ಕಾವ್ಯ ಸಂಗಾತಿ
ಸುಧಾ ಹಡಿನಬಾಳ
ಚರಿತ್ರೆಯ ಕೆದಕುವುದೇಕೆ?
ಹುಟ್ಟು ಮೊದಲೋ?
ಧರ್ಮ ಮೊದಲೋ ?
ಒಂದರೊಡನೊಂದು
ನಂಟು ಬೆಸೆದಿದೆ
ಕರುಳು ಬಳ್ಳಿಯ
ಕೊಂಡಿಯಂತೆ ಆದರೂ
ಭೂಮಿಗೆ ಬಂದೊಡನೆಯೇ
ಕತ್ತರಿಸಿ ಬಿಸಾಕಿ
ಸ್ವತಂತ್ರವಾಗಿ ಬದುಕುತ್ತೇವೆ
ಹೆತ್ತ ತಾಯಿಯ ಮಡಿಲಿನಲಿ
ಧರ್ಮವೆಂದರೆ ಆಚಾರ
ಸುವಿಚಾರ ಸಂಸ್ಕಾರ
ಕಲಿಸುವ ಹೆತ್ತ ತಾಯಂತೆ
ಧರ್ಮ ಸಂಸ್ಥಾಪಕರೆಲ್ಲರೂ
ಮಮತೆ ವಾತ್ಸಲ್ಯ ತುಂಬಿದ
ತಾಯಿ ಹೃದಯದ ಕರುಣೆಯ
ಪ್ರತಿರೂಪಗಳು ಆದರೆ
ಇಂದು ನಡೆಯುತ್ತಿರುವುದೇನು?
ಮಸೀದಿಯಲ್ಲಿ ಮಾರುತಿಯ
ಹುಡುಕುವವರು
ಗನ್ನಿನ ಮೊನೆಯಲಿ
ಹೆಣಗಳ ಬೀಳಿಸುವವರು
ಭಾಷಣದ ಬೇಗೆಯಲ್ಲಿ
ಬೆಂಕಿ ಹಚ್ಚುವವರು
ಇವರೆಲ್ಲರೂ ತಾಯಿ ಮಡಿಲಿಗೆ
ಕೇಡು ಬಗೆಯುವವರೆ!!
ಇತಿಹಾಸವೆಂದರೆ ಯುದ್ಧದ
ಉನ್ಮಾದದಲ್ಲಿ ರಕ್ತದ
ಕೋಡಿಯಲ್ಲಿ ಅರಳಿದ ಚರಿತೆ!
ಚರಿತ್ರೆಯ ಕೆದಕುವುದೇಕೆ?
ಸ್ಥಾವರವ ಕೆಡಹುವುದೇಕೆ?
ಸರ್ವ ಜನಾಂಗದ
ಶಾಂತಿಯ ತೋಟದಿ
ಅರಳಿವೆ ತರತರ ಜಾತಿ
ಧರ್ಮದ ಹೂವುಗಳು
ಹಿಸುಕದೆ ಹೊಸುಕದೆ
ಆಘ್ರಾಣಿಸಬೇಕಿದೆ
ಭಾವನೆಗಳ ಸುಹಾಸನೆಯ
ತೋಟದ ತುಂಬಾ
ಬಿತ್ತಬೇಕಿದೆ ವಿಶ್ವ
ಮಾನವ ಬೀಜವ
ಸುಧಾ ಹಡಿನಬಾಳ
Super,
ತುಂಬಾ ಚನ್ನಾಗಿ ಬಂದಿದೆ.