ಇಂದಿರಾ ಮೋಟೆಬೆನ್ನೂರ-ನೀ ಬರುವ ಮೊದಲು.

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ.

ನೀ ಬರುವ ಮೊದಲು

ನೀ ಬರುವ ಮೊದಲು

ನೀ ಬರುವ ಮೊದಲೂ
ಉಸಿರಿತ್ತು
ಹೋದ ಮೇಲೂ
ಉಸಿರಿದೆ..
ಆದರೆ ನೀ ಬಂದಾಗ
ನಡುವೆ ಬೆಟ್ಟದಷ್ಟು ಹಸಿರಿತ್ತು…

ನೀ ಬರುವ ಮೊದಲೂ
ಹೃದಯ ಬಡಿಯುತಿತ್ತು
ಹೋದ ಮೇಲೂ
ಬಡಿಯುತಿದೆ
ಆದರೆ ನೀ ಬಂದಾಗ
ನಡುವೆ ಮಿಡಿದು ನವಿಲಾಗಿ ಕುಣಿದಿತ್ತು….

ನೀ ಬರುವ ಮೊದಲೂ
ಮಾತಿತ್ತು
ಹೋದ ಮೇಲೂ
ಮಾತಿವೆ
ಆದರೆ ನೀ ಬಂದಾಗ
ನಡುವೆ ಭಾವ ಕವಿತೆಯಾಗಿ ಮೈದಳೆದಿತ್ತು.

ನೀ ಬರುವ ಮೊದಲೂ,,
ಕವಿತೆ ಇತ್ತು
ನೀ ಹೋದ ಮೇಲೂ
ಕವಿತೆಯಿದೆ
ಆದರೆ ನೀ ಬಂದಾಗ
ನಡುವೆ ನೇರ ಪದಗಳೆದೆಗೆ ಜೀವದುಂಬಿತ್ತು…

ನೀ ಬರುವ ಮೊದಲೂ
ಎಲ್ಲವೂ ಇತ್ತು
ನೀ ಹೋದ ಮೇಲೂ
ಎಲ್ಲವಿದೆ …ನೀ ಬಂದಾಗ
ನಡುವೆ ಮನ ಮೈದುಂಬಿ ಮತ್ತೆ ನಲಿದಿತ್ತು….

ಬರುವೆನೆಂದು ಹೇಳಿ ಬಾರದ
ನಿನ್ನ ಹಾದಿಯ ನಿತ್ಯ .ನಿರುಕಿಸುತಿಹ
ನಯನ ನೀಲಾಂಜನಗಳು…
ಪಿಸು ಮಾತುಗಳ ಅಬ್ಬರದಿ
ಪ್ರೀತಿಯ ಕಿರುನಗೆ ಕರಗದಿರಲಿ.

ಹೊಸ ಕನಸುಗಳ ಹಬ್ಬದಲಿ
ಮನ ಮಲ್ಲಿಗೆ ಮುದುಡದಿರಲಿ
ಇಂದಲ್ಲ ನಾಳೆ ಬರುವೆಯೆಂಬ
ಭರವಸೆಯ ಭದ್ರ ಭಾವ
ಬೆಸುಗೆಯ ಅಪ್ಪಿ ಕುಳಿತು
ಕಾಯುತಿದೆ ಜೀವ ಭಾವವಿಂದಿಗೂ…


_ಇಂದಿರಾ ಮೋಟೆಬೆನ್ನೂರ.

Leave a Reply

Back To Top