ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಮಾತು

ರಮ್ಯ ನನ್ನ ಮಾತನ್ನೇ ಕೇಳುವದಿಲ್ಲ, ತಂದೆಯ ಮಾತನ್ನು ಬೇಗನೆ ಕೇಳುತ್ತಾಳೆ “ಎಂದು ರಮ್ಯಳ ತಾಯಿ ತನ್ನ ಅತ್ತೆಗೆ ಹೇಳುವಾಗ ಅಲ್ಲಿಯೇ ಆಟವಾಡುತಿದ್ದ ರಮ್ಯ “ನೀನು ಬರಿ ಬಯ್ಯುವುದನ್ನೇ ಮಾಡುತ್ತಿ, ಅಪ್ಪ ನಗುತ್ತ ಸಮಾಧಾನದಿಂದ ಹೇಳುತ್ತಾನೆ ಎಂಬ ಮಾತು ಮಕ್ಕಳನ್ನು ಪ್ರೀತಿಯಿಂದ ಹೇಳಿದ ಮಾತಿನ ಪರಿಣಾಮವನ್ನು ತಿಳಿಸುತ್ತದೆ.


ನಿಜ ಮಾತಿಗೆ ತನ್ನದೇ ಆದ ಶಕ್ತಿ ಇದೆ.
“ಮಾತಿರಬೇಕು ಮಿಂಚೋಳೆದಂಗೆ
ಕೇಳ್ದೋರ್ ಆ ಅನ್ನಬೇಕು “


ಮಾತು ಕೇಳಲು ಕಿವಿಗೆ ಹಿತಕರ ಮನಸಿಗೆ ಮುದ ನೀಡುವಂತಿರಬೇಕು. ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾದೆ ಮಾತಿನಂತೆ ಉತ್ತಮ ಮಾತುಗಾರಿಕೆ ಯಶಸ್ವಿ ವ್ಯಕ್ತಿಯ ಲಕ್ಷಣಗಳಲ್ಲೊಂದಾಗಿದೆ. ನಾವಾ ಡುವ ಮಾತು ಪರಿಣಾಮಕಾರಿಯಾಗಿರಬೇಕು.
ಶುದ್ಧವಾದ, ಸ್ಪಷ್ಟವಾದ ಮಾತು ಒಂದು ಆಸ್ತಿ. ಒಳ್ಳೆಯ ಮಾತುಗಾರರಾಗಲು ಪ್ರಯತ್ನಬೇಕು. ವಿಷಯ ಸಂಪತ್ತನ್ನು ವೃದ್ಧಿಸಿಕೊಳ್ಳಲು ವಿಷಯ ಸಂಗ್ರಹ ಬೇಕು. ಪುಸ್ತಕ ಓದುವ ಹವ್ಯಾಸದೊಂದಿಗೆ ನಾಟಕ, ರೂಪಕ, ವಿಚಾರ ಗೋಷ್ಠಿ, ಆಶುಭಾಷಣ, ಚರ್ಚಾ ಸ್ಪರ್ಧೆಗಳಲ್ಲಿ ಮಕ್ಕಳನ್ನು ಈಗಿನಿಂದಲೇ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ನಮ್ಮ ಸಂವಹನ ಕೌಶಲ್ಯವನ್ನು ಉತ್ತಮಪಡಿಸಿಕೊಳ್ಳದಿದ್ದರೆ ಏನನ್ನು ಸಾಧಿಸಲಾಗದು. ಒಬ್ಬ ವ್ಯಕ್ತಿ ಲಿಖಿತ ಪರೀಕ್ಷೆಯಲ್ಲಿ ಉತ್ತಿರ್ಣನಾಗಿ ಮೌಖಿಕ ಪರೀಕ್ಷೆಯಲ್ಲಿ ಅನುತ್ತಿರ್ಣನಾದ ಘಟನೆಗಳು ಇಲ್ಲವೆಂದಿಲ್ಲ.
ಮಾತು ಮನಸುಗಳನ್ನು ಬೆಸೆಯಲು ಬಹುದು ಮನಸುಗಳನ್ನು ಕದಡಲೂ ಬಹುದು. ಕುಟುಂಬದ ಸಂಸ್ಕಾರ ಇದ್ದಂತೆ ಮಕ್ಕಳ ನಡೆ ನುಡಿ ಇರುತ್ತದೆ.
ನಮ್ಮ ಮಾತಿಗೆ ಇನ್ನು ಹೆಚ್ಚು ಬೆಲೆ ಬರುವದು ನಾವು ನಮ್ಮ ಮಾತಿನಂತೆ ಕೃತಿಯಲ್ಲಿ ನಿರತರಾದಾಗ ಮಾತ್ರ..ಮಾತು ನಾವು ವಾಸಿಸುವ ಪರಿಸರದ ಪ್ರಭಾವಕ್ಕೂ ಒಳಗಾಗುತ್ತದೆ ಎಂಬುದಕ್ಕೆ ಬೇರೆಯಾದ ಎರಡು ಗಿಳಿಗಳ ಕಥೆಯಿಂದ ತಿಳಿಯಬಹುದು. ಒಂದು ಗಿಳಿ ಆಶ್ರಮದ ಪರಿಸರದಲ್ಲಿ ಬೆಳೆದು ಋಷಿಯ ಮಾತುಗಳನ್ನು ಕಲಿತರೆ ಕಟುಕನ ಒಡನಾಟದಲ್ಲಿ ಬೆಳೆದ ಗಿಳಿ ಕಟುಕನಂತೆ ಮಾತುಗಳನ್ನು ಕಲಿಯಿತು.
ಆದ್ದರಿಂದ ಜಗಜ್ಯೋತಿ ಬಸವಣ್ಣನವರು ಹೇಳುವಂತೆ


“ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.


ಕೈಲಾಗದವ ಮೈ ಪರಚಿಕೊಂಡ ಎಂಬಂತೆ ಕೆಲವರು ಕಾಲು ಕೆರೆದು ಜಗಳ ಮಾಡಲು ಬೇಕೆಂದೆ ನಿಂದಿಸುತ್ತಾರೆ ಅಂತವರ ಮಾತಿಗೆ ಪ್ರತಿಕ್ರಿಯಿಸದೆ ನಮ್ಮ ಕಾರ್ಯದಲ್ಲಿ ನಾವು ತಲ್ಲಿನರಾಗಬೇಕು,
ಗೌತಮ ಬುದ್ಧ ಹೇಳುವಂತೆ “ಮೌನದಿಂದಿರುವವರನ್ನು ಅವರು ನಿಂದಿಸುತ್ತಾರೆ. ಮಾತುಗರರನ್ನು ನಿಂದಿಸುತ್ತಾರೆ, ಮಿತಭಾಷಿಗಳನ್ನು ನಿಂದಿಸುತ್ತಾರೆ. ಲೋಕದಲ್ಲಿ ನಿಂದೆಯನ್ನು ಕೇಳದವರುಎಂದು ಯಾರೂ ಇಲ್ಲ ” ನಿಂದನೆಯ ಮಾತುಗಳನ್ನಾಡುವವರ ಬಗ್ಗೆ ತಿಳಿಸಿ ನಿಂದನೆಯಿಂದ ಯಾರೂ ಹೊರತಾಗಿಲ್ಲ ಎಂಬುದನ್ನು ಬಿಂಬಿಸಿದ್ದಾರೆ.
ಮಾತೇ ಮುತ್ತು, ಮಾತೇ ಮೃತ್ಯು ಎಂಬಂತೆ ನಾವಾಡುವ ಮಾತನ್ನು ತೂಗಿ ಅಳೆದು ಸಾಂದರ್ಭಿಕವಾಗಿ ಮಾತನಾಡಿದಾಗ “ಮಾತು ಬಲ್ಲವನಿಗೆ ಜಗಳವಿಲ್ಲ “ಎಂಬಂತೆ ಸಮಾಧಾನ ದೊರೆವುದು.
ಅಂತೆಯೇ ನಮ್ಮ ಬಾಯಿಯಿಂದ ಒಮ್ಮೆ ಹೊರ ಹೋದ ಮಾತನ್ನು ಮತ್ತೆ ಸರಿ ಮಾಡಲು ಸಾಧ್ಯ ಇಲ್ಲ.

ಗೋಸುಂಬೆಯಂತೆ ಬಣ್ಣ ಬದಲಿಸುವ ಮಾತುಗಾರರಾಗದೆ ಬದ್ಧತೆ ಇಂದ ಸತ್ಯ, ನ್ಯಾಯದ ಪರವಾಗಿರಬೇಕು. ತಡವಾದರೂ ಎಂದಿಗೂ ಸತ್ಯಕ್ಕೆ ಜಯ ಲಭಿಸುವದು.

ಮಾತಿರಬೇಕು ಸ್ವಂತಿಕೆಯ ಅನುಭವದ ತೆರದಿ
ಯೋಚಿಸಿಒಮ್ಮೆ ಪದ ಹೊರ ಹಾಕುವ ಭರದಿ
ಅರಿತು ಆಂತರ್ಯದ ನುಡಿಯ ಅಭಿವ್ಯಕ್ತಿಸಿ
ಗುರಿ ತಲುಪಲು ಮನಕಲಕುವ ಚುಚ್ಚು ಮಾತುಗಳನ್ನು ಅಲಕ್ಷಿಸಿ
ನಮ್ಮ ಸುಖಕೆ ಇದು ದಾರಿ ಅಲ್ಲವೇ?


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

2 thoughts on “

Leave a Reply

Back To Top