ಕಾವ್ಯ ಸಂಗಾತಿ
ಬಡಿಗೇರ ಮೌನೇಶ್
ಹೇಳೇ ಸಖಿ
ಹೌದು ಸಖಿ
ನನಗೆ ತಿಳಿದಿದೆ
ಪಯಣದ ಪಥಗಳೆರಡು
ಬೇರೆ ಬೇರೆ ಎಂಬ ಪರಿ
ಎದೆಯೊಳಿರಿಸಿಕೊಂಡು
ನಗುತ ನಡೆವ ನಟಿಸುವುದ
ಕಲಿಯಲಿಲ್ಲ ನಿನ್ನ ಹಾಗೆ
ಬದುಕಿನ ಬೇಲಿಯೊಳಗೆ
ಕನಸಿನ ಹೂಗಳರಳಿ
ಪ್ರೇಮ ಘಮಿಸದೆ
ಪ್ರಯೋಜನವೇನು ಸಖಿ!
ಕನಸು ಕನವರಿಕೆಗಳೊಂದಿಗೆ
ನೀನಿಲ್ಲದ ಹಗಲಿರುಳೂ
ಎಡೆಬಿಡದ ಯುದ್ಧ!
ಕನಸುಗಳು ಗೆಜ್ಜೆ ಕಟ್ಟಿ ಕುಣಿಕುಣಿದು
ದಣಿಯುತ್ತವೆ
ಕನವರಿಕೆಗಳು ನಿನ್ನ ಕನವರಿಸಿ
ಕಣ್ಣೀರು ಸುರಿಸಿ ಸೋಲುತ್ತವೆ!
ಕಣ್ಣೀರು ಒರೆಸಲೆಂದು ತಂದ
ನವಿರಾದ ನವಿಲುಗರಿ
ಪುಸ್ತಕದ ಪುಟಗಳಲಿ
ಮುದುರಿ ಮಲಗಿದೆ!
ಬದುಕಿಡೀ ನಿನ್ನ ನೆನಪಿನ ಹೊಳೆಯಲಿ
ಮಿಂದಿದ್ದೇನೆ
ನೆನಪುಗಳ ಸಾಂಗತ್ಯದಲಿ
ಕನಸು ಕನವರಿಕೆಗಳ ಸಾವರಿಸಿ
ಭಾವಗಳ ಹೊಸೆದು
ಕವಿತೆಗಳ ಕಟ್ಟಿರುವೆ
ದನಿಯೆತ್ತಿ ಹಾಡುವ ಕವಿತೆಗಳೂ
ಬಿಕ್ಕಿ ಬಿಕ್ಕಿ ಅಳುತಿವೆ!
ಹೇಳೇ ಸಖಿ
ಬಾಳರಂಗದ ಮೇಲೆ
ನೀನಿರದೆ ನಗುತ ನಡೆವ
ನಟಿಸುವುದ ಕಲಿಸು.
ಬಡಿಗೇರ ಮೌನೇಶ್
Super sir
ಧನ್ಯವಾದ ಮೇಡಂ
ಕರುಳು ಹಿಂಡುವಂತೆ ಆತ್ಮೀಯವಾಗಿದೆ. ಇಂತಹ ಅದೆಷ್ಟೋ ಜನರಿದ್ದಾರೆ.
ಧನ್ಯವಾದ ಮೇಡಂ
ಮನ ಕರಗಿಸುವಂತಿದೆ sir
ಧನ್ಯವಾದ ಮೇಡಂ