ಕಾವ್ಯ ಸಂಗಾತಿ
ಅಪ್ಪ ಆಕಾಶ
ಸ್ಮಿತಾ ಬನಹಟ್ಟಿ
ಅಪ್ಪ ಆಕಾಶ ಉಸಿರಿರೋವರೆಗೂ ಭಾವ ಅನಂತ
ನಮಗಾಗಿ ಸದಾ ಮಿಡಿಯುವ ಹೃದಯವಂತ
ಅವಿತಿತ್ತು ನಿನ್ನ ಕಾಳಜಿ, ಪ್ರೀತಿ ಗದರಿಕೆಯಲ್ಲಿ
ಅದನ್ನು ತಿಳಿಯದಾದೆವು ನಾವು ಭಯದಲ್ಲಿ
ಅಪ್ಪಾ ತೆರೆಮರೆಯಂತಿಹುದು ನಿನ್ನ ವಾತ್ಸಲ್ಯ
ನಿನ್ನರಿವಿನ ಪಾಠಗಳಾಗಿವೆ ನಮಗೆ ಅಮೂಲ್ಯ
ನೀನಾಗಿಹೆ ದಣಿವರಿಯದ ಆದರ್ಶ ನಾಯಕ
ಎಲ್ಲ ನೆನೆಯುವರು ನಿನ್ನ ನಿಸ್ವಾರ್ಥ ಕಾಯಕ
ನಮಗೆಲ್ಲಾ ಕೊಡುವುದನ್ನೇ ಕಲಿಸಿರುವ ದಾನಿ
ಯಾರಿಂದ ಏನೂ ಬಯಸದಿರುವ ಸಮಾಧಾನಿ
ಎಲ್ಲಕ್ಕೂ ಸ್ಪೂರ್ತಿ ತುಂಬಿ ಹುರಿದುಂಬಿಸೊ ರೀತಿ
ಉದಾರ, ಉದಾತ್ತ ಮನೋಭಾವದ ನಿನ್ನ ನೀತಿ
ಬೇಕೆನ್ನುವ ಮೊದಲೇ ಕೊಡಿಸುವ ಮಮಕಾರ
ಕೊರತೆ ಅರಿಯದಂತೆ ಬೆಳೆಸಿರುವ ಸಾಹುಕಾರ
ಗಂಭೀರತೆ ಹಿಂದೆ ಅದೆಷ್ಟು ಮಮತೆ ಅಡಗಿತ್ತು
ನೀನು ಇಲ್ಲದ ತವರೆನಗೆ ಪರಕೀಯವೆನಿಸಿತ್ತು
--------------