ವಿಷ್ಣು ಆರ್. ನಾಯ್ಕ ಕವಿತೆ-

ಕಾವ್ಯ ಸಂಗಾತಿ

ವಿಷ್ಣು ಆರ್. ನಾಯ್ಕ

ಸಾಧನೆಯ ದಾರಿ

ಏಳು.. ಎದ್ದೇಳು ಚಾತಕ ಪಕ್ಷಿ
ಮೊದಲ ಮಳೆ ಹನಿಗೆ ಬಾಯ್ದೆರೆದು 
ಜಾಡ್ಯಗಳ ಕಿತ್ತೆಸೆದು
ಪುಚ್ಚ ಬಿಚ್ಚು
ಗರಿಗರಿಯ ಗೂಡು ಬಿಟ್ಟು
ಕನಸುಗಳ ಕಣ್ಣುಕಟ್ಟು
ಸಿಡಿಲು, ಮಿಂಚುಗಳ ವಾದ್ಯ, ಬೆಳಕಲಿ ಮಿಂದು ಮಾರ್ದನಿಯಟ್ಟು
ಸಿಡಿಲಾಗಿ ಮೊಳಗಲಿ ಸಾಧನೆಯ ಕೆಚ್ಚು

ಸಾಧನೆಯಾಗಸದ ತುಂಬ 
ನಿನ್ನದೆ ಹೆದ್ದಾರಿ
ಗಮಿಸು ‘ಭೀಮ ಪರಾಕ್ರಮ’ದ ದಾರಿ
ಅಡೆತಡೆಗಳನೆಲ್ಲ ಮೀರಿ
ಕೋಟಿ ಸೂರ್ಯ ಪ್ರಭೆಯ ಬೀರಿ
ಸಾಗು…ಸಾಗು……ಸಾಗೂ….ನೀ ಮುಂದಕೆ
ನಿನ್ನ ಭೂತದ ನೋವು , ನಿರಾಶೆ, ಹತಾಶೆ
ಎಲ್ಲ ಕಿತ್ತೆಸೆದು ಸಾಗು
ನಿನ್ನ ಮೊಗ್ಗಾದ ಕನಸುಗಳಿಗೆ 
ಹನಿಸು ಪ್ರೇಮದ ನೀರು
ಊರು ಶಕ್ತಿಯ ಬೇರು
ಹೀರು ಪಾತಾಳದ ಸುಧೆಯ ನೀರು
ಗಗನವೇ ತವರೂರು
ಏರು…ಏರು….ಏರೂ…
ನೂಕು ‘ಶಂಕೆ’ಯ ತೇರು

ನಿನಗೆ ಪ್ರೇರಕರುಂಟು
ಮಾರ್ಗದರ್ಶಕರುಂಟು
ಗಂಗೆಯ ಬುವಿಗಿಳಿಸಿದ ‘ಭಗೀರಥ’ರುಂಟು
ಕನಸುಗಳಿಗೆ ಕನಸು ‘ಕಡ’ಕೊಟ್ಟ 
ಭವ್ಯ ಸಾಧಕರುಂಟು
ನಿನ್ನ ಹಾರುವಿಕೆ ಭೂಮಿಯ ಹತ್ತಿರಕ್ಕೋ..
ಸಾಧನೆಯ ಉತ್ತರಕ್ಕೋ…!
ಮಾರ್ಗ ನಿನ್ನದೇ… ಮನಸು ನಿನ್ನದೇ..!
ಸಾಗು ಮುಂದಕೆ ಹಾರು ಗುರಿಯೇರು

ಆಯ್ಕೆ ನಿನ್ನದು ಮುದ್ದು ಹಕ್ಕಿ
ನೀ ಸಾಗುವ ಹಾದಿ ಎಷ್ಟು
ದುರ್ಗಮವೇ ಇರಲಿ…
ಒಮ್ಮೆ ಕ್ರಮಿಸಿಬಿಡು
ಕಲ್ಲು ಮುಳ್ಳುಗಳ ಮಧ್ಯೆ
ನಡೆದು ಗುರಿ ಸೇರಿ ನಿಂತು
ಆನಂದ ಭಾಷ್ಪ ಸುರಿಸಿಬಿಡು
ನಿನ್ನ ಸಾಗುವ ಹಾದಿ 
ಭವಿತವ್ಯದ ಜೀವಕ್ಕೆ 
‘ರಾಜ ಮಾರ್ಗ’ವಾಗಿ
ನಿನ್ನ ಹೆಜ್ಜೆಯ ಮೇಲೆ ಹೆಜ್ಜೆಗಳುದಿಸಲಿ
ನಲುಗಿದ ಜೀವಕೆ ಕಾರುಣ್ಯವುದಿಸಲಿ


      ವಿಷ್ಣು ಆರ್. ನಾಯ್ಕ

2 thoughts on “ವಿಷ್ಣು ಆರ್. ನಾಯ್ಕ ಕವಿತೆ-

Leave a Reply

Back To Top