ಗಜಲ್ ಲೋಕ

ರತ್ನರಾಯಮಲ್ಲ

ವತ್ಸಲಾ ಶ್ರೀಶ ರವರ ಗಜಲ್ ಗಳಲ್ಲಿ

ಪ್ರೀತಿಯ ಅನುಭೂತಿ


      ‘ಗಜಲ್’ ಜನ್ನತ್ ಮುದುಡಿದ ಮನಸುಗಳಿಗೂ, ಬಳಲಿದ ಹೃದಯಗಳಿಗೂ ಮುದ ನೀಡುತ್ತದೆ..! ಅದರ ಅನುಭವ ನಿಮಗೂ ಆಗಿದೆ ಅಂದುಕೊಳ್ಳುವೆ, ಅಲ್ಲವೇ..? ನಮ್ಮ ಮಧ್ಯೆಯಿರುವ ಒಬ್ಬ ವಿಶಿಷ್ಟ ಸುಖನವರ್ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ಇಂದು ತಮ್ಮ ಮುಂದೆ ಬಂದಿರುವೆ. ಸಮಯವನ್ನು ಕೊಲ್ಲದೆ ನೇರವಾಗಿ ವಿಷಯಕ್ಕೆ ಬರುವೆ. ಮತ್ತೇಕೆ ತಡ, ಯಥಾರೀತಿ ಷೇರ್ ನ ದೇಹಲೀಜ್ ದಾಟುತ್ತ ಆರಂಭಿಸೋಣವೆ…!

“ಇದ್ದುದನ್ನು ಇದ್ದಹಾಗೆ ಹೇಳಬೇಕೆಂದು ನಾನು ಒಪ್ಪುತ್ತೇನೆ
ನನ್ನಲ್ಲಿ ಸದ್ಗುಣಗಳಿವೆ ಎಂದು ಹೇಳಿಕೊಳ್ಳಲು ನಾ ಬಯಸುವುದಿಲ್ಲ”
-ಮಿರ್ಜಾ ಗಾಲಿಬ್

           ಶಾಂತತೆಯು ಶಕ್ತಿಯ ತೊಟ್ಟಿಲು. ಇದು ಸಾಧ್ಯವಾಗಬೇಕಾದರೆ ಎಲ್ಲಾ ಅನಾರೋಗ್ಯದ ಮೂಲವಾದ ಒತ್ತಡವನ್ನು ಜಯಿಸಬೇಕು. ಬದುಕು ನಮ್ಮದು, ಬದುಕುವ ದಾರಿಯೂ ನಮ್ಮದಾಗಿರಬೇಕು. ಇತರರನ್ನು ಮೆಚ್ಚಿಸಲು ಬದುಕುತ್ತಿರುವಾಗಲೇ ಒತ್ತಡ, ಆತಂಕ ಮತ್ತು ಖಿನ್ನತೆ ಉಂಟಾಗುತ್ತವೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಒತ್ತಡವು ಹೆಚ್ಚಾಗಿ ಸ್ವಯಂ ಪ್ರೇರಿತವಾಗಿದೆ. ಒತ್ತಡವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸುವ ಸಾಮರ್ಥ್ಯವು ತನ್ನನ್ನು ತಾನೇ ನಿರ್ವಹಿಸುವುದರಿಂದ ಬರುತ್ತದೆ, ಬರಬೇಕು ಕೂಡ. ‘ಒತ್ತಡ ರಹಿತ ಜೀವನ’ ಎಂಬುದೇ ಇಲ್ಲ. ಒತ್ತಡ ಮುಕ್ತ ಜೀವನವನ್ನು ಎಂದಿಗೂ ಸಾಧಿಸಬಹುದು ಎಂದು ಸೂಚಿಸುವ ಯಾವುದೇ ಪುರಾವೆಗಳೂ ಇಲ್ಲ. ಒತ್ತಡವನ್ನು ನಿರ್ವಹಿಸಬಹುದು, ನಿವಾರಿಸಬಹುದು ಮತ್ತು ಕಡಿಮೆ ಮಾಡಬಹುದು; ಆದರೆ ಅದನ್ನು ಎಂದಿಗೂ ತೊಡೆದುಹಾಕಲು ಸಾಧ್ಯವಿಲ್ಲ. ಏಕೆಂದರೆ ಜನರು ಅನುಭವಿಸುವ ಹೆಚ್ಚಿನ ಒತ್ತಡವು ಹೆಚ್ಚಿನದನ್ನು ಮಾಡುವುದರಿಂದ ಬರುವುದಿಲ್ಲ. ಅವರು ಪ್ರಾರಂಭಿಸಿದ್ದನ್ನು ಮುಗಿಸದೆ ಇರುವುದರಿಂದ ಬರುತ್ತದೆ. ಹಾಗೆ ನೋಡಿದರೆ ಒತ್ತಡವು ಶಕ್ತಿಯುತವಾದ ಚಾಲನಾ ಶಕ್ತಿ. ಅದೊಂದು ಅಡಚಣೆಯಲ್ಲ, ಅಡಚಣೆಯಾಗಬಾರದು. ಒತ್ತಡವು ಜೀವನದ ಒಂದು ಭಾಗವಾಗಿದೆ, ಮತ್ತು ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ಹಂತದಲ್ಲಿ ವ್ಯವಹರಿಸಬೇಕಾದ ವಿಷಯ. ಜೀವನದಲ್ಲಿ ಒತ್ತಡ ಇದ್ಧೇ ಇರುತ್ತದೆ. ಆದರೆ ಅದು ನಮ್ಮ ಮೇಲೆ ಪರಿಣಾಮ ಬೀರಲು ಬಿಡುತ್ತೀವೋ ಇಲ್ಲವೋ ಎಂಬುದು ನಮ್ಮ ಆಯ್ಕೆಯಾಗಿದೆ. ‘ನಿನ್ನೆ’ ಎನ್ನುವುದು ಮುಗಿದು ಹೋಗಿದೆ, ‘ನಾಳೆ’ ಎನ್ನುವುದು ಇನ್ನೂ ಬಂದಿಲ್ಲ, ಕಾಲಗರ್ಭದಲ್ಲಿದೆ. ಕಣ್ಣಮುಂದೆ ಇರುವುದು ‘ಇಂದು’ ಮಾತ್ರ. ಇದನ್ನು ಅರಿತು ನಡೆಯಬೇಕಿದೆ. ನಾವು ಏನು ಬೇಕಾದರೂ ಮಾಡಬಹುದು ಆದರೆ ಎಲ್ಲವನ್ನೂ ಅಲ್ಲ ಎಂಬುದನ್ನು ಅರಿಯಬೇಕಿದೆ. ನಮಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತಲ್ಲ ಎಂದರೆ, ಆವಾಗಲೇ ನಮಗೆ ವಿಶ್ರಾಂತಿಯ ಹೆಚ್ಚು ಅವಶ್ಯಕತೆ ಇರೋದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕಿದೆ. ಒಳ್ಳೆಯ ಜೀವನವನ್ನು ನಡೆಸಬೇಕು. ಚಿಂತೆ ಮಾಡಲೇಬಾರದು ಎಂದರೆ ವಾಸ್ತವದಿಂದ ದೂರ ಹೋದಂತಾಗುತ್ತದೆ. ಅಂತೆಯ ಕಡಿಮೆ ಚಿಂತೆ ಮಾಡುತ್ತಾ ಹೆಚ್ಚು ನೋಡುತ್ತಿರಬೇಕು. ಜೀವನದಲ್ಲಿ ಕಡಿಮೆ ತೀರ್ಪು ನೀಡುತ್ತ ಹೆಚ್ಚೆಚ್ಚು ಸಹಾನುಭೂತಿ ಉಳ್ಳವರಾಗಬೇಕು. ದ್ವೇಷದಿಂದ ಮುಕ್ತವಾಗಿರಲು ಕಷ್ಟಸಾಧ್ಯ. ಒಂಚೂರು ದ್ವೇಷ, ಅದನ್ನು ಮರೆಯಿಸುವಷ್ಟು ಪ್ರೀತಿ ಬಾಳಲ್ಲಿ ಅಳವಡಿಸಿಕೊಳ್ಳುತ್ತ ಸಾಗಬೇಕು. ಇದುವೇ ಜೀವನ. ಇದು ಸಾಧ್ಯವಾಗಬೇಕಾದರೆ ನಮಗೆ ಸಾಹಿತ್ಯವೇ ದಾರಿದೀಪ. ಮನುಷ್ಯ ಹೆಚ್ಚು ಹೆಚ್ಚು ಸಾಹಿತ್ಯದಲ್ಲಿ ಸಕ್ರೀಯವಾದಂತೆ ಅಂದರೆ ಕೇವಲ ಬರೆಯುತ್ತ ಹೋದಂತೆ ಎಂದಲ್ಲ, ಓದುತ್ತಾ ಹೋದಂತೆ ತನ್ನನ್ನು ತಾನು ಅರಿಯಲು ಸಾಧ್ಯವಾಗುತ್ತದೆ, ನೆಮ್ಮದಿಯ ಗೂಡನ್ನು ಕಟ್ಟಲು ಸಾಧ್ಯವಾಗುತ್ತದೆ. ಇಂಥಹ ಸಾಹಿತ್ಯದ ಮುಕುಟ ಮಣಿಯಾದ ಗಜಲ್ ಇಂದು ಧರ್ಮಾತೀತವಾಗಿ ಮನಸುಗಳನ್ನು ಬೆಸೆಯುವ ಕನಸುಗಳನ್ನು ಹಂಚುವ ಕೆಲಸ ಮಾಡುತ್ತ, ಅಸಂಖ್ಯಾತ ಬರಹಗಾರರ ಹಾಟ್ ಫೇವರಿಟ್ ಕಾವ್ಯ ಪ್ರಕಾರವಾಗಿದೆ. ಇಂದು ಕನ್ನಡದಲ್ಲಿ ಅಪರಿಮಿತ ರೀತಿಯಲ್ಲಿ ಎನ್ನುವಂತೆ ಗಜಲ್ ಕಾರರು ಉದಯಿಸಿದ್ದಾರೆ, ಉದಯಿಸುತಿದ್ದಾರೆ. ಅವರುಗಳಲ್ಲಿ ಶ್ರೀಮತಿ ವತ್ಸಲಾ ಶ್ರೀಶ ರವರೂ ಒಬ್ಬರು.

         ಶ್ರೀಮತಿ ವತ್ಸಲಾ ಶ್ರೀಶ ರವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆಲಾಜೆ ಗ್ರಾಮದಲ್ಲಿ ಶ್ರೀಮತಿ ರತ್ನ ಹಾಗೂ ಶ್ರೀ ಎ. ನಾರಾಯಣ ರಾವ್ ದಂಪತಿಗಳ ಸುಪುತ್ರಿಯಾಗಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಕೇರಳದ ಗಡಿಭಾಗವಾದ ತಲಪಾಡಿಯ ಮರಿಯಾಶ್ರಮ ಶಾಲೆಯಲ್ಲಿ ಪಡೆದುಕೊಂಡರು. ನಂತರ ಪ್ರೌಢಶಾಲಾ ಶಿಕ್ಷಣವನ್ನು ಸುಳ್ಯ ತಾಲೂಕಿನ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಪಡೆದುಕೊಂಡು ಪದವಿಪೂರ್ವ ಶಿಕ್ಷಣವನ್ನು ಬೆಳ್ಳಾರೆಯಲ್ಲಿ ಮುಗಿಸಿದರು. ವಿರಾಜಪೇಟೆಯ ‘ಸರ್ವೋದಯ ಶಿಕ್ಷಕರ ಶಿಕ್ಷಣ ವಿದ್ಯಾಲಯ’ದಲ್ಲಿ ತರಬೇತಿಯನ್ನು ಪಡೆದು ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ಶಿಕ್ಷಕಿಯಾಗಿ‌ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಸರಕಾರಿ ಸೇವೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸಣ್ಣ ಕತೆ, ನ್ಯಾನೋ ಕತೆಗಳು, ಕವನ, ಶಿಶುಗೀತೆ, ಲೇಖನ, ಷಟ್ಪದಿಯಂಥಹ ಇತರ ಛಂದೋಬದ್ಧ ರಚನೆಗಳು, ಚುಟುಕು, ವಿಮರ್ಶೆ, ಹೈಕು, ಗಜಲ್….. ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. ‘ಭ್ರಾಜಿತ’ ಎನ್ನುವ ಕವನ ಸಂಕಲನ ಹಾಗೂ ‘ತಪಸ್ಯಾ ಗಜಲ್ ಗಳು’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ವಾಙ್ಮಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ ಈ ಗಜಲ್ ಸಂಕಲನವು ಕೊಡಗಿನ‌ ಮೊದಲ‌ ಗಜಲ್ ಸಂಕಲನವೆಂಬುದು!!

        ಸದಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಇವರು ಜಿಲ್ಲಾ, ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿ, ಸಂಘಟನಾ ಚಾತುರ್ಯವನ್ನೂ ದಾಖಲಿಸಿದ್ದಾರೆ. ೨೦೨೩ ರ ‘ಬನವಾಸಿಯ ಕದಂಬೋತ್ಸವ’ ಸೇರಿದಂತೆ ಅನೇಕ ಜಿಲ್ಲಾ ಕವಿಗೋಷ್ಟಿಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ. ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಇವರ ಹಲವು ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿವೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವುಗಳಲ್ಲಿ ಕೊಡಗಿನ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ಸಂಸ್ಥೆಯು ಇವರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಗೌರವಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

     ಪ್ರೇಮ ಎನ್ನುವುದು ತೋಟದಲ್ಲಿ ಬೆಳೆಯುವ ಫಸಲು ಅಲ್ಲ, ಸಂತೆಯಲ್ಲಿಟ್ಟು ಮಾರುವ ಸರಕೂ ಅಲ್ಲ. ಇದೊಂದು ಹೃದಯದಲ್ಲಿ ಅರಳುವ ಪಾರಿಜಾತ. ಇದು ಪ್ರೀತಿಸುವವರ ಸ್ವತ್ತು. ಅಂತೆಯೇ ಪ್ರೀತಿಯಿಲ್ಲದೆ ಬದುಕಲೂ ಸಾಧ್ಯವಿಲ್ಲ, ಬದುಕಿದರೂ ಅದು ಬದುಕಾಗಿರಲು ಸಾಧ್ಯವಿಲ್ಲ. ಇಂಥಹ ಪ್ರೀತಿಯ ಮೇರು ಪರ್ವತವನ್ನು ತನ್ನ ಅಶಅರ್ ನಲ್ಲಿ ಕಾಪಿಟ್ಟುಕೊಂಡು ಬರುತ್ತಿರುವ ಗಜಲ್ ಇನ್ನಿತರ ಕಾವ್ಯ ಪ್ರಕಾರಗಳಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತದೆ. ಇದು ಪ್ರೀತಿಯಿಂದ, ಪ್ರೀತಿಗಾಗಿ, ಪ್ರೀತಿಗೋಸ್ಕರವೇ ಉಸಿರಾಡುತ್ತಿದೆ. ಇಲ್ಲಿ ಪ್ರೀತಿಯ ಆಲಿಂಗನವೇ ಬದುಕಿನ ರಹದಾರಿಯಾಗಿದೆ. ಈ ನೆಲೆಯಲ್ಲಿ ಗಜಲ್ ಗೋ ಶ್ರೀಮತಿ ವತ್ಸಲಾ ಶ್ರೀಶ ರವರ ‘ತಪಸ್ಯಾ ಗಜಲ್ ಗಳು’ ಸಂಕಲನವನ್ನು ತಿರುವಿ ಹಾಕಿದರೆ
ಪ್ರೇಮವೇ ಇವರ ಗಜಲ್ ಗಳ ಸ್ಥಾಯಿ ಭಾವ ಎಂಬುದು ವೇದ್ಯವಾಗುತ್ತದೆ. ಇಲ್ಲಿ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಕನವರಿಕೆ, ನಿರಂತರ ನಿರೀಕ್ಷೆ, ಕನಸುಗಳಿಗೆ ರೆಕ್ಕೆ ಕಟ್ಟುವ ಕಾತುರ, ಬದುಕಿನ ಯಾತನೆ, ಹತಾಶೆ, ಅಸಹಾಯಕತೆ, ನೋವಿನ ಕಡಲು, ಮಾನವೀಯ ಮೌಲ್ಯಗಳ ಹುಡುಕಾಟ, ಸ್ತ್ರೀ ಸಂವೇದನೆ… ಹೆಪ್ಪುಗಟ್ಟಿವೆ.

“ರಾಶಿ ಪದಗಳ ಬೀದಿಯಲ್ಲಿ ಕವಿತೆ ಕಾಣಲಿಲ್ಲ
ಹಲವು ಬಣ್ಣದ ರಾಜ್ಯದಲ್ಲಿ ಚಿತ್ರ ಮೂಡಲಿಲ್ಲ”

ಈ ಮೇಲಿನ ಷೇರ್ ಅನ್ನು ಗಮನಿಸಿದಾಗ ‘ಕವಿತೆ ಕಾಣಲಿಲ್ಲ’, ‘ಚಿತ್ರ ಮೂಡಲಿಲ್ಲ’ ಎನ್ನುವ ಪದಪುಂಜಗಳು ಸಮಾಜದ ಅಸಹಾಯಕತೆಯನ್ನು, ಎಡಬಿಡಂಗಿತನವನ್ನು ನಿರ್ಭಯವಾಗಿ, ನಿರ್ದಯಿಯಾಗಿ ದಾಖಲಿಸುತ್ತವೆ. ಕವಿತೆಯನ್ನು ಕಟ್ಟಬೇಕಾದ ಪದಗಳು ರಾಶಿ ರಾಶಿಯಾಗಿದ್ದರೂ ಕವಿತೆಯಾಗಿಸುವಲ್ಲಿ ಸೋತು ಕೇವಲ ಪ್ರತಿಷ್ಠೆಯ ಕಣಗಳಾಗುತ್ತಿರುವುದು ದುರಂತ. ಬಣ್ಣಗಳು ಚಿತ್ರ ಬಿಡಿಸಿದಾಗ ಮನಕೆ ಮುದ ನೀಡುತ್ತದೆ. ಆದರೆ ಬಣ್ಣಗಳು ಬೇಡವಾದ ಸಂಕೋಲೆಯಲ್ಲಿ ಬಂಧನಕ್ಕೊಳಗಾಗಿ ಸಮಾಜದ ಶಾಂತಿ ಕದಡುವಲ್ಲಿ ನಿರ್ಣಾಯಕವಾಗಿ ಬಳಕೆಯಾಗುತ್ತಿರುವುದನ್ನು ಕಂಡು ಸುಖನವರ್ ಶ್ರೀಮತಿ ವತ್ಸಲಾ ಶ್ರೀಶ ರವರು ವಿಷಾದ ವ್ಯಕ್ತಪಡಿಸಿದ್ದಾರೆ.

    ಪ್ರೀತಿಯಲ್ಲಿ ಅಮೃತವಿದೆ, ನಂಬಿಕೆಯ ಕಡಲು ಸ್ವಚ್ಚವಾಗಿರಬೇಕಷ್ಟೇ..! ನಂಬಿಕೆಯ ಕಡಲು ಕಲುಷಿತಗೊಂಡರೆ ವಿಷಾನಿಲ ನೊರೆಯಾಗಿ ನೆಮ್ಮದಿಯನ್ನು ಕಂಗೆಡಿಸುತ್ತದೆ. ಪ್ರೀತಿ ಜೊತೆಗಿದ್ದರೆ ಬೆಟ್ಟದಷ್ಟು ನೋವು ಹುಲ್ಲಿನ ಗರಿಕೆಯಂತೆ ಭಾಸವಾಗುತ್ತದೆ. ಇಲ್ಲದಿರಲೂ… ಬರಿ ಕಂಬನಿಯ ಸಡಗರವೇ ಮುಳುಗಿಸುತ್ತದೆ. ಇಲ್ಲಿ ಶಾಯರ್ ಶ್ರೀಮತಿ ವತ್ಸಲಾ ಶ್ರೀಶ ರವರು ಅಳು ಮತ್ತು ಮಾತು ಪ್ರೇಮಿಯ ಅಂಗಳದಲ್ಲಿ ಯಾವ ರೂಪ ಪಡೆಯಬಹುದು ಎಂಬುದನ್ನು ಪ್ರಚುರಪಡಿಸುತ್ತ, ಉಳಿದುದನ್ನು ಪ್ರೇಮಿಗಳ ವಿವೇಚನೆಗೆ ಬಿಟ್ಟಿದ್ದಾರೆ. ಪ್ರೀತಿಯ ಆಸರೆ, ಪ್ರೇಮಿಯ ಸಾಕ್ಷಾತ್ಕಾರ ಬಲು ಮೌಲ್ಯಿಕವಾದುದು. ಅದು ಎಲ್ಲರ ನಸೀಬ್ ನಲ್ಲಿ ಇರಲಾರದು. ಇರುವವರೆ ಪ್ರೀತಿಯ ವಾರಸುದಾರರು ಎಂಬುದನ್ನು ಈ ಕೆಳಗಿನ ಷೇರ್ ಆಲಾಪಿಸುತ್ತಿದೆ.

“ಇಂದೇಕೋ ಅತ್ತು ಬಿಡಬೇಕೆನಿಸುತ್ತಿದೆ ನಿನ್ನೆದೆಯ ಆಸರೆ ನೀಡುವಿಯಾದರೆ
ಅದೆಷ್ಟೋ ಮಾತುಗಳನಾಡಬೇಕೆಸುತ್ತಿದೆ ನೀನೆದುರು ಕುಳಿತಿರುವೆಯಾದರೆ”

     ನೋವು ಯಾವಾಗಲೂ ಭಾವನೆ ಮತ್ತು ಅರ್ಥದಿಂದ ಕೂಡಿರುತ್ತದೆ ಆದ್ದರಿಂದ ಪ್ರತಿ ನೋವು ವ್ಯಕ್ತಿಗೆ ವಿಶಿಷ್ಟವಾಗಿರುತ್ತದೆ. ನೋವು ಎಂಬ ಪದವನ್ನು ಸಂಯೋಜಿತ ಸಂವೇದನಾ-ಭಾವನಾತ್ಮಕ ಘಟನೆಗಳ ವರ್ಗವನ್ನು ಒಟ್ಟುಗೂಡಿಸಲು ಬಳಸಲಾಗುತ್ತದೆ. ನೋವನ್ನೂ ನೋಯಿಸದಂತೆ ಪ್ರೀತಿಸುವ ಕಲೆ ಗಜಲ್ ಗೆ ಕರಗತವಾಗಿದೆ. ಈ ದಿಸೆಯಲ್ಲಿ ಗಜಲ್ ಗೋ ಶ್ರೀಮತಿ ವತ್ಸಲಾ ಶ್ರೀಶ ಅವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಕೃಷಿ ಆಗಲಿ, ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

“ಒಮ್ಮೆ ಬಿಸಿಲಿನ ಹಾಗೆ ಮಗದೊಮ್ಮೆ ನೆರಳಿನ ಹಾಗೆ
ಕಾಣುವುದು ನನ್ನೂರು ನನಗೆ ಹಲವಾರು ಬಗೆ”
-ಕೈಫಿ ಆಜ್ಮಿ

ಅದೇನೋ ಗೊತ್ತಿಲ್ಲ, ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ಗಜಲ್ ನ ಪರಂಪರೆ ಬಗ್ಗೆ ಮಾತಾಡುತಿದ್ದರೆ, ಬರೆಯುತಿದ್ದರೆ ಗಡಿಯಾರಕ್ಕೆ ಮುಳ್ಳಿಗಳಿವೆ ಎಂಬುದನ್ನೇ ಮರೆಯುತ್ತೇನೆ. ಮರೆತರೂ, ಆ ಮುಳ್ಳುಗಳು ಮಾತ್ರ ಚುಚ್ಚಿ ಚುಚ್ಚಿ ತನ್ನ ಇರುವಿಕೆಯನ್ನು ನೆನಪಿಸುತ್ತ ಸಮಯದ ಮಹತ್ವವನ್ನು ಸಾರುತ್ತಲೇ ಇದೆ, ಇರುತ್ತದೆ.  ಹಾಗಾಗಿ ಈ ಲೇಖನಿಗೆ, ಲೇಖನಕ್ಕೆ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಸಿ-ಯುವ್, ಟೇಕೇರ್…!!

ಧನ್ಯವಾದಗಳು..

——————————————

ಡಾ. ಮಲ್ಲಿನಾಥ ಎಸ್. ತಳವಾರ, 

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top