ಕಾವ್ಯ ಸಂಗಾತಿ
ಒಲವೇ
ಸಂತೆಬೆನ್ನೂರು ಫೈಜ್ನಟ್ರಾಜ್
ಹೃದಯದ ಹಾಡು
ಕಣ್ಣಲ್ಲಿ ಅದು ಮಂಡಿಯೂರಿ ಕೂತಿದೆ
ನೆತ್ತಿ ಮೇಲಿನ ಕಿರಣ ಒಲವಾಗಿ
ಮೌನ ತುಟಿಗಳ ಮೇಲೆ ಮೆಲ್ಲ ಹೂತಿದೆ
ಮೂಗ ನತ್ತಿಗೆ ಕವಿತೆ ಎಲ್ಲಿ ಗೊತ್ತು
ಮುತ್ತ ಹಾಳೆಯ ಕೆನ್ನೆಗೆ ಕೈ ತಬ್ಬಿ ಕೂತಿದೆ
ಬೆಲ್ಲ ಗದ್ದ ಹೊಳೆವ ಕಣ್ಣ ಕಾಣದು
ಕೊರಳ ಸುತ್ತ ಹಾಡೊಂದು ಮಲಗಿದೆ
ದಿಟ್ಟಿಸಿದ್ದು ಸಾಕು ಬಿಡು ಹೆಣ್ಣೆ
ಸುಟ್ಟು ಹೋದೀತೀ ಹೃದಯ ಮತ್ತು ಒಲವು
ನಕ್ಕುಬಿಡು ಮನಸಾರೆ ಒಲವೇ ಗೆಲ್ಲಲಿ
ಕೆಂದುಟಿ ಅರಳಲಿ ತಿಳಿ, ಪ್ರೀತಿಗೆಂದೂ ಗೆಲುವು!
ಒಲವೆಂದರೆ ಕೆಂಡದ ಕಡಲು
ಬೇಕೆಂದರೆ ಸುಮ್ಮನೆ ಈಜಬೇಕು
ಆಚೆಗಿದೆ ಭಾವ ತೀರ
ಒಂದಾಗಿ ಮುಳುಗಿಯಾದರೂ ಸಾಗಬೇಕು!
ಎದೆ ತುಂಬಾ ನಿನ್ನದೇ ಹಾಡಿವೆ
ಬೆಸೆ ಬೆರಳು ಮೌನವಾಗಿ ನಡೆಯುವ
ಒಲವೆಂದರೆ ಬೆಳದಿಂಗಳೇ
ತುಟಿಕಚ್ಚಿ ಮೆಲ್ಲ ಸಿಕ್ಕಿದ್ದನ್ನೇ ಪಡೆಯುವ!
ಕೊರಳ ಸುತ್ತ ಬೆರಳ ಬೇಟೆ
ಮೈ ಗುಹೆಯಲ್ಲಿ ಸಣ್ಣ ಕಂಪನ
ತುಟಿ ಬ್ರಷ್ಷದು ಎಲ್ಲೋ ತಿರುಗಿ
ಎಡೆಬಿಡದ ದೀರ್ಘ ಚುಂಬನಾಲಿಂಗನ!
ಕಣ್ಣ ಕಲ್ಲಂಗಡಿ
ತುಟಿಯ ಐಸಿನಲಿ ಒಲವಾಗುತಿದೆ
ಎದೆಯ ಕಡಲು
ಉಕ್ಕುಕ್ಕಿ ಎಂದೋ ಹಾಡುವ ಹಾಡಾಗುತಿದೆ!
ಹಣೆಯಿಂದ ಹೊರಟ ಕಣ್ಣು
ಮುಖ ಸರ್ಕಲ್ಲ ಸುತ್ತಿ ಅದೆಲ್ಲೋ ನಿಂತಿದೆ
ಮಿಸುಕಾಡದ ಅಧರಗಳ
ಮಧ್ಯ ಒಲವ ಹಾಡೊಂದು ನೋಡು ಕುಂತಿದೆ!
ಕಡಲೊಂದು ಮೈ ಮುರಿಯುತ್ತಾ
ನಿನ್ನ ಕಣ್ಣಲ್ಲಿ ಮಲಗಿದೆ ನೋಡು ಸುಮ್ಮನೆ
ಮುಂಗುರುಳ ಸರಿಸಿ ಮರೆಯಾದ ಹೂಗೆನ್ನೆ
ಮೇಲೆ ಹೊಸ ಕವಿತೆ ಬರೆಯಬೇಕು ನೋಡು ಸುಮ್ಮನೆ!
ಸಂತೆಬೆನ್ನೂರು ಫೈಜ್ನಟ್ರಾಜ್