ಕಾವ್ಯ ಸಂಗಾತಿ
ವಿಭಾ ಪುರೋಹಿತ
ಚುಕ್ಕೆಯಾದಳು !
ಹಸಿವು ತೃಷೆಗಳ
ಮೋಹ ತ್ರಾಹಗಳ
ಭಾರವನ್ನಿಳಿಸಿ ಇದ್ದಕ್ಕಿದ್ದಂತೆ
ಸದ್ದಿಲ್ಲದೆ ಹೊರಟೇ ಬಿಟ್ಟಳು
ಬಾಲ್ಯದ ತುಂಬೆಲ್ಲ
ಅವಳ ಬಣ್ಣಗಳಿವೆ
ನನಗೆ ಬೇಸಿಗೆ ರಜೆಯ
ಗುಲ್ಮೊಹರಿನ ಗಿಡದಂತಿದ್ದವಳು
ನಶ್ವರ ಬದುಕಿಗೆ
ಶಾಶ್ವತ ನೆನಪಿನ
ಬೆಸುಗೆಯಿತ್ತು
ನಡೆದೇ ಬಿಟ್ಟಳು
ಅತ್ತು ಅತ್ತು
ಬಾತು ಕೂತಿರುವ
ಅಲುಗಾಡದ ಬಾತುಕೋಳಿಗಳಾಗಿವೆ
ನನ್ನ ಕಣ್ಣುಗಳು
ಪದೇ ಪದೇ ಮೇಲೆ ನೋಡುತ್ತವೆ
ಹಗಲೆಲ್ಲ ಹುಡುಕಾಟ
ರಾತ್ರಿಯಾದ ಕೂಡಲೇ
ನಕ್ಷತ್ರಗಳಲ್ಲಿ ನೆಟ್ಟು ಬಿಡುತ್ತವೆ
ನನ್ನ ಕಣ್ಣುಗಳು
ಆಯಾಸವಾಗಿ
ನಿದಿರೆಗೆ ಜಾರಿದರೆ
ಕನಸುಗಳ ತುಂಬೆಲ್ಲ
ಅವಳ ಒನಪು ಸೊಗಸು ಕಾಣುತ್ತವೆ
ನನ್ನ ಕಣ್ಣುಗಳು
ಅವಳು ಹಾಡುತ್ತಿದ್ದ ಪದಗಳು
ಫೇಸಬುಕ್ಕಿನ ಕಿವಿಗಳಿಗೂ ಗೊತ್ತು
ಬರೆದ ಬರಹಗಳು ಕಂಡ ನೋಟಗಳು
ವಾಟ್ಸಾಪಿಗೂ ಗೊತ್ತು !
ಎಲ್ಲ ಇತ್ತೀಚೆಗೆ ನನ್ನಂತೆ ಕಕ್ಕಾಬಿಕ್ಕಿ!
ಯಾಕೆ ಈ ಧ್ವನಿ ಕೇಳುತ್ತಿಲ್ಲ ?
ಯಾಕೆ ಆ ಮೊಗ ಕಾಣುತ್ತಿಲ್ಲ ?
ಇದು ಬರಿ ಬದುಕಲ್ಲ ಮಾಯೆ ಮಾಯೆ !!!
————————————–