ವಿಶೇಷ ಲೇಖನ
ಸುಲೋಚನಾ ಮಾಲಿಪಾಟೀಲ
ನಮ್ಮ ಬದುಕಿಗೊಂದು ಅರ್ಥವಿರಲಿ
ಬಸವಣ್ಣನವರು ಜ್ಞಾನ ಮಾರ್ಗವನ್ನು ತೋರಿಸುವ ಅರುಹಿಸುವ ಒಬ್ಬ ಗುರು. ಅಷ್ಟೆಲ್ಲ ಜನರ ಬದುಕುವ ದಾರಿ ಸಮಚಿತ್ತದಿ ಸುಲಭ ಮತ್ತು ಸುರುಳಿತವಾಗಿಸಿಕೊಂಡು ನಡೆಸುವಂತೆ ಮಾರ್ಗದರ್ಶಿಸಿದ ಶ್ರೇಷ್ಠ ವ್ಯಕ್ತಿ. ಚಿಕ್ಕವರಿರುವಾಗಲೇ ಮೌಢ್ಯತನ ಸಹಿಸುತ್ತಿರಲಿಲ್ಲ. ಅವರು ಯಾವುದೇ ಜಾತಿ, ಮತ, ಪಂಥಗಳ ಬಗ್ಗೆ ಮಾತಾಡಿದವರಲ್ಲ. ಮಾನವ ಕುಲ ಒಂದೇ ಎಂದವರು. ಅವರು ತಮ್ಮ ವಚನಗಳಲ್ಲಿ ಗಂಡು ಹೆಣ್ಣು ಎಂಬ ಭಾವನೆ ಕೂಡಾ ಎಲ್ಲಿಯೂ ತೋರಿಸಿಕೊಟ್ಟಿಲ್ಲ. ನಾವು ಯಾವುದೇ ಧರ್ಮದವರು ಆಗಲಿ, ಯಾವ ದೇವರನ್ನೇ ಪೂಜಿಸುವದಾಗಲಿ ಅದು ನಮ್ಮ ಇಚ್ಛೆಗೆ ಬಿಟ್ಟಿದ್ದು. ಅದರಲ್ಲಿ ಮೌಢ್ಯತನಕೆ ಆಸ್ಪದ ಇರಕೂಡದು. ಆದರೆ ನಮ್ಮ ಬಸವಣ್ಣನವರು ಈ ಬ್ರಹ್ಮಾಂಡ ಮತ್ತು ಅದರಲ್ಲಿ ಬೆಳೆದ ಜೀವಸಂಕುಲದ ಸಮ್ಮಿಲನ ಕುರಿತು ಬಹಳ ಸುಂದರವಾಗಿ ತಿಳಿಹೇಳಿದ್ದಾರೆ. ನಾವು ಅದನ್ನು ಅರಿತು ನಡೆಯುವುದು ಬಿಡುವುದು ನಮಗೆ ಬಿಟ್ಟಿದ್ದು. ಮೊದಲ ಪ್ರಾಶಸ್ತ್ಯ ಕಾಯಕಕ್ಕೆ ಮಿಸಲಿಟ್ಟಿದ್ದಾರೆ. ನಿಸ್ವಾರ್ಥತೆ, ಪ್ರಾಮಾಣಿಕತೆಯಿಂದ ಮಾಡಿದ ಕಾಯಕ ಬಹಳ ಶ್ರೇಷ್ಠ. ಕಾಯಕವಿದ್ದರೆನೆ ಬದುಕು, ಇಲ್ಲದಿದ್ದರೆ ಮಾನವ ಕುಲದಲ್ಲಿ ಹುಟ್ಟಿದ್ದು ವ್ಯರ್ಥ. ನಮ್ಮ ಕಾಯಕದೊಳಗೆ ಶಾಂತಿ, ಸಂತೃಪ್ತಿ. ಸಮಾಧಾನ. ನೆಮ್ಮದಿಯಿಂದ ಬದುಕುವ ದಾರಿಯಲ್ಲಿ ದೇವರನ್ನು ಕಾಣಬೇಕು. ಪ್ರತೀ ಜೀವಿಗೂ ಬದುಕುವ ಹಕ್ಕಿದೆ. ಆ ಹಕ್ಕಿನ ಬದುಕು ಇಷ್ಟು ಸುಂದರವಾಗಿರಬೇಕೆಂದರೆ ನಾವು ಭೂಮಿ ಬಿಟ್ಟು ಹೋದ ಮೇಲೂ ಕೂಡ ನಮ್ಮ ಪ್ರತಿಬಿಂಬದ ಛಾಯೆ
ಇಲ್ಲೆ ನಮ್ಮವರ ಒಳಗೆ, ನಮ್ಮನ್ನು ಪ್ರೀತಿಸುವವರ ಮಧ್ಯ ಬಿಟ್ಟಂತೆ ಇರಬೇಕು. ಹಗಲು ನಂತರ ಇರುಳು, ಇರುಳು ನಂತರ ಹಗಲು ಇದು ಪ್ರಕೃತಿಯ ನಿಯಮ. ಮನುಜರಲ್ಲಿಯೂ ಕೂಡ ಕಾಣುವುದೆಲ್ಲ ಶಾಶ್ವತವಲ್ಲ. ಬಡತನ ಸಿರಿತನ, ಮಾಲಿಕ ನೌಕರ, ಮೇಲ್ವರ್ಗ ಕೆಳವರ್ಗ ಇವೆಲ್ಲ ಮೊದಲಿನಿಂದಲೂ ಪ್ರಪಂಚದೊಳಗೆ ಕೆಕೆ ಹಾಕುತ್ತಲೆಯಿವೆ. ನಮ್ಮ ಬಸವಣ್ಣನವರು ಇದೆಲ್ಲವನ್ನು ತೊಲಗಿಸಿ ಸಮಾಜದಲ್ಲಿ ಸಮಾನತೆಯ ಭಾವನೆಯ ಬದುಕಿನ ಬೀಜ ಬಿತ್ತಿದವರು. ನಮ್ಮನಮ್ಮ ಕಾಯಕದ ಕಸುಬಿನಿಂದ ಹುಟ್ಟಿದ ಜಾತಿ ಕುಲ ಭ್ರಮೆ ತೊಳೆದು ಹಾಕಿದರು. ಬದುಕಲು ಯಾವುದಾದರು ಕಾಯಕ ಮಾಡಲೇಬೇಕು, ಆದರೆ ಆ ಕಾಯಕ ನಮ್ಮ ಹಿರಿಯರಿಂದ ಅನುಸರಿಸಿಕೊಂಡು ಬಂದಾಗ ನಾವು ಅದನ್ನೆ ಮುಂದುವರಿಸಿಕೊಳ್ಳುತ್ತೆವೆ. ಗಳಿಕೆ ಕೆಲವರದು ಹೆಚ್ಚು ಕಡಿಮೆ ಇರಬಹುದು. ಆದರೆ ಎಲ್ಲರೂ ದುಡಿಯುವುದು ಗೇಣು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಲ್ಲವೇ? ಯಾವುದನ್ನು ರೂಢಿಸಿಕೊಳ್ಳುತ್ತೆವೆಯೋ ಅದೇ ಜೀವನ. ಶರಣರು, ದಾಸರು, ಸಂತರು ಕೂಡ ತಮ್ಮ ತಮ್ಮ ಬದುಕಿನಲ್ಲಿ ಬಹಳ ಆನಂದದಿಂದ ಸುಖವಾಗಿ ಬದುಕಿ ಹೋದರು ಅಷ್ಟೇಯಲ್ಲ, ಆ ದಾರಿ ಎಷ್ಟು ಸ್ವಚ್ಛಂದದ, ಪ್ರಸನ್ನತೆಯದಾಗಿದೆ ಎಂಬುದು ಮುಂದಿನ ಸಮಾಜಕ್ಕೆ ತೋರಿಸಿಕೊಟ್ಟು ಎಲ್ಲರ ಮನದಲ್ಲಿ ಶಾಶ್ವತ ಉಳಿದು ಹೋದರು. ಅವರಲ್ಲಿ ಹಂಚಿ ಉಂಬುವ ನಿಸ್ವಾರ್ಥ ಭಾವ ತುಂಬಿದ್ದವು. ದೇವರು ಒಬ್ಬನೆ, ಅದು ನಿರಾಕಾರ, ನಿರ್ಗುಣ, ನಿರ್ಮೋಹಿ, ನಿತ್ಯ ನಿರಂಜನಾಗಿದ್ದಾನೆ. ನಾವು ನಮ್ಮ ಚಿತ್ತದ ಪ್ರಕಾರ ನಾನಾ ಆಕಾರದ ಪ್ರಕಾರದಲ್ಲಿ ಪೂಜಿಸುತ್ತೇವೆ. ನಾವು ಸರ್ವರೀತಿಯಲ್ಲೂ ಸಂಪನ್ನರಾಗಿದ್ದೆವೆ. ಆ ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನೋಡಲು ದೃಷ್ಟಿ, ಕೇಳಲು ಕಿವಿ, ಒಳ್ಳೆಯ ಮಾತನಾಡಲು ಬಾಯಿ ಮತ್ತು ಮನಸ್ಸು, ದುಡಿಯಲು ಗಟ್ಟಿಮುಟ್ಟಾದ ಸದೃಡ ಶರೀರ, ಸರಿ ತಪ್ಪು ಅರ್ಥೈಸಿಕೊಳ್ಳಲು ಮೆದುಳು ಇನ್ನೇನು ಬೇಕು ಹೇಳಿ. ಮುಂದಿನದೆಲ್ಲ ಪಡೆದುಕೊಳ್ಳುವ ಗಳಿಸಿಕೊಳ್ಳುವ ಸನ್ಮಾರ್ಗವಿದೆಯಲ್ಲ ಅದು ಬಹಳ ಮುಖ್ಯ. ಈ ಸುಂದರ ಜಗತ್ತು ನಮ್ಮೆಲ್ಲರ ಸಲುವಾಗಿ ನಿರ್ಮಾಣವಾಗಿದೆ. ಸೃಷ್ಟಿಯ ಅಗಾಧ ಸಂಪತ್ತು ನಮಗಾಗಿಯೇ ಇದೆ. ಇಲ್ಲಿರುವ ಶಕ್ತಿ ಅಂದರೆ ದೇವರು ಏನೂ ಬೇಡುವುದಿಲ್ಲ. ನೀವು ನಡೆವ ದಾರಿ ಹೇಗಿದೆಯೋ ನಿಮಗೆ ಲಭಿಸುವುದು. ನೀವು ಯಾವ ದಾರಿ ತುಳಿಯುವಿರಿ ಅದರ ಫಲ ನಿಮಗೆ ಸಿಗುವುದು. ನೀವು ಯಾವ ತರಹದ ಧ್ಯೇಯವನ್ನಿಟ್ಟು ಬೀಜ ಬಿತ್ತುವಿರೋ ಅದನ್ನು ಬೆಳೆದುಕೊಳ್ಳುತ್ತಿರಿ. ಆಧುನಿಕ ಜೀವನದಲ್ಲಿ ಯಾರು ಯಾರಿಗಿಂತಲೂ ಕಡಿಮೆಯಿಲ್ಲ. ನಿಮ್ಮ ಚಾಣಾಕ್ಷತನ, ಜಾಣತನದಲ್ಲಿ ನಿಮ್ಮ ಬದುಕು ರೂಪಿಸಿಕೊಳ್ಳಬಹುದು. ಸ್ವಾರ್ಥ, ಅಹಂಕಾರ, ನಂಬಿಕೆ ದ್ರೊಹ ನಿಮ್ಮಲ್ಲಿ ಕಿಂಚತ್ತು ಇರಕೂಡದು. ಯಾರಲ್ಲಿ ಈ ಅವಗುಣಗಳಿವೆಯೋ ಅವರ ಬದುಕು ಕ್ಷಣಿಕ ಸುಖದ ಆಸೆ, ದುರ್ದೆಸೆಗೆ ಕಾರಣವಾಗುವುದು. ಸೃಷ್ಟಿಯ ಪ್ರತಿಯೊಂದು ಕೊಡುಗೆಗೆ ಧಕ್ಕೆ ತರದಂತೆ ನೋಡಿ ಕೊಳ್ಳಬೇಕು. ಅದನ್ನು ಪೂಜಿಸಬೇಕು. ಭೇದವಿರದ ಈ ನಿಸರ್ಗದ ಮಡಿಲಲ್ಲಿ ನಮ್ಮ ಬದುಕು ಸಹಬಾಳ್ವೆ, ಸಮಭಾವನೆ, ಸಹಕಾರದಿಂದ ಕೂಡಿದಾಗಿರಬೇಕು. ವಿಶಾಲವಾದ ಪ್ರಪಂಚಕೆ ವಿಶಾಲವಾದ ಸುಂದರ ಮನಸಿದ್ದು ಯಾವಾಗಲೂ ಶಾಂತಿ ನೆಮ್ಮದಿ ಸಂತೃಪ್ತಿಯಲ್ಲಿ ಅನುಭವಿಸುವಂತೆ ಆಗಬೇಕು. ಇದಕ್ಕೆ ಸಂಬಂಧ ಪಟ್ಟ ಅಲ್ಲಮರ ವಚನ ಹೀಗಿದೆ.
ನಿಮ್ಮಲ್ಲಿ ನೀವು ತಿಳಿದು ನೋಡಿರೇ ಅನ್ಯವಿಲ್ಲ ಕಾಣಿರೆಣ್ಣ
ಅರಿವು ನಿಮ್ಮಲ್ಲಿಯೇ ತದ್ಗತವಾಗಿಯದೆ ಅನ್ಯ ಸಾಧ್ಯವೇ ನೆನೆಯದೆ
ತನ್ನೊಳಗೆ ತಾನೆಚ್ಚರಬಲ್ಲಡೆ, ತನ್ನಲ್ಲಿಯೇ ತನ್ಮಯ ಗುಹೇಶ್ವರ ಲಿಂಗವು
ಕೂಡಿಬಾಳಿದರೆ ಸ್ವರ್ಗ ಸುಖವೆಂಬ ಗಾದೆಮಾತು ಕೇಳಿರವೆವಲ್ಲ. ವ್ಯರ್ಥ ಆಡಂಬರದ ಬದುಕು ಯಾರಿಗೂ ಬೇಡ. ಮಾನವನಾಗಿ ಮಾನವೀಯತೆಯಿಂದ ಬದುಕಿದರೆ ಸಾಕು. ನಮ್ಮ ಬದುಕಿನ ದಾರಿ ಮುಂದಿನವರಿಗೆ ದಾರಿ ದೀಪವಾಗಿರಬೇಕು.
ಸುಂದರವಾದ ಪ್ರಪಂಚವನ್ನು ಸುಂದರವಾದ ಕಣ್ಣುಗಳಿಂದ ನೋಡಿ, ಸುಂದರವಾದ ಮನಸ್ಸಿನಿಂದ ಅನುಭವಿಸಿ, ಸುಂದರತೆಯನ್ನು ಬದುಕಿನಲ್ಲಿ ಹೆಚ್ಚಿಸಿಕೊಳ್ಳುತ್ತ ಹಂಚುತ್ತಾ ಬದುಕೋಣ.
ಸುಲೋಚನಾ ಮಾಲಿಪಾಟೀಲ