ಇಂದಿರಾ ಮೋಟೆಬೆನ್ನೂರ ಕವಿತೆ-ಆರಾಧನೆ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ.

ಆರಾಧನೆ

ಕಪಟವಿಲ್ಲದ ಸ್ವಚ್ಚ ಮನದ
ಕನ್ನಡಿಯಂತೆ ಅವಳ ಸ್ನೇಹ..
ನುಡಿದರೂ..
ನುಡಿಯದಿದ್ದರೂ…
ಆಲಿಸುತಲೇ ಇರುವಳು
ಅವನ ಎದೆ ಬಡಿತ….

ಅನುಭಾವದ…ಅಮೃತದ…
ತಿಳಿಗೊಳದ ಸವಿಯೊಲವ…
ಹೃದಯ ತುಂಬಿಕೊಂಡು
ಕಾಯುತಿರುವ…
ಲೋಕಾಪವಾದ ಹೊತ್ತೂ
ನಲಿವ ರಾಧೆಯೊಲವಿನಂತೆ…..

ಅವನ ಮಾತು ರುಕ್ಷ್
ಹೃದಯ ಮಧ್ಯರಂದ್ರ
ಕೂರಿಗೆಯಿಂದ
ಕೊರೆದಂಥ ತೀವ್ರ ನೋವು..
ಎದೆಯ ಭಾಗವನ್ನ
ಕತ್ತರಿಸಿ ಒಗೆದಂಥ.,
ನೋವು ನೀಡುವುದರಲ್ಲಿ
ನಿಸ್ಸೀಮ…..

ಗೊತ್ತಾಗದಂತೆ ಮೆತ್ತಗೆ ಬಂದು
ಕೊಂಚ ನಲಿವು ಕೂಡ ನೀಡುವ
ಕ್ಷಣ ಮಾತ್ರದಲ್ಲಿ
ಮಾಯವಾಗಿಬಿಡುವ
ಮುರಳಿ ಗಾನದಿ ಧ್ಯಾನ
ಮಗ್ನನಾಗಿಬಿಡುವ…..

ಕಣ್ಣಾ ಮುಚ್ಚಾಲೆ ಆಟ..
ಕೈಗೆ ಸಿಕ್ಕನೆನ್ನುವುದರಲ್ಲೇ ಮಾಯ.
ನುಣುಚಿ ಕೊಂಡು ತನ್ನ ಲೋಕ
ಸೇರಿ ಬಿಡುವ…
ಸಣ್ಣ ಸಣ್ಣ ಮಾತಿಗೂ
ಮುನಿಸಿಕೊಂಡು
ಎದೆಕದವ ಮುಚ್ಚಿ ಬಿಡುವ..

ಕಡ್ಡಿ ಗುಡ್ಡ ಮಾಡಿ ದೂರ ತಳ್ಳುವ
ಹೃದಯ ತುಂಬಿದ ಒಲವ…
ಮೌನ ಧಾರಣೆ ಮಾಡಿ
ಕುಳಿತು ನಗುವ ಚೆಲುವ…
ಎದೆ ಸುಡುವ ನೋವ
ನೀಡಿ ನುಡಿದು ಬಿಡುವ…

ಕವಿತೆಯಾಗಿ ಎದೆಯ ಭಾವ
ಜೀವ ಮೆರೆಸಿ..
ಸ್ನೇಹ ತಂತು ಮೀಟಿ…
ಸದ್ದಿಲ್ಲದೆ ಬುದ್ಧನಂತೆ
ಮುದ್ದಾಗಿ ನಗುತ…
ಎದ್ದು ನಡೆದೇ ಬಿಡುವ….


Leave a Reply

Back To Top