ಅಗುಳಿಯಿಲ್ಲದ ಕದ
ಶಶಿಕಲಾ ವೀ ಹುಡೇದ
ಬೀಸುವ ಆಷಾಢ ಗಾಳಿ
ಬೀದಿಬೀದಿಯಲಿ ಗಂಡು
ನಾಯಿಗಳ ದಂಡ ನಡುವೆ
ಒಂದೇ ಒಂದು ಹೆಣ್ಣುನಾಯಿ
ಅವಕ್ಕೆ ನಾಚಿಕೆಯಿಲ್ಲ ಎಂದಿರಾ?
ಇತ್ತಿತ್ತಲಾಗಿ
ನಾಚುವ ಸರದಿ ನಿಮ್ಮದೇ
ಯಾಕೆಂದರೆ
ಅವುಗಳನೂ ಮೀರಿಸಿದ್ದೀರಿ ನೀವು?
ಗದ್ದೆ ಕೆಸರು ಬಯಲು
ಹೊಲ ಮನೆ ಗುಡಿಸಲು
ಕೊನೆಗೆ ಬಸ್ಸು ರೈಲು
ಹೊಟೇಲು ಲಿಫ್ಟು
ಹಾಳು ಗೋದಾಮುಗಳು
ಎಲ್ಲುಂಟು ಎಲ್ಲಿಲ್ಲ?
ಅಪ್ಪನ ಕೂಸಿಗೆ ಮಗಳೇ ತಾಯಿ
ಅಣ್ಣ ತಮ್ಮ ಗೆಳೆಯ ಹಳೆಯ
ಮಾವ ಭಾವ ಮುದೀಯ ಸರೀಕ
ಸಹೋದ್ಯೋಗಿ ಸನ್ಯಾಸಿ
ಬಿಕನಾಸಿ ಬಾಸು ಶಿಕ್ಷಕ
ಯಾರುಂಟು ಯಾರಲ್ಲ
ಇಂವನ ಬಿಟ್ಟು ಇಂವ ಯಾರು?
ಎಲ್ಲರೂ ತಾಯ್ಗಂಡರೇ
ಮತ್ತೆ ನಾವು
ರಾಖಿ ಕಟ್ಟಿದ ಕೈಗಳೆಲ್ಲಿ ಸೋದರರೆ?
ಹಿಂದೊಬ್ಬ ತೊಡೆ ಬಗಿದು
ನೆತ್ತರೆಣ್ಣೆಯ ಮಾಡಿ
ಎಲುಬ ಬಾಚಣಿಕೆಯಲಿ
ಕರುಳ ಬಾಚಿದನಂತೆ ಮುಯ್ಯಿಗಾಗಿ
ಇದ್ದರೂ ಇದ್ದಾನು
ಈಗಿಲ್ಲವಲ್ಲ!
ಬಿಕ್ಕುತಿದೆ ದ್ರೌಪದಿಯ ಆತ್ಮ
ಕಿಸಿದ ಕೂಪದಲಿ
ಕಳೆದು ಹೋಗುವ ಅಣ್ಣಗಳಿರಾ
ಯಾವ ಸುಖ ಪಡೆದಿರಿ ನೀವು
ಗೆದ್ದೆವೆಂಬ ಭ್ರಮೆಯಲಿ ಗಹಗಹಿಸಿ
ನಗಬೇಡಿ ನಿಲ್ಲಿ
ಇಲ್ಲಿ ಸೋತಿದ್ದು ನೀವು
ಮಾತ್ರವಲ್ಲ ಮನುಷ್ಯತ್ವ ಕೂಡ
ಬೆತ್ತಲೆ ಮೈಯ ಮೇಲೆ
ಹರಿವ ಸಾವಿರ ಹಲ್ಲಿಗಳೆ
ಹೇಸಿಗೆಯ ನೆಕ್ಕಿ ಬಂದ ನಾಲಿಗೆಗಳೆ
ಹುತ್ತದೊಳು ಹಾವಿಲ್ಲದಿರಬಹುದು
ವಿಷವಂತೂ ಇದ್ದೇ ಇದೆ
ಈಗೀಗ ನಮ್ಮ ಕನಸುಗಳಲಿ
ಬರೀ ಪಾಣಿಪೀಠದ ಮೇಲೆ
ನಿಗುರಿ ಕುಣಿವ ಲಿಂಗಗಳೇ
ಎಷ್ಟಂತ ಕುಣಿದಾವು
ಮತ್ತೆ ಮಸೆದ ಉಳಿ
ಕೆಂಪು ಹನಿಗಳಿಗಾಗಿ ಕಾದಿದೆ
ಹೇಳಿ ಮತ್ತೆ ಈಗ
ನಮ್ಮ ಕನಸಿಗೆ ಬೆಚ್ಚುವ
ಮನುಷ್ಯತ್ವ ನಿಮ್ಮಲ್ಲಿದೆಯೆ?
*******
ಅತ್ಯಂತ ಸುಂದರವಾದ ಕವಿತೆ ಹೆಣ್ಣಿನ ಮೇಲೆ ಅತ್ಯಾಚಾರ ಎಲ್ಲರಿಂದಲೂ ನಡೆದಿದೆ. ತಂದೆ,ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ ,ತಮ್ಮ ,ಭಾವ, ಸೋದರ ಮಾವ ,ಸಂಬಂಧಿ ನೆರೆಹೊರೆ ಗೆಳೆಯ ಎಲ್ಲ ಗಂಡಸರಿಂದಲೂ ಅತ್ಯಾಚಾರ ನಡೆದಿದೆ.ಹೌದು ಹೆಣ್ಣಿಗೆ ಗಂಡಸರೆಂದರೆ ಬೆಚ್ಚಿಬೀಳುವಂತಾಗಿದೆ
ಅತ್ಯುತ್ತಮವಾದ ಕವನ
ಅಕ್ಕತಂಗಿಯರಿಬ್ಬರೂ ಒಳ್ಳೆಯ ಕವಿತೆ ಬರೆಯುವ ಪೈಪೋಟಿ ಬಿದ್ದಿದೆ ಒಳ್ಳೆಯದು
ಪದ್ಯ ಓದಿ ಬೆರಗಾಯಿತು. ಇಲ್ಲಿ ಬಳಸಿರುವ ಪ್ರತಿ ಪದವೂ ಜಢ ಸಮಾಜದ ಆತ್ಮಕ್ಕೆ ಇರಿಯುವ ಮೊನೆ.
“ಬೆತ್ತಲೆ ಮೈಯ ಮೇಲೆ
ಹರಿವ ಸಾವಿರ ಹಲ್ಲಿಗಳೆ
ಹೇಸಿಗೆಯ ನೆಕ್ಕಿ ಬಂದ ನಾಲಿಗೆಗಳೆ
ಹುತ್ತದೊಳು ಹಾವಿಲ್ಲದಿರಬಹುದು
ವಿಷವಂತೂ ಇದ್ದೇ ಇದೆ” ಇಲ್ಲಿಯ ಸಾಲುಗಳಲ್ಲಿರುವ ತೀವ್ರತೆ ಹೆಣ್ಣಿನ ಒಡಲೊಳಗಿನ ನೋವು ಆಕ್ರೋಷ ಪ್ರತಿಭಟನೆಗಳನ್ನು ಹರಿತವಾಗಿ ಪ್ರತಿಪಾದಿಸಿವೆ.
ನಾನೋದಿದ ಅತ್ಯುತ್ತಮ ಪದ್ಯವಿದು…