ಶಾರು ಗಜಲ್

ಕಾವ್ಯ ಸಂಗಾತಿ

ಶಾರು

ಗಜಲ್

ಕಣ್ಣು ಒದ್ದೆಯಾದಂತೆಲ್ಲ ಇಟ್ಟ ಹೆಜ್ಜೆ ದಿಟವಾಗಿದೆ ಕಾರಣ ಹುಡುಕ ಬೇಡ ದೊರೆ
ಹರಿವ ಗಂಗೆಗೆ ಹರಿದಂತೆ ಸಾಗರ ಸಮೀಪವಾಗಿದೆ ಕಾರಣ ಹುಡುಕ ಬೇಡ ದೊರೆ

ಹೊಸ ಮಳೆಗೆ ಇಳೆಯ ಒಡಲು ಬಂಗಾರದ ಬೆಳೆಯ ಉಸಿರ ಬಯಸುತಿದೆ
ಮನದ ಅಲಿಕಲ್ಲು ಕರಗಿ ನೀರು ನಿರೂಪವಾಗಿದೆ ಕಾರಣ ಹುಡುಕ ಬೇಡ ದೊರೆ

ದುಂಬಿ ಹೀರಿದೆಲ್ಲ ಮಕರಂದ ಬರಿದಾದರು ಹೂವ ಚೆಲವು ಸಂಭ್ರಮಿಸುತಿದೆ
ಕಾರಿದಿರುಳಲು ನಕ್ಷತ್ರಗಳು ದಾರಿ ದೀಪವಾಗಿದೆ ಕಾರಣ ಹುಡುಕ ಬೇಡ ದೊರೆ

ಒಡಲ ಹಸಿವು ತೀರಿದಂತೆ ಮಡಿಲ ಕೂಸಿನ ನಗುವು ಮನೆ ಪಡಸಾಲೆ ತುಂಬುತಿದೆ
ಮನದ ಹೂಬನದಲ್ಲಿ ಒಲವು ನಂದನವಾಗಿದೆ ಕಾರಣ ಹುಡುಕ ಬೇಡ ದೊರೆ

ಭೇದ ತೋರದ ಶಾರು ಪ್ರೀತಿ ಸ್ನೇಹ ಸರಳವಾಗಿ ಸಹಜತೆಯಲಿ ಮೆರೆಯುತಿದೆ
ಕಾಪಿಟ್ಟ ಮೊದಲ ಪ್ರೀತಿ ಹಮೇಶ ನೂತನವಾಗಿದೆ ಕಾರಣ ಹುಡುಕಬೇಡ ದೊರೆ


Leave a Reply

Back To Top