ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ನೆನಪುಗಳ ಮೆರವಣಿಗೆಯಲ್ಲಿ

ಒಲವ ಬದುಕಿನ ಪಯಣ…

ಅವರು ಯಾಕೋ ಚಿಂತೆಯಿಂದ ಕಂಬನಿ ಮಿಡಿಯುತಿದ್ದಾರೆ…

ಆ ಶಿಕ್ಷಕಿ ವರ್ಗಾವಣೆಯಾದ ಸುದ್ದಿ ತಿಳಿದಾಕ್ಷಣ ಮಕ್ಕಳು ಅಳಲು ಪ್ರಾರಂಭಿಸಿದರು…

ಈ ಮೇಲಿನ ಸನ್ನಿವೇಶಗಳು..

ಬದುಕ ಪಯಣದಲ್ಲಿ ಬಾಳನ್ನು ಕಟ್ಟಿಕೊಳ್ಳಲು ಹಲವಾರು ವ್ಯಕ್ತಿಗಳು  ವಿವಿಧ ವೃತ್ತಿಗಳನ್ನು ಆರಿಸಿಕೊಳ್ಳುತ್ತಾರೆ. ವ್ಯಕ್ತಿಗಳ ವ್ಯಕ್ತಿತ್ವ ಬದುಕಿನ ಜೊತೆ ಜೊತೆಗೆ ಬೌದ್ಧಿಕ, ಸಾಂಸ್ಕೃತಿಕ ಹಾಗೂ ಸ್ನೇಹಮಯ ಹಲವಾರು ಅನುಭವಗಳನ್ನು ಕಟ್ಟಿಕೊಡುತ್ತದೆ. ಯಾವುದೇ ಒಬ್ಬ ವ್ಯಕ್ತಿ ಪರಿಪೂರ್ಣ ಅಲ್ಲವೇ ಅಲ್ಲ..!!  ಎಲ್ಲಾ ವ್ಯಕ್ತಿಗಳಲ್ಲಿಯೂ ಕೊರತೆ ಇದ್ದೇ ಇರುತ್ತದೆ.  ತನ್ನ ಶಿಕ್ಷಣದ ಅರ್ಹತೆಗನುಗುಣವಾಗಿ ಬೇರೆ ಬೇರೆ ಶ್ರೇಣಿಯ ವೃತ್ತಿಗಳನ್ನು ಆರಿಸಿ ತನ್ನ ಕರ್ತವ್ಯವನ್ನು ನಿಭಾಯಿಸುವಾಗ ಹಲವಾರು ಸ್ಥಳಗಳನ್ನು ನೋಡಿಕೊಂಡಿರುತ್ತಾರೆ.  ಅಲ್ಲಿಯ ಜನಜೀವನ, ಸಾಂಸ್ಕೃತಿಕ ಪರಂಪರೆ, ಭೌಗೋಳಿಕ ಸನ್ನಿವೇಶ,  ಬದುಕಿನಲ್ಲಿ ಇವೆಲ್ಲವೂ ಹೊಸ ಹೊಸ ಅನುಭವವನ್ನು ಕಟ್ಟಿಕೊಡುತ್ತವೆ.  ಇದು ಐಎಎಸ್, ಕೆಎಎಸ್, ಐಪಿಎಸ್, ಐಎಫ್ಎಸ್ ಮುಂತಾದ ಹಿರಿಯ ಶ್ರೇಣಿಯ ಅಧಿಕಾರಿಗಳ ಅನುಭವದ ಮಗ್ಗಲ್ಲುಗಳಾದರೆ…

ಇನ್ನೂ…

ಸ್ಥಳಿಯವಾಗಿ ಸಣ್ಣ ಸಣ್ಣ ವೃತ್ತಿಯನ್ನು ಆರಿಸಿಕೊಂಡು ಅದರಲ್ಲಿಯೇ ಸಾಕಷ್ಟು ಅನುಭವಗಳನ್ನು ಪಡೆದುಕೊಂಡು ಕರ್ತವ್ಯ ನಿರ್ವಹಿಸುವವರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿದೆ. ಇಲ್ಲಿಯೂ ಹಲವರು ತಮ್ಮ ಬದುಕನ್ನ ಕಟ್ಟಿಕೊಳ್ಳುವುದರ ಜೊತೆಗೆ ಇನ್ನೊಬ್ಬರ ಬದುಕಿಗೆ ಆಸರೆಯಾದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಬದುಕು ನಾವಂದುಕೊಂಡತಿರುವುದಿಲ್ಲ…

ಸರ್ಕಾರಿ, ಅರೆ ಸರ್ಕಾರಿ ಸೇವೆಯ  ಕರ್ತವ್ಯ ನಿರ್ವಹಿಸುವ ನೌಕರರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗುವುದು ಸಾಮಾನ್ಯ. ಅದು ಸರ್ಕಾರಿ ನಿಯಮಾವಳಿಗನುಗುಣವಾಗಿ ನಾವು ಒಪ್ಪಲೇಬೇಕು.

ಒಂದು ಕಚೇರಿಯಲ್ಲಿ , ಶಾಲೆಯಲ್ಲಿ ಇಲ್ಲವೇ ಸ್ಥಳಗಳಲ್ಲಿ ಕೆಲಸ ಮಾಡುವಾಗ ಸಹೋದ್ಯೋಗಿ ಮಿತ್ರರೊಂದಿಗೆ ಹಲವಾರು ನೋವು ನಲಿವುಗಳನ್ನು ಹಂಚಿಕೊಳ್ಳುತ್ತೇವೆ. ದಿನದ 24 ಗಂಟೆಗಳಲ್ಲಿ ಬಹುತೇಕ ನಮ್ಮ ಸಮಯವನ್ನು ಕಚೇರಿಗಳಲ್ಲಿ, ಶಾಲೆಗಳಲ್ಲಿ ಕಳೆಯುತ್ತೇವೆ. ಅಂತಹ ಸಮಯದಲ್ಲಿ ನಮ್ಮೊಂದಿಗೆ ನಮ್ಮ ಒಡನಾಡಿಗಳಾಗಿ, ಸ್ನೇಹಿತರಾಗಿ, ಸಹೋದರಿಯಾಗಿ, ಸಹೋದರನಾಗಿ ಬದುಕಿನ ಪ್ರತಿ ಕ್ಷಣಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತೇವೆ. ಅಲ್ಲದೇ ವೃತ್ತಿಯಲ್ಲಿ ಬರುವ ವಿವಿಧ ಆಯಾಮುಗಳನ್ನು, ಕೆಲಸಗಳನ್ನು ಹಂಚಿಕೊಂಡು ನಗುನಗುತ್ತಾ ಬದುಕನ್ನು ಕಟ್ಟಿಕೊಳ್ಳುವುದು ಒಳ್ಳೆಯ ಲಕ್ಷಣ. ಆಗ ನಮ್ಮ ವೈಯಕ್ತಿಕ ಬದುಕಿನಲ್ಲಿ ಬರುವ ನೋವುಗಳಿಗೆ ಸ್ನೇಹಿತರೇ ಸಾಕಷ್ಟು ಸಲ ಹೆಗಲಿಗೆ ಹೆಗಲಾಗುತ್ತಾರೆ.

ಸಹೋದ್ಯೋಗಿ ಮಿತ್ರರೆಂದರೆ…

ಅವರು ನಮ್ಮ ಒಡನಾಡಿಗಳದ್ದಂತೆ, ಕೆಲವು ಸಂದರ್ಭಗಳಲ್ಲಿ ಕುಟುಂಬದ ಸದಸ್ಯರು ನಮ್ಮನ್ನು ಕೈಬಿಡಬಹುದು ಆದರೆ ವೃತ್ತಿಯಲ್ಲಿ ಒಂದಾದ ಸಹೋದ್ಯೋಗಿ ಬಳಗವು ಸದಾ ನಮ್ಮ ಮನೋಭಾವಗಳನ್ನು ಅವಲೋಕಿಸುತ್ತದೆ. ಕೆಲವರಂತೂ ಒಂದು ದಿನ ಏನಾದರೂ ನಮ್ಮ ನಡವಳಿಕೆಯಲ್ಲಿ ವ್ಯತ್ಯಾಸವಾದರೆ ಸಾಕು,  “ಯಾಕೋ ಇವತ್ತು ತುಂಬಾ ಸೈಲೆಂಟ್ ಆಗಿಬಿಟ್ಟಿದ್ದೀರಾ…? “ಅಯ್ಯೋ ಏನಾಯ್ತು ನಿಮಗೆ ಯಾಕಿಷ್ಟು ಕೋಪ ಮಾಡಿಕೊಳ್ಳುತ್ತೀರಾ..? ಏನಾದರು ಆಯ್ತಾ? ಚಿಂತೆ ಮಾಡಬೇಡಿ ಯಾಕ್ ಚಿಂತೆ ಮಾಡ್ತಾ ಮಾಡ್ತಾ ನೀವು ಸೋರುಗುತ್ತಿದ್ದೀರಾ..? ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ, ಅದೆಲ್ಲ ಇದ್ದಿದ್ದೆ…” ಎನ್ನುವ ಆಪ್ತ ಮಾತುಗಳು ಬದುಕಿಗೆ ಭರವಸೆಯನ್ನು ನೀಡುತ್ತವೆ.

 ನಮ್ಮ ಬದುಕಿನ ಹಾದಿಯಲ್ಲಿ ಹಲವಾರು ಕನಸುಗಳು ಕೈಗೂಡದೆ ಹೋದಾಗ ಹತಾಶಯಕ್ಕೆ ಒಳಗಾಗುತ್ತೇವೆ.  ನೋವಿನಲ್ಲಿ ಮುಳುಗಿ ಬಿಡುತ್ತೇವೆ.  ಅಯ್ಯೋ..! ಬದುಕು ಮುಗಿದು ಹೋಯಿತು ಎನ್ನುವ ಸಮಯದಲ್ಲಿ,  “ಚಿಂತೆಬೇಡ ಬದುಕಿನಲ್ಲಿ ಇವೆಲ್ಲ ಸಾಮಾನ್ಯ..!!  ಇವುಗಳನ್ನು ಮೀರಿ ಬದುಕನ್ನು ಕಟ್ಟಿಕೊಳ್ಳಬೇಕು” ಎನ್ನುವ ಗೆಳೆತನದ ಮಾತು ಸಹೋದ್ಯೋಗಿ ಮಿತ್ರರಿಂದಲೇ ಸಾಧ್ಯ…!!

 ಇಂತಹ ವೃತ್ತಿ ಬದುಕಿನಲ್ಲಿ ಹಲವಾರು ವ್ಯಕ್ತಿಗಳು ನಮ್ಮೆದುರು ಬಂದು ಹೋಗುತ್ತಾರೆ. ಬಂದವರು ನೆನಪುಗಳ ಮೆರವಣಿಗೆಯಲ್ಲಿ ನಮ್ಮನ್ನು ಮೆರೆಸುತ್ತಾರೆ, ಹೊಗಳುತ್ತಾರೆ.

ಇನ್ನೂ ಕೆಲವರು..

 ವೃತ್ತಿ ಮತ್ಸರದಿಂದಲೋ ಅಥವಾ ಒತ್ತಡದಿಂದಲೋ ದ್ವೇಷದಿಂದಲೋ ನಮ್ಮನ್ನು ದೂರ ಮಾಡಿಕೊಳ್ಳುತ್ತಲೇ ನಮ್ಮೊಡನೆ ಜಗಳಕ್ಕಿಳಿಯುತ್ತಾರೆ. ಆದರೆ…
ನಾನು ಕಂಡುಕೊಂಡಂತೆ ವೃತ್ತಿ ಬದುಕಿನಲ್ಲಿ ಇಂತಹ ವ್ಯಕ್ತಿಗಳ ಪ್ರಕರಣಗಳು ಕಾಣಸಿಗುವುದು ಅಲ್ಲೊಂದು ಇಲ್ಲೊಂದು ಮಾತ್ರ. ಬಹುತೇಕರು ಹೆಚ್ಚು ಸಮಯವನ್ನು ಕಳೆಯುವುದು ವೃತ್ತಿಯಲ್ಲಿ ಆಗಿರುವುದರಿಂದ ಒಬ್ಬರಿಗೊಬ್ಬರು ಅಭಿಪ್ರಾಯವನ್ನು ಗೌರವಿಸುವುದು. ಇನ್ನೊಬ್ಬರ ಅಭಿಪ್ರಾಯಕ್ಕೆ ಮನ್ನಣೆ ಕೊಡುವುದು. ಅವರವರ ಅಭಿಪ್ರಾಯವನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳುವುದು ಮತ್ತು ಧನಾತ್ಮಕ ಚಿಂತನೆಗಳನ್ನು ಪಸರಿಸುವುದು ಒಳ್ಳೆಯ ಸಹೋದ್ಯೋಗಿ ಮಿತ್ರರ ಲಕ್ಷಣ.

ಹೌದು..!!

 ಬದುಕು ನಿರಂತರವಾಗಿ ಬದಲಾವಣೆಯಾಗುತ್ತದೆ. ಅದು ಪ್ರಕೃತಿಯ ಲಕ್ಷಣವೂ ಹೌದು. ನಮ್ಮೊಂದಿಗೆ ಒಡನಾಡಿದ ಸ್ನೇಹಿತರು, ಮಿತ್ರರು, ಬಂಧುಗಳು, ಸಹೋದ್ಯೋಗಿ ಸ್ನೇಹಿತರು ಸ್ವಲ್ಪ ದೂರವಾದರೆ ಸಾಕು ಚಡಪಡಿಕೆ ಉಂಟಾಗುತ್ತದೆ. “ಅಯ್ಯೋ ಎಲ್ಲಿ ಹೋದರಲ್ಲ..? ಹುಡುಕುತ್ತೇವೆ, ಹಪಾಹಪಿಸುತ್ತೇವೆ, ಕೆಲವು ದಿನಗಳ ಕಾಲ ನೋವು ಸದಾ ಕಾಡುತ್ತದೆ.

 ಆದರೆ..
ಕಾಲ ಒಂದೇ ರೀತಿ ಇರುವುದಿಲ್ಲ..!!  ವರ್ಗಾವಣೆ ಎಂಬ ಲಕ್ಷಣ ಗೆರೆಯೊಳಗೆ ಬಿದ್ದು ಒದ್ದಾಡುತ್ತಾ ಒಂದು ಅಂತಿಮ ಹಂತಕ್ಕೆ ಬಂದಾಗ ಮತ್ತೊಂದು ಸ್ಥಳಕ್ಕೆ ಆಯ್ಕೆ ಮಾಡಿಕೊಳ್ಳುತ್ತೇವೆ. ಮತ್ತೆ ಅದೇ ಬದುಕು ಹಿಂದಿನ ಸ್ನೇಹಿತರು, ಸದಾ ಒಡನಾಟದೊಂದಿಗೆ ಇರದಿದ್ದರೂ.. ಅವರ ನೆನಪುಗಳು ಅಚ್ಚಳಿಯದೆ ಉಳಿದುಬಿಡುತ್ತವೆ. ಮತ್ತೆ ಈಗ ಇರುವ ಕಚೇರಿಯಲ್ಲಿ, ಉದ್ಯೋಗದ ಸ್ಥಳದಲ್ಲಿ ನಾವು ಹೊಸ ಸ್ನೇಹ ಬಾಂಧವ್ಯವನ್ನು ಕಟ್ಟಿಕೊಳ್ಳುತ್ತೇವೆ.
ಮತ್ತೆ ಮತ್ತೆ ಬದುಕನ್ನು ಪ್ರೀತಿಯಿಂದ ಅನುಭವಿಸಬೇಕಾಗುತ್ತದೆ. ನೆನಪುಗಳ ಮೆರವಣಿಗೆಯಲ್ಲಿ ಒಲವನ್ನು ನಾವು ಸದಾ ಹಂಚಬೇಕು.  

ಆ ನೆನಪುಗಳೇ ಬದುಕಿನ ಪಯಣದ ಮೆಲುಕುಗಳಾಗಬೇಕು. ಬದುಕು ಸುದೀರ್ಘವಲ್ಲ..!! ಇರುವ ಸಣ್ಣ ಜೀವಮಾನದ ಕಾಲಘಟ್ಟದಲ್ಲಿ ನಾವು ಪ್ರೀತಿಯನ್ನು ಹಂಚಬೇಕಾಗಿದೆ. ನಮಗೆ ಆಪ್ತರಾದವರು ವರ್ಗಾವಣೆಯಿಂದಲೋ ಇನ್ನು ಯಾವುದೋ ಕಾರಣದಿಂದಲೋ  ಕಣ್ಮರೆಯಾದಾಗ ಹೃದಯದೊಳಗೆ ಕಂಬನಿಗಳಾಗಿ ನಮ್ಮನ್ನು ಕಾಡುತ್ತವೆ. ಅಂತಹ ಕಾಡುವಿಕೆ ಎಲ್ಲರ ಎದೆಯೊಳಗೆ ಬರುವಂತೆ ನಾವು ಪ್ರೀತಿಯಿಂದ ಬದುಕನ್ನು ಕಟ್ಟೋಣ. ನೆನಪುಗಳ ಮೆರವಣಿಗೆ ಸದಾ ನಿರಂತರವಾಗಿ ಇರಬೇಕಾದರೆ ಒಲವನ್ನು ಹಂಚೋಣ ಬನ್ನಿ.

ಇದೇ ಬದುಕಲ್ಲವೇ ಸ್ನೇಹಿತರೇ..? 


ರಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

2 thoughts on “

  1. ರಕ್ತ ಸಂಬಂಧಿಗಳಿಗಿಂತ ಸ್ನೇಹ ಸಂಬಂಧಿಗಳಲ್ಲಿ ಪ್ರೀತಿಯ ಹರಿವು ತುಂಬಾ ಜಾಸ್ತೀನೇ. ಸಮಯೋಚಿತ ಒಳ್ಳೆಯ ಲೇಖನ. ಅಭಿನಂದನೆಗಳು.

  2. ತುಂಬಾ ಆಪ್ತ ಎನಿಸಿದ ಲೇಖನ ಓದಿ ತುಂಬಾ ಖುಷಿಯಾಯಿತು sir

Leave a Reply

Back To Top