ಕಾವ್ಯ ಸಂಗಾತಿ
ಸಂತೋಷ ಉಂಡಾಡಿ
ಬೆಳಕಿನ ಬಳ್ಳಿ
ನೀನೊಂದು ದೈವಿ ಸುಗಂಧ,
ಆಘ್ರಾಣಿಸ ಹೊರಟ ಅನಾಮಿಕ ನಾನು,
ಕಡಲ ಸೆಳೆತಕೆ ಸಿಕ್ಕ ಮೀನು ನಾನು,
ನದಿ ಸೇರದೆ ಸಾಗರವ?
ಸೋತು ಹೋಗಿಹೆ ನಾನು,
ಬಯಲ ಬಿಟ್ಟು ಇಳಿಯಲೊಲ್ಲೆ,
ದುಮ್ಮಿಕ್ಕಿ ಹರಿಯಲೊಲ್ಲೆ,
ಬಯಲ ಮೋಹ,
ಒಂದೊಂದಾಗಿ ಕಳಚಿ ,
ನಿಂತಲ್ಲೆ ನಗ್ನ,
ಜಗದ ದರ್ಪಣದ ಎದುರು
ಮನ ಮೌನ,
ತುಟಿಯಂಚಲಿ ಮಂದಸ್ಮಿತ, ಹೂ ನಗು,
ಅನಂತದಲಿ ಲೀನ,
ಹರಿವ ನೀರಲಿ ಹೆಜ್ಜೆ ಗುರುತು
ಉಳಿದಾವೇನು?
ನಿನ್ನ ಅಂತರಾಳವ ಅರಿವ ಕನಸು,
ಹೃದಯದ ಮೇಲೆ ನಿನ್ನ ರುಜು ,
ಅನಾದಿ ಪಾಯದ ಮೇಲೆ,
ಅನಿಕೇತನ ಪಯಣ,
ಅನುಪಮದ ಲೀಲೆ ನೀನು,
ಅನುಗಾಲದ ಅನುಚರ ನಾನು,
ನಿನ್ನನುರಾಗದಲಿ ಅನುರಕ್ತ ನಾನು,
ಅಪ್ರತಿಮ ಅಪ್ಪುಗೆ ಬಯಸಿ,
ಅಭಿಜಾತ ಅಮೃತಕ್ಕಾಗಿ ಹೊರಟ ಯಾತ್ರಿಕನು ನಾನು
ಬೆಳಗಿನ ಹೂವಿನ ದಳದ ಮಂಜು ನೀನು,
ಆಕಾಶದ ತುಂಬೆಲ್ಲ ಹಬ್ಬಿ ನಿಂತ ಬೆಳಕಿನ ಬಳ್ಳಿ ನೀನು,
ಅನಿತ್ಯ ನಾನು, ನಿತ್ಯ ಸತ್ಯ ನೀನು.
ಸಂತೋಷ ಉಂಡಾಡಿ