ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
ಕಾರ್ಮೋಡ
ಬಾನಿಗೆ ಕವಿದ ಕಾರ್ಮೋಡವು
ಅದೇಕೊ ಮನಕ್ಕೂ ಕವಿದಿದೆ
ಇಳೆಗೆ ಧುಮ್ಮಿಕ್ಕಿ ಸುರಿಯಬೇಕು
ಅದೇಕೊ ಗುಡುಗಿ ಅಬ್ಬರಿಸುತಿದೆ
ಅಂತೆಯೆ ಮನದಲ್ಲೂ ತಲ್ಲಣ
ಕಳವಳ ತಾಕಲಾಟ ಆವರಿಸಿದೆ
ಬಾನಲಿ ಮೋಡಗಳು ಸಾಗಿದಂತೆ
ನೆನಪುಗಳ ಮೆರವಣಿಗೆ ಹೊರಟಿದೆ
ಮನವು ರೋಧಿಸುತಿದೆ ಮೌನದಲಿ
ಸವಿನೆನಪುಗಳೀಗ ನೋವಾಗಿ ನಿಂತು
ಕೋಲ್ಮಿಂಚು ಮೂಡಿ ಮರೆಯಾದಂತೆ
ನೋವಿನೆಳೆ ಸೆಳೆದು ಹೋಯಿತೀಗ
ಸುಖಿಸಿದ ನೆನಪು ಮೂಡಿಬರಲು
ಬಾನೆಲ್ಲ ಬೆಳಗಿಸಿ ಹೋರಟಂತೆ
ಹನಿ ಹನಿ ಮಳೆ ಉದುರಿದಂತೆ
ನೆನಪು ಬಿಚ್ಚಿಕೊಳ್ಳುತಿದೆ ಗೂಡಿನಿಂದ
ರಪ ರಪ ಸದ್ದಿನ ಮಳೆ ಸುರಿದಂತೆ
ಎಲ್ಲವೂ ಅನಾವರಣ ಸ್ಮೃತಿಪಟಲದಿ
ಸೋನೆ ಮಳೆಯಂತೆ ಜಿಬ್ಬರ
ಮನವು ನೆನಪಲಿ ಮಸುಕಾಗಿದೆ
ಆಲಿಕಲ್ಲಿನ ಹೊಡೆತದ ಮಳೆಯು
ಬದುಕುಂಡ ಪೆಟ್ಟುಗಳ ಘಟನೆಗಳಂತೆ
ಮಳೆ ಸುರಿದು ಇಳೆ ತಣಿದಂತೆ
ನೆನಪುಗಳ ಸರಮಾಲೆ ಮುಗಿಯಲು
ಮನವು ತಿಳಿಗೊಳದ ನೀರಂತೆ
ಮೈ ಮನಗಳೆಲ್ಲವೂ ಹಗುರು.
ರೋಹಿಣಿ ಯಾದವಾಡ