ಪುಸ್ತಕ ಸಂಗಾತಿ
ಅನುಸೂಯ ಜಹಗೀರದಾರ ಅವರ
ಮೂರುಪುಸ್ತಕಗಳ ಅವಲೋಕನ-
ಪ್ರೇಮಲೀಲಾ ಕಲ್ಕೇರೆ ಅವರಿಂದ
ಇತ್ತೀಚೆಗೆ ಅನುಸೂಯ ಜಹಗೀರದಾರ ಅವರ ಮೂರು ಗಜಲ್ ಮತ್ತು ಕವನ ಸಂಕಲನಗಳನ್ನು ಓದಿದೆ–
ಅನಸೂಯ ಜಹಗೀರದಾರ ಸಾಹಿತ್ಯ ವಲಯದಲ್ಲಿ ಪ್ರಮುಖ ಹೆಸರು.ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಸಂಗೀತಗಾರರೂ ಸಹ. ನಾಡುನುಡಿಯ ಬಗ್ಗೆ ಕಾಳಜಿಯುಳ್ಳ ಇವರು, ಕನ್ನಡ ಪರ ಸಂಘಟನೆಗಳೊಂದಿಗೆ ಕ್ರಿಯಾಶೀಲರಾಗಿ ಗುರುತಿಸಿಕೊಂಡಿದ್ದಾರೆ.
ಅನುಸೂಯ ಅವರ ಕವನಗಳಲ್ಲಿ ,ಸಾಮಾಜಿಕ ಬದ್ಧತೆಯಿದೆ ; ಪ್ರೀತಿಯ ಒರತೆಯಿದೆ…ರೈತನ ಗೋಳು,ಹೆಣ್ಣಿನ ಶೋಷಣೆ,ಜಾತಿಯ ಪಿಡುಗು ..ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಚಿಂತನೆಗಳ ಕವನಗಳಿವೆ.
1. “ಒಡಲ ಬೆಂಕಿ”ಯಲ್ಲಿ 80 ಸುಂದರ ಕವನಗಳಿವೆ.ಇಲ್ಲಿ ಹೆಚ್ಚು ಕಾವ್ಯಾಸಕ್ತರಿಂದ ಓದಿಸಿಕೊಂಡ ,ಪ್ರತಿಕ್ರಿಯೆ ಪಡೆದ ,ಒಂದು ಪರಿಣಾಮಕಾರೀ ಕವನ ,ನಿಮ್ಮ ಓದಿಗೆ —-
ಇಲ್ಲಿ ಮಕ್ಕಳು ಅಳುವುದಿಲ್ಲ
ಉದ್ಯೋಗಸ್ಥ ಮಹಿಳೆಯ ಮಕ್ಕಳು ಅಳುವುದೇ ಇಲ್ಲ
ಅವುಗಳ ದನಿಯಿಲ್ಲಿ ಕೇಳುವುದೇ ಇಲ್ಲ
ಒಳಗೊಳಗೇ ಹುದುಗಿ ಸುಮ್ಮನಾಗುತ್ತವೆ.
ಹಾಗೆಯೇ ಮಂಪರು ಬಡಿದು ನಿದ್ದೆ ಸೆಳೆಯುತ್ತದೆ
ಅವುಗಳಿಗೂ ಗೊತ್ತು ಸಮಯದ ಪಾಲನೆ
ಪುರುಸೊತ್ತಿಲ್ಲ ಅಮ್ಮಗೆ ಲಾಲನೆ-ಪಾಲನೆ
ಮುದ್ದಿಸಲು ನಿಗದಿತ ಸಮಯವಾದ ಹಾಗೆ
ಅಷ್ಟಕ್ಕೆ ಖುಷಿಪಡುವವು ಸಂದ ಆ ಘಳಿಗೆ!
ಉದ್ಯೋಗಸ್ಥ ಮಹಿಳೆಯ ಮಕ್ಕಳು ಹಠಮಾಡುವುದಿಲ್ಲ
ಅವುಗಳೆಂದೂ ಜೋಗುಳ ಪದ ಕೇಳುವುದೇ ಇಲ್ಲ
ಎಲ್ಲೋ ಕೇಳುವ ಗುನುಗುನಿಸುವ ಹಾಡಿಗೆ
(ಒಮ್ಮೊಮ್ಮೆ ಕೇಳುವ ಮೊಬೈಲ್ ಹಾಡಿಗೆ )
ತಲೆದೂಗಿ ನಕ್ಕು ತೃಪ್ತಿಪಡುತ್ತವೆ ಹಾಗೇ!
ಬಾಟ್ಳಿ ಹಾಲಿನಲಿ ಕಾಲುಗಳ ಬಡಿಯುತ್ತವೆ
ರೆಡಿಮೇಡ್ ತಿಂಡಿಗಳ ನಿತ್ಯ ಸವಿಯುತ್ತವೆ.
ಯಾವುದಕ್ಕೂ ತಕರಾರು ಎಂಬುದೇ ಇಲ್ಲ
ಅವುಗಳಿಗೆ ಗೊತ್ತು ಹಠವಿಲ್ಲಿ ನಡೆಯುವುದೇ ಇಲ್ಲ.
ಉದ್ಯೋಗಸ್ಥ ಮಹಿಳೆಯ ಮಕ್ಕಳು
ತೂಗದೆ -ತಟ್ಟದೇ ಮಲಗುತ್ತವೆ
ಮುಚ್ಚಿದ ಕಣ್ಗಳಲಿ ಕನಸ ಕಾಣುತ್ತವೆ.
ಕನಸಿನಲಿ ಅಮ್ಮನ ಬಿಂಬ ತುಂಬಿಕೊಳ್ಳುತ್ತವೆ.
ಅಮ್ಮನ ಎದೆಗವಚಿ ಹಾಗೆ ಮುಗುಳ್ನಗುತ್ತವೆ.
***
2. “ನೀಹಾರಿಕೆ” ಹನಿಗವಿತೆಗಳು.
ಇಲ್ಲಿ ಹೆಚ್ಚು ಪ್ರೇಮ ಕವಿತೆಗಳಿವೆ.ಇಲ್ಲಿನ ಒಂದು ಹನಿ—
ಪ್ರೇಮಿಗಳು
ಪರಸ್ಪರ
ಒಂದಾಗಲು
ಹಾತೊರೆಯುತ್ತಾರೆ..!
ಸಂಪ್ರದಾಯದ
ಗೋಡೆಗಳು
ಏಳುತ್ತವೆ
ಆಗ
ಹಾ– ತೊರೆಯುತ್ತಾರೆ…!
—
3 . “ಆತ್ಮಾನುಸಂಧಾನ”. ಗಜಲ್ಗಳು. ನಾನು ಇತ್ತೀಚೆಗಷ್ಟೆ ಗಜಲ್ ಗಳನ್ನು ಓದುತ್ತಿರುವುದು…ಅನಸೂಯ ಅವರು ಚಂದ ಗಜಲ್ ರಚಿಸಿದ್ದಾರೆ.ಗಝಲ್ ನ ಲಯ,ವಿನ್ಯಾಸ,ಗೇಯತೆ ತುಂಬ ಮೋಹಕವೆನಿಸುತ್ತದೆ. ಓದಿದಂತೆ ಮನ ಮುದಗೊಳ್ಳುತ್ತದೆ…ಈ ಸಂಕಲನದಲ್ಲಿ 60 ಗಜಲ್ಗಳಿವೆ.ಇಲ್ಲಿನ ಗಜಲ್ ಒಂದು ನಿಮ್ಮ ಓದಿಗಾಗಿ–
ನಿನ್ನ ಚರಕ ವಸ್ತು ಸಂಗ್ರಹಾಲಯದಲ್ಲಿದೆ ನೋಡಬೇಕಿತ್ತು ಮಹಾತ್ಮ
ನಿನ್ಹೆಸರ ಟೋಪಿಗೆ ಬೇರೆ ಅರ್ಥವಿದೆ ತಿಳಿಯಬೇಕಿತ್ತು ಮಹಾತ್ಮ
ಎಡಬಲಗಳೆಂದು ವಾದವಿವಾದಗಳಿವೆ ಕೇಳಬೇಕಿತ್ತು ಮಹಾತ್ಮ
ನಿನ್ನ ಚಿತ್ರದ ನೋಟು ಭ್ರಷ್ಟತೆಗೆ ಬಳಕೆಯಿದೆ ಅರಿಯಬೇಕಿತ್ತು ಮಹಾತ್ಮ
ಅಹಿಂಸೆಯ ನಾಡಿನಲಿ ಹಿಂಸೆ ಭುಗಿಲೆದ್ದಿದೆ ಅರ್ಥವಾಗಬೇಕಿತ್ತು ಮಹಾತ್ಮ
ವಿರೋಧಾಭಾಸಗಳೇ ವ್ಯವಹಾರವಾಗಿದೆ
ತಡೆಯಬೇಕಿತ್ತು ಮಹಾತ್ಮ
“ಅನು” ನೊಂದಿಹಳು ಏನೇನು ಕನಸಿತ್ತು
ನನಸಾಗಬೇಕಿತ್ತು ಮಹಾತ್ಮ
ನಿತ್ಯ ಸತ್ಯ ಅಹಿಂಸೆ ಪಾಲಿಸಿದೆ ಸ್ವಾತಂತ್ರ್ಯ
ಮಾತಾಗಬೇಕಿತ್ತು ಮಹಾತ್ಮ
***
ಈ ಪುಸ್ತಕಗಳ ಮುಖಪುಟ ಮತ್ತು ಒಳಪುಟಗಳ ವಿನ್ಯಾಸ ತುಂಬ ಅಂದವಾಗಿದೆ.ಮೂರು ಪುಸ್ತಕಗಳೂ ಗುರು ಪ್ರಕಾಶನದಲ್ಲಿ ಪ್ರಕಟಗೊಂಡಿವೆ.
ವಿಳಾಸ: ಗುರು ಪ್ರಕಾಶನ
ಕೋಟೆ ಏರಿಯಾ,
ಕೊಪ್ಪಳ–583 23 ಮೊಬೈಲ್:94493 10955.
ಪ್ರೇಮಲೀಲಾ ಕಲ್ಕೇರೆ