ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ವಿನಾಯಕ ರವರ ಗಜಲ್ ಗಳಲ್ಲಿ
ನೆಮ್ಮದಿಯ ಹುಡುಕಾಟ
ನಮಸ್ಕಾರಗಳು..
ಹೇಗಿದ್ದೀರಿ, ಚೆನ್ನಾಗಿದ್ದೀರಲ್ಲವೇ..
ಮತ್ತೆ.. ಹರಿಕಥೆ ಶುರು ಮಾಡಿದನು ಅಂತ ಅಂದಕೊಂಡರಾ, ನೋ ನೋ.. ಇಲ್ಲ. ನೇರವಾಗಿ ವಿಷಯಕ್ಕೆ ಬರುವೆ. ಪ್ರತಿ ಗುರುವಾರದಂತೆ ಈ ಗುರುವಾರ ಸಹ ತಮ್ಮ ನಿರೀಕ್ಷೆಯಂತೆ ಒಬ್ಬ ಗಜಲ್ ಕಾರರ ಗಜಲ್ ಚಾಮರದೊಂದಿಗೆ ತಮ್ಮ ಮುಂದೆ ಬಂದಿರುವೆ, ತಂಪೆರೆಯುವ ಷೇರ್ ನೊಂದಿಗೆ ಬಲಗಾಲು ಇಡೋಣವೇ….!
“ಪ್ರೀತಿಗೆ ಒಂದೇ ಒಂದು ಋತುವಿದೆ
ದ್ವೇಷಕ್ಕೆ ಹಲವು ಋತುಗಳಿವೆ”
-ರಾಕೇಶ್ ಉಲಫತ್
'ನಮಗೆ ಭಾವನೆಗಳು ಬೇಕಾ' ಎಂದು ನನ್ನನ್ನು ನಾನು ಹಲವು ಬಾರಿ ಕೇಳಿಕೊಂಡಿದ್ದು ಉಂಟು. ಆದರೆ ಉತ್ತರ ಮಾತ್ರ ಅಸ್ಪಷ್ಟ, ಗೊಂದಲದ ಗೂಡು. ನೆನಪಿರಲಿ, ಇದು ನನ್ನೊಬ್ಬನ ಪ್ರಶ್ನೆಯಲ್ಲ, ಹಲವರ ಪ್ರಶ್ನೆ! ಭಾವನೆಗಳ ಮೂಲ ಕೆದಕುತ್ತಾ ಹೋದಂತೆ ಮನಸ್ಸು 'ತಿಪ್ಪೆಗುಂಡಿ' ಆಗುತ್ತೆ, 'ತಿಪ್ಪೆಗುಂಡಿ' ಅಂದರೆ ಗೊತ್ತು ಅಲ್ವಾ; ಕಣ್ಣಿಗೆ ಬಟ್ಟೆ ಕಟ್ಟಿ ದಟ್ಟ ಅರಣ್ಯದಲ್ಲಿ ಬಿಟ್ಟ ಅನುಭವವಾಗುತ್ತದೆ. ಹಾಗಂತ ಭಾವನೆಗಳ ಸಹವಾಸವೇ ಬೇಡ ಎನ್ನಲಾದೀತೆ, ಭಾವನೆಗಳೇ ಇಲ್ಲದ ವ್ಯಕ್ತಿಗಳು ಯಾರಾದರೂ ಇರಬಲ್ಲರೆ...? ಒಂದು ಸಣ್ಣ ಕರೆಕ್ಷನ್, ಭಾವನೆಗಳೇ ಇಲ್ಲದಿದ್ದಾಗ ಅವರನ್ನು ವ್ಯಕ್ತಿ, ಮನುಷ್ಯ ಎಂದು ಕರೆಯಲಾದರೂ ಸಾಧ್ಯವೇ? ಇಲ್ಲ ಅಲ್ಲವೇ.. ಅಂದರೆ ಭಾವನೆಗಳು ಇದ್ದರೆ ಮಾತ್ರ ಮನುಷ್ಯ, ಇಲ್ಲದಿದ್ದರೆ ರೋಬೋಟ್ ಎಂಬುದು ಮನವರಿಕೆಯಾಗುತ್ತದೆ. ಇದರಿಂದ ಮನುಷ್ಯನಿಗೆ ಭಾವನೆಗಳು ಬೇಕು ಎಂಬುದು ಪಕ್ಕಾ ಆಯ್ತು. ಆದರೆ ಅವು ಹೇಗಿರಬೇಕು, ಅವುಗಳಲ್ಲಿ ನಾವು ಇರಬೇಕಾ ಅಥವಾ ನಮ್ಮಲ್ಲಿ ಅವು ಇರಬೇಕಾ ಎನ್ನೋದು ಮತ್ತೊಂದು ನಮಗೆ ಕಾಡುವ ಯಕ್ಷಪ್ರಶ್ನೆ. ಇದರ ಕುರಿತು ತುಂಬಾ ಯೋಚಿಸ್ತಾ ಹೋದರೆ ಹುಚ್ಚೇ ಹಿಡಿಯುತ್ತೇ ಅಲ್ವಾ...! ಏನದೂ.. ನನ್ನ ನೋಡಿ ಆಲ್ ರೆಡಿ 'ಹುಚ್ಚು' ಹಿಡಿದಿದೆ ಎಂದು ಅಂದುಕೊಳ್ಳುತ್ತಾ ಇದ್ದೀರಾ, ಇರಲಿ-ಇರಲಿ; ಈ ಸಂಸಾರವೇ ಹುಚ್ಚರ ಸಂತೆ. ನನಗೆ ನೀವು ಹುಚ್ಚರು, ನಿಮಗೆ ನಾನು ಹುಚ್ಚ, ಇಷ್ಟೇ ಅಲ್ವಾ ನಮ್ಮ ಜೀವನ ಅಂದರೆ. ಭಾವನೆಗಳನ್ನು ನಾವು ನಿಯಂತ್ರಿಸಬೇಕೆ ಹೊರತು ಅವುಗಳು ನಮ್ಮನ್ನು ನಿಯಂತ್ರಿಸಬಾರದು. ಆದರೂ ಕೆಲವೊಮ್ಮೆ ಹಾಗೆ ಆಗುವುದುಂಟು! ಭಾವನೆಗಳು ಹಿಂಸಿಸುತ್ತಿರಬೇಕಾದರೆ ಅವುಗಳಿಂದ ಪಾರಾಗಲು ಗಜಲ್ ಗುಲ್ಜಾರ್ ಒಳಗೆ ಪ್ರವೇಶಿಸುವುದುಂಟು, ಪ್ರವೇಶಿಸಿರುವುದೂ ಉಂಟು. ಲೌಕಿಕ ಜೀವನದ ಜಂಜಾಟಗಳಿಗೆ ರಜೆ ನೀಡಿದರೆ ಮಾತ್ರ ಗಜಲ್ ನ ಸೌಂದರ್ಯದ ಅನುಭವ ಆಗುವುದು. ಭಾವನೆಗಳ ಭಾರದಿಂದ ಕುಸಿದು ಬಿದ್ದಾಗಲೆಲ್ಲ ಗಜಲ್ ನ ಮಡಿಲಲ್ಲಿ ಹಗುರವಾಗುವುದುಂಟು. ಇಂಥಹ ಗಜಲ್ ದುನಿಯಾ ದಿನದಿಂದ ದಿನಕ್ಕೆ ತನ್ನ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದೆ. ಅಂಥಹ ಅಭಿಮಾನಿಗಳಲ್ಲಿ ಗಜಲ್ ಗೋ ಡಾ. ವಿನಾಯಕ ಕಮತದ ಅವರೂ ಒಬ್ಬರು.
ಕವಿ, ಕಲಾವಿದ, ನಾಟಕಕಾರರ ಹಾಗೂ ಗಜಲ್ ಕಾರರಾದ ಡಾ. ವಿನಾಯಕ ರಾ. ಕಮತದ ಅವರು ೧೯೮೦ ರ ಸೆಪ್ಟೆಂಬರ್ ೨೯ ರಂದು ಶ್ರೀ ರಾಮಪ್ಪ ಮತ್ತು ಶ್ರೀಮತಿ ಕಮಲಾ ದಂಪತಿಗಳ ಮಗನಾಗಿ ಗದಗ್ ಜಿಲ್ಲೆಯ ಬೆಂತೂರು ಗ್ರಾಮದಲ್ಲಿ ಜನಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಎಂ.ಇಡಿ ಪದವಿಯನ್ನು ಮುಗಿಸಿ, ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಡಾ. ಎಸ್.ಎನ್.ವೆಂಕಟಾಪೂರ ಅವರ ಮಾರ್ಗದರ್ಶನದಲ್ಲಿ "ಕನ್ನಡ ಗಜಲ್ ಗಳಲ್ಲಿ ವಸ್ತು ಮತ್ತು ಅಭಿವ್ಯಕ್ತಿ" ವಿಷಯ ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದಾರೆ. ೨೦೦೫-೨೦೧೬ ರವರೆಗೆ ಗದುಗಿನ ತೋಂಟದಾರ್ಯ ವಿದ್ಯಾಪೀಠದ ಬಿ.ಇಡಿ,, ಡಿ.ಇಡಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿ, ನಂತರ ನಾಗಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತದಲ್ಲಿ ಗದಗ್ ಜಿಲ್ಲೆಯ ರೋಣ ತಾಲೂಕಿನ ಇಟಗಿಯ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಸಾಹಿತ್ಯದ ಅಭಿರುಚಿಯನ್ನು ಹೊಂದಿರುವ ಕಮತದ ಅವರು ಕಾವ್ಯ, ಮಕ್ಕಳ ಪದ್ಯಗಳು, ಭಾವಗೀತೆ, ಕಥೆ, ನಾಟಕ, ಲೇಖನ, ಸಂಶೋಧನೆ, ಶಾಯರಿ ಹಾಗೂ ಗಜಲ್ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. 'ಒಡಲ ಹಕ್ಕಿಯ ಹಾಡು' ಎಂಬ ಶಾಯರಿ ಹಾಗೂ ಕವನ ಸಂಕಲನ, 'ಒಂದೇ ಹನಿ ಪ್ರೀತಿಗೆ' ಭಾವಗೀತೆ ಸಂಕಲನ, 'ಚಂದಮಾಮನ ಮಗಳು', 'ಬಳ್ಳಿ ಹಾಡು ಹಳ್ಳಿ ಹಾಡು', 'ಕಲ್ಲಿನ ಪಾಟಿ' ಹಾಗೂ 'ಅಪ್ಪ ಅಮ್ಮ ಬೈತಾರೆ' ಎಂಬ ಮಕ್ಕಳ ಪದ್ಯಗಳು, 'ಬೆಳ್ಳಕ್ಕಿ ಕೊಡೆ' ಎಂಬ ಮಕ್ಕಳ ನಾಟಕ ಸಂಕಲನ ಮತ್ತು 'ಬೆವರಿಗೂ ಬೆಲೆಯಿಲ್ಲದ ಊರಲ್ಲಿ' ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಡಾ. ವಿನಾಯಕ ರಾ. ಕಮತದ ರವರ ಹಲವು ಬರಹಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶ್ರೀಯುತರು ಹಲವಾರು ಕವಿಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ಸಾರಿದ್ದಾರೆ. ಇವರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ನಾಡಿನ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಇವರ 'ಬೆಳ್ಳಕ್ಕಿ ಕೊಡೆ' ಮಕ್ಕಳ ನಾಟಕ ಸಂಕಲನಕ್ಕೆ ಶ್ರೀ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯ ಪ್ರಶಸ್ತಿ, 'ಮಕ್ಕಳ ಚಂದಿರ' ಪುರಸ್ಕಾರ, ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ 'ಗಜಲ್ ಕಾವ್ಯ ಪ್ರಶಸ್ತಿ' ಹಾಗೂ ಇನ್ನರ್ ವ್ಹೀಲ್ ಸಂಸ್ಥೆಯಿಂದ 'ಉತ್ತಮ ಶಿಕ್ಷಕ' ಪ್ರಶಸ್ತಿಗಳು.. ಮುಂತಾದವುಗಳು ಪ್ರಮುಖವಾಗಿವೆ.
'ರಾಣಿ' ಎನ್ನುವ ಮಧುರಾನುಭೂತಿ ಕಿವಿಗೆ ಅಪ್ಪಳಿಸುತ್ತಲೆ ಹೃದಯದ ಬಡಿತ ಏರುಗತಿಯಲ್ಲಿ ಸಾಗುತ್ತದೆ ಅಲ್ವಾ, ಇದು ಎಲ್ಲರ ಭಾವದಮಲು, ಏನಂತೀರಿ. ಇಂಥಹ ರಾಣಿಯ ಪಟ್ಟ ಅಲಂಕರಿಸಿರುವ 'ಗಜಲ್' ಕಾವ್ಯ ರಸಿಕರೆಲ್ಲರ ಚಾಂದಿನಿ ಎಂದರೆ ಯಾರಿಗಾದರೂ ತಕರಾರು ಇದೆಯಾ..? ಇಲ್ಲ ಅನಕೊಳ್ತೀನಿ. ಈ ಗಜಲ್ ಎಂಬುದು ಹೃದಯದ ಪಿಸುಮಾತು, ಬಳಲಿದ ಜೀವಕ್ಕೆ ತಂಪೆರೆಯುವ ಎಳೆನೀರು, ಕತ್ತಲಲಿ ದಾರಿ ತೋರುವ ಚಿರಾಗ್, ಎಡವಿ ಬೀಳುವುದನ್ನು ತಡೆಯುವ ಊರುಗೋಲು, ಮನಸ್ಸಿಗೆ ಮುದ ನೀಡುವ ಸಂಜೀವಿನಿ, ಕನಸಿಗೆ ಇಂಬು ಕೊಡುವ ರತಿ-ಮನ್ಮಥರ ಅಪರಾವತಾರ..... ಹೀಗೆ ಹೇಳ್ತಾ ಹೋದ್ರೆ ನೀವು ನನಗೆ ಗಜಲ್ ಪಾಗಲ್ ಎಂದರೂ ಅಚ್ಚರಿ ಇಲ್ಲ! ಒಂದೇ ಮಾತಲ್ಲಿ ಹೇಳ್ಳಾ... ಗಜಲ್ ಎಂದರೆ ರಸಿಕತೆ. ಈ ದಿಸೆಯಲ್ಲಿ ಶಾಯರ್ ಡಾ. ವಿನಾಯಕ ರಾ. ಕಮತದ ರವರ 'ಬೆವರಿಗೂ ಬೆಲೆಯಿಲ್ಲದ ಊರಲ್ಲಿ' ಗಜಲ್ ಸಂಕಲನವನ್ನು ಗಮನಿಸಿದರೆ ಅಲ್ಲೊಂದು ಮನುಕುಲದ ನೆಮ್ಮದಿಗಾಗಿ ಕಾದ ಕುಲುಮೆ ನಮ್ಮನ್ನು ಸ್ವಾಗತಿಸಿದಂತೆ ಫೀಲ್ ಆಗುತ್ತೆ. ಬುದ್ಧ-ಬಸವ-ಅಂಬೇಡ್ಕರ್ ರವರ ಸಿದ್ಧಾಂತಗಳು, ಮೌಢ್ಯತಯ ಖಂಡನೆ, ಧಾರ್ಮಿಕ ಡಾಂಭಿಕತೆ, ಕಾರ್ಮಿಕರ ತೊಳಲಾಟ, ಸಾಮಾಜಿಕ ವ್ಯವಸ್ಥೆಯ ವಿಡಂಬನೆ, ಬೆವರಿನ ರುಚಿ, ದೇವರು, ಪ್ರಗತಿಪರ ಚಿಂತನೆ, ರಾಜಕೀಯ ಅರಾಜಕತೆ... ಇವುಗಳೊಂದಿಗೆ ಗಜಲ್ ನ ಮೂಲ ಸ್ಥಾಯಿ ಭಾವವಾದ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಕನವರಿಕೆ, ಭಗ್ನ ಹೃದಯ.. ಎಲ್ಲವೂ ಇಲ್ಲಿ ಮುಪ್ಪರಿಗೊಂಡಿವೆ.
ಮನುಷ್ಯ ಇಂದು ವೈಜ್ಞಾನಿಕವಾಗಿ ಎಷ್ಟೆಲ್ಲ ಮುಂದುವರಿದರೂ ಅವನ ಚಿಂತನೆಯಲ್ಲಿ ಇನ್ನೂ ಮೂಢನಂಬಿಕೆ, ಕಂದಾಚಾರ, ಅಂಧ ಭಕ್ತಿಯದ್ದೇ ಪಾರುಪತ್ಯವಿದೆ. ಜಾತ್ಯಾತೀತವಾಗಿ, ಧರ್ಮಾತೀತವಾಗಿ ಇದು ಎಲ್ಲೆಡೆಯೂ ಆವರಿಸಿದೆ. 'ದೇವರು' ನಂಬಿಕೆಯ ವಿಚಾರವಾದರೂ ಅದರ ಭಾಗವಾಗಿ ನಡೆಯುವ 'ಹರಕೆ'ಗಳು ಮೌಢ್ಯ ಬಿತ್ತುವ ಬೀಜಗಳು ಎಂಬುದನ್ನು ಸುಖನವರ್ ಡಾ. ವಿನಾಯಕ ರಾ. ಕಮತದ ಅವರು ತಮ್ಮ ಷೇರ್ ನಲ್ಲಿ ದಾಖಲಿಸಿದ್ದಾರೆ. 'ಹರಕೆ' ಎನ್ನುವ ನಂಬಿಕೆಯ ಚಕ್ರ ಯಾವಾಗಲೂ ಉರುಳುತ್ತಲೆ ಇರುತ್ತದೆ. ಅದು ನಿಲ್ಲುವುದಿಲ್ಲ, ಅದರಿಂದ ಯಾವ ಗಾಯವೂ ಮಾಯುವುದಿಲ್ಲ, ಗಾಯ ಮಾಯದರೆ ಅದು ಹರಕೆಯೇ ಅಲ್ಲ ಎಂಬಂತಿರುವ ಅನಿಷ್ಟವನ್ನು ಖಂಡಿಸಿದ್ದಾರೆ.
“ಹರಕೆ ಹೊರುವವರ ಎದೆಗಾಯ ಮಾಯವುದಿಲ್ಲ
ಮಾದ ಗಾಯವ ಕಂಡರೆ ದೇವರಿಗೂ ಆಗುವುದಿಲ್ಲ”
ಕಲ್ಪನೆ, ವಾಸ್ತವತೆ ಎರಡನ್ನೂ ಮೀರಿ ಮನುಷ್ಯನನ್ನು ಆವರಿಸಿರುವ ಒಂದು ಶಕ್ತಿಯೆಂದರೆ ಪ್ರೀತಿ. ಕಲ್ಪನೆಯನ್ನೂ ವಾಸ್ತವಕ್ಕಿಂತಲು ಹೆಚ್ಚು ಹೃದಯಂಗಮವಾಗಿ ಚಿತ್ರಿಸುವ ಕಲೆ ಇದಕ್ಕೆ ಕರಗತವಾಗಿದೆ. ಆದಾಗ್ಯೂ ಎಷ್ಟೋ ಸಲ ಮನಸ್ಸಿಗೆ ಮುದ ನೀಡುವ ಕಲ್ಪನಾಲೋಕ ಕೆಲವೊಮ್ಮೆ ಇನ್ನಿಲ್ಲದಂತೆ ಕಂಬನಿಯ ಕಡಲಲ್ಲಿ ಮುಳುಗಿಸಿ ಬಿಡುತ್ತದೆ. ಇಲ್ಲಿ ಗಜಲ್ ಗೋ ವಿನಾಯಕ ಅವರು ಪ್ರೀತಿಯ ವಿವಿಧ ಆಯಾಮಗಳನ್ನು ತುಂಬಾ ಸರಳವಾಗಿ ನಿರೂಪಿಸಿದ್ದಾರೆ. ಇಲ್ಲಿಯ 'ಶಾಪ'ವು ಸಾಮಾನ್ಯ ಶಾಪವಲ್ಲ, 'ವರ'ವನ್ನು ಹೊತ್ತು ತರುವ ಶಾಪ. ಅಂತೆಯೇ ಪ್ರೇಮಿಯೊಬ್ಬ ತನ್ನ ಪ್ರಿಯತಮೆಯಲ್ಲಿ ಶಾಪಕ್ಕಾಗಿ ಮೊರೆಯಿಡುತ್ತಾನೆ. ಆದರೆ ಮಿಸ್ರಾ-ಎ-ಸಾನಿಯಲ್ಲಿ ಕಲ್ಪನೆಯ ಕರಾಳತೆ, ಅದರ ಒಡಲಲ್ಲಿರುವ ತಳಮಳ, ನೋವನ್ನು ಬಿಚ್ಚಿ ಇಟ್ಟಿದ್ದಾರೆ. ಈ ಷೇರ್ ಏಕಕಾಲದಲ್ಲಿಯೇ ಪ್ರೀತಿ ಉಣಬಡಿಸುವ ಸಿಹಿ-ಕಹಿ ಎರಡನ್ನೂ ಅರುಹುತ್ತದೆ.
“ನಿನ್ನ ನೆನಪಿನಲ್ಲೇ ಜೀವಿಸುವ ಶಾಪ ಕೊಡು ಸ್ವಾರ್ಥಿ ನಾನು
ಕನಸಿನಲಿ ಕೈ ಹಿಡಿದು ಸಪ್ತಪದಿ ತುಳಿದ ಪಾಪಿ ನಾನು”
ನಾವೆಲ್ಲರೂ ಒತ್ತಡದ ಕೂಸುಗಳು. ಕೆಲವೊಮ್ಮೆ ಇದ್ದ ಬುದ್ಧಿಯನ್ನೂ ಬಳಸಿಕೊಳ್ಳಲಾಗದ ಅಸಹಾಯಕರು. ಅಂಥಹ ಸಮಯದಲ್ಲೆಲ್ಲ ಈ ಗಜಲ್ ಎಂಬ ಪಾರಸಮಣಿಯೇ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದೊಂದು ಒತ್ತಡ ಕರಗಿಸುವ ಆಪ್ತ ಸಮಾಲೋಚನೆಯ ಭಾವದೀಪ್ತಿ. ಈ ಭಾವದೀಪ್ತಿ ಸುಖನವರ್ ಡಾ. ವಿನಾಯಕ ರಾ. ಕಮತದ ಅವರ ಲೇಖನಿಯಲ್ಲಿ ಮತ್ತಷ್ಟು ಪ್ರಪುಲ್ಲಿತವಾಗಿ ಕಂಗೊಳಿಸಲಿ ಎಂದು ಶುಭ ಕೋರುತ್ತೇನೆ.
“ಕಣ್ಣುಗಳಲ್ಲಿ ಅವಳ ಅಮಲಿದೆ ಹೃದಯದಲ್ಲಿ ಪ್ರೀತಿಯಿದೆ.
ಯಾವತ್ತಾದರೂ ಇಬ್ಬರು ಭೇಟಿಯಾದರೆ ಸಂಭಾಳಿಸುವುದು ಕಷ್ಟ”
- ಅನಾಮಿಕ
ಅದೇನೋ ಗೊತ್ತಿಲ್ಲ, ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ಗಜಲ್ ನ ಪರಂಪರೆ ಬಗ್ಗೆ ಮಾತಾಡುತಿದ್ದರೆ, ಬರೆಯುತಿದ್ದರೆ ಗಡಿಯಾರಕ್ಕೆ ಮುಳ್ಳಿಗಳಿವೆ ಎಂಬುದನ್ನೇ ಮರೆಯುತ್ತೇನೆ. ಮರೆತರೂ, ಆ ಮುಳ್ಳುಗಳು ಮಾತ್ರ ಚುಚ್ಚಿ ಚುಚ್ಚಿ ತನ್ನ ಇರುವಿಕೆಯನ್ನು ನೆನಪಿಸುತ್ತ ಸಮಯದ ಮಹತ್ವವನ್ನು ಸಾರುತ್ತಲೇ ಇದೆ, ಇರುತ್ತದೆ. ಹಾಗಾಗಿ ಈ ಲೇಖನಿಗೆ, ಲೇಖನಕ್ಕೆ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಸಿ-ಯುವ್, ಟೇಕೇರ್…!!
ಧನ್ಯವಾದಗಳು..
ಡಾ. ಮಲ್ಲಿನಾಥ ಎಸ್. ತಳವಾರ,
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ