ಕಾದಿದೆ ಸದಾ ಮನ ಅಪಾರ ಪ್ರೀತಿಗೆ

ಲಹರಿ

ಜಯಶ್ರೀ.ಜೆ. ಅಬ್ಬಿಗೇರಿ

ಕಾದಿದೆ ಸದಾ ಮನ ಅಪಾರ ಪ್ರೀತಿಗೆ

ಹೇ, ನನ್ನ ಮುದ್ದಿನ ರಾಣಿ,

ಅದೊಂದು ಸಂಜೆ  ತಿಳಿ ಆಗಸದ ಸಹಜ ಸೌಂದರ್ಯವ  ನೋಡುತ್ತ ನಡೆಯುತ್ತಿದ್ದೆ. ಆಗ ತಾನೆ ದೇವರ ದರುಶನ ಪಡೆದು,ಎದುರಿಗೆ ಬಂದ ನಿನ್ನನ್ನು ನೋಡದೇ ಒಮ್ಮೆಲೇ ಡಿಕ್ಕಿ ಹೊಡೆದದ್ದನ್ನು ಮರೆಯುವದಾದರೂ ಹೇಗೆ ಗೆಳತಿ? ಕೆಳಗೆ ಬಿದ್ದ ಪ್ರಸಾದ ಹೂಗಳನ್ನು ಎತ್ತಿ ಕೊಡಲು ನಾ ಬಗ್ಗಿದಾಗ ಇಬ್ಬರೂ ಹಣೆ ಬಡಿಸಿಕೊಂಡಾಗಲಂತೂ ಒಮ್ಮೆಲೇ ವಿದ್ಯುತ್ ಶಾಕ್ ಕೊಟ್ಟಂತಾಯಿತು. ಕ್ರಿಕೆಟ್ ರಿಪ್ಲೇ ತೋರಿಸಿದಂತೆ ನನ್ನ ಮೆದುಳು ಮರಳಿ ಮರಳಿ ಡಿಕ್ಕಿ ಹೊಡೆದ ದೃಶ್ಯವನ್ನೇ ಹೆಕ್ಕಿ ಹೆಕ್ಕಿ ತಂದು ತೋರಿಸುತ್ತಿದೆ.

ನನಗೇ ಗೊತ್ತಿಲ್ಲದಂತೆ ನಿನ್ನ ಸೌಂದರ್ಯದ ರೂಪ ರಾಶಿಗೆ ಮರುಳಾಗಿದ್ದೆ. ಪ್ರಥಮ ನೋಟದಲ್ಲೇ ಹೃದಯ ನಿನ್ನ ವಶವಾಗಿತ್ತು. ಹೃದಯದ ಕೋಗಿಲೆ ನಿನ್ನದೇ ಸವಿಗಾನ ಹಾಡ ಹತ್ತಿತು. ನೀನೆಂದರೆ ನನಗೆ ಏನೋ ಒಂಥರ. ಆ ಒಂಥರ ಅನ್ನುವುದನ್ನು ಪದಗಳಲ್ಲಿ ಕಟ್ಟಿ ಕೊಡಲಾಗುವುದಿಲ್ಲ.
ನೀನಿಲ್ಲದಾಗ ಏನೇನೋ ಹೇಳಬೇಕೆಂದು ಶಾಲೆಯ ಮಕ್ಕಳು ಪರೀಕ್ಷೆಗೆ ತಯಾರಾಗುವಂತೆ ಉರು ಹೊಡೆಯುತ್ತೇನೆ. ನೀ ಬಳಿ ಬಂದು ನಿಂತಾಗ ನವಿಲಿನ ನರ್ತನ ಕಂಡ ಮೂಗನಂತಾಗಿ ಬಿಡುತ್ತೇನೆ. ನವಿಲಿನ ಬಣ್ಣ ಬಣ್ಣದ ಗರಿಗಳಲ್ಲಿ ನಿನ್ನ ಚೆಲುವು ಅಡಗಿದೆ.ನಿನ್ನ ಬೆನ್ನ ತುಂಬ ದಟ್ಟವಾಗಿ ಬಿದ್ದಿರುವ ಹಾವಿನಂತೆ ಉದ್ದನೆಯ, ಮೋಡದಂತೆ  ಕಪ್ಪು ಕೂದಲುಗಳಲ್ಲಿ ಒಮ್ಮೆ ಹೀಗೆ ಬೆರಳಾಡಿಸುವಾಸೆ. ಆದರೆ ಅದು ಹೇಳುವ ಪರಿ ನನಗೆ ತಿಳಿಯದು ಗೆಳತಿ.

ಇದುವರೆಗೂ  ಗೆಳೆಯರ ಪಟಾಲಂನಲ್ಲಿ ಮಾತಿನ ಮಲ್ಲನೆಂದೇ ಅಡ್ಡ ಹೆಸರು ಪಡೆದಿದ್ದ ನಾನು ಈಗ ಶುದ್ದ ಮೂಗ. ನೀನು ನನಗಾಗಿಯೇ ಈ ಭೂಮಿಗೆ ಇಳಿದಿರುವೆ. ನೀನೇ ನನ್ನ ಕನಸಿನ ರಾಣಿ. ನನಗೆ ನೀನು ಬೇಕೆ ಬೇಕು ಎನ್ನುವ ಹಟ ದಿನದಿಂದ ದಿನಕ್ಕೆ ಹೃದಯದಲ್ಲಿ ಪ್ರವಾಹದಂತೆ ಉಕ್ಕಿ ಹರಿಯುತ್ತಿದೆ. ಈ ಪ್ರವಾಹವನ್ನು ತಡೆಗಟ್ಟಿ ಮನಸ್ಸನ್ನು ಒಂದು ಹದಕ್ಕೆ ತರುವ ಶಕ್ತಿ ನಿನಗಲ್ಲದೆ ಮತ್ತಾರಿಗೂ ಇಲ್ಲ.

ಪ್ರತಿ ವಾರ ಹನುಮಂತನ ದರುಶನಕ್ಕೆ ತಪ್ಪದೇ ಬರುತ್ತಿಯಾ ಎಂಬ ಸುದ್ದಿ ತಿಳಿದ ಮನಸ್ಸು ಕುಣಿದಾಡಿತು. ಇಡೀ ವಾರವೆಲ್ಲ ಮನದಲ್ಲಿ ಮಂಡಿಗೆ ತಿಂದು ನಿನ್ನ ದರುಶನಕ್ಕಾಗಿ ಕಟ್ಟಾ ಬ್ರಹ್ಮಚಾರಿಯ ಗುಡಿಯ ಮುಂದೆ ಕಾದು ನಿಂತೆ.ಆಗ ತಾನೆ ತಲೆಗೆ ನೀರುಣಿಸಿದಂಥ ನಿನ್ನ ಕೂದುಲುಗಳಿಂದ ನೀರಿನ ಹನಿಗಳು ತೊಟ್ಟುಕ್ಕುತ್ತಿದ್ದವು. ಒಂದೆರಡು ಹನಿಗಳು ನನ್ನ ಕೈ ಮೇಲೆ ಬಿದ್ದಾಗ ನನಗಾದ ರೋಮಾಂಚನ ಶಬ್ದಕ್ಕೆ ನಿಲುಕುವುದಿಲ್ಲ. ಜಡೆ ಹೆಣೆಯದೇ ಬಿಟ್ಟ ನಿನ್ನ ಕೂದಲುಗಳ ಮಧ್ಯೆ ರಾರಾಜಿಸುತ್ತಿದ್ದ ಕೆಂಗುಲಾಬಿಗೆ ದುಂಬಿಯೊಂದು ಬೆನ್ನು ಹತ್ತಿತ್ತು.

ಅದೆಲ್ಲಿ ನಿನ್ನನ್ನು ಕಚ್ಚುವುದೋ ಎಂಬ ಭಯದಿಂದ ಅದನ್ನು ಓಡಿಸಲು ಯತ್ನಿಸಿದಾಗ ಗೆಳತಿಯೊಂದಿಗೆ ಮಾತನಾಡುತ್ತ ನೀ ನನ್ನೆಡೆಗೆ ಬೀರಿದ ನಗೆ ನೋಟ. ಎಂಥವರನ್ನೂ ಮೋಹಗೊಳಿಸುವಂತಿತ್ತು ನಾ ಪ್ರೀತಿ ಅಭಿವ್ಯಕ್ತಿಸದೇ ಇದ್ದರೂ ನಿನಗೆ ಮನದ ಒಲವಿನ ಭಾಷೆ ಚೆನ್ನಾಗಿ ಅರ್ಥವಾಗುತ್ತದೆಂಬುದು. ನನಗಾಗಲೇ ಹೊಳೆಯಿತು.  ನೀ ನನ್ನ ಮನದ ಅಂತರಾಳದ ಒಲವನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವೆ. ನನ್ನೊಲವನ್ನು ಒಲವಿನಿಂದ ಮುದ್ದಾಡುವೆ ಎಂಬ ಹೊಸ ಆಸೆ ಚಿಗುರೊಡೆಯ ತೊಡಗಿತು.

ಮುಂದಿನ ಭೇಟಿಗಳಲ್ಲಿ ಕಣ್ಣಲ್ಲೇ ಮಾತನಾಡಿ ನನ್ನ ಪ್ರೀತಿಗೆ ನೀನು ಸ್ವೀಕೃತ ಮುದ್ರೆ ಹಾಕಿದ ಪರಿ ಬಹುಶಃ ಜಗದ ಯಾವ ಪ್ರೇಮಿಗಳು ಈ ತೆರನಾಗಿ ಪ್ರೀತಿಯ ನಿವೇದಿಸಿಲ್ಲ ಎಂದೆನಿಸಿತು. ಅಕ್ಕಿ ಹೆಕ್ಕಿ ತಿನ್ನುವ ಗುಬ್ಬಿ ಮರಿಯು ತನ್ನ ತಾಯಿ ಒಡಲನ್ನು ಬಯಸುವಂತೆ ನನ್ನ ಮನದಂಗಳವು ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಕಾಯ ತೊಡಗಿತು. ಹೃದಯ ಒಲವ ಪಲ್ಲವಿ ಹಾಡಲು ತವಕಿಸಿತು. ಅದೊಂದು ದಿನ ನೀನು ಮುಡಿದ ಸೂಜಿ ಮಲ್ಲಿಗೆಯ ಮಾಲೆ ಜಾರಿ ಕೆಳಗೆ ಬಿದ್ದಾಗ ನಾನೇ ಮುಡಿಸಬೇಕೆಂಬಂತೆ ನೀನು ಕಾದಿದ್ದು ನನ್ನ ಪ್ರೀತಿಗೆ ಮತ್ತಷ್ಟು ಪುಟಿ ಕೊಟ್ಟಿತು ಘಮ ಘಮಿಸುವ ಮಲ್ಲೆಯನ್ನು ನಲ್ಲೆಯ ಮುಡಿಗೆ ಮುಡಿಸಬೇಕೆನ್ನುವಷ್ಟರಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ನಿನ್ನ ಗೆಳತಿ ಪ್ರತ್ಯಕ್ಷಳಾಗಿ ನಮ್ಮಿಬ್ಬರ ಕನಸು ಭಗ್ನವಾಗಿತ್ತು.

ಗೆಳತಿ ನೀ ಅಂದು ವಾರೆ ನೋಟ ಬೀರಿ ಮುಸಿ ಮುಸಿ ನಗುತ್ತ ಮುಂದೆ ಹೋದೆ. ಕನಸು ನನಸಾಗಲಿಲ್ಲ ಎನ್ನುವ ನೋವಿನಲ್ಲೂ ಹಿತವಿತ್ತು.
ಇನ್ನೆಷ್ಟು ವಾರ ಹನುಮಂತನ ದರುಶನದ ನೆಪದಲ್ಲಿ ನಮ್ಮೀರ್ವರ ದರುಶನ? ಒಂದೇ ಒಂದು ಪದವನ್ನಾಡದೇ ನೀ ಪ್ರೀತಿಸಿದ ಪರಿಗೆ ಸೆಳೆದ ಮನಮೊಹಕತೆಗೆ ನಾ ಚೂರು ಚೂರಾಗಿರುವೆ. ನಿನ್ನ ನಡೆಗೆ ಮನ ಸೋತು ಹೋಗಿರುವೆ. ಸೆಳೆಯುವ ಒಲವನು ಇನ್ನಷ್ಟು ಮತ್ತಷ್ಟು ಹತ್ತಿರ ಸೆಳೆಯುವ ಕಲೆ ನನಗೆ ಗೊತ್ತಿಲ್ಲ ಗೆಳತಿ. ಆ ಕಲೆ ನಿನಗೆ ಚೆನ್ನಾಗಿ ಗೊತ್ತು ಅದನ್ನು ನೀನೇ ನನಗೆ ಕಲಿಸಿಕೊಡು. ನಮ್ಮಿಬ್ಬರ ಪ್ರೀತಿಗೆ ಮನೆಯವರು ಹಸಿರು ನಿಶಾನೆ ತೋರುತ್ತಾರೋ ಇಲ್ಲವೋ ಎನ್ನುವ ಎದೆಯ ಗೊಂದಲಕ್ಕೆ ನೀನಿಂದು ಉತ್ತರಿಸಲೇಬೇಕು.

ಈ ವಿಷಯದಲ್ಲಿ ನಾನು ಭಾಗ್ಯವಂತ. ನೀ ಪ್ರೀತಿಸಿದ ಮನದನ್ನೆಯನ್ನು ಮನೆ ತುಂಬಿಸಿಕೊಳ್ಳಲು ನಮ್ಮದೇನೂ ಅಭ್ಯಂತರವಿಲ್ಲ ಎಂದಿದ್ದಾರೆ ನನ್ನ ಮನೆಯವರು.
ಭವ್ಯ ಬಾಳಿಗೆ ಪ್ರೇಮ ಸುಧೆಯನ್ನು ಹರಿಸಲು ನಾನು ಸಿದ್ಧ. ಕೈ ತುಂಬ ಸಂಬಳ ತರುವ ಗಿಂಬಳಕ್ಕೆ ಕೈ ಚಾಚದಿರುವ ಒಳ್ಳೆಯ ಹುಡುಗನೊಬ್ಬ ನಿನ್ನ ಕೈ ಹಿಡಿಯಲು ತುದಿಗಾಲಲ್ಲಿ ನಿಂತಿದ್ದಾನೆ ಎಂಬ ವಿಷಯವನ್ನು ನಿಮ್ಮ ಮನೆಯಲ್ಲಿ ಹೇಳು. ನನ್ನಪ್ಪ ಅವ್ವನನ್ನು ನಿಮ್ಮ ಮನೆಗೆ ಕರೆ ತರುವೆ. ಹಿರಿಯರ ಸಮ್ಮುಖದಲ್ಲೇ ಕೈಗೆ ಕೈ ಜೋಡಿಸೋಣ.

ಕಾದಿದೆ ಸದಾ ಮನ ಅಪಾರ ಪ್ರೀತಿಗೆ. ನೀನು ಬದುಕಿನಲ್ಲಿ ಕಾಲಿಟ್ಟರೆ ಸಾಕು ಗೆಳತಿ, ಹಾಲು ತುಂಬಿದ ಹೃದಯಕೆ ನಿನ್ನ ಹೃದಯದ ಸವಿಜೇನು ಬೆರೆಸಿದಂತಾಗುತ್ತದೆ. ನನ್ನ ಭಾವ ಕೋಶಗಳೆಲ್ಲ ಅಮೃತಮಯವಾಗುತ್ತವೆ. ಇಷ್ಟು ದಿನ ಸತಾಯಿಸಿದ್ದು ಸಾಕು. ಮನೆಯವರನ್ನೆಲ್ಲ ಒಪ್ಪಿಸಿ ಬೇಗ ಬಂದು ಬಿಡು ಹನುಮಂತನ ಸನ್ನಿಧಿಯಲ್ಲೇ ನಮಗೆ ಕಂಕಣ ಬಲ ಕೂಡಿ ಬಂದಿದೆ. ಶುಭ ಗಳಿಗೆಯಲ್ಲಿ ಹೊಸ ಬಾಳಿನ ಅಪಾರ ಪ್ರೀತಿಗೆ ಮುನ್ನುಡಿ ಬರೆಯೋಣ.
                                             ನಿನ್ನ ಬರುವಿಗಾಗಿ ಕಾದಿರುವ
                                             ನಿನ್ನ ಪ್ರೀತಿಯ ರಾಜ


2 thoughts on “ಕಾದಿದೆ ಸದಾ ಮನ ಅಪಾರ ಪ್ರೀತಿಗೆ

Leave a Reply

Back To Top