳದೆ ನೀವು ಯಾಕ್ ಅಳ್ತಿರಾ ಬಿಡಿ, ಯಾವ ಕಡೆ ಮನೆ…? ಅಂದೆ, ಪಕ್ಕ ಕುಳಿತಿದ್ದ ಆ ವಾತ್ಸಲ್ಯಮಯಿಗೆ.  ಇಲ್ಲೇ, ಬಸ್ ಸ್ಟ್ಯಾಂಡ್ ದಾಟಿ ಸರ್ಕಲ್ ಪಕ್ಕದಲ್ಲಿರೋ ಹಿಟ್ಟಿನ ಗಿರಣಿ ಹತ್ರ ನಮ್ಮನೆ. ಅಂದು,  ಮಾತನ್ನು ಅಲ್ಲಿಗೆ ಮುಗಿಸದೆ.. ನಮ್ಮವ್ವ ತೀರ್ಕೊಂಡು ಈಗ ಎಲ್ಡು ವರ್ಸ್ ಆಯ್ತು, ನಾಳೆ ನಮ್ಮವ್ವನ

ಪುಣ್ಯತಿಥಿ ಐತೆ,  ಅಲ್ಲಿಗೆ ಹೊರ್ಟಿದ್ದೀನಿ. ಈ ಅವ್ವ ಥೇಟ್…ನಮ್ಮವ್ವನಂಗೆ ಅದಾಳ, ಅದಕ್ಕೆ ಅಳು ತಡ್ಕೊಳಕಾಗ್ಲಿಲ್ಲ… ಮೊದ್ಲಿಗೆ..ಜಲ್ದಿ ನೋಡಿದಾಗ ನಮ್ಮವ್ವ ಇಲ್ಲೇಗೆ ಬಂದ್ಲು ಅನಿಸ್ತು…, ಎನ್ನುವ ಅವಳ ಮಾತಿಗೆ..ಹೋಗ್ಲಿ ಬಿಡಿ ನಿಮ್ಮವ್ವ ಈ ರೂಪದಲ್ಲಿ ನಿಮಗೆ.. ಮತ್ತೆ ನೋಡೋಕೆ ಬಂದಾಳ… ಸಮಾಧಾನ ಮಾಡ್ಕೊಳ್ಳಿ ಅಂದಾಗ,, ಎದುರಿದ್ದ ಆ ಅವ್ವನಿಗೆ ಮಾತಿಲ್ಲ…ಮೌನದ ತೆರೆ, ಸಾವಿರ ಭಾವೋತ್ಪತ್ತಿಯ ಭೂಮಿಕೆಯಾಗಿ ಒಂದು ದೃಶ್ಯಕಾವ್ಯಕ್ಕೆ ಜೀವ ತುಂಬಿತು. ಇದನ್ನೆಲ್ಲಾ ನೋಡಿದ..ನನಗಂತೂ ಯಾವುದೋ…ಒಂದು ಹೊಸಲೋಕ ಹೊಕ್ಕು ವಿಹರಿಸಿದ ಅನುಭವದ ಅಲೆಗಳ ಏರಿಳಿತದಲ್ಲಿರುವಾಗಲೇ.. ನಾನು ಹೋಗುವ ಬಸ್ಸನ ಹಾರನ್ ಕೇಳಿ, ಮತ್ತೆ ವಾಸ್ತವಕ್ಕೆ ಬಂದೆ.ಆದರೆ ಕೈಲಿದ್ದ ಮೊಬೈಲ್ ನಲ್ಲಿ ಅವರಿಬ್ಬರ ಫೋಟೋ ತೊಗೋಳೋದು ಮಾತ್ರ ಮರೆಯಲಿಲ್ಲ… ಅವ್ವನ ಪಕ್ಕದಲ್ಲಿದ್ದ ಆ…ಧ್ವನಿ…ಕೇಳಿತು ಯಾಕ್ ಫೋಟೋ ತಗೊಂಡ್ರಿ.. ಮಾ..ಅಂತ. ನಾನು ಇದೇ ಊರಲ್ಲಿ ಇರೋದು, ನಿಮ್ಮ ನೆನಪಿಗೆ ಇರಲಿ ಅಂತ….ಅಂದೆ. ಹೌದ..ಆದ್ರೆ ಅದೇನೋ..ಫೋನಿಗೆ ಕಳಿಸ್ತಾರಲ್ಲ ಹಂಗ ಹಾಕಬ್ಯಾಡ್ರಿ..ನಮ್ಮ ಯಜಮಾನರು ಬಾಳ್… ಬಿಗಿ ಮನುಷ್ಯ… ಹಿಂಗೆಲ್ಲ… ನೋಡಿದ್ರೆ… ಮುಗಿತು… ಅಂದ್ಲು.., ಸರಿ ಬಿಡಕ್ಕ ನಾ ಯಾಕ್ ಹಾಕ್ಲಿ ಅವ್ವನ ಹುಷಾರಾಗಿ ಕರ್ಕೊಂಡು ಹೋಗ್ರಿ, ಎನ್ನುವ ಮಾತಲ್ಲಿ, ಆ ಹಿರಿಜೀವ ತನ್ನ ಸ್ವಂತ ಮಗಳ ಜೊತೆ ನಮ್ಮಿಬ್ಬರಿಗೂ ಕ್ಷಣ ಮಾತ್ರದಲ್ಲಿ ಅವ್ವನಾಗಿದ್ಲು. ಅಲ್ಲಿಂದ ಬಂದು ಬಸ್ಸತ್ತಿದ ನಾನು ಕಣ್ಣಿಂದ ಜಿನುಗುವ ಹನಿಗಳನ್ನು ಮರೆಮಾಚಲು ಪಟ – ಪಟ ಎಂದು ಎಷ್ಟೇ ಬಾರಿ ಕಣ್ರೆಪ್ಪೆ ಬಡಿದ್ರೂ…ಇಂಗಲಾರದ ಕಣ್ಣೀರು ಕಣ್ಣಿಂದ ಇಣಿಕಿ – ಇಣುಕಿ ಜಾರಿತು. ತಾಯಿ ಹಂಬಲಿಕೆಯ ಹೃದಯ,  ಮಗಳ ಚಡಪಡಿಕೆಗೆ ಉತ್ತರಿಸಲಾಗದ ಭಾರವಾದ ಮನಸ್ಸು ,  ತಾಯಿಯ ಪುಣ್ಯತಿಥಿ ಕಾರ್ಯಕ್ಕೆ ಹೊರಟ ಜೀವಕ್ಕೆ ಧುತ್ತೆಂದು… ಎದುರಾಗುವ ಅವ್ವ..,  ಇದನ್ನೆಲ್ಲಾ ನೋಡುವ ಸೂಕ್ಷ್ಮತೆಯ ನವಿರು ಎಳೆಗಳು ಯಾವ ಮಗ್ಗದ ಗೋಜಿಲ್ಲದೆ ತಮಗೆ ತಾವೇ.. ನೆಯ್ಗೆಯಲ್ಲಿ ತೊಡಗಿಕೊಂಡು ದುಪ್ಪಟವಾಗಿ ಬೆಚ್ಚನೆಯ ಹಿತವನ್ನು ನೀಡುವ ಈ ಮನಸುಗಳು ಎಲ್ಲಿಗೆಲ್ಲಿಯ ಸಂಬಂಧ..? ಮಾನವೀಯ ಅಂತ:ಕರಣ  ನಲುಗಿ ನಿಟ್ಟುಸಿರು ಬಿಡುತ್ತಿರುವಂತ ಈ ಕಾಲಮಾನದ ದಿನಗಳಲ್ಲಿ ಇಂಥದೊಂದು ಘಟನೆ,  ಸಂಬಂಧಗಳು ಸತ್ತಿಲ್ಲ ಇನ್ನೂ ಜೀವಂತ ಇವೆ. ಆ ಜೀವಂತಿಕೆಯನ್ನು ಕಾಣಲು ಕಣ್ಣಿನ ನೋಟ ಸಾಲದು.. ಹೃದಯ ಬೇಕು ಎನ್ನುವಂತಿತ್ತು. ಸಾವಿರ ಎಳೆಯ ಕಿರಣಗಳು ದಿವ್ಯ ಪ್ರಭೆಯಾಗಿ  ಜೋಪಡಿಯನ್ನು ಸ್ಪರ್ಶಿಸಿ ಬೆಳಗಿದಂತ ಅನುಭವ. ಎಲ್ಲಾ ಸಂಬಂಧಗಳು ಜೀವಂತ ಹಾಗೆ ಇವೆ…ಆದರೆ ನಮ್ಮ ಒತ್ತಡದ ಬದುಕು ಅವುಗಳನ್ನು ಅರಿಯುವ ಗೋಜಿಗೆ ಹೋಗುವುದಿಲ್ಲವಷ್ಟೇ..ಮಾತೃ ಹೃದಯಿಗಳಾಗಿದ್ದರೆ ಸಾಕು ಈ ದೃಶ್ಯಕಾವ್ಯವನ್ನು ಓದಲು.ಮತ್ಯಾವ ಪದವಿಗಳು ಈ ಕೋಶವನ್ನು ಓದಲಾರವು,  ಎನ್ನುವ ಮನದ ತರ್ಕಗಳಲ್ಲೇ…ನಾ ಬಸ್ ಹತ್ತಿ ಶಾಲೆಗೆ ಹೋಗುವ ಮೊದಲೆ.. ನನ್ನ ಅಮ್ಮನ ಮುಖ ನೋಡಿ,  ಮಾತಾಡಿಸಿ ಸ್ಕೂಲಿಗೆ ಹೋದೆ.. ಶಾಲೆಯ ಕಂಪೌಂಡ್ ಒಳಗೆ ಹೋದಾಗ..ಮಕ್ಕಳೆಲ್ಲಾ…ಗುಡ್ ಮಾರ್ನಿಂಗ್ ಮಿಸ್, ಎಂದರೂ ಅವರತ್ತ ಒಂದು ಕಿರುನಗೆಯನ್ನೂ ಬೀರಲಾರದಷ್ಟು ಮಟ್ಟಿಗೆ ನಾ ಮೌನಿಯಾಗಿದ್ದೆ. ಇಡೀ ದಿನ ಇದೇ ಮೌನ ನನ್ನನ್ನು ಆವರಿಸಿದ್ದು ಮಾತ್ರ ಸುಳ್ಳಲ್ಲ.  ಅಮ್ಮ ನಾ ನಿನ್ನೊಳಗೆ, ನೀ ನನ್ನೊಳಗೋ..? ಮೌನ ಸಂಭಾಷಣೆ…


ಗೀತಾಮಂಜು ಬೆಣ್ಣೆಹಳ್ಳಿ

One thought on “ಅಮ್ಮ ನಾ ನಿನ್ನೊಳಗೊ..ನೀ ನನ್ನೊಳಗೊ…. ಗೀತಾಮಂಜು ಬೆಣ್ಣೆಹಳ್ಳಿ

  1. ಕಥೆ ಮನ ಕಲಕಿತು.ಅವ್ವ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೂ ಕಾಡುವ ಪರಿ ಇದೆಯಲ್ಲ ಅದನ್ನು ಪದಗಳಲ್ಲಿ ವರ್ಣಿಸಲು ಬಾರದು. ಕಥೆಗಾರ್ತಿ ಗೀತಾ ಮೂಲತಃ ಕವಿ . ಸಮರ್ಥವಾಗಿ ಕತೆಯನ್ನೂ ಬರೆಯಬಲ್ಲೆ ಎಂದು ಈ ಮೂಲಕ ನಿರೂಪಿಸಿದ್ದಾರೆ..ಇಲ್ಲಿನ ಬಾಷೆ,ನಿರೂಪಣಾ ಶೈಲಿ ಆತ್ಮೀಯವಾಗಿದೆ. ಕತೆಯ ಹಂದರ ಮೇಲ್ನೋಟಕ್ಕೆ ಸರಳ ಎಂದು ಕಂಡರೂ ಭಾವನೆಗಳನ್ನು ಬೆಸೆಯಲು ಒಂದು ಸರಳ ಸಹಜ ಘಟನೆಯೂ ಸಾಕು ಎಂಬುದನ್ನು ಈ ಕತೆ ನಿರೂಪಿಸುತ್ತದೆ . ವಸ್ತು ಮತ್ತು ವಿಷಯ ಸಾರ್ವತ್ರಿಕವಾದರೂ ಕಥೆ ಕಟ್ಟುವ ತಂತ್ರ ಮತ್ತು ನಾಜೂಕುತನ ದಿಂದ ಈ ಕಥೆ ಮನೆ ಮನೆಯ ಕಥೆ,ನಮ್ಮದೇ ಕಥೆಯಂತೆ ಜೀವ ತುಂಬಿಕೊಂಡಿದೆ.ಇದು ಕಥೆ ಯಾಗದೆ ವಾಸ್ತವ ಸಂಗತಿಯಾಗಿ ಪರಿಣಮಿಸಿದೆ. ಈ ದೃಷ್ಟಿಯಿಂದ ಗೀತಾ ರವರು ಕಥಾಲೋಕಕ್ಕೆ ಹೊಸ ಭರವಸೆ ತುಂಬಬಲ್ಲರು.
    ಎನ್ ಟಿ ಎರ್ರಿ ಸ್ವಾಮಿ
    ನಿವೃತ್ತ ಕೆನರಾ ಬ್ಯಾಂಕ್ ಡಿ ಎಂ

Leave a Reply

Back To Top