ಡಾ ಸಾವಿತ್ರಿ ಮಹಾದೇವಪ್ಪ ಕವಿತೆ-ಬರಗಾಲದ ಬವಣೆ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಮಹಾದೇವಪ್ಪ

ಬರಗಾಲದ ಬವಣೆ

ಬರಗಾಲ ಬವಣೆಗೆ
ಭಾವನೆಗಳೇ ಸುಟ್ಟು ಕರಕಲಾಗಿ
ಬಾಂಧವ್ಯ ಮರೆತು
ಬೇಯುತ್ತಿದೆ ಜೀವ

ಮೋಡ ಬಿತ್ತನೆಗೆ
ಹೋಮ ಹವನಕ್ಕೆ
ಜಪ ತಪಗಳಿಗೆ
ಒಲಿಯದ ವರುಣದೇವ

ಪ್ರಾರ್ಥಿಸುವೆನು ನಿನಗೆ
ಒಡಲೊಳಗೆ ತುಂಬಿ ತುಳುಕುವ
ಮತ್ಸರದ ಗೋಡೆಯನು
ಒಡೆದು ಬಾ ಭೂವಿಗೆ

ಮಾತಿನ ಅಹಮಿಕೆಯಲಿ
ಮೌನವಾಗಿ ಮಾನವತೆಯನು
ಮರೆತ ಮನುಷರಿವರು
ಇಳಿದು ಭಾ ಧರೆಗೆ

ಇಳೆಯ ದಾಹ ನೀಗಿಸಿ
ಇರುಳಿನಲಿ ನರಳಾಡುವ
ಜೀವ ಸಂಕುಲಕೆ
ಬೆಳಕಾಗಿ ಬಾ

ಗುರಿಯಿರದ ಬಾಳಿಗೆ
ಗುರುವಾಗಿ
ಜಂಗಮವಾಣಿಯ
ಗುಂಗಿನಲಿ ವೇಷಮರೆತು

ಕಾನನದೊಳು ಸಿಲುಕಿದವರಿಗೆ
ಬಟ್ಟೆದೋರಲು ಬಾ ಭುವಿಗೆ
ಅರಿಯದ ಕಂದಮ್ಮಗಳು
ಕಾಮತೃಷೆಗೆ ಬಲಿಯಾಗಿ

ವ್ಯಸನಕ್ಕೆ ದಾಸರಾಗಿ
ಮಾತಾ ಪಿತೃಗಳನು ಕಡೆಗಣಿಸಿ
ದಿಕ್ಕು ತೋಚದೆ
ರೆಕ್ಕೆ ಮುರಿದು ಬಿದ್ದಿರುವ ಹಕ್ಕಿಗೆ
ಗೂಡು ಸೇರಿಸಲು ಬಾ ಭುವಿಗೆ

ಜಾಗತೀಕರಣ ಯಾಂತ್ರಿಕರಣದ
ಸೋಗಿನಲಿ ಬರಡು ಬರಡಾದ
ಕಾನನ ಬೆಂಕಿಗೆ ಆಹುತಿಯಾಗಿ
ವನ್ಯ ಜೀವಿಗಳ ನೆಲ ಕಿತ್ತುಕೊಂಡ
ಧನದಾಹಿಗಳ ದಾಹ ತೀರಿಸಲು
ಬಾ ಭುವಿಗೆ

ಬೋರ್ಗರೆದು ಬಾ
ಭೂಮಿ ಆಕಾಶ ಒಂದಾಗಿ
ಸುರಿಯುವ ಮಳೆಗೆ
ಜನರ ಎದೆ ನಡುಗಿ
ಜಗವೆಲ್ಲ ಒಂದಾಗಿ
ಐಕ್ಯತೆಯ ಗೂಡು ಸೇರಲು
ಬಾ ಭುವಿಗೆ ಬೋರ್ಗರೆದು ….


Leave a Reply

Back To Top