ಮಾರುತೇಶ್ ಮೆದಿಕಿನಾಳ ಕವಿತೆ-ಜೈಲಿನೊಳಗಿನ ಜೀವ

ಕಾವ್ಯ ಸಂಗಾತಿ

ಮಾರುತೇಶ್ ಮೆದಿಕಿನಾಳ

ಜೈಲಿನೊಳಗಿನ ಜೀವ

ದಿನಕ್ಕೊಂದು ತರತರದ ಚಿಂತೆಗಳುಟ್ಟುತಾವೋ
ಬೇಡವೆಂದರೂ ಬೆನ್ನತ್ತಿ ಕಾಟ ಕೊಡುತಾವೋ
ಶಾಂತಿ ನೆಮ್ಮದಿ ಸಪ್ಪಗೆ ಮೂಲೆ ಸೇರ್ಯಾವೋ
ಓ ಜೀವವೇ ನಿನಗೆ ಕಷ್ಟಗಳ್ಯಾಕೆ ಮೂಲಾಗ್ಯಾವೋ!

ಒಂದಲ್ಲ ಎರಡಲ್ಲ ಹಲವಾರು ಆಲೋಚನೆಗಳು
ತಲೆಯೊಳಗೆ ಹಾವಿನಂತೆ ಹರಿದಾಡುತಾವೋ
ಭಯ ಭುಗಿಲು ದುಃಖ ಆತಂಕ ಎದ್ದೇಳುತಾವೋ
ಓ ಜೀವವೇ ನೂರಾರು ಕಿರಿಕಿರಿ ನಿನ್ನ ಸುತ್ತುಗಟ್ಯಾವೋ!

ಆಗಾಗ ಆಸೆಗಳು ಗಿರಿಬಿಚ್ಚಿ ಹಾರಾಡುತಾವೋ
ಬಯಕೆಗಳು ಬಹಳ ಕೇಕೆ ಹಾಕಿ ಕುಣಿದಾಡುತಾವೋ
ಡೌಲು ಸೊಕ್ಕು ಧಿಮಾಕು ದಿಕ್ಕೆಡಿಸುತಾವೋ
ಓ ಜೀವವೇ ನೋವುಗಳು ನಿನಗ್ಯಾಕೆ ಕಾಡುತಾವೋ!

ಖುಷಿ ಸಂತೋಷ ಆಗಾಗ ಇಣುಕಿ ನೋಡುತಾವೋ
ದ್ವೇಷ ರೋಷ ಸೇಡು ಸಿಟ್ಟು ಕುಣಿದಾಡುತಾವೋ
ಒಳ್ಳೆಯದು ಕೆಟ್ಟದ್ದು ಜೊತೆ ಜೊತೆ ಬರುತಾವೋ
ಓ ಜೀವವೇ ಎಲ್ಲವೂ ಸೇರಿ ನಿನ್ನ ಜೈಲಿನೊಳಗಿಟ್ಟಾವೋ!


Leave a Reply

Back To Top