ಅಂಕಣ ಸಂಗಾತಿ

ನನ್ನಿಷ್ಟದ ಪುಸ್ತಕ….

ಸುಧಾ ಪಾಟೀಲ

ನೀನು ಮೌನವಾಗುವ ಮುನ್ನ

ಕವನ ಸಂಕಲನ…. ನೀನು ಮೌನವಾಗುವ ಮುನ್ನ
ಕವಿಗಳು…. ಡಾ || ಶಶಿಕಾಂತ ಪಟ್ಟಣ , ಪುಣೆ
ಪ್ರಕಾಶಕರು… ಆದಿತ್ಯ ಪಬ್ಲಿಕೇಷನ್ಸ್ ಬೆಳಗಾವಿ
ಪುಸ್ತಕದ ಬೆಲೆ……325 ರೂ


ಕವನ  ಸಂಕಲನವನ್ನು  ಇಣುಕಿ  ಹಾಕುವ  ಮುನ್ನ  ಕಾವ್ಯ  ಎಂದರೇನು  ಎಂಬುದರ  ಬಗೆಗೆ  ಶಶಿಕಾಂತ  ಪಟ್ಟಣ  ಅವರ  ಮಾತುಗಳು…

ಕಾವ್ಯ  ಅತ್ಯಂತ  ಸೃಜನಶೀಲ  ಸಂವಹನ…. ಪ್ರಬಲ ಮಾಧ್ಯಮ…. ಕಾವ್ಯ   ಸಾರ್ವತ್ರಿಕ…..ಕಾವ್ಯ  ಅಂತರಂಗದ   ಮಧುರ  ಭಾವಗಳ   ಭಾಷೆ…. ಕಾವ್ಯ ವ್ಯಕ್ತಿಯ  ಉದಾತ್ತ  ಚಿಂತನೆಗಳ   ಅಭಿವ್ಯಕ್ತಿ….. ಮನುಷ್ಯನ  ಸುಂದರ  ಕ್ಷಣದ   ಪ್ರತಿರೂಪ  ಕಾವ್ಯ…ಕವಿ   ಮನಸ್ಸು  ಸಾಮಾಜಿಕ   ಕಳಕಳಿ, ಕಾಳಜಿ , ಜವಾಬ್ದಾರಿ  ಹೊಂದಿರಬೇಕು…ಕವನ  ಕಾವ್ಯ  ಮನುಷ್ಯನ  ಕವಿಯ  ಅಂತರಂಗದ ಅಳಲು.  ತನ್ನ  ಸುಖ  ಶಾಂತಿ   ಸ್ಫೂರ್ತಿ  ಸಂತೋಷವನ್ನು  ಹಂಚಿಕೊಳ್ಳುವ  ಮಹದಾಸೆ. ಆ  ಭಾವವನ್ನು  ಶಬ್ದಗಳಲ್ಲಿ   ಹಿಡಿದಿಡುವ  ಪ್ರಯತ್ನ ಮಾಡುವ   ಮೂಲಕ  ತನ್ನ  ಕನಸು   ಕಾಣಲು  ಬಯಕೆ ಭರವಸೆ , ತನ್ನ  ಸುತ್ತಲಿನ   ನಾಗರಿಕ   ಸಮಾಜದ  ಜೊತೆಗೆ  ಕವಿ   ಹಂಚಿಕೊಂಡು  ಆನಂದಿಸುತ್ತಾನೆ. ಕವಿಗೆತಾನು  ರಚಿಸಿದ  ಕವನದ  ಸೌಂದರ್ಯ  ಎಷ್ಟು ಮುಖ್ಯವೋ  ಅದಕ್ಕಿಂತ  ಹೆಚ್ಚಿನ  ಸಂತೋಷ  ಓದುಗರ
ಅಭಿಪ್ರಾಯದಲ್ಲಿ  ಕಾಣುತ್ತಾನೆ. ಕಾವ್ಯ  ಧರ್ಮ, ಕವಿಯ ಕಲ್ಪನೆ , ಕವಿಯ  ಧ್ವನಿ , ಕವಿ   ಸಮಯ, ಕವಿ  ಸಾಂಗತ್ಯಎಲ್ಲವನ್ನೂ   ಅಲಂಕಾರಿಕ  ವಾಸ್ತವಿಕ  ನೆಲೆಗಟ್ಟಿನಲ್ಲಿದಾಖಲಿಸುವ   ಕವಿ  ಜಗದ  ಶ್ರೇಷ್ಠ  ದಾರ್ಶನಿಕ  
ಮತ್ತು  ಮನುಷ್ಯ  ಸಂಬಂಧಗಳನ್ನು  ಬೆಸೆಯುವ  ಅದ್ಭುತ  ಭಾವಜೀವಿ.

2019  ರಲ್ಲಿ  ನೀನು ಮೌನವಾಗುವ ಮುನ್ನ  ಕವನಸಂಕಲನವು  ಸುಂದರವಾದ  ಮತ್ತು  ಅಷ್ಟೇ  ಅರ್ಥವತ್ತಾದ  ಮುಖಪುಟದೊಂದಿಗೆ  ಆಕರ್ಷಕವಾಗಿಮೂಡಿಬಂದಿದೆ.   316  ಪುಟಗಳ  ಈ ಪುಸ್ತಕದಲ್ಲಿ   257  ವಿಭಿನ್ನ  ಪ್ರಕಾರದ  ಕವನಗಳು  ತಮ್ಮದೇ   ಆದ   ಶೈಲಿಯಲ್ಲಿ  ವಿಶಿಷ್ಟರೀತಿಯಲ್ಲಿ  ರೂಪುಗೊಂಡಿವೆ. ಒಂದಕ್ಕಿಂತ ಒಂದು  ನಿಮ್ಮನ್ನು  ಬೇರೆ  ಬೇರೆ  ರೀತಿಯಲ್ಲಿ  ವಿಚಾರಕ್ಕೆ ಒಳಪಡುವಂತೆ  ಮಾಡುತ್ತವೆ. ಜವಾಬ್ದಾರಿಯನ್ನು  ನೆನಪಿಸುತ್ತವೆ. ಸಾಮಾಜಿಕ  ಕಳಕಳಿಯನ್ನು  ಮೂಡಿಸುತ್ತವೆ. ಪ್ರೀತಿ -ಪ್ರೇಮವನ್ನು  ನೆನಪು  ಮಾಡಿಕೊಡುತ್ತವೆ. ಎಲ್ಲಕ್ಕಿಂತ  ಹೆಚ್ಚು  ಅಣ್ಣ  ಬಸವಣ್ಣನನ್ನುಅಚ್ಚಳಿಯದೆ  ಮನದಲ್ಲಿ  ನೆನೆಯುತ್ತಾ  ಶರಣರ ಧರ್ಮ ವನ್ನು  ಪಾಲನೆ  ಮಾಡುವ  ನಿಟ್ಟಿನಲ್ಲಿ  ನಮ್ಮನ್ನು  ಎಚ್ಚರಿಸುವ   ಕೆಲಸವನ್ನು  ತಮ್ಮ  ಕವನಗಳ  ಮೂಲಕ ಶಶಿಕಾಂತ  ಪಟ್ಟಣ  ಅವರು  ಅತ್ಯಂತ   ವಿದ್ವತ್ಪೂರ್ವಕ ವಾಗಿ  ಮಾಡಿದ್ದಾರೆ.

ಈಗ  ಖ್ಯಾತ  ಸಾಹಿತಿ  ಡಾ. ಸಿದ್ಧಲಿಂಗ  ಪಟ್ಟಣಶೆಟ್ಟಿ  ಅವರ   ಮಾತಿನಲ್ಲಿ  ಡಾ. ಶಶಿಕಾಂತ  ಪಟ್ಟಣ  ಅವರ ಬಗೆಗೆ  ಮತ್ತು  ಅವರ  ಪುಸ್ತಕದ  ಬಗೆಗಿನ  ಅಭಿಪ್ರಾಯ ತಿಳಿಯೋಣ  ಬನ್ನಿ…35 ವರ್ಷಗಳ ಹಿಂದೆ ಧಾರವಾಡದ
ಕರ್ನಾಟಕ  ಕಾಲೇಜಿನಲ್ಲಿ  ಹುಡದಿ  ಹಾಕುತ್ತ , ತಮ್ಮನ್ನುಕಟ್ಟಿಕೊಳ್ಳುತ್ತ, ಸಾಂಸ್ಕೃತಿಕ , ಸಾಹಿತ್ತಿಕ  ಕ್ಷೇತ್ರದಲ್ಲಿ ಹೆಸರು  ಮಾಡಿಕೊಳ್ಳುತ್ತಿದ್ದ  ನನ್ನ  ಶಿಷ್ಯಮಿತ್ರರಲ್ಲಿ  ಶಶಿಕಾಂತ  ಪಟ್ಟಣ   ಪ್ರಮುಖರು. ಅವರು  ಆಗ  ಶುದ್ಧ ವಾಚಾಳಿ, ಈಗ  ವೈದ್ಯವಾಗ್ಮಿ. ಕಾವ್ಯದಲ್ಲಿ  ಮಾತ್ರಾಗಣ ಗಳನ್ನು   ಎಣಿಸುತ್ತ  ಪ್ರವೃತ್ತಿಯ ಛ0ದೋಗತಿ  ಗುಣಿಸಬೇಕಿದ್ದ  ಶಶಿಕಾಂತ, ಬದುಕಿನಲ್ಲಿ  ವೈದ್ಯವೃತ್ತಿಯ ಔಷಧದ  ಮಾತ್ರೆ  ಗುಳಿಗೆಗಳನ್ನು  ಪೇರಿಸುತ್ತಿದ್ದಾರೆ. ಆದರೆ  ತಮ್ಮ  ಕಾವ್ಯಾಸಕ್ತಿಯನ್ನು  ಮಾತ್ರ  ಈಗಲೂ ಉಳಿಸಿಕೊಂಡಿದ್ದಾರೆ. ಈಚೆಗಿನ  ಬಸವ  ಧರ್ಮ  ಚಿಂತನೆಯಲ್ಲಿ  ಮುಂಚೂಣಿಯಲ್ಲಿ  ಕಾಣಿಸಿಕೊಂಡ ಹೆಸರು  ರಾಮದುರ್ಗದ  ಡಾ. ಶಶಿಕಾಂತ  ಪಟ್ಟಣ  ಅವರದು.

ವೈಚಾರಿಕತೆ, ಓದು, ವ್ಯಾಖ್ಯಾನಗಳು  ಬಯಲಿಗೆ ಬಂದಾಗ ಪದ್ಯ  ಪಕ್ಕಕ್ಕೆ ಸರಿಯುತ್ತದೆ  ; ವಿವರಣೆ, ವಿಮರ್ಶೆಗಳು  ಕೈ  ಹಿಡಿಯುತ್ತವೆ. ಆದರೆ  ಮೊದಲಿನಿಂದಲೂ  ಮನೋಭೂಮಿಯಲ್ಲಿ  ಹುದುಗಿದ್ದಕಾವ್ಯದ  ಬೀಜಗಾಳು  ಅಭಿವ್ಯಕ್ತಿಯ  ಅವಕಾಶ  ಸಿಕ್ಕಾಗಲೆಲ್ಲ  ಅಂಕುರಿಸಲು ಕಾತರಗೊಂಡಿರುತ್ತವೆ. ಅದರ  ಫಲವೆಂಬ0ತೆ  ಈ  ವರ್ಷದ  ಮೊದಲ ಭಾಗದಲ್ಲಿ  ಡಾ. ಶಶಿಕಾಂತ  ಅವರು  ” ಕನಸುಗಳೇ  ಹೀಗೆ  ” ಎಂಬ  ಕವನಸಂಗ್ರಹವನ್ನು  ಪ್ರಕಟಿಸಿದ್ದರು.
ಅದರಲ್ಲಿ  ಬಸವಣ್ಣ, ಗಾಂಧಿ, ಪ್ರೇಮದ  ಹಂಬಲ, ತಾವುಕಂಡ  ಸಾಮಾಜಿಕ  ಏರುಪೇರುಗಳನ್ನು  ಮುಖ್ಯ ವಸ್ತು
ವಾಗಿಸಿಕೊಂಡಿದ್ದರು. ಅದರ  ಮುಂದುವರಿಕೆಯಾಗಿಈಗ  ಅವರ  ಮತ್ತೊಂದು  ಕವನಸಂಗ್ರಹ  ” ನೀನು  ಮೌನವಾಗುವ  ಮುನ್ನ ”  ಮೌನ  ಮುರಿಯುತ್ತಿದೆ.

ಈ  ಮೌನ  ಪ್ರಗಲ್ಭ , ಅರ್ಥಾತೀತ, ಅಪಾರ  ಸಂಯಮ ಸಹನೆಯನ್ನು  ಅಪೇಕ್ಷಿಸುವ  ಪ್ರಕ್ರಿಯೆ, ರೋಗದ  ಕ್ಷಿಪ್ರ
ಚಿಕಿತ್ಸೆಗೆ  ತಕ್ಷಣದ  ಸೂಜಿಮದ್ದು  ನಡೆದೀತು, ಆದರೆ ಕಾವ್ಯ  ನಿಧಾನ  ಮತ್ತು  ನಿಧಾನ  ದ್ರವ್ಯ, ಪ್ರಸ್ತುತ ಸಂಕಲನದಲ್ಲಿಯೂ  ಶಶಿಕಾಂತರ  ಬಸವಭಕ್ತಿ , ಗಾಂಧೀಗೌರವ, ಸಾಮಾಜಿಕ  ಕಳಕಳಿ, ಕ್ರಾಂತಿಕಾಂಕ್ಷೆ , ಕನ್ನಡಪ್ರೇಮ  ಮುಂತಾದವುಗಳ  ಜೊತೆಗೆ  ಮುಖ್ಯ ಸ್ವರವಾಗಿ  ಮೂಡಿದ್ದು  ಮನದಲ್ಲಿ  ಹುದುಗಿರುವ ದೂರದ
ಆ  ಚೆಲುವೆಯ  ನೆನಪು  ಮತ್ತು  ಕನವರಿಕೆ,   ನೆನಪು  ಮರುಕಳಿಸಿದಾಗ  ಆಕೆ  ಗೀತ, ಆತ  ಗೀತಕಾರ, ಎರಡು ದಡಗಳ  ನಡುವೆ  ಮೌನದ  ನೀರವ  ನೀರ  ಹರಿವು. ಇಂಥ  ಹಲವು  ಭಾವದೃಶ್ಯಗಳು  ಈ  ಸಂಗ್ರಹದ  ತಿರುಗಣಿ  ಮಡುಗಳು.

ಶಶಿಕಾಂತ  ತಾವು  ಓದಿದ , ಇಷ್ಟ ಪಟ್ಟ  ಕವಿತೆ, ಹಾಡುಗಳನ್ನು  ಸರಾಗವಾಗಿ  ಬಳಸಿಕೊಳ್ಳುವ  ಚತುರಮತಿ. ಅವರು  ಸಾಮಾಜಿಕ ಕಳಕಳಿಗೆ  ಗದ್ಯವನ್ನು  ಹಾಗೂ  ಕಾವ್ಯದೇವಿಯ  ಆರಾಧನೆಗೆ ಪದ್ಯವನ್ನು  ಅರ್ಪಿಸಿ, ತಮ್ಮ  ಹೆಸರು  ಸಾಹಿತ್ಯ ಕ್ಷೇತ್ರದಲ್ಲಿಉಳಿಯುವಂತೆ   ಶ್ರಮಿಸಲಿ  ಎಂದು  ಹಾರೈಸುತ್ತೇನೆ.ಎಂದು  ಸಿದ್ಧಲಿಂಗ  ಪಟ್ಟಣಶೆಟ್ಟಿ  ಅವರು  ತಮ್ಮ ಶಿಷ್ಯನನ್ನು  ಇಲ್ಲಿ  ಮನಸಾರೆ  ಹಾಡಿ  ಹೊಗಳಿದ್ದಾರೆ.

“ನೀನು  ಮೌನವಾಗುವ  ಮುನ್ನ ” ಕವನಸಂಕಲನದಲ್ಲಿ
ನನಗೆ  ಎಲ್ಲವೂ   ಆಪ್ತವೆ. ಆದರೆ  ಇಲ್ಲಿ  ಕೆಲವೊಂದನ್ನು
ಮಾತ್ರ  ಹೆಸರಿಸುತ್ತೇನೆ… ಅದರಲ್ಲಿ   ಮುಂಚೂಣಿಯಲ್ಲಿ
ಇರುವುದು  ” ವಚನಗಳೆ  ಬಸವಣ್ಣನೆನಗೆ “

ವಚನಗಳೆ   ಬಸವಣ್ಣನೆನಗೆ

ವಚನಗಳೆ  ಬಸವಣ್ಣನೆನಗೆ
ವಚನಗಳೆ  ಬಸವಣ್ಣನೆನಗೆ
ವಚನಗಳೆ   ಬುದ್ಧಮಂತ್ರ
ವಚನಗಳೆ   ಶಾಂತಿಸಹನೆ
ವಚನಗಳೆ   ದಿಟ್ಟ ನುಡಿಯು
ವಚನಗಳೆ  ಪ್ರಮಾಣವೆನಗೆ
ವಚನಲಿಂಗ  ಜಂಗಮ
ವಚನ   ಶುದ್ಧ  ಪ್ರಸಾದವೆನಗೆ
ವಚನ   ಅನುಭಾವ  ಅನುಭೂತಿ
ವಚನ   ದಿವ್ಯ  ದರ್ಶನ
ವಚನ   ಆತ್ಮ  ಶೋಧನ
ವಚನವೆ  ಸತ್ಯಮಾಟವು
ವಚನ   ನಿತ್ಯ  ಕೂಟವು
ವಚನ  ಹಗಲು  ಇರುಳುವೆನಗೆ
ವಚನ   ವರುಷ   ಹರುಷವು
ವಚನ   ಎನಗೆ  ಬಾಳು  ಬದುಕು
ವಚನ   ನನ್ನ  ಉಸಿರು
ವಚನ   ಕುರಾನ್  ಬೈಬಲ್
ವಚನ   ಗ್ರಂಥಸಾಹೀಬ್
ವಚನ   ಜೈನ  ದೀಪ್ತಿ ಮಂತ್ರ
ವಚನ   ಶರಣ  ಸ್ವತಂತ್ರವು

ಇದನ್ನು ಓದಿದ  ಎಲ್ಲರಿಗೂ  ವಚನದ  ಬಗೆಗೆ ಅಭಿಮಾನ  ಬೆಳೆಯುವಲ್ಲಿ  ಸಂದೇಹವೇ  ಬೇಡ. ಅಷ್ಟು
ವಚನದ  ಬಗೆಗಿನ  ಅಪ್ಯಾಯಮಾನತೆ , ಅದೇ  ಜೀವ,ಅದೇ  ಉಸಿರು , ತನು -ಮನಗಳಲ್ಲಿ   ಹಾಸುಹೊಕ್ಕಾಗಿ
ನರ -ನಾಡಿಗಳಲ್ಲಿ  ಸದಾಕಾಲ  ಜಾಗೃತಾವಸ್ಥೆಯಲ್ಲಿ ಇರುವಂತೆ   ಅನುಭವ  ಕವಿಗಳಿಗೆ  ಆಗಿರಬಹುದು.
ಅದಕ್ಕೆ  ಈ  ಕವನ  ಅಷ್ಟು  ತೀವ್ರತೆಯಿಂದ  ಕೂಡಿದೆ.

ಹೀಗೆ   ಬಸವಣ್ಣನವರನ್ನು  ಕುರಿತು  ಹಲವಾರು  ಕವನಗಳು  ಇಲ್ಲಿ  ಸಿಗುತ್ತವೆ.  ಅದರಲ್ಲಿ  ನಾಲ್ಕು  ನಾಲ್ಕು
ಸಾಲುಗಳನ್ನು  ಇಲ್ಲಿ  ಉಲ್ಲೇಖಿಸುತ್ತೇನೆ.

ಅಗಲಲಿಲ್ಲ  ಬಯಲಾಗಲಿಲ್ಲ
ಲೀನವಾಗಲಿಲ್ಲ  ಬಸವಣ್ಣ
ನಮ್ಮನು  ಬಿಟ್ಟು  ಹೋಗಲಿಲ್ಲ
ಇದ್ದಾನೆ  ಬಸವಣ್ಣ  ನನ್ನೊಳಗೆ
ನಿಮ್ಮೊಳಗೆ  ನಮ್ಮೊಳಗೆ

ಇನ್ನೊಂದು  ಕವನದಲ್ಲಿ….

ನೋಡಿದರೆ   ನಾ  ಬಸವನ  ನೋಡುವೆ
ಹಾಡಿದರೆ   ನಾ  ಶರಣರ   ಹಾಡುವೆ
ಓದಿದರೆ   ವಚನಗಳ   ಓದುವೆ
ನುಡಿಯುವೆ ಕಾಯಕ  ದಾಸೋಹ  ಮಂತ್ರ

ಮತ್ತೊಂದು  ಕವನದಲ್ಲಿ…

ಬಸವ  ಭೂಮಿಯ   ಬೆಳೆಯು
ಬಸವ  ಜ್ಞಾನದ   ಕಳೆಯು
ಬಸವ  ಭಾಗ್ಯದ   ನಿಧಿಯು
ಬಸವ  ಕ್ರಾಂತಿಯ  ಸೆಲೆಯು
ಬಸವ  ಜ್ಯೋತಿಯ  ಸ್ಫೂರ್ತಿ
ಬಸವ  ಮನುಜನ   ಪ್ರೀತಿ
ಬಸವ  ಧರ್ಮಕೆ  ಕೀರ್ತಿ
ಬಸವ  ಭಕ್ತಿಯ   ಉಸಿರು
ಬಸವ  ಕಾಯಕ   ಹಸಿರು
ಬಸವ  ದಾಸೋಹದ   ಜೀವ
ಬಸವ  ದರ್ಶನ  ಭಾವ
ಬಸವ   ಸಮತೆಯ   ಭಾಷೆ
ಬಸವ  ದೇವಗೆ   ದೇವ
ಬಸವಾ  ಬಸವಾ  ಎಂದು
ಅಪ್ಪ  ಬಸವನ   ಹಾಸಿ   ಹೊದ್ದು
ಬಾಳಿದ  ಧರೆಯೊಳು  ಅಧಿಕ
ಅಥಣಿ   ಶ್ರೀ  ಮುರುಗೇಶನ  ಪಾದಕ್ಕೆ
ನಮೋ   ನಮೋ   ಎನಿತಿರ್ದೆ
ಕಾಣಾ   ಬಸವಪ್ರಿಯ  ಶಶಿಕಾಂತ

ಹೀಗೆ   ಬಸವಣ್ಣನ  ಬಗೆಗೆ  ಹೇಳುತ್ತಾ  ಹೇಳುತ್ತಾ ಕವಿಗಳು  ಇಲ್ಲಿ  ತಾವೇ  ಬಸವಣ್ಣನಾಗಿ   ಬಿಡಬೇಕು ಎನ್ನುವ  ಸಂದೇಶವನ್ನು  ಎಲ್ಲರಿಗೂ  ಸಾರಲು  ಹೊರಟಿದ್ದಾರೆ. ಅಷ್ಟು  ಬಸವಣ್ಣನನ್ನು  ಅಪ್ಪಿಕೊಂಡಿದ್ದಾರೆ… ಒಪ್ಪಿಕೊಂಡಿದ್ದಾರೆ.. ಇನ್ನೂ ಬಹಳಷ್ಟು  ಕವನಗಳು  ಇಲ್ಲಿ   ಕಾಣಸಿಗುತ್ತವೆಅವುಗಳಲ್ಲಿ… ಬಾರಯ್ಯ   ಬಸವಣ್ಣ…. ನನ್ನ  ಬಸವನಭಾಷೆ… ಬಸವನು  ಬರುವನು  ದಾರಿ  ಬಿಡಿ…ಬಸವಣ್ಣ ನಿಗೊಂದು  ಪತ್ರ… ಎತ್ತ  ಹೋದ   ಬಸವಾ… ಬಸವ ಬರುತಿಹ  ಎಚ್ಚರ… ಬಸವನೆನ್ನ  ಬನ್ನಿರೆ… ಬಸವ  ಚಾಟಿಬೀಸುವ… ಬಸವ  ಘೋಷಣೆ… ಮರೆತು  ಮನದಲ್ಲಿ
ಬಸವನ… ಬಸವ  ಧರ್ಮ   ಶರಣರ  ಧರ್ಮ…ಒಬ್ಬನೆಒಬ್ಬನೆ… ಬಸವಣ್ಣ  ಬಿಟ್ಟು  ಹೋಗುವಾಗ… ಹೀಗೆ  ಕವನಗಳು  ಶರಣದ್ಯೋತಕವಾಗಿ  ಅಭಿಮಾನಪೂರ್ವಕವಾಗಿ ಮುಂದುವರೆಯುತ್ತವೆ.

ಇದರ   ಜೊತೆಗೆ  ಈ   ಕವನ ಸಂಕಲನದಲ್ಲಿ  ಪ್ರೀತಿ ಪ್ರೇಮದ  ಕವನಗಳೂ  ಸಹ  ಸಾಕಷ್ಟು  ಇವೆ.ಅದರಲ್ಲಿನಿನ್ನ  ಹುಡುಕುತಿರುವೆ

ಗೆಳತಿ
ನಿನ್ನ  ಹುಡುಕುತಿರುವೆ
ಕವನದಲಿ   ಕಾವ್ಯದಲಿ
ಗದ್ಯದಲಿ   ಪದ್ಯದಲಿ
ಗದ್ದೆಗಳ  ಹಸುರಿನಲಿ
ಸೂರ್ಯನ  ಬೆಳಕಿನಲಿ
ಚಂದ್ರನ   ತಂಪಿನಲಿ
ತರು   ಗುಲ್ಮಲತೆಗಳಲಿ
ಪುಷ್ಪಗಳ  ಪರಿಮಳದಿ
ದುಂಬಿಗಳ  ನಾದದಲಿ
ಗಿಳಿ  ಗುಬ್ಬಿ  ಇಂಚರದಿ
ಕಾನನದ  ನಿಶಬ್ದದಲಿ
ಬಿಳಿನಗೆಯ   ಹೊಳಪಿನಲಿ
ವಯ್ಯಾರದ  ನೆನಪಿನಲಿ
ಧರ್ಮ   ನೀತಿ  ಬೋಧೆಯಲ್ಲಿ
ಕರ್ಮ  ಕಾಯಕ   ತತ್ವದಲಿ

ನಿತ್ಯ  ನಿನ್ನ  ಶೋಧನೆ
ಸತ್ಯ  ಅರಿವ   ಸಾಧನೆ
ಗೆಳತಿ   ನಿನ್ನ  ಹುಡುಕುತಿರುವೆ
ನಿನ್ನ  ಹುಡುಕುತ  ಹೊರಟ  ನಾನು
ನನ್ನ  ನಾನೇ  ಕಳೆದುಕೊಂಡೆ.

ಹೀಗೆ  ತನ್ನ  ಗೆಳತಿಯನ್ನು ಪ್ರತಿಯೊಂದರಲ್ಲೂ   ಹುಡುಕುತ್ತಾ  ಹುಡುಕುತ್ತಾ   ಕವಿ  ತನ್ನ  ತಾನೇ  ಕಳೆದುಕೊಳ್ಳುವ  ಪರಿ  ಇಷ್ಟವಾಗುತ್ತದೆ. ಹೀಗೆ  ಇನ್ನೊಂದಿಷ್ಟು   ಕವನದ  ಸಾಲುಗಳನ್ನು  ಮೆಲುಕು ಹಾಕೋಣ.

ನಾನು  ನೀನು  ಗೆಳೆಯ  ಗೆಳತಿ
ಬಾಳ   ಪ್ರೀತಿಯ  ಹೂರಣ
 ಭಾವ  ಬೆಸುಗೆ  ಒಳಗೆ   ಹೊರಗೆ
ಸ್ನೇಹ  ಪ್ರೇಮದ   ಬಂಧನ

ನನ್ನ   ನಿನ್ನ    ನಡುವೆ
ಏನೋ  ಹೊಸ   ಅನುಭವ
ಮಾತು  ಮೌನ   ಶಬ್ದ   ಶೂನ್ಯ
ಪ್ರೀತಿ    ಪ್ರೇಮ  ನಸುನಗೆ

ಚೆಲುವೆ
ನಿನ್ನ  ಮನದ   ಮೂಲೆಯಲಿ
ನನ್ನ  ಪುಟ್ಟ  ಮನೆಯ  ಮಾಡಿ
ತನುವ   ತೋಟದಿ
ತೆಂಗು  ಬೆಳೆದು
ತನ್ನೆಳಲಿನ   ತಂಪಿನಲಿ
ಬಾಳೆ  ಹಲಸು  ಮೆಲ್ಲುವಾ

ಗೆಳತಿ
ಕಡಲಾಳದ   ಗರ್ಭ
ಮನದಾಳದ   ಭಾವ
ತುಡಿತ  ಮಿಡಿತ   ತಲ್ಲಣ
ಏನೋ  ಹೇಳುವ   ತವಕ
ಮನ   ಬಿಚ್ಚಿ   ಮಾತನಾಡುವ

ಹೀಗೆ   ಪ್ರೀತಿ  ಪ್ರೇಮದ  ಪಯಣ  ಅವ್ಯಾಹತವಾಗಿಕವಿಯ  ಕಲ್ಪನೆಯಲ್ಲಿ  ಆಗಸದಲ್ಲಿ  ರೆಕ್ಕೆ ಬಿಚ್ಚಿ  ಹಾರಾಡುತ್ತವೆ… ತನ್ನದೇ  ಕಲ್ಪನೆಯಲ್ಲಿ  ಹೊಸ   ಹೊಸ  ರೂಪ  ಪಡೆಯುತ್ತವೆ. ಒಲವ  ಬೀಜ  ಬಿತ್ತಿ ಓದುಗರಮನದಲ್ಲಿ  ಪುಳಕವನ್ನು0ಟು  ಮಾಡುತ್ತವೆ…. ಪ್ರೀತಿಯಭಾವನೆಗಳನ್ನು  ಹೊತ್ತ  ಸರಳ   ಕವನಗಳು  ಎಲ್ಲರ ಮೆಚ್ಚುಗೆ  ಪಡೆಯುವಲ್ಲಿ  ಎರಡು   ಮಾತಿಲ್ಲ

ಇವನ್ನು  ಹೊರತುಪಡಿಸಿ   ಈ   ಕವನಸಂಕಲನದಲ್ಲಿ ಮತ್ತಷ್ಟು  ಕವನಗಳು   ಸಾಮಾಜಿಕ , ರಾಜಕೀಯ..ತಮ್ಮ  ಪ್ರೀತಿಯ  ಗುರುಗಳಾದ  ಕಲ್ಬುರ್ಗಿ  ಸರ್….ಮಠಗಳ  ಬಗೆಗೆ… ಸ್ವಾಮಿಗಳ  ಬಗೆಗೆ…. ಹೀಗೆ ಬಹಳಷ್ಟು
ವಿಷಯದ   ಮೇಲೆ   ಪ್ರಬುದ್ಧವಾಗಿ   ಮೂಡಿಬಂದಿವೆ.ಇದರಲ್ಲಿ  ನಾನು  ಕಲ್ಬುರ್ಗಿ  ಸರ್  ಅವರ  ಬಗೆಗೆ ಬರೆದ ಕವನವನ್ನು  ಇಲ್ಲಿ  ಉಲ್ಲೇಖ  ಮಾಡದಿದ್ದರೆ  ಈ  ಪುಸ್ತಕಕ್ಕೆ  ನ್ಯಾಯ  ಒದಗಿಸಿದ  ಹಾಗೆ  ಆಗುವುದಿಲ್ಲ.

ಡಾ. ಕಲ್ಬುರ್ಗಿ  ಸಾಯುವುದಿಲ್ಲ

ಡಾ. ಕಲ್ಬುರ್ಗಿ  ಸಾಯುವುದಿಲ್ಲ
ಬದುಕುತ್ತಾರೆ  ಬದುಕಿದ್ದಾರೆ
ಸೂರ್ಯ  ಚಂದ್ರರ  ಜೊತೆ
ಭೂತ   ವರ್ತಮಾನಗಳ   ಮಧ್ಯೆ
ಭವಿಷ್ಯದ   ದಿಕ್ಸೂಚಿಯಾಗಿ
ಸಾಹಿತ್ಯ  ಸಂಸ್ಕೃತಿಯ  ರಾಯಭಾರ
ಕನ್ನಡಕೆ   ಒಬ್ಬ  ಸರದಾರ
ಹಗಲಿರುಳು   ದುಡಿದರು
ಅಂಜದ   ಅಳುಕದ   ದಿಟ್ಟ  ಜಟ್ಟಿ
ಕನ್ನಡದ   ಗುಡಿ  ಕಟ್ಟಿ
ಸೋಪಾನವಾದರು  ಸಗ್ಗ  ಸುಖಕೆ
ಬಯಸಲಿಲ್ಲ  ಹುದ್ದೆ  ಪದವಿ
ಓದು  ಬರಹ  ಚಿಂತನೆಗಳ   ಗಣಿ
ಮುಕ್ತ  ಹರಟೆ   ಇಲ್ಲ  ವ್ಯಸನ
ಕರಿಗಂಬಳಿ  ಆಸನ
ಅಂಬಲಿ   ಭೋಜನ
ಇರುವೆಯನ್ನು  ಕೊಲ್ಲದ   ಮಲ್ಲಪ್ಪ
ಸಾಯುವುದಿಲ್ಲ  ಸಾಯುವುದಿಲ್ಲ
ಅಯ್ಯೋ  ಇಲ್ಲ  ಇಲ್ಲ  ಮಲ್ಲಪ್ಪ  ಎನ್ನದಿರಿ
ಕೊಂದವರುಳಿವರೆ?
ಡಾ. ಕಲ್ಬುರ್ಗಿ  ಸಾಯುವುದಿಲ್ಲ
ಬದುಕುತ್ತಾರೆ   ಬದುಕಿದ್ದಾರೆ
ಸೂರ್ಯ   ಚಂದ್ರರ  ಜೊತೆ
ಭೂತ   ವರ್ತಮಾನಗಳ   ಮದ್ಯೆ
ಭವಿಷ್ಯದ   ದಿಕ್ಸೂಚಿಯಾಗಿ

ಈ   ರೀತಿಯಲ್ಲಿ  ಕವಿ   ತನ್ನ  ಗುರುಗಳಿಗೆ  ಶ್ರದ್ಧಾಂಜಲಿ ಅರ್ಪಿಸುವುದು  ಇದೆಯಲ್ಲ… ಇದು  ಅವರ  ಬಗೆಗಿನ ಅನನ್ಯ ಪ್ರೀತಿ,.. ಗೌರವ… ಶ್ರದ್ದೆ… ಅಭಿಮಾನವನ್ನು  ಎತ್ತಿ  ತೋರಿಸುತ್ತದೆ… ಕಲ್ಬುರ್ಗಿ  ಸರ್  ಅವರನ್ನು   ಮನದಲ್ಲಿ
ನೆನೆಯುತ್ತ   ನನ್ನಿಷ್ಟದ  ಪುಸ್ತಕ ” ನೀನು   ಮೌನವಾಗುವ  ಮುನ್ನ ”  ಕವನ  ಸಂಕಲನವನ್ನು ನೀವೂ   ಎಲ್ಲರೂ   ಸಹ  ಓದಿ  ಇದರ   ಅನುಭವ  ಪಡೆದುಕೊಳ್ಳಿ   ಎನ್ನುವ  ಅಭಿಲಾಷೆಯನ್ನು  ವ್ಯಕ್ತಪಡಿಸುತ್ತಿದ್ದೇನೆ.


ಸುಧಾ  ಪಾಟೀಲ್

ಸುಧಾ ಪಾಟೀಲ್ ಅವರು ಮೂಲತಹ ಗದಗ ಜಿಲ್ಲೆಯವರು.ಇವರ ಸಾಹಿತ್ಯದ ಪಯಣಕ್ಕೆ ಇವರ ದೀಕ್ಷಾಗುರುಗಳಾದ ಲಿ. ಡಾ. ಜ.ಚ. ನಿ ಶ್ರೀಗಳೇ ಪ್ರೇರಣೆ.
ಸುಧಾ ಪಾಟೀಲ್ ಅವರ ಲೇಖನಗಳು.. ಕವನಗಳು ವಿವಿಧ ಪತ್ರಿಕೆಯಲ್ಲಿ.. ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರ ಜ. ಚ.ನಿ ಶ್ರೀಗಳ ” ಬದುಕು -ಬರಹ ” ಕಿರು ಹೊತ್ತಿಗೆ ಕಿತ್ತೂರು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿದೆ. ಸಂಪಾದಕೀಯ ಕಾರ್ಯದಲ್ಲಿಯೂ ಇವರು ತಮ್ಮ ಸೇವೆಯನ್ನು ಗೈದಿದ್ದಾರೆ.
ಹಲವಾರು ಸಂಘ -ಸಂಸ್ಥೆಗಳಲ್ಲಿ ಕಾರ್ಯಕಾರಿ ಸದಸ್ಯೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಯಾವತ್ತೂ ಇವರದು ಅಳಿಲುಸೇವೆ ಇದ್ದೇ ಇರುತ್ತದೆ.ಸುಧಾ ಪಾಟೀಲ್ ಅವರನ್ನು ಅರಸಿ ಬಂದ ಪ್ರಶಸ್ತಿಗಳು..ಅನುಪಮ ಸೇವಾ ರತ್ನ ಪ್ರಶಸ್ತಿ (ಪೃಥ್ವಿ ಫೌಂಡೇಶನ್ )
ಮಿನರ್ವ ಅವಾರ್ಡ್ ಮತ್ತು ದತ್ತಿ ನಿಧಿ ಪ್ರಶಸ್ತಿ ( ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನ )ರಾಜ್ಯೋತ್ಸವ ಪ್ರಶಸ್ತಿ ( ಚೇತನಾ ಫೌಂಡೇಶನ್ )

8 thoughts on “

  1. ಶಶಿ ನನ್ನ ಬಾಲ್ಯ ಸ್ನೇಹಿತ ಕಾವ್ಯ ಆತನ ಬದುಕಿನ ಧರ್ಮ
    ಪ್ರೀತಿಗೆ ಒಂದೇ ಮಾರ್ಗ ಅದು ಕವನ ಕಾವ್ಯ
    ಅವನ ಪುಸ್ತಕವನ್ನು ಓದಿ ತಮ್ಮ ವಿಮರ್ಶೆ ಅಷ್ಟೇ ಸೊಗಸಾಗಿ ಮಾಡಿದ್ದಿರಿ ಮೇಡಂ
    ನಿಮ್ಮ ಪ್ರಯತ್ನಕ್ಕೆ ಅನಂತ ವಂದನೆಗಳು

  2. ಅಧ್ಬುತ ಕಾವ್ಯ ವಿಮರ್ಶೆ ಸುಧಾ ಪಾಟೀಲ ಮೇಡಂ

  3. I thank you personally for your excellent Introduction of poetry collection of Dr Shashikant Pattan Sir

  4. shashikanth pattan sir Avranthaha prabhudda kaviya pustakavnnu ashte sogasagi avalokana madida sahodarige abhinandanegalu

  5. ನನ್ನ ಪುಸ್ತಕ ಅವಲೋಕನವನ್ನು ಮೆಚ್ಚಿ ತಮ್ಮ
    ಅಮೂಲ್ಯವಾದ ಅಭಿಪ್ರಾಯ ತಿಳಿಸಿರುವ ಎಲ್ಲ
    ಸಹೃದಯರಿಗೆ ಅನಂತ ಪ್ರಣಾಮಗಳು

Leave a Reply

Back To Top