ಕಾವ್ಯ ಸಂಗಾತಿ
ನೆನಪುಗಳ ಸುಳಿಯಲ್ಲಿ
ಇಂದಿರಾ ಮೋಟೆಬೆನ್ನೂರ.
ಅರಳಿದ ಮಲ್ಲಿಗೆ ಮೊಗ್ಗಿನ
ಪರಿಮಳದ ಪರಿಧಿಯಲ್ಲಿ
ಹುಡುಕುತ್ತಿರುವೆ…ನಿನ್ನ ಪ್ರೀತಿಯ ಹರವು
ಸುರಿವ ಮಳೆ ಹನಿಯ
ಪ್ರತಿ ಬಿಂದುವಿನಲ್ಲಿ
ಅರಸುತಿರುವೆ …ನಿನ್ನ ಪ್ರೀತಿಯ ಇರುವು
ನಿನ್ನಿರುವ ಸಾರುವ ಸವಿ
ನೆನಪ ಪರಿಮಳ ಬೀರುವ
ಪ್ರೀತಿ ಕಿರಣ ಬೆಳಕಿನಲಿ… ನಿನ್ನ ವಾತ್ಸಲ್ಯದ ಕುರುಹು
ಎನ್ನ ಮನ ಮನೆಗಳ ಅಂಗಳದಿ
ನಿನ್ನದೇ ಮಮತೆಯ ಸೆಳಕು..
ನಿನ್ನ ಮಾತ ಮೆಲುಕು…ನಿನ್ನ ವಚನಗಳ ಹರಹು…
ಹಿತ್ತಲಿನ ಹಂದರದ ಹೂವು
ಚಿಗುರುಗಳ ಮೊಗದ ಕನಸು
ಬಿತ್ತಿದ ಬೀಜ ಮೊಳಕೆಯಲಿ …ನಿನ್ನ ನಗುವ ತುಡಿತ
ಸೂಸಿ ಬರುವ ಗಾಳಿ ಗಂಧದಲಿ
ಸುರಿದ ಪಾರಿಜಾತ ಹೂವರಳಿನಲ್ಲಿ
ಬ್ರಹ್ಮಕಮಲ ದಳದಳಗಳಲಿ..ನಿನ್ನ ಹೃದಯ ಮಿಡಿತ
ಮಮತೆಯ ತೊಟ್ಟಿಲು
ನೆನಪಿನ ಬಟ್ಟಲು ತೋರಣವ ಕಟ್ಟಲು
ಹಿತ್ತಲಿನ ಹಸಿರಿನ ಉಸಿರಲಿ…ನಿನ್ನ ಪ್ರೀತಿ ಮಂದಿರ
ಕತ್ತಲಲಿ ಮಿನುಗುವ ಚುಕ್ಕಿಗಳಲ್ಲಿ
ಸುತ್ತಲೂ ಸೂಸಿ ಸುಳಿವ ತಂಗಾಳಿಯಲ್ಲಿ
ನೆನಪ ತೊಟ್ಟಿಲು ತೂಗಿದೆ…ನಿನ್ನ ಮಮತೆ ಹಂದರ
ನೀ ನೆಟ್ಟು ನೀರುಣಿಸಿ
ಬೆಳೆಸಿದ ಹೂ ಬಳ್ಳಿ
ತರುಲತೆಗಳ ಮೊಗದಲ್ಲೂ..ನಿನ್ನ ಸ್ಪರ್ಶ ಚೇತನ….
ನಗುವಿಲ್ಲ ನೀನಿಲ್ಲದೇ..
ಮೊಗ್ಗು,ಹೂ,ಕಾಯಿ,
ಹಣ್ಣು ಮುದುಡಿ ಮಲಗಿವೆ…ನಿನ್ನ ತೊರೆದ ಯಾತನ
ಮನ ಮನೆಯ ಒಳಗೂ
ನಿನ್ನದೇ ದನಿಯ ಪ್ರತಿದ್ವನಿ
ಸುತ್ತಮುತ್ತನೀನೇ ನೀನು..ನಿನ್ನ ಮಧುರ ಸ್ಪಂದನ
ನಿನ್ನ ಮಮತೆಯ ಮೃದು ಸ್ಪರ್ಶ
ನಿನ್ನ ಬಚ್ಚ ಬಾಯ ನಗುವ ಹರ್ಷ
ಪಿಳಿ ಪಿಳಿ ಕಣ್ಣಿನ ಆ ನೋಟ…ನಿನ್ನ ನೆನಪ ನಂದನ
ಹೇಗೆ ಮರೆಯಲಿ…ಹೇಗೆ ಬಾಳಲಿ
ತೊರೆದು ಹೋದೆ ಎಲ್ಲಿಗೆ.?
ಅಳುತಿದೆ ಹೃದಯ..ಬಳಲಿದೆ ಮನ… ತಬ್ಬಲಿ ಕಂದ
ನೆನಪಿನ ಸುಳಿಯಲಿ
ನೀನಿಲ್ಲದೇ… ನೀನಿಲ್ಲದೇ…
——–[———————–
ಹೃದ್ಯ ಕವಿತೆ…