ಇಂದಿರಾ ಮೋಟೆಬೆನ್ನೂರ ಕವಿತೆ-ಮಿಥ್ಯಾರೋಪ

ಕಾವ್ಯಸಂಗಾತಿ

ಇಂದಿರಾ ಮೋಟೆಬೆನ್ನೂರ

ಮಿಥ್ಯಾರೋಪ

ಹನಿ ಪ್ರೀತಿಗಾಗಿ ಹಂಬಲಿಸಿ ಬಂದವಳು…..
ಸುರಿವ ಎಲ್ಲ ಪ್ರೀತಿ ಮಳೆ ತನ್ನ ಬೊಗಸೆಯಲ್ಲೇ ಬೀಳ ಬೇಕೆನ್ನುವವವಳು ಎಂಬ ಮಿಥ್ಯಾರೋಪ …
ಹನಿಯೂ ಉಡಿಗೆ ಬಿದ್ದಿಲ್ಲ ಇನ್ನೂ….

ತಂಗಾಳಿಯ ನಸು ತಂಪ ಬಯಸಿ ನಿಂದವಳು ….
ಸುಳಿವ ಗಾಳಿಯನೆಲ್ಲ ತನ್ನೊಡಲಲ್ಲಿ ಬಚ್ಚಿಡುವವಳು
ಎಂಬ ಸುಳ್ಳು ಆರೋಪ …….
ತುಸು ತಂಗಾಳಿಯು ದಕ್ಕಿಲ್ಲ ಇನ್ನೂ…

ಹಣತೆಯ ಬೆಳಕಲಿ ಮೀಯಲು ಹೃದಯ ಹೊತ್ತು ತಂದವಳು…
ರವಿ ಹೊಂಬೆಳಕು ಚೆಂಬೆಳಕು ಹೊನಲೆಲ್ಲ ತನಗೇ ಬೇಕೆನ್ನುವವಳು ಎಂಬ ಸಲ್ಲದ ಆರೋಪ ….
ಹುಡಿ ಬೆಳಕೂ ಹಾದಿಗೆ ಹಾಸಿಲ್ಲ ಇನ್ನೂ…

ಎದೆಯಾಳದ ದನಿಯ ಆಲಿಸಲು ಕಾದುನಿಂತವಳು…
ಮೌನ ಕೂಪದಿ ನೂಕಿ ಸ್ಪಂದನೆಯೇ ಇರದ ಸ್ತಬ್ಧ ನರಕಕೆ
ತಳ್ಳಿ ನಿಶಬ್ಧ ಕರುಣಿಸಿದ ವರದಾನ ….
ಒಂದು ನುಡಿಯೂ ತೇಲಿಬರಲಿಲ್ಲ ಇನ್ನೂ….


ಇಂದಿರಾ ಮೋಟೆಬೆನ್ನೂರ

Leave a Reply

Back To Top