ಅಂಕಣ ಸಂಗಾತಿ
ನನ್ನಿಷ್ಟದ ಪುಸ್ತಕ….
ಸುಧಾ ಪಾಟೀಲ
ಸಾಧನಾ ( ಜೀವನದ ಸಾಕ್ಷಾತ್ಕಾರ )
ರವೀಂದ್ರನಾಥ ಟಾಗೂರ್
ಪುಸ್ತಕದ ಹೆಸರು…. ಸಾಧನಾ ( ಜೀವನದ ಸಾಕ್ಷಾತ್ಕಾರ )
ಲೇಖಕರು… ರವೀಂದ್ರನಾಥ ಟಾಗೂರ್
ಪ್ರಕಾಶಕರು…ಕಾಮಧೇನು ಪುಸ್ತಕ ಭವನ
ಬೆಲೆ….150 ರೂ
ರವೀಂದ್ರನಾಥ ಟಾಗೂರ ಅವರ ಸಾಧನಾ ( ಪ್ರಬಂಧ ಸಂಕಲನ ) ಪುಸ್ತಕವನ್ನು ಅನುವಾದಕರಾದ
ಮಹಿಪಾಲ ದೇಸಾಯಿ ಅವರು 2015 ರಲ್ಲಿ ಪ್ರಕಟಿಸಿ
ದರು. 160 ಪುಟಗಳ ಈ ಪುಸ್ತಕ ಟಾಗೂರ್ ಅವರ
ಭಾವಚಿತ್ರದೊಂದಿಗೆ ಸುಂದರವಾಗಿ ಮೂಡಿಬಂದಿದೆ.
ಇದನ್ನು ” ಮೆಲ್ಲನೆ ಮನದಿ ಭಗವಂತನನ್ನು ಮೆಚ್ಚಿಸು
ತ್ತಿರುವ ಭಕ್ತರಿಗೆ ” ಅರ್ಪಿಸಿದ್ದಾರೆ. ಪುಸ್ತಕವನ್ನು ತಿರುವಿ
ಹಾಕುವ ಮುನ್ನ ರವೀಂದ್ರನಾಥ ಟಾಗೂರ್ ಅವರ
ಬಗೆಗೆ ಒಂದಿಷ್ಟು ಮಾತು.
ಕಳೆದ ಶತಮಾನದ ಎರಡನೆಯ ದಶಕ ಭಾರತೀಯ
ಸಾಹಿತ್ಯ ಹೊಸ ಒಲವಿನೊಂದಿಗೆ ಮೈಕೊಡವಿ ಎದ್ದಿತು.
ಆಗ ಭಾರತದಲ್ಲಿ ಮುಂಚೂಣಿಯಲ್ಲಿದ್ದವರು ಬಂಗಾಲದ ಸಾಹಿತಿಗಳು….ಬಂಕಿಮಚಂದ್ರ, ಶರತ್ ಚಂದ್ರ , ಇತ್ಯಾದಿ ಲೇಖಕರಲ್ಲದೆ , ರವೀಂದ್ರನಾಥ ಟಾಗೂರ್ ಅವರು ಹೊಳೆ -ಹೊಳೆಯುವ ಶುಕ್ರತಾರೆ
ಯಾಗಿ ಕಂಡರು. ರವೀಂದ್ರನಾಥ ಟಾಗೂರರು ಮೂಲತಃ ಕವಿ. ಅವರ ಪ್ರತಿಭೆ ಬಂಗಾಲಿ ಕಾವ್ಯ ಕ್ಷೇತ್ರಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿತು. ಜೊತೆಗೆ ಅವರ ನಾಟಕಗಳು , ಕತೆಗಳು , ಪ್ರಬಂಧಗಳು
ಮುಂತಾದವುಗಳೆಲ್ಲ ಸಮಕಾಲೀನ ಲೇಖಕರನ್ನು ಹೊಸ
ಲೋಕಕ್ಕೆ ತಂದುಬಿಟ್ಟವು. ರವೀಂದ್ರರು ಬೆಳೆದದ್ದು
ಒಂದು ಸುಸಂಸ್ಕೃತ ಮನೆತನದ ಪರಿಸರದಲ್ಲಿ. ಪಾರ
ಮಾರ್ಥಿಕ ದೃಷ್ಟಿ ಹೊಂದಿದ ಆದರೆ ಲೌಕಿಕವನ್ನು ನಿರ್ಲಕ್ಷಿಸದ, ಉಪನಿಷತ್ತಿನ ಸೂಕ್ತಿಗಳನ್ನು ದಿನನಿತ್ಯ
ಕೇಳುತ್ತಿರುವ ಮನೆತನ ಅವರದು. ಹುಟ್ಟು ಪ್ರತಿಭಾವಂತ
ರಾದ ರವೀಂದ್ರರು ಅಂತರ್ಮುಖಿಗಳಾದುದು ತೀರ
ಸಹಜವಾದುದು. ಹಾಗಿರುವುದರಿಂದ ಬದುಕಿನಹಲವು
ಆದರ್ಶಗಳನ್ನು ಮೈಗೂಡಿಸಿಕೊಳ್ಳುತ್ತ ನಮ್ಮ ದೇಶ , ನಮ್ಮ ಸಂಸ್ಕೃತಿ , ನಾವು ಬದುಕುವುದರ ಧ್ಯೇಯೋ
ದ್ದೇಶಗಳು ಅವರನ್ನು ಬಾಲ್ಯದಿಂದಲೇ ಒಂದು ಮಟ್ಟಕ್ಕೆ ಬೆಳಸಿದವೆಂದು ಹೇಳಬಹುದು. ಅವರು ಕುತೂಹಲಾಸಕ್ತಿಯಿಂದ ಭಾರತದ ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡುತ್ತಲೇ ತಮ್ಮ ಕಾರ್ಯ
ಕ್ಷೇತ್ರಗಳನ್ನು ಗುರುತಿಸಿಕೊಂಡರು. ರಾಷ್ಟ್ರಪ್ರೇಮಿಯಾಗಿ,
ಸಮಾಜಸುಧಾರಕರಾಗಿ , ಶಿಕ್ಷಣವೇತ್ತರಾಗಿ , ಆಧ್ಯಾತ್ಮ
ಚಿಂತಕರಾಗಿ ವೈವಿದ್ಯಪೂರ್ಣವಾದ ತಮ್ಮ ವ್ಯಕ್ತಿತ್ವ
ವನ್ನು ರೂಪಿಸಿಕೊಂಡರು. ಎಲ್ಲಕ್ಕೂ ಮಿಗಿಲಾಗಿ ಅವರು
ಕವಿಗಳಾಗಿ ವಿಶ್ವಮಾನ್ಯರಾದದ್ದು ಒಂದು ಅನನ್ಯ ಸಾಧನೆ. ಅವರು ಭಾರತೀಯ ಕಾವ್ಯಕ್ಕೇ ಗುರುಗಳು.
ಹಾಗೆಯೇ ರಾಷ್ಟ್ರೀಯ ಚಿಂತನೆಗೂ ಅವರು ಗುರುಗಳು.
ಅವರನ್ನು ‘ ಗುರುದೇವ ‘ ಎಂದು ಗುರುತಿಸಿದವರು
ಮಹಾತ್ಮಾ ಗಾಂಧೀಜಿ. ಭಾರತೀಯ ಅನೇಕ ಭಾಷೆಯ
ಕವಿಗಳು ಅವರನ್ನು ‘ ಗುರುದೇವ ‘ ಎಂದೇ ಕಂಡು
ಕೊಂಡರು. ಕನ್ನಡದ ವರಕವಿ ಬೇಂದ್ರೆ ‘ ಗುರುದೇವ ‘
ಎಂದೇ ಪದ್ಯ ಬರೆದಿದ್ದು ಈಗ ಇತಿಹಾಸ.
ಗುರುದೇವ ರವೀಂದ್ರರು ಸ್ಥಾಪಿಸಿದ ‘ ಶಾಂತಿನಿಕೇತನ ‘
ಭಾರತದ ವಿವಿಧ ಪ್ರದೇಶದ ಕವಿ, ಕಲಾವಿದರನ್ನು ಆಕರ್ಷಿಸಿದ್ದು ಒಂದು ದಾಖಲೆ. ಈಗಲೂ ಅದು ಒಂದು
ಸೂಜಿಗಲ್ಲು.ಕಲೆ, ಸಾಹಿತ್ಯಗಳ ಬೆಳವಣಿಗೆಗೆ ರವೀಂದ್ರರ
ಬದುಕೇ ಒಂದು ಸಾಧನಾರಂಗ. ಸಾಹಿತ್ಯದ ಒಲವಿದ್ದ
ವರು ಹಾಗೂ ಅಂತರ್ಮುಖಿಗಳು ಅವರ ಸಾಹಿತ್ಯವನ್ನು ಮತ್ತೆ ಮತ್ತೆ ಅವಲೋಕಿಸುತ್ತಾರೆ.
ಪ್ರಸ್ತುತ ಪ್ರಬಂಧ ಸಂಕಲನ ಸಾಧನಾ , ಎಂಬುದು
ಇಂಗ್ಲಿಷ್ನಲ್ಲಿಯೂ ಅದು ‘ ಸಾಧನಾ ‘ ಎಂದೇ ಇದೆ. ಇದನ್ನು ರವೀಂದ್ರರು The realisation of life ಎಂದೇ ಗುರುತಿಸಿದ್ದಾರೆ. Realisation ಎಂಬುದಕ್ಕೆ
ಸಾಧನೆ , ಸಾಕ್ಷಾತ್ಕಾರ ಎಂಬ ಅರ್ಥಗಳಿವೆ. ಪ್ರಸ್ತುತ
ಗ್ರಂಥದಲ್ಲಿಯ ಕೊನೆಯ ನಾಲ್ಕು ಅಧ್ಯಾಯಗಳು
‘ ಪ್ರೇಮದಲ್ಲಿ ಪರಮಾತ್ಮನ ಸಾಕ್ಷಾತ್ಕಾರ ‘, ‘ ಕರ್ಮದಲ್ಲಿ
ಪರಮಾತ್ಮನ ಸಾಕ್ಷಾತ್ಕಾರ ‘ ‘ ಸೌಂದರ್ಯದ ಸಾಕ್ಷಾತ್ಕಾರ ‘ ‘ ಆನಂತತೆಯ ಸಾಕ್ಷಾತ್ಕಾರ ‘ ಎಂದೇ
ಅನುವಾದಿಸಲ್ಪಟ್ಟಿವೆ. ಈ ಅನುವಾದ ಸೂಕ್ತ. ಒಟ್ಟು
ಪ್ರಬಂಧಗಳ ಸಂಖ್ಯೆ ಎಂಟು. ಮೊದಲನೆಯ ಪ್ರಬಂಧ
‘ ವಿಶ್ವದೊಡನೆ ವ್ಯಕ್ತಿಯ ಸಂಬಂಧ ‘ ಎಂಬುದು. ಇದು
ಅತ್ಯಂತ ಚಿಂತನೀಯವಾದ ಪ್ರಬಂಧ. ಹಾಗೆ ನೋಡಿದರೆ ಎಲ್ಲ ಪ್ರಬಂಧಗಳು ಗಂಭೀರವಾದ ಚಿಂತನೀಯ ಸ್ತರದಲ್ಲಿಯೇ ಮೂಡಿಬಂದಿವೆ. ಈ ಪ್ರಥಮ ಪ್ರಬಂಧದಲ್ಲಿ ವಿಶ್ವವನ್ನು ವಿಶ್ವದಲ್ಲಿಯ ಮೂಲಭೂತ ವಸ್ತುಗಳನ್ನು ನೋಡುವಲ್ಲಿ ವೈಜ್ಞಾನಿಕ
ದೃಷ್ಟಿಕೋನವೂ ಇದೆ. ನೀರು ಮತ್ತು ಭೂಮಿ ಇವು
ಎಲ್ಲರಿಗೂ ತಿಳಿದಿರುವ ವಸ್ತುಗಳು. ಮಾನವನೊಡನೆ
ಅವುಗಳಿಗಿರುವ ಸಂಬಂಧ ಕೇವಲ ದೈಹಿಕವಲ್ಲ, ಆ
ಸಂಬಂಧ ಸಜೀವವಾದುದು.
” ಯಾವಾಗ ಮನುಷ್ಯನು ಜಗತ್ತಿನೊಡನೆ ತನ್ನ ಬಾಂಧವ್ಯವನ್ನು ತಿಳಿದುಕೊಳ್ಳಲಾರನೋ ಆಗ ಅವನು
ತನಗೆ ಪರಕೀಯವಾಗಿರುವ ಗೋಡೆಗಳುಳ್ಳ ಜೈಲಿನಲ್ಲಿ
ರುತ್ತಾನೆ. ಯಾವಾಗ ಆತನು ಅನಂತವಾದ ಆತ್ಮವನ್ನು
ಪ್ರತಿಯೊಂದು ವಸ್ತುವಿನಲ್ಲೂ ಸಂಧಿಸುತ್ತಾನೋ ಆಗ
ಆತನು ಜೀವನ್ಮುಕ್ತನಾಗುತ್ತಾನೆ. ಏಕೆಂದರೆ ಆಗ ಆತನು ತಾನು ಹುಟ್ಟಿದ ಈ ಜಗತ್ತಿನ ಪರಿಪೂರ್ಣ
ವಾದ ಮಹತ್ವವನ್ನು ಕಂಡುಕೊಳ್ಳುತ್ತಾನೆ. ಆಗ ಆತನು
ಎಲ್ಲದರೊಡನೆ ಸಾಮರಸ್ಯವನ್ನು ಸ್ಥಾಪಿಸುತ್ತಾನೆ ” ಈ
ಚಿಂತನೆ ತುಂಬ ಅರ್ಥಪೂರ್ಣವಾದದ್ದು. ರವೀಂದ್ರರು
ಭೌತಿಕ ಜಗತ್ತಿನ ಆಚೆಗೆ ನಿಂತು ನೋಡುವ ಈ ದೃಷ್ಠಿ
ವಿಶಿಷ್ಟವಾದದ್ದು. ಆದರೆ ಮನುಷ್ಯ ಪ್ರತಿಯೊಂದು ವಸ್ತು
ವಿನಲ್ಲಿ ಆತ್ಮವನ್ನು ಸಂಧಿಸುವ ಮನೋಧರ್ಮವನ್ನು
ಹೊಂದಿಲ್ಲ. ‘ ವಿಶ್ವಮಾನವ ‘ ನಾಗಿಲ್ಲ. ಅದರಿಂದ ದಾರಿ
ತಪ್ಪಿಸುವಂತಹ ಗೊಂದಲಗೊಳಿಸುವಂತಹ ಸಮಸ್ಯೆ
ಗಳು ಹುಟ್ಟಿವೆ. ಇದನ್ನು ಟಾಗೂರರು ಬಲ್ಲರು. ಪ್ರಬಂಧದಲ್ಲಿ ತರ್ಕಶುದ್ಧವಾದ ನಿರೂಪಣೆಯಿದ್ದು ಅಲ್ಲಿಗಲ್ಲಿಗೆ ನಿಂತು ಧೇನಿಸುವಂತೆ ಮಾಡುತ್ತದೆ. ರವೀಂದ್ರನಾಥರ ಆಲೋಚನೆಗೆ ಉಪನಿಷತ್ತು ನೆರವು
ನೀಡುತ್ತಲೇ ಇರುತ್ತದೆ. ” ನಿಮ್ಮನ್ನು ನೀವು ಪಡೆದು
ಕೊಳ್ಳಲು ಎಲ್ಲವನ್ನೂ ಅಪ್ಪಿಕೊಳ್ಳಿರಿ. ಭೌತಿಕ ಸಂಪತ್ತಿಗೆ ಬೆನ್ನುಹತ್ತುವಿಕೆಯಲ್ಲಿ ನೀವು ಅತ್ಯಲ್ಪ ವನ್ನು
ಪಡೆದುಕೊ0ಡು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ.ಇದು
ನಿಜವಾಗಿ ಪರಿಪೂರ್ಣನಾದ ಆ ಭಗವಂತನನ್ನು ಹೊಂದುವ ಮಾರ್ಗವಲ್ಲ. ” ಇದು ನಿಜವಾಗಿ ಒಂದು
ಎಚ್ಚರಿಕೆಯ ಸಂದೇಶವೇ.
‘ ಆತ್ಮದ ಅರಿವು ‘ ‘ ಕೆಡುಕಿನ ಸಮಸ್ಯೆ ‘ ‘ ತನ್ನತನದ
ಸಮಸ್ಯೆ ‘ ಇವು ಮೂರು ವಿಶಿಷ್ಟವಾದ ಚಿಂತನೆಗಳು.
‘ ಆತ್ಮದ ಅರಿವು ‘ ಎಂಬುದಕ್ಕೂ , ‘ ತನ್ನತನದ ಸಮಸ್ಯೆ ‘ ಗೂ ಸಂಬಂಧವಿಲ್ಲದಿಲ್ಲ. ಹಾಗಿದ್ದರೂ ಅವು
ಗಳಲ್ಲಿ ಆಲೋಚನೆಗೆ ಒಳಪಡಿಸಬೇಕಾದ ಸಂಗತಿಗಳು
ಇದ್ದೇ ಇವೆ. ಆತ್ಮನ ಅರಿವಿನಲ್ಲಿ ‘ ನಿನ್ನ ಆತ್ಮವನ್ನು ನೀನು ತಿಳಿ ‘ ಎಂಬುದು ಮುಖ್ಯ. ತನ್ನತನದ ಸಮಸ್ಯೆ
ಯಲ್ಲಿ ” ಅವಿದ್ಯೆಯಿಂದ ಮುಕ್ತಿ ಪಡೆಯಿರಿ , ನಿಮ್ಮ
ಆತ್ಮನ ನಿಜತ್ವವನ್ನು ಅರಿಯಿರಿ, ನಿಮ್ಮನ್ನು ಬಂಧಿಸಿದ
ನಿಮ್ಮ ತನ್ನತನದ ಹಿಡಿತದಿಂದ ಪಾರಾಗಿರಿ ” ಎಂಬುದು
ಮಹತ್ವದ್ದು. ಈ ಎರಡೂ ಪ್ರಬಂಧಗಳು ವಿಸ್ತಾರವೂ
ಗಂಭೀರವೂ ಆದ ವಿಷಯ ವಿವೇಚನೆಯಿಂದ ನಮ್ಮ
ಗಮನ ಸೆಳೆಯುತ್ತವೆ. ರವೀಂದ್ರನಾಥರ ಬರವಣಿಗೆಯ
ವೈಶಿಷ್ಟ್ಯವೆಂದರೆ ವಿಷಯವನ್ನು ಸಾಧ್ಯವಾದಷ್ಟೂ
ಅನುಭವದ ಒರೆಗಲ್ಲಿಗೆ ಉಜ್ಜಿ ನೋಡುವುದು, ಬದುಕಿನ
ವಿವಿಧ ಸ್ತರಗಳನ್ನು ಅವಲೋಕಿಸುತ್ತ ವಿವೇಚನೆಯನ್ನು
ಹಿಗ್ಗಿಸುತ್ತ ಹೋಗುವುದು ಹಾಗೂ ಉಪನಿಷತ್ತಿನ ಉಕ್ತಿ
ಗಳನ್ನು ಆಧಾರವಾಗಿರಿಸಿಕೊಳ್ಳುವುದು. ಎಲ್ಲ
ಪ್ರಬಂಧಗಳಲ್ಲಿಯೂ ಈ ಕ್ರಮವನ್ನು ಅಂದರೆ ಶಿಸ್ತನ್ನು
ನಾವು ಕಾಣುತ್ತೇವೆ.
‘ ಕೆಡುಕಿನ ಸಮಸ್ಯೆ’ ಇದು ಜೀವನದಲ್ಲಿ ಇದ್ದದ್ದೆ. ಪ್ರಸ್ತುತ
ಪ್ರಬಂಧದಲ್ಲಿ ವೈಯಕ್ತಿಕ ವೈಫಲ್ಯಗಳು , ದುಃಖಗಳು
ಇರುವುದನ್ನು ಗುರುತಿಸಲಾಗಿದ್ದರೂ ಮಾನವನ ಆದರ್ಶದ ಕಡೆಗೆ ವಿಶೇಷ ಗಮನಕೊಡಲಾಗಿದೆ. “ಪ್ರತಿ
ಯೊಂದು ಕಾಲಘಟ್ಟದಲ್ಲಿ ,ಪ್ರತಿಯೊಂದು ಪ್ರದೇಶದಲ್ಲಿ
ಮನುಷ್ಯನ ಅತ್ಯಂತ ಬೆಲೆಯುಳ್ಳದ್ದೆ0ದರೆ ಒಳ್ಳೆಯತನದ ಆದರ್ಶ, ನಾವು ಒಳ್ಳೆಯದೆ0ಬುದನ್ನು
ತಿಳಿದಿದ್ದೇವೆ ,ಅದನ್ನು ಪ್ರೀತಿಸಿದ್ದೇವೆ ಮತ್ತು ಒಳ್ಳೆಯತನ
ವೆಂದರೇನು ಎಂಬುದನ್ನು ತೋರಿಸಿಕೊಟ್ಟವರನ್ನು
ನಾವು ಅತ್ಯಂತ ಗೌರವದಿಂದ ಕಂಡಿದ್ದೇವೆ. ಹೀಗೆ
ಕೆಡುಕಿನ ಮಧ್ಯದಲ್ಲಿಯೇ ಒಳ್ಳೆಯದನ್ನು ಗುರುತಿಸುತ್ತ
‘ ನಮ್ಮ ಒಳಗೆ ಒಬ್ಬ ವಿಶ್ವಮಾನವನಿದ್ದಾನೆ. ‘ ಮತ್ತು
‘ ಆತನು ಅಮರ ‘ ಎಂಬ ಚಿರಂತನ ಸತ್ಯವನ್ನು ಗಮನಕ್ಕೆ ತಂದುಕೊಡುತ್ತಾ ‘ ನೋವು ಅಮರವಾದ
ಪರಿಪೂರ್ಣತೆಯ ಸೇವೆಗಾಗಿ ಮೀಸಲಿಟ್ಟ ಕನ್ಯೆ. ಆಕೆಯ ನಿಜವಾದ ಸ್ಥಾನವಾದ ಅನಂತದ ಗದ್ದುಗೆಯ
ಮೇಲೆ ಆಕೆಯನ್ನು ಇರಿಸಿದಾಗ, ಆಕೆ ತನ್ನ ಕಪ್ಪು
ಹೊದಿಕೆಯನ್ನು ಕಿತ್ತೊಗೆದು, ಪರಮತರ ಆನಂದವಾದ
ತನ್ನನ್ನು ಪ್ರಕಟಗೊಳಿಸುತ್ತಾಳೆ. ” ಈ ಅಲಂಕಾರ ವಿವರಣೆಯಲ್ಲಿ ಕವಿ ಪ್ರತಿಭೆ ಕೆಲಸ ಮಾಡಿರುವುದ
ಲ್ಲದೆ , ಆಧ್ಯಾತ್ಮಿಕ ದರ್ಶನವೂ ತನ್ನ ಪ್ರಭಾವವನ್ನು
ತೋರ್ಪಡಿಸಿದೆ. ರವೀಂದ್ರನಾಥರು ಕವಿಗಳೂ ಹೌದು.
ದಾರ್ಶನಿಕರೂ ಹೌದು.
‘ ಸಾಕ್ಷಾತ್ಕಾರ ಎಂದೇ ಗುರುತಿಸಿದ ‘ ಸಾಧನಾ ‘ದಲ್ಲಿಯ
ನಾಲ್ಕು ಅಧ್ಯಾಯಗಳು ಈ ಪ್ರಬಂಧ ಸಂಕಲನದಲ್ಲಿ
ಮೌಲಿಕವಾದವುಗಳೆಂದೇ ಹೇಳಬೇಕು. ಇಲ್ಲಿಯಿಂದ
ರವೀಂದ್ರನಾಥರ ಚಿಂತನೆ ಅನುಭಾವಿಕ ಎತ್ತರದಲ್ಲಿಯೇ
ಸಾಗುತ್ತದೆಂದು ಹೇಳಬಹುದು. ರವೀಂದ್ರರು ಒಬ್ಬ ಋಷಿ. ಅವರ ಸಾಧನಾಪಥ ಯೋಗ ಮಾರ್ಗದ್ದು.
ಲೌಕಿಕಕ್ಕೆ ಪಾರಮಾರ್ಥಿಕ ಸ್ವರೂಪಕೊಡುವ ಅನನ್ಯ
ಅಸಾಧಾರಣದ ದೃಷ್ಟಿ ಅವರದು. ಪ್ರೇಮವು ಸೃಷ್ಟಿಯ
ಅತ್ಯಂತ ಮಹತ್ವದ ಸಂಪತ್ತು. Love is God ಏಸು ಸಿದ್ಧಾಂತ. ಅದರಿಂದಲೇ Love thy neighbour , ಹಾಗೂ Love thy enemy ಎಂಬಂತಹ
ಉದಾತ್ತ ಸೂತ್ರಗಳು ಮೂಡಿವೆ. ಸಖ್ಯ ಭಕ್ತಿ ಒಂದು
ಸ್ತರವಾದರೆ ವೈರಭಕ್ತಿಯೂ ಇನ್ನೊಂದು ಸ್ತರದಲ್ಲಿದೆ.
ಪ್ರೇಮದ ಬಗ್ಗೆ ಆಲೋಚಿಸಿದಷ್ಟೂ ಅದರ ಪರೀಘ
ವಿಸ್ತರಿಸುತ್ತ ಹೋಗುತ್ತದೆ. ಪ್ರೇಮದಲ್ಲಿ ಪರಮಾತ್ಮನ
ಸಾಕ್ಷಾತ್ಕಾರವಾಗದೆ ಇನ್ನೆಲ್ಲಿ ಆಗಬಹುದು ! ಅದು
ಸಾಧನೆಯ ಅಂತಿಮ ಸಿದ್ಧಿ.
“ಪ್ರೇಮದ ಒಂದು ತುದಿಗೆ ವೈಯಕ್ತಿಕತೆಯಿದ್ದರೆ, ಇನ್ನೊಂದು ತುದಿಗೆ ಅವೈಯಕ್ತಿಕತೆಯಿದೆ. ” ಇಂಥ ವಾಕ್ಯಗಳನ್ನು ನಾವು ಮತ್ತೆ ಮತ್ತೆ ನಿಂತು ಧೇನಿಸ
ಬೇಕಾಗುವುದು. ಶ್ರೀಮಾತೆಯವರು ಒಂದೆಡೆಯಲ್ಲಿ ಹೇಳುವಂತೆ Individual self and Universal self are one ಎಂಬ ವಾಕ್ಯ ಜೀವಾತ್ಮ , ಪರಮಾತ್ಮಗಳ
ಸಂಬಂಧವನ್ನೇ ಎತ್ತಿ ಹೇಳುತ್ತದೆ. ಈ ಅನುಭಾವ
ದೊರಕುವುದೇ ಸಾಕ್ಷಾತ್ಕಾರ. ಪ್ರಬಂಧದ ಕೊನೆಯಲ್ಲಿ
ರುವ ” ನಮ್ಮ ಆತ್ಮ ಮತ್ತು ಜಗತ್ತಿನ ಏಕತೆ , ಜಗತ್ತಿನ
ಆತ್ಮ ಮತ್ತು ವಿಶ್ವವ್ಯಾಪಿಯಾದ ಆ ಪ್ರಿಯತಮನ ಏಕತೆ ಇವುಗಳ ಸತ್ಯವನ್ನು ಮನಗಾಣುವುದೇ ಆ
ಆನಂದ ” ಎಂಥ ಅದ್ಭುತವಾದ ಸಾಕ್ಷಾತ್ಕಾರವಿದು !!
ಸತ್ – ಚಿತ್ – ಆನಂದ ಇದಲ್ಲವೆ ?
‘ಕರ್ಮದಲ್ಲಿ ಪರಮಾತ್ಮನ ಸಾಕ್ಷಾತ್ಕಾರ ‘ ಇದು ‘ ಕರ್ಮ
ಯೋಗ ‘ ದ ಮಹತ್ವವನ್ನು ಇನ್ನೊಂದು ರೀತಿಯಿಂದ
ತಿಳಿಸಿಕೊಡುತ್ತದೆ. ಕರ್ಮ ಎಂದರೆ ಕೆಲಸ , ಕ್ರಿಯೆ. ಮಾನವನ ಶೈಶವದಿಂದಲೇ ಪ್ರಾರಂಭವಾಗುವ ಕ್ರಿಯೆ
ಬದುಕಿನುದ್ದಕ್ಕೂ ತನ್ನ ಸ್ವರೂಪವನ್ನು ಹಿಗ್ಗಿಸುತ್ತ ಹೋಗುತ್ತಾದೆ. ಕರ್ಮ ಮಾಡದೆ ಯಾರೂ ಬದುಕ
ಲಾರರು, ಬೆಳೆಯಲಾರರು, ಉನ್ನತಿಯನ್ನು ಹೊಂದ
ಲಾರರು. ವಾಸ್ತವ ಬದುಕಿನ ಕ್ರಿಯೆ ಯೋಗದ ಕರ್ಮ
ವಾಗಲು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ
ಭಗವದ್ ಗೀತೆಯ ಕರ್ಮಯೋಗ , ಶರಣರ ಕಾಯಕ,
ಯೋಗ ಬೇರೆ ಬೇರೆ ಸಿದ್ಧಾಂತಗಳಂತೆ ಕಂಡರೂ ಗುರಿ
ಮಾತ್ರ ಒಂದೇ. ಸ್ವಾಮಿ ವಿವೇಕಾನಂದರು , ‘ ಕರ್ಮ
ಯೋಗ ‘ ಕುರಿತು ಬರೆದಿದ್ದಾರೆ. ಶ್ರೀ ಅರವಿಂದರು ತಮ್ಮ ‘ ಯೋಗ ಸಮನ್ವಯ ‘ ದಲ್ಲಿ ‘ ದಿವ್ಯ ಕರ್ಮ
ಯೋಗ ‘ ಕುರಿತು ದೀರ್ಘವಾಗಿಯೇ ವಿವರಿಸಿದ್ದಾರೆ.
ರವೀಂದ್ರನಾಥ ಟಾಗೂರ ಅವರ ಈ ಅಧ್ಯಾಯ ಕರ್ಮದ ವಿಶೇಷತೆಗಳನ್ನು ತಿಳಿಸುತ್ತಲೇ ‘ ಸಾಕ್ಷಾತ್ಕಾರ ‘
ದ ಎತ್ತರಕ್ಕೆ ಕರೆದೊಯ್ಯುತ್ತದೆ. ಅವರು ಹೇಳುತ್ತಾರೆ
‘ ನಮ್ಮ ಆತ್ಮ ಸತತವಾಗಿ ಒಂದಿಲ್ಲೊ0ದು ಹೊಸ ಕಾರ್ಯಕ್ಷೇತ್ರವನ್ನು ಸೃಷ್ಟಿಸುತ್ತಲೇ ಇರುತ್ತದೆ. ಆತ್ಮಕ್ಕೆ
ಇವೆಲ್ಲವೂ ಬಿಡುಗಡೆಯನ್ನು ಪಡೆಯಲೋಸುಗ. ಅದು
ತನ್ನನ್ನೇ ತಾನು ನೋಡಬೇಕಾಗಿದೆ. ತನ್ನನ್ನೇ ತಾನು
ಸಾಕ್ಷಾತ್ಕರಿಸಿಕೊಳ್ಳಬೇಕಾಗಿದೆ. !! ” ಈ ಸೂತ್ರವನ್ನು
ಹಿಡಿದೇ ನಾವು ಪ್ರಬಂಧವನ್ನು ಓದಿದರೆ ಅದರ ಘನೋದ್ದೇಶ ವೇದ್ಯವಾಗುತ್ತದೆ.
‘ ಸೌಂದರ್ಯದ ಸಾಕ್ಷಾತ್ಕಾರ ‘ ‘ ಅನಂತತೆಯ ಸಾಕ್ಷಾತ್ಕಾರ ‘ ಇವೆರಡು ವಿಭಿನ್ನ ರೀತಿಯ ಚಿಂತನೆಗಳು. ಸೌಂದರ್ಯದ ದರ್ಶನವು ಸಹಜ
ವೆಂಬ0ತೆ ತೋರಿದರೂ ಅದು ಮಾನಸಿಕ ದೂರದ
ತತ್ವವನ್ನು ಅವಲಂಬಿಸಿದೆ.ವ್ಯವಹಾರಿಕ ಲೋಕಕ್ಕಂತೂ
ಅದು ಸಂಬಧಿಸಿದ್ದಲ್ಲ. ರವೀಂದ್ರನಾಥರು ಹೇಳುತ್ತಾರೆ.
‘ ಯಾವಾಗ ಮನುಷ್ಯನು ತನ್ನ ಸ್ವಹಿತಾಸಕ್ತಿಯನ್ನು
ಬಿಟ್ಟು ಎಲ್ಲವನ್ನೂ ನೋಡಲು ಕಲಿಯುತ್ತಾನೋ, ಆಗ
ಆತನು ಎಲ್ಲೆಲ್ಲಿಯೂ ಸೌಂದರ್ಯವನ್ನು ನೋಡಬಲ್ಲ
ವನಾಗುತ್ತಾನೆ. ‘ ‘ ಸತ್ಯವೇ ಸೌಂದರ್ಯ , ಸೌಂದರ್ಯ ವೇ ಸತ್ಯ ‘ ಎಂಬುದು ಯೇಟ್ಸ್ ಕವಿಯ ಪ್ರಸಿದ್ದ ಸೂತ್ರ
ಇದನ್ನೂ ರವೀಂದ್ರರು ಬಲ್ಲರು. ಇದರ ಜೊತೆಗೆ ಪ್ರೇಮವನ್ನು ಟಾಗೂರರು ಸೇರಿಸಿಕೊಳ್ಳುತ್ತಾರೆ. ‘ ಸತ್ಯ0
ಶಿವ0 ಸುಂದರ0 ‘ ಎಂಬ ಇನ್ನೊಂದು ದಾರ್ಶನಿಕ
ಸಿದ್ಧಾಂತವೂ ಇದೆ. ಒಟ್ಟಿನಲ್ಲಿ ” ನಮ್ಮ ಸತ್ಯ ಪ್ರಜ್ಞೆಯ
ಮೂಲಕ ಸೃಷ್ಟಿಯ ನಿಯಮಗಳನ್ನು ನಾವು ಮನ
ಗಾಣುತ್ತೇವೆ. ಸೌಂದರ್ಯ ಪ್ರಜ್ಞೆಯ ಮೂಲಕ ವಿಶ್ವ
ದಲ್ಲಿ ಸಾಮರಸ್ಯವನ್ನು ಮನಗಾಣುತ್ತೇವೆ. ” ಇದು
ಟಾಗೂರರ ಅನುಭವ ಸೂತ್ರ.
ಬದುಕಿನ ಹಲವಾರು ಉದಾಹರಣೆಗಳನ್ನು ಕೊಡುತ್ತ
ವಿಶ್ಲೇಷಿಸುತ್ತ ಈ ಪ್ರಬಂಧ ಒಂದು ನಿರ್ಣಯಕ್ಕೆ ಬರುತ್ತದೆ. ಈ ನಿರ್ಣಯ ಉಪನಿಷತ್ತಿನಿಂದ ಪಡೆದು
ಕೊಂಡಿದ್ದು. ” ಬುದ್ಧಿ ಶಕ್ತಿ ಬ್ರಹ್ಮವನ್ನು ತಿಳಿಯಲಾರದು
ಶಬ್ದಗಳು ಆತನನ್ನು ವರ್ಣಿಸಲಾರವು. ನಮ್ಮ ಆತ್ಮ
ಮಾತ್ರವೇ ತನ್ನ ಆನಂದದಿಂದ ತನ್ನ ಪ್ರೇಮದಿಂದ ಬ್ರಹ್ಮನನ್ನು ತಿಳಿಯಬಹುದು ” ಆಧ್ಯಾತ್ಮಶಾಸ್ತ್ರವು ಹೇಳುವಂತೆ ‘ ತತ್ವ ಮಸಿ ‘ ಎಂಬುದು ಮಹಾವಾಕ್ಯ.
ಹೀಗಾಗುವುದೇ ಅನಂತತೆಯ ಅಥವಾ ಪರಮಾತ್ದದ
ಸಾಕ್ಷಾತ್ಕಾರ. ಅಂತಿಮವಾಗಿ ಟಾಗೂರರ ಪರಿಭಾಷೆ
ಯಲ್ಲಿ ಹೇಳುವುದಾದರೆ ” ನಿನ್ನ ವಾಸ ನನ್ನಲ್ಲಿದೆ , ನನ್ನ ವಾಸ ನಿನ್ನಲ್ಲಿದೆ. ನೀನಿಲ್ಲದ ನಾನು ಏನೂ ಅಲ್ಲ.
ಈ ಸ್ಥಿತಿಗೆ ತಲುಪುವವರು ಸಿದ್ಧಪುರುಷರು ಅಷ್ಟೇ.
ರವೀಂದ್ರನಾಥ ಟಾಗೂರರ ‘ ಸಾಧನಾ ‘ ಗ್ರಂಥದ ಪ್ರಬಂಧಗಳು ಬರಿಯ ಚಿಂತನೆಗಳಾಗಿಲ್ಲ. ಅವು ದರ್ಶನಗಳಾಗಿವೆ. ಅನುಭಾವಿಕ ಎತ್ತರದಲ್ಲಿ ನಮ್ಮನ್ನೂ ಸಾಕ್ಷಾತ್ಕಾರದ ಲೋಕಕ್ಕೆ ಕೊಂಡೊಯ್ಯು ತ್ತವೆ.
ಎಲ್ಲರೂ ಒಮ್ಮೆ ಓದಬೇಕಾದ ‘ ಜೀವನದ ಸಾಕ್ಷಾತ್ಕಾರ ‘ ದ ” ಸಾಧನಾ “
ಸುಧಾ ಪಾಟೀಲ್
ಸುಧಾ ಪಾಟೀಲ್ ಅವರು ಮೂಲತಹ ಗದಗ ಜಿಲ್ಲೆಯವರು.ಇವರ ಸಾಹಿತ್ಯದ ಪಯಣಕ್ಕೆ ಇವರ ದೀಕ್ಷಾಗುರುಗಳಾದ ಲಿ. ಡಾ. ಜ.ಚ. ನಿ ಶ್ರೀಗಳೇ ಪ್ರೇರಣೆ.
ಸುಧಾ ಪಾಟೀಲ್ ಅವರ ಲೇಖನಗಳು.. ಕವನಗಳು ವಿವಿಧ ಪತ್ರಿಕೆಯಲ್ಲಿ.. ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಜ. ಚ.ನಿ ಶ್ರೀಗಳ ” ಬದುಕು -ಬರಹ ” ಕಿರು ಹೊತ್ತಿಗೆ ಕಿತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂaಸೇವೆಯನ್ನು ಗೈದಿದ್ದಾರೆ.
ಹಲವಾರು ಸಂಘ -ಸಂಸ್ಥೆಗಳಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಯಾವತ್ತೂ ಇವರದು ಅಳಿಲುಸೇವೆ ಇದ್ದೇ ಇರುತ್ತದೆ.ಸುಧಾ ಪಾಟೀಲ್ ಅವರನ್ನು ಅರಸಿ ಬಂದ ಪ್ರಶಸ್ತಿಗಳು..ಅನುಪಮ ಸೇವಾ ರತ್ನ ಪ್ರಶಸ್ತಿ (ಪೃಥ್ವಿ ಫೌಂಡೇಶನ್ )
ಮಿನರ್ವ ಅವಾರ್ಡ್ ಮತ್ತು ದತ್ತಿ ನಿಧಿ ಪ್ರಶಸ್ತಿ ( ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ )ರಾಜ್ಯೋತ್ಸವ ಪ್ರಶಸ್ತಿ ( ಚೇತನಾ ಫೌಂಡೇಶನ್ )