ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಡೇರ್ ಡೆವಿಲ್ ಮುಸ್ತಫಾ

: ಪೂರ್ಣಚಂದ್ರ ತೇಜಸ್ವಿಯವರ “ಅಬಚೂರಿನ ಪೋಸ್ಟ್ ಆಫೀಸ್ ” ಕಥಾ ಸಂಕಲನದ ಒಂದು ಕಥೆ “ಡೇರ್  ಡೆವಿಲ್  ಮುಸ್ತಫಾ” ಆ ಕಥೆಯನ್ನು  ಆಧರಿಸಿದ ತೇಜಸ್ವಿಯವರ ಅಭಿಮಾನಿಗಳ  ಗುಂಪು ಹಣ ಹಾಕಿ ಶಶಾಂಕ್ ಸೋಗಲ್ ಅವರ ಚೊಚ್ಚಲ ನಿರ್ದೇಶನದಲ್ಲಿ ನಿರ್ಮಿತವಾಗಿರುವ ಚಿತ್ರ  ಡೇರ್ ಡೆವಿಲ್ ಮುಸ್ತಫಾ.
ಹೆಸರೇ ಸೂಚಿಸುವಂತೆ ಮುಸ್ತಫನ ಸುತ್ತ ಕಥೆ ಸುತ್ತುತ್ತದೆ ಈ ಕಥಾ ಚಿತ್ರ ನಡೆಯುವ ಕಾಲಘಟ್ಟ 50 ವರ್ಷಗಳ ಹಿಂದಿನದು, ಅಂದಿನ ಕಾಲಘಟ್ಟಕ್ಕೆ ಸರಿದೂ ಅಂತಹುದೇ ವಾತಾವರಣವನ್ನು ಸೃಷ್ಟಿಸಿ ತೇಜಸ್ವಿಯವರ ಕಥೆಯಲ್ಲಿನ ಹ್ಯೂಮರನ್ನು ಉಳಿಸಿಕೊಂಡು ಲವಲವಿಕೆಯಿಂದ ಈಗಿನ ಕಾಲಕ್ಕೆ ಹೊಂದಿಸಿ ತೋರಿಸಿರುವುದು ಈ ಚಿತ್ರದ ಹೆಗ್ಗಳಿಕೆ.
          ಅಬಚೂರಿನ ಜೂನಿಯರ್ ಕಾಲೇಜಿಗೆ ಹೊಸದಾಗಿ ಸೇರ್ಪಡೆಯಾಗುವ ಏಕೈಕ ಮುಸಲ್ಮಾನ ಹುಡುಗ ಮುಸ್ತಫಾ… ಮುಸ್ತಫಾ ಕಾಲೇಜ್ ಶುರುವಾಗಿ ಒಂದು ತಿಂಗಳ ನಂತರ ಬರುತ್ತಾನೆ, ಇಡೀ ಕಾಲೇಜಿಗೆ ಒಬ್ಬನೇ ಮುಸಲ್ಮಾನ ಹುಡುಗನಾದ್ದರಿಂದ ಅವನ ಬಗ್ಗೆ ಇಲ್ಲ ಸಲ್ಲದ ಕಲ್ಪನೆ ಗುಮಾನಿಗಳನ್ನು ಹೊಂದಿರುವ ಸಹಪಾಠಿಗಳ ಗುಂಪು ಅವನನ್ನು ಸೇರುವುದಿಲ್ಲ , ಮುಸ್ತಫಾನಿಗೆ ಕಾಲೇಜಿನ ಉಪನ್ಯಾಸಕರಿಂದಲೂ ಅಂತಹ ಪ್ರೋತ್ಸಾಹ ದೊರೆಯುವುದಿಲ್ಲ, ಕಾಲೇಜಿನ  ರಾಮಾನುಜ ಅಯ್ಯಂಗಾರಿ ಹಾಗೂ ಅವನ ಗುಂಪು ಮುಸ್ತಫಾನನ್ನು ಹಲವು ವಿಧಗಳಿಂದ ಗೋಳು ಹೊಯ್ದುಕೊಳ್ಳುತ್ತದೆ, ಆದರೆ ಇವೆಲ್ಲವನ್ನು ಆತ ಬಹಳ ಸಹಜವಾಗಿ ಸ್ವೀಕರಿಸುತ್ತಾನೆ, ಅವರೆಲ್ಲರೂ ಹಾಕುವ ಸವಾಲುಗಳನ್ನು ಕೆಚ್ಚಿನಿಂದಲೇ ಮೆಟ್ಟುತ್ತಾನೆ, ತಾನು “ಡೇರ್ ಡೆವಿಲ್ “ಎಂದು ಘೋಷಿಸಿಕೊಳ್ಳುತ್ತಾನೆ.


          ಫುಟ್ಬಾಲ್ ಆಟದಲ್ಲಿ  ಮುಸ್ತಫಾ ಅನಿರೀಕ್ಷಿತವಾಗಿ ತನ್ನ ಹೊಡೆತದಿಂದ ಗಾಯಗೊಳ್ಳುವ ಸಹಪಾಠಿ, ಸೀನನಲ್ಲಿ ಕ್ಷಮೆ ಕೇಳುವ ಮೂಲಕ ಅವನ ಸ್ನೇಹ ಸಂಪಾದಿಸಿ ಗೆಲ್ಲುತ್ತಾನೆ, ಕ್ಲಾಸಿನ ಹುಡುಗಿಯರಿಗೂ  ಮುಸ್ತಫಾ ಹೀರೋ ಆಗುತ್ತಾನೆ.
        ಊರಿನ ಗಣೇಶೋತ್ಸವದಲ್ಲಿ ಮುಸಲ್ಮಾನರ ಬೀದಿಯಲ್ಲಿ ಮೆರವಣಿಗೆ ಸಾಗುವಾಗ ಬಸವನ ಬೆನ್ನಿಗೆ ಬೆಂಕಿ ಹತ್ತಿಕೊಳ್ಳುತ್ತದೆ, ಅದು ಗಲಭೆಗೆ ಕಾರಣವಾಗುತ್ತದೆ,
ಮುಸ್ತಫಾ ಬಸವನ ಬೆನ್ನಿಗೆ ಬಿದ್ದ ಬೆಂಕಿಯನ್ನು ಆರಿಸಿ ಮುಂದಿನ ಅನಾಹುತ ತಪ್ಪಿಸುತ್ತಾನೆ, ಊರಿನ ಜನರ ಪ್ರೀತಿಗೆ  ಪಾತ್ರನಾಗುತ್ತಾನೆ, ಕಾಲೇಜಿನಲ್ಲಿಯೂ ತನ್ನ ಒಳ್ಳೆಯ ಕೆಲಸಕ್ಕಾಗಿ ಸನ್ಮಾನಿತನಾಗುತ್ತಾನೆ, ಇದು ರಾಮಾನುಜ ಅಯ್ಯಂಗಾರಿ ಗುಂಪಿಗೆ ನುಂಗಲಾರದ ತುತ್ತಾಗುತ್ತದೆ.
        ಮುಂದೊಮ್ಮೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ರಾಮಾನುಜ ಅಯ್ಯಂಗಾರಿ ಗುಂಪು ಮುಸ್ತಫಾನನ್ನು ವೇದಿಕೆಗೆ ಹತ್ತಿಸುತ್ತದೆ ಮುಸ್ತಫಾ ತನಗೆ ಗೊತ್ತಿರುವ ಜಾದು ವಿದ್ಯೆ ಪ್ರದರ್ಶಿಸಿ ಎಲ್ಲರೂ ಮೆಚ್ಚಿಗೆ ಪಡೆಯುತ್ತಾನೆ ಜಾದು ಮಾಡಲು ಹೋಗಿ ರಾಮಾನುಜ ಅಯ್ಯಂಗಾರ್ನ ಜೇಬಿನಲ್ಲಿ ಮೊಟ್ಟೆ ಒಡೆದು ಅವನ ಜಾತಿ ಕೆಡಿಸಿದ ಅಪಖ್ಯಾತಿಗೆ ಗುರಿಯಾಗುತ್ತಾನೆ.
         ಅಯ್ಯಂಗಾರಿಯ ಅಕ್ಕ ಮುಸಲ್ಮಾನ ರಫೀಕನ ಜೊತೆ ಓಡಿ ಹೋಗಿದ್ದು ಅವನಿಗೆ ಆ ಜನಾಂಗದ ಮೇಲೆ ಅಸಹನೆ ಮೂಡಿಸಿರುತ್ತದೆ, ಅದೇ ಸಂಶಯ ದೃಷ್ಟಿಯಿಂದ ಅವನು ಮುಸ್ತಫನನ್ನು ನೋಡುತ್ತಿರುತ್ತಾನೆ.
         ಹೀಗೆ ಸಾಗುವ ಕಥೆಯ ಕೊನೆಯ ಭಾಗದಲ್ಲಿ ಕಾಲೇಜಿನ ಯುವಕರಿಗೂ ಊರ ಮುಸಲ್ಮಾನ ಕೇರಿಯ ಹುಡುಗರಿಗೂ ನಡೆಯುವ ಕ್ರಿಕೆಟ್ ಆಟ ರೋಚಕ ಹಂತ ತಲುಪುತ್ತದೆ, ಕ್ಲೈಮಾಕ್ಸ್ ನಲ್ಲಿ ಇದು ರಾಮಾನುಜ ಅಯ್ಯಂಗಾರ ಹಾಗೂ ಮುಸ್ತಫಾನ ನಡುವಿನ ಜಿದ್ದಾಜಿದ್ದಿಯಾಗಿ ಮೂಡುತ್ತದೆ, ತನ್ನ ತಂಡದ ನಾಯಕನಾಗಿ ರಾಮಾನುಜಾ ಅಯ್ಯಂಗಾರಿ  ಮುಸ್ತಫಾನನ್ನು ತಂಡದ ನಾಯಕನನ್ನಾಗಿಸಿ  ತಂಡವನ್ನುಸೋಲಿಸಿ ಮುಸ್ತಫಾ ನನ್ನು ತನ್ನ ಶರತ್ತಿನಂತೆ ಕಾಲೇಜು ಬಿಡಿಸುವ ಯೋಚನೆ ಮಾಡಿರುತ್ತಾನೆ. ಕ್ಷಣ ಕ್ಷಣಕ್ಕೂ ರೋಚಕತೆ ಪಡೆಯುವ ಮ್ಯಾಚ್ ಒಳಿತು/ಕೆಡುಕುಗಳ ಪ್ರೀತಿ /ದ್ವೇಷಗಳ ನಡುವಿನ ಮುಖಾಮುಖಿಯಂತೆ ಭಾಸವಾಗುತ್ತದೆ.
      ರಾಮಾನುಜ ಅಯ್ಯಂಗಾರಿ ಹಾಗೂ ಮುಸ್ತಫಾರ ನಡುವೆ ದ್ವೇಷ ಕಳೆದು  ಸ್ನೇಹ ಏರ್ಪಟ್ಟಿತೇ?  ಎಂಬುದು ಕುತೂಹಲಕಾರಿ ಅಂಶ.
     ಇಡೀ ಚಿತ್ರ ವಿದ್ಯಾರ್ಥಿ ಜೀವನದ ಸುತ್ತುತ್ತಾ ಹಲವಾರು ಹಾಸ್ಯ ಸನ್ನಿವೇಶಗಳಿಂದ ತರಲೆಗಳಿಂದ ಮನಸ್ಸಿಗೆ ಹಿಡಿಸುತ್ತವೆ. ಹದಿಹರೆಯದ ಮಕ್ಕಳಲ್ಲಿ ಉಂಟಾಗುವ ಪ್ರೇಮ ಭಾವಗಳು, ಪ್ರೇಮ ಪ್ರಸಂಗಗಳು ಚೆನ್ನಾಗಿ ಚಿತ್ರಿತವಾಗಿದೆ, ಲವಲವಿಕೆಯಿಂದ ಕೂಡಿದ ಕಾಲೇಜಿನ ವಾತಾವರಣ ಹುಡುಗರ ಅಭಿನಯ ಎಲ್ಲವೂ ಬಹಳ ಸಹಜವಾಗಿ  ಮೂಡಿದ್ದು ಇವು ನಮ್ಮದೇ ಏನೋ ಅನುಭವಗಳು  ಎಂದು ಅನಿಸಿಬಿಡುತ್ತದೆ. ಕನ್ನಡ, ಇಂಗ್ಲಿಷ್,  ಚರಿತ್ರೆ ಉಪನ್ಯಾಸಕರು ಹಾಗೂ ಪಿ ಟಿ ಮಾಸ್ಟರ್ ಉತ್ತಮ ಅಭಿನಯ ನೀಡಿದ್ದಾರೆ.
       ಬಿಗಿಯಾದ ನಿರೂಪಣೆ ಚುರುಕಾದ ಸಂಭಾಷಣೆ ಮೂಡುಗೆರೆಯ ಸುತ್ತಲಿನ ಸುಂದರ ಪರಿಸರ ಕಾಲೇಜು ಆಗಿನ ಕಾಲದ ವೇಷಭೂಷಣ ಎಲ್ಲವೂ ಚಿತ್ರಕ್ಕೆ ಪೂರಕವಾಗಿದ್ದು ಮುದ ನೀಡುತ್ತದೆ ಚಿತ್ರದ  ಛಾಯಾಗ್ರಹಣವು ಸೊಗಸಾಗಿದೆ.
        ಬಹಳ ಸೂಕ್ಷ್ಮ ವಿಷಯಗಳನ್ನು ಹೊಂದಿದ್ದರೂ ಚಿತ್ರದ ಮೂಲ ಆಶಯ ಸರ್ವ ಜನಾಂಗದ ಶಾಂತಿಯ ತೋಟ ಇದು ಎಂಬುದಕ್ಕೆ ಪೂರಕವಾಗಿದೆ, ಪ್ರೀತಿ ಸೌಹಾರ್ದತೆ ಯಿಂದ ಬಾಳಬೇಕೆಂಬ ಸಂದೇಶವು ವಾಚ್ಯವಾಗದೆ ಚಿತ್ರದ ಭಾಗವಾಗಿ ಮೂಡಿರುವುದು ಸಿನಿಮಾದ ಧನಾತ್ಮಕ ಅಂಶವಾಗಿದೆ.


        ಮಹಾನ್ ಲೇಖಕನ (ತೇಜಸ್ವಿ ) ಆಶಯಕ್ಕೆ ಧಕ್ಕೆ ಬರದಂತೆ ಚ್ಯುತಿ ಬಾರದಂತೆ ಚಿತ್ರ ರೂಪಗೊಂಡಿರುವುದು ಹೆಗ್ಗಳಿಕೆಯೇ ಸರಿ ತೇಜಸ್ವಿಯವರ ಸಾಹಿತ್ಯ ಓದದವರು ಈ ಸಿನಿಮಾ ನೋಡಿದ ನಂತರ ಅವರನ್ನು ಓದಲು ಪ್ರೇರೇಪಿತರಾಗಬಹುದು.
    ಮೈಸೂರು ರಾಜನ ನಾಟಕದ ದೃಶ್ಯದಲ್ಲಿ ಡಾ.ರಾಜ್ ರನ್ನ ಬಳಸಿರುವುದು ಸುಂದರವಾಗಿ ಮೂಡಿ ಬಂದಿದೆ ಚಿತ್ರದ ಕಥೆಯನ್ನು ಹೇಳಲು ಬಳಸಿರುವ ಅನಿಮೇಶನ್ ಬಿ ಎಫ್ ಎಕ್ಸ್ ದೃಶ್ಯಗಳು ಚೆನ್ನಾಗಿವೆ
.
      ರಾಮಾನುಜ ಅಯ್ಯಂಗಾರಿ( ಆದಿತ್ಯ ಆಶ್ರೀ ), ಮುಸ್ತಫಾ (ಶಿಶಿ ರ್ ಬೈಕಾಡಿ )ಅವರಿಗೆ ಅಭಿನಯಕ್ಕಾಗಿ ಪೂರ್ಣಾಂಕಗಳು ದೊರೆಯುತ್ತವೆ, ಕಾಲೇಜಿನ ಪ್ರಿನ್ಸಿಪಲಾ ರಾಗಿ ಮಂಡ್ಯ ರಮೇಶ್ ಉಪನ್ಯಾಸಕರಾಗಿ, ಉಮೇಶ್ ಇತರರ ಅಭಿನಯ ಚೆನ್ನಾಗಿದೆ. ರಮಾ ಮಣಿ ಪಾತ್ರದಲ್ಲಿ ( ಪ್ರೇರಣ ಗೌಡ )ಮನಸ್ಸಲ್ಲಿ ಇರ್ತಾರೆ ಚಿತ್ರದ ಹಿನ್ನೆಲೆ ಸಂಗೀತ ಉತ್ತಮವಾಗಿದ್ದು ಹಾಡುಗಳು ಗುನು ಗುಟ್ಟುವಂತಿವೆ
    ಅಂದಿನ ಕಾಲಘಟ್ಟದ ಕಥೆಯನ್ನು ಇಂದಿಗೂ ಅಗತ್ಯವೆನಿಸುವಂತೆ ಚಿತ್ರಿಸಿರುವುದು ಸಿನಿಮಾವನ್ನು ಮೆಚ್ಚಲು ಮುಖ್ಯ ಕಾರಣ ಎರಡುವರೆ ಗಂಟೆ ಸಾಗುವ ಚಿತ್ರ ಎಲ್ಲೂ ಬೋರ್  ಹೊಡೆಸುವುದಿಲ್ಲ.


        ದ್ವೇಷ ಭಾವವನ್ನು ಬಿತ್ತುವ ಕೆರಳಿಸುವ ವಿವಾದಾತ್ಮಕ ಚಿತ್ರಗಳ ನಡುವೆ ಡೇರ್ ಡಿವಿಲ್ ಮುಸ್ತಫಾ ತಂಗಾಳಿಯಂತೆ ಬೀಸುತ್ತದೆ, ಮನಸ್ಸಿಗೆ ಮುದ ನೀಡುತ್ತದೆ, ಸಂತೋಷದ ಕಚಗುಳಿ ಇಡುತ್ತದೆ , ಭಾಷಣಗಳ ಅಬ್ಬರವಿಲ್ಲದೆ ಸೂಕ್ಷ್ಮ ಸಂದೇಶಗಳನ್ನು ಹೊತ್ತು ಮನಸ್ಸನ್ನು ಆವರಿಸುವ ಚಿತ್ರ ಇದಾಗಿದೆ.

ತಾರಾಗಣ -ಆದಿತ್ಯ ಆಶ್ರೀ ,ಶಿಶಿರ್ ಬೈಕಾಡಿ, ಅಭಯ್ ,ಸುಪ್ರೀತ್ ,ಭರದ್ವಾಜ್ ,ಆಶಿಕ್ ,ಶ್ರೀವತ್ಸ ಪ್ರಸನ್ನ ,ಉಮೇಶ್ ,ಮಂಡ್ಯ ರಮೇಶ್ ಮೈಸೂರು ಆನಂದ್ ,ಪೂರ್ಣಚಂದ್ರ ,ಪ್ರೇರಣಗೌಡ
ಛಾಯಾಗ್ರಹಣ- ರಾಹುಲ್ ರಾಯ್ ಜಾನು
ಹಿನ್ನೆಲೆ ಸಂಗೀತ -ನವನೀತ್ ಶ್ಯಾಮ್
ನಿರ್ದೇಶನ -ಶಶಾಂಕ್ ಸೋಗಲ್


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top