ಲೇಖನ ಸಂಗಾತಿ
ಭಾರತಿ ಅಶೋಕ್
ಹೆಣ್ಣಿನ ದುರಂತ!
“ರಾಷ್ಟ್ರದ ಗಡಿಯ ಹಂಗಿಲ್ಲದೇ ಲೀಲಾಜಾಲವಾಗಿ ತಿರುಗಾಡುವ ‘ಕೊರೋನಾ’ ಮನುಷ್ಯನನ್ನು ಮನೆಯಿಂದ ಹೊರ ಬಾರದಂತೆ ಗೃಹ ಬಂಧನದಲ್ಲಿರಿಸಿ ಗೆಲುವಿನ ಕೇಕೆ ಹಾಕುತ್ತಿದೆ
ಗಂಡಸರು ಮನೆಯಿಂದ ಹೊರಗಿದ್ದರೂ, ಒಳಗಿದ್ದರೂ ವ್ಯತ್ಯಾಸವಿಲ್ಲದಂತೆ ಬದುಕುತ್ತಾರೆ. ಅಥವಾ ಅವರಲ್ಲಿಯೂ ಸಣ್ಣ ಪುಟ್ಟ ವ್ಯತ್ಯಾಸಗಳಾದರೂ ಅಂತಹ ಸಮಸ್ಯೇ ಎನ್ನಿಸುವುದಿಲ್ಲ. ಸಿಗಬೇಕಾದುದು ಸಮಯಕ್ಕೆ ಸರಿಯಾಗಿ ಸಿಗುತ್ತಲೇ ಇರುತ್ತದೆ. ಸಿಗದಿದ್ದರೆ ಅವರಿಗೆ ಪಡೆಯುವ ದಾರಿಗಳು ತಿಳಿದಿವೆ. ಅವುಗಳನ್ನು ಮುಂದೆ ವಿವರಿಸುವೆ. ಇನ್ನು ಹಿರಿಯರು, ಅವರ ಬದುಕಲ್ಲಿ ಅಷ್ಟೊಂದು ಬದಲಾವಣೆ ಇರುವುದಿಲ್ಲ ಸದಾ ಮನೆಯಲ್ಲಿ ಇರುವವರಾದರೆ ಮಕ್ಕಳ, ಮೊಮ್ಮಕ್ಕಳ ಜೊತೆ ಕಾಲ ಕಳೆಯುವುದರಿಂದ ಅವರ ಬದುಕು ಅಲ್ಪ ಸ್ಬಲ್ಪ ಬದಕಾವಣೆಯೊಂದಿಗೆ ಸಾಗುತ್ತದೆ. ಇನ್ನು ಮಕ್ಕಳು ಅವರಿಗೆ ಬೇಕಾದ ತಿಂಡಿ ತಿನಿಸು ಸಿಕ್ಕು ಟೆಲಿವಿಷನ್ ಇದ್ದರೆ ಅವರಿಗೂ ಕಾಲ ನೂಕಲು ಕಷ್ಟ ಎನಿಸದು.
ಆದರೆ ಅಡುಗೆ ಮನೆಯ ಪಾರುಪತ್ಯ ವಹಿಸಿಕೊಂಡು ಮನೆಯ ಎಲ್ಲಾ ಸದಸ್ಯರ ಹೊಟ್ಟೆ ತುಂಬಿಸುವ ಕೆಲಸ ಮನೆಯ ಗೃಹಿಣಿಯದ್ದು. ಅವಳು ಮನೆಯಲ್ಲಿರುವ ಪರಿಕರಗಳನ್ನು ಬಳಸಿಕೊಂಡು ಇರುವುದರಲ್ಲಿಯೇ ಅಚ್ವುಕಟ್ಟಾಗಿ ಅಡುಗೆ ಮಾಡಿ ಬಡಿಸುತ್ತಾಳೆ ತಿಂದುಂಡು ನೆಮ್ಮದಿಯಿಂದಿದ್ದರೆ ಎಲ್ಲವೂ ಸುಗಮವಾಗಿ ಸಾಗಿ ಅವಳು ಎಲ್ಲರಂತೆ ನೆಮ್ಮದಿಯಾಗಿ ಬದುಕು ನಡೆಸಿಕೊಂಡು ಹೊಗುತ್ತಾಳೆ.
ಆದರೆ, ಕೊರೋನಾ ಭೀತಿಯಿಂದ ಹೊರಗಡೆ ಹೋಗದ ಪರಿಸ್ಥಿತಿ, ಹಲವರ ಬದುಕನ್ನು ಹಲವು ಮಗ್ಗಲುಗಳಿಂದ ನರಕ ಸದೃಶಗೊಳಿಸಿದೆ.ಕೆಲವು ಮನೆಗಳಲ್ಲಿ ಗಂಡಸರು ಹೆಂಗಸರಿಗೆ ತಮಗೆ ತಿಳಿದೋ ತಿಳಿಯದೆಯೋ ವಿಪರೀತವಾದ ಹಿಂಸೆಗೆ ಗುರಿ ಮಾಡುತ್ತಿದ್ದಾರೆ.
ಕೊರೋನಾ ಎನ್ನುವ ಈ ಮಾರಿ ಎಲ್ಲರನ್ನು ಮೂಲೆಗುಂಪಾಗಿಸಿದ್ದು ನಿಜ, ಇದರಿಂದ ಅತೀ ಅತಂಕದ ಜೀವನ ನಡೆಸುತ್ತಿರುವವರು ಎಲ್ಲಾ ವರ್ಗದ ಮಹಿಳೆಯರು.ಅದರಲ್ಲೂ ಕೆಳ ಮತ್ತು ಮಧ್ಯಮ ವರ್ಗದ ಮಹಿಳೆಯರ ಬದುಕಿನ್ನು ದುಸ್ತರವಾಗಿದೆ. ಮನೆಯಲ್ಲಿ ಅಹಾರ ಪದಾರ್ಥಗಳ ಕೊರತೆ ಒಂದೆಡೆಯಾದರೆ ಇರುವ ಪದಾರ್ಥಗಳಿಂದ ಹೇಗೋ ಅಡುಗೆ ಮಾಡಿ ಬಡಿಸಿದರೂ ತಿನ್ನುವ ಗಂಡನ ತಕರಾರು, ಇಂದಿನ ದಿನ ಮಾನದಲ್ಲಿ ಅವನು ಕೆಲಸ ಕಾರ್ಯವಿಲ್ಲದೇ ಮನೆಯಲ್ಲಿಯೇ ಕುಳಿತು ಕೈಯಲ್ಲಿ ಕಾಸಿಲ್ಲದೇ ಹೆಂಡತಿ ಆಪತ್ಕಾಲಕ್ಕೆಂದು ಕೂಡಿಟ್ಟ ಪುಡಿಗಾಸನ್ನು ಕಾಡಿ ಅವಳನ್ನು ದೈಹಿಕ ಹಿಂಸೆ ಮಾಡಿಯಾದರೂ ಕಿತ್ತುಕೊಂಡು ತನ್ನ ಕುಡಿತದ ಚಟವನ್ನು ನೀಗಿಸಿಕೊಳ್ಳುತ್ತಿದ್ದಾನೆ. ಕುಡಿದ ಅಲಮಲಿನಲ್ಲಿ ಹೆಂಡತಿಯ ಮೇಲೆ ಹಲ್ಲೆ ಮಾಡುವ ಪ್ರಸಂಗಗಳು ಹೆಚ್ಚುತ್ತಿವೆ, ಹೆಣ್ಣು ಮಕ್ಕಳು ತಮ್ಮ ಜೀವವನ್ನು ಹಿಡಿ ಮಾಡಿಕೊಂಡು ಮಾನಸಿಕವಾಗಿ, ದೈಹಿಕವಾಗಿ ಹಿಂಸೆಗೆ ಒಳಗಾಗುತ್ತಿದ್ದಾರೆ, ಆಡಲಾಗದ,ಅನುಭವಿಸಲಾಗದ ಬದುಕೊಂದು ಬಿಸಿ ತುಪ್ಪದಂತಾಗಿದೆ. ಬದುಕು ತುಂಬಾ ಭೀಕರವಾಗಿ ಪರಿಣಮಿಸುತ್ತಿದೆ.
ಹೊರಗಡೆ ದುಡಿಯುವ ಹೆಣ್ಣು ಮಕ್ಕಳು ಕೊರೋನಾದ ಕಾರಣದಿಂದ ಮನೆಯಲ್ಲಿಯೇ ಉಳಿಯುವಂತಾಗಿದ್ದು,ಅದರಲ್ಲೂ ಖಾಸಗೀ ಸಂಸ್ಥೆಗಳಲ್ಲಿ ದುಡಿಯುತ್ತಿದ್ದ ಹೆಣ್ಣು ಮಕ್ಕಳು ಮನೆಯಲ್ಲಿಯೇ ಉಳಿಯುವಂತಹ ಈ ಸಂದರ್ಭ ಆರ್ಥಿಕವಾಗಿ ಆಕೆಯನ್ನು ಇನ್ನು ಜರ್ಜರಿತಗೊಳಿಸಿದೆ ಕೈಯಲ್ಲಿ ಕೆಲಸವಿಲ್ಲ, ಅದರಿಂದ ಬರುತ್ತಿದ್ದ ಸಂಬಳವೂ ಇಲ್ಲದಂತಾಗಿ ಒಪ್ಪತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ,ತುಂಬಾ ಚಿಂತಾಜನಕವಾಗಿದೆ.ಇದೇ ರೀತಿ ಮುಂದುವರಿದರೆ ಕುಟುಂಬಗಳ ಮೇಲೆ ಬೇರೆಯದೇ ಪರಿಣಾಗಳು ಅಗುವಂತಹ ಸಾಧ್ಯತೆಗಳೆ ಹೆಚ್ಚು,ಕುಟುಂಬವನ್ನು ಕಾಪಾಡುವ,ಮುನ್ನೆಡಸುವ ಜವಬ್ದಾರಿ ಅವಳ ಮೇಲಿರುವುದರಿಂದ,ದಿಕ್ಕು ಕಾಣದೇ ಕಂಗಲಾಗಿದ್ದಾಳೆ
ಇನ್ನು ಮಕ್ಕಳನ್ನು ಇರುವುದರಲ್ಲಿಯೇ ಸಂತೈಸುವ ಹೊಣೆಗಾರಿಕೆಯೂ ಅವಳ ಮೇಲಿದೆ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದರೂ ಶಾಲಾ ಶುಲ್ಕಕ್ಕೆ ವಿನಾಯಿತಿ ಇಲ್ಲದ ಕಾರಣ ಅದನ್ನು ಭರಿಸಲು ಸಾಧ್ಯವಾಗದೇ ಮಕ್ಕಳ ಭವಿಷ್ಯ ಏನಾಗಿ ಬಿಡುವುದೋ ಎನ್ನುವ ಅತಂಕವೂ ಆಕೆಯನ್ನು ಕಾಡುತ್ತಿದೆ.
ಇವು ಒಂದು ವರ್ಗದ ಮಹಿಳೆಯು ಅನುಭವಿಸುವ ಸಮಸ್ಯೆಗಳಾದರೆ,ಎಲ್ಲವೂ ಇದ್ದೂ ಬದುಕು ಶೋಚನೀಯ ಎನಿಸುವಂತಹ ಮತ್ತೊಂದು ವರ್ಗ. ಯಾವುದಕ್ಕೂಕೊರತೆ ಇಲ್ಲ ಆದರೆ ಹೊರಗೆಲ್ಲೂ ಹೋಗದೇ ಮನೆಯಲ್ಲಿದ್ದು ಹೆಣ್ಣು ಮಕ್ಕಳನ್ನು ಎಡೆಬಿಡದೇ ಕಾಡುವ ಗಂಡಸು.ಬೆಳಗಿನಿಂದ ಒಂದೇ ಸಮನೆ ಅಡುಗೆ ಮನೆಯಲ್ಲಿ ಬೇಯುವುದೇ ಆಗಿದೆ, ಒಲೆ ಮುಂದೆ ಒಂದಾದ ಮೇಲೊಂದರಂತೆ ಅಡುಗೆ ಮಾಡಿ ಬಡಿಸುವುದೇ ಅವಳ ಇಡೀ ದಿನದ ಕಾಯಕ,ಇದರ ಮಧ್ಯೆ ಅವಳು ಕಳೆದು ಹೋಗುತ್ತಿದ್ದಾಳೆ. ಈ ಕಳೆದುಕೊಳ್ಳುವುದು ಹೆಣ್ಣಿಗೆ ಸಹಜವಾಗಿ ಬಿಟ್ಟಿದೆ, ಅದನ್ನು ಹುಡುಕುವ ಗೋಜಿಗೆ ಹೋಗಲಾರದಷ್ಟು ಅವಳ ಬದುಕು ನಿರತವಾಗಿದೆ. ತನ್ನನ್ನು ಹುಡುಕಿ ತನ್ನ ಬದುಕನ್ನು ಒಪ್ಪವಾಗಿಸಿಕೊಳ್ಳಲು ಅವಳಿಗೂ ಅಸೆ ಅದರೆ,ಹುಡುಕಲು ಅವಳಿಗೆ ಬಿಡುವೆಲ್ಲಿದೆ? ಸಂಸಾರದ ತಾಪತ್ರಯಗಳಲ್ಲಿ ಮುಳುಗಿ ಮಿಂದೆದ್ದು ಅದರಲ್ಲಿಯೇ ತಾನು ಖುಷಿ,ಸುಖಿ ಎಂದೂ ನಟನೆ ಮಾಡಿಕೊಂಡು ಬದುಕುತ್ತಿದ್ದಾಳೆ
ಭಾರತಿ ಅಶೋಕ್