ಸಾಕ್ಷಿ ಶ್ರೀಕಾಂತ ತಿಕೋಟಿಕರ-ಸೊರಗಿದ ಊರು

ಕಾವ್ಯ ಸಂಗಾತಿ

ಸೊರಗಿದ ಊರು

ಸಾಕ್ಷಿ ಶ್ರೀಕಾಂತ ತಿಕೋಟಿಕರ. ( ಸಾಕಿ)

ಊರುಗಳು ಸೊರಗುತಿವೆ ಗಾತ್ರದಲಿ
ಗಿಡಮರ, ಬಯಲು,ಸೀಮೆಪಾತ್ರದಲಿ
ವಿಶಾಲವಾದ ತಾರಸಿ ಮನೆಸೂತ್ರದಲಿ
ಜನ ಚದುರಿದರು ಪಟ್ಟಣದ ಯಾತ್ರೆಯಲ್ಲಿ

ಎಲ್ಲಿ ಹೋದರು ಬುಟ್ಟಿಯ ಮೇದಾರರು
ಕಲ್ಲ ಕಡಿಯುವ ಕಲಾನಿಪುಣ ವಡ್ಡರು
ಮಲ್ಲು ಸೀರಿಯ ನೇಯುವ ನೇಕಾರರು
ಮಣ್ಣಿನ ಗಡಿಗೆ ಮಡಿಕೆಯ ಕುಂಬಾರರು

ಕಟ್ಟೆಗೆ ಕೂತು ಊರ ಹರಟೆಯಮಲ್ಲರು
ಯಂಕ, ನಾಣ, ಸೀನ, ರುದ್ರ, ಶಿವ ಎಲ್ಲರೂ
ಕಾಣರು ಪಟ್ಟಾಂಗದ ಚೌಕಾಬಾರ ಗೊಲ್ಲರು
ಮಾತಿಗೆಮಾತು ಬೆಸೆಯಲು ಯಾರು ನಿಲ್ಲರು

ಸರಕಾರಿ ಆಸ್ಪತ್ರೆಯ ಡಾಕ್ಟರ ದವಾದೌಲತ್ತು
ಅಳಲೆಕಾಯಿ ಪಂಡಿತ ರಾಮಣ್ಣನ ನುಂಗಿತ್ತು
ಸೂಲಗಿತ್ತಿ ಸಾಬವ್ವನ ಕೈಚಳಕವೂಕುಂದಿತ್ತು
ಆರೋಗ್ಯ ಕಾರ್ಯ ಕರ್ತೆ ಆಶಾ ಕರಾಮತ್ತು

ಶಿವನಿಗೆ ಬಿಲ್ವವಿಲ್ಲ, ಹನುಮನಿಗೆ ಹೂವಿಲ್ಲ
ಅರ್ಚಕರಿಗೂ ಅವಸರ ನೌಕರಿ ಬಿಡುವಿಲ್ಲ
ಗುಡಿಗೂ ಬೀಗಜಡಿದು ದೇವರಿಗೂ ನೋವಿಲ್ಲ
ಪೂಜೆಯ ಗೌಜು ದೂರ ಎಲ್ಲೂ ನಲಿವಿಲ್ಲಾ

ಭಟ್ಟರ ಮಗ ಶೆಟ್ಟರ ಮಗ ಊರುಬಿಟ್ಟರು
ಕೆಳಗಿನ ಓಣಿಯ ಮಕ್ಕಳು ಕೂಡಹೊಂಟರು
ಕೆಲಸ, ಕೂಲಿ, ಉಂಬಳಿ ಹುಡುಕುವ ಪಂಟರು
ದಂಡುದಂಡಿನಲಿ ನಗರಕೆ ಸೇರುವ ನೆಂಟರು

ಅಬ್ಬರದಲ್ಲಿ ಮೊಳಗುವ ಊರಿನ ಜಾತ್ರೆ
ವರುಷಕೊಮ್ಮೆ ಬಂದರೆ ಮುಗೀತು ತಾಪತ್ರೆ
ನಾಟಕ ಪಾರಿಜಾತ ದೊಡ್ಡಾಟವಿಲ್ಲ ರಾತ್ರೆ
ಪಟ್ಟಣದ ಸವಿಸುದ್ದಿಯೇ ನಿಂತರೆ ಕೂತ್ರೆ

ಹುಲ್ಲುಸೂಡಿನ ಚಹಾದಂಗಡಿ ಗಮ್ಮತ್ತು
ಮಳೆಗಾಲಕೆ ಸುಡುವ ಬಜ್ಜಿ ಘಮ್ಮಿತ್ತು
ತಲೆ ಎತ್ತಿದೆ ದೊಡ್ಡ ಹೋಟೆಲ ಕಿಮ್ಮತ್ತು
ಮಂಚೂರಿ, ನೂಡಲ್ಸ ದೋಸೆ ಸುಮ್ಮಿತ್ತು

ಹೋದರೆಲ್ಲಿ ಲಂಗದಾವನಿ ನೀರೆಯರು
ಪರಕಾರಪೋಲಕ, ಜಡೆಯ ಪೋರಿಯರು
ಮುಂಡಾಸು ಧೋತರದ ಮೀಸೆ ಹಿರಿಯರು
ಟೋಪ ಸೆರಗು ಅಂಚುಸೀರೆಯ ಬಾಯಾರು

ಬಳಕುತಿದ್ದ ಊರು ಬಡವಾಯಿತು ಹೇಗೆ
ಉಳುತಿದ್ದ ನೆಲ ಬರಡಾಯಿತು ಹಾಗೆ
ಹೊನ್ನಹೊಂಗೆ ಮಾವುಬೇವು ತುಂಗೆಗಂಗೆ
ಬಸವ, ರಾಸು ಎಲ್ಲವೂ ಹೋತು ಕಾಣದಂಗೆ!!!


ಸಾಕ್ಷಿ ಶ್ರೀಕಾಂತ ತಿಕೋಟಿಕರ. ( ಸಾಕಿ)

Leave a Reply

Back To Top