ಡಾ ಅನ್ನಪೂರ್ಣ ಹಿರೇಮಠ-ಮೌಢ್ಯ ತೊಡೆಯೋಣ ಬನ್ನಿ

ಕಾವ್ಯ ಸಂಗಾತಿ

ಮೌಢ್ಯ ತೊಡೆಯೋಣ ಬನ್ನಿ

ಡಾ ಅನ್ನಪೂರ್ಣ ಹಿರೇಮಠ

ಮೂಢನಂಬಿಕೆಯ ತೊಡೆಯೋಣ ಬನ್ನಿ
ಅಂಧ ಜಾಡ್ಯಗಳ ಅಳಿಸೋಣ ಬನ್ನಿ
ಹುಲಸಾಗಿ ಬೆಳೆದ ಕೆಟ್ಟ ಕಳೆಯ ತೆಗೆಯೋಣ ಬನ್ನಿ
ಸಮಾಜ ಸದೃಢತೆಗೆ ದುಡಿಯೋಣ ಬನ್ನಿ//

ಅಲ್ಲ ಸಲ್ಲದ್ದ ಅಳಿಸುತ ಸರಿತಪ್ಪುಗಳ ತಿಳಿಯುತ
ಸರಿದಾರಿ ಹಿಡಿದು ಸತ್ಯದೆಡೆ ನಡೆದು
ಮಿತ್ಯವಳಿಸುತ ನಿತ್ಯ ದುಡಿಯುತ
ಅಂಧಕಾರ ಅನಾಚಾರಗಳ ಹುಟ್ಟಡಗಿಸಲು
ಕೈಜೋಡಿಸಬನ್ನಿ ಒಂದಾಗಿ ಚೆಂದಾಗಿರಲು//

ಹುಟ್ಟಿ ಬಂದಿಹೆವು ನಿಮಿತ್ಯ ಮಾತ್ರಕೆ
ಜೋತೆಯಾಗಿಹೆವು ಎರಡೆಜ್ಜೆ ನಡೆಯಲು
ಯಾರಿಗ್ಯಾರಿಲ್ಲ ಯಾರ ಜೋತೆ ಯಾರು ಬರುವರಿಲ್ಲ
ಎಲ್ಲೊ ಹುಟ್ಟಿ ಹೇಗೊ ಸೇರಿ ತುಸು ವಿರಮಿಸುವ ಜೀವನವಿದು ನೆಮ್ಮದಿಯ
ಬದುಕನು ಬಾಳುತ ಸಾಗೋಣ ಬನ್ನಿ//

ಮಾನ ಮರ್ಯಾದೆ ಎಂಬುದು
ಗಣತೆ ಗೌರವಕಲ್ಲ ಸ್ಥಿತಿಗತಿಗಳಿಗಲ್ಲ
ಪಟ್ಟ ಪದವಿ ಘನತೆಗಳು ಶಾಶ್ವತವಲ್ಲ ಎಲ್ಲ
ಬಿಟ್ಟು ಬದುಕು ಬದುಕಲು ಸವೆಯಬೇಕಲ್ಲ
ನನ್ನಂತೆ ಪರರೆಂದು ತಿಳಿಯಲು ಕೈಜೋಡಿಸೋಣ ಬನ್ನಿ//

ಅರಿವು ಆಚಾರ ಕಲಿಯಲು
ಮೌಲ್ಯ ಮಾನಗಳ ಅಳೆಯಲು
ವಿಷ ಬೀಜದಂತಿಹ ಮೌಧ್ಯತೆಯನು ಅಳಿಸಿ
ಉಸಿರಾಗುವ ಸತ್ಯತೆಯ ಮರಗಳ ನೆಡಲು
ಸಮಾಜ ಹಸಿರಾಗಿಸುವ ವಿಚಾರಗಳ ಹೂಳಲು
ಬನ್ನಿ ಕೈಜೋಡಿಸಿ ಎಲ್ಲರೂ ಇಂದೇ //

ಕವಲು ದಾರಿಗಳ ಒಂದಾಗಿಸಿ
ಎಡರು ತೊಡರುಗಳ ಎದುರಿಸಿ
ಬಿಂಕ ಬಿಗುಮಾನಗಳ ಕೊಡವಿ
ಅಂಕುಡೊಂಕುಗಳ ತಿದ್ದಿ ತಿಡಿ
ಸಂಕೋಲೆಗಳ ಕಳಚಿ ಸಮ
ಸದೃಢ ಸಮುದಾಯದ
ಕನಸು ನನಸಾಗಿಸಲು ಕೈಜೋಡಿಸ ಬನ್ನಿ//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top