ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ತನಗಗಳು
1…. ಹೆಪ್ಪಿಟ್ಟ ಕರಿಮೋಡ
ಕರಗಿ ಸುರಿಸಿದೆ
ಮುತ್ತು ಹನಿಗಳ
ಮಿಂಚಿನ ಝಳಪಿಗೆ..
2…. ದಣಿದ ಭೂತಾಯಿಗೆ
ಮಜ್ಜನದ ಸಂಭ್ರಮ
ಮುಂಗಾರು ಮಳೆ ಧಾರೆ
ಸುರಿದಾಗ ಬಾನಿಂದ…
3…. ಮೊಳೆತಿದೆ ಬೀಜವು
ಮಳೆ ಹನಿ ಮುತ್ತಿಗೆ
ಸಂತಸದ ಕ್ಷಣವು
ಸಂಭ್ರಮವು ರೈತಗೆ…
4…. ಚಿಗುರಿದೆ ಹಸಿರು
ಒಣಗಿದ ಕೊಂಬೆಗೆ
ತುಂಬುತಿದೆ ಉಸಿರು
ಮುರುಟಿದ ರೆಂಬೆಗೆ…
5…. ಮೋಡದ ಮರೆಯಿಂದ
ಇಣುಕಿದ ಸೂರ್ಯನು
ಭುವಿಯ ಐಸಿರಿಯ
ಕಂಡು ಬೆರಗಾದನು…
6…. ತರುಮರವೆಲ್ಲವೂ
ನಲಿದು ಸಂಭ್ರಮಿಸಿ
ವರುಣನ ಕೃಪೆಗೆ
ತಲೆ ಬಾಗಿ ನಮಿಸಿ..
7…. ನಕ್ಕು ಹರಿಯುತಿವೆ
ನದಿ ತೊರೆ ಝರಿಯು
ಗಿರಿಗಳೊಡಲಿಂದ
ಧುಮ್ಮಿಕ್ಕಿ ಹಾಲ್ನೊರೆಯು..
8…. ಕನಲಿಹ ಚಂದಿರ
ಮುಂಗಾರಿನಾ ಮಳೆಗೆ
ಹುಣ್ಣಿಮೆಯ ಬೆಳಕು
ಬೀರದೆ ಈ ಇಳೆಗೆ…
9…. ತುಂತುರು ಹನಿಗಳು
ಮೊಗ್ಗುಗಳ ತಬ್ಬಲು
ನಾಚಿ ಅರಳಿದವು
ಸೌಗಂಧದ ಘಮಲು..
10…. ಏನೆಂಬೆ ಪ್ರಕೃತಿಯ
ಸೋಜಿಗದ ವೈಚಿತ್ರ್ಯ
ದೇವನ ಆ ಕುಂಚದ
ಅದ್ಭುತ ಕಲಾ ಚಿತ್ರ…
ಸೂಪರ್, ಒಂದಕ್ಕಿಂತ ಒಂದು ಅರ್ಥಪೂರ್ಣ ತನಗಗಳು.
ಸ್ಪಂದನೆಗೆ ಧನ್ಯವಾದಗಳು..
ಹಮೀದಾ ಬೇಗಂ.