ಆಶಾ ಯಮಕನಮರಡಿ ಕವಿತೆ-ನಕ್ಕು ನಲಿ

ಕಾವ್ಯ ಸಂಗಾತಿ

ಆಶಾ ಯಮಕನಮರಡಿ

ನಕ್ಕು ನಲಿ

ಬಿಚ್ಚಿಟ್ಟು ನಲಿವನ್ನು ಹಂಚಿದೆ ಜಗಕೆಲ್ಲ
ಮುಚ್ಚಿಟ್ಟು ಮನದ ನೋವುಗಳನ್ನು
ಸಿಹಿ ಸವಿದವರೆಲ್ಲ ಸಂತಸದಿ ನಗುವಾಗ
ಮೈಹಿಂಡಿ ರಸ ತೆಗೆದ ಕಬ್ಬಿನ ನೆನಪಾಗಲೆ ಇಲ್ಲಾ

ಮೈತುಂಬ ಹಣ್ಣುಗಳನು ತುಂಬಿದ ಮರ
ಎಲ್ಲರ ಗಮನವ ಸೆಳೆಯಿತು ಸೊಗಸಲಿ
ನೋಡಿ ಸಂಭ್ರಮಿಸದವರು ಕಲ್ಲನು ಎಸೆದರು
ನೋವು ನುಂಗಿದ ಹಣ್ಣು ಹಸಿವು ನೀಗಿಸಿತು

ಆಗತಾನೆ ಬಿರಿದ ಹೂವು ಅರಳಿ ನಕ್ಕಿತ್ತು
ಮುಡಿಗೊ ಮಸಣಕ್ಕೊ ತಿಳಿಯದಾಗಿತ್ತು
ಕುಸುಮ ಕಿತ್ತವರು ಘ್ರಾಣಿಸಿ ಎಸೆದರು
ನರಳದಾ ಪುಷ್ಪ ದಿನಪೂರ್ತಿ ಬದುಕಿತ್ತು

ದೇವನಿತ್ತ ಪಾತ್ರವಿದು ಆಡಲೆ ಬೇಕು
ನರಳಿದರು ಮೊಗದಲ್ಲಿ ನಗುವಿರಬೇಕು
ಸೋತೆನೆನ್ನದೆ ಯುದ್ಧ ಗೆಲ್ಲಲೇ ಬೇಕು
ಕಣ್ಣಿರಿಗೂ ಆನಂದಭಾಷ್ಪವೆನ್ನಬೇಕು


ಆಶಾ ಯಮಕನಮರಡಿ

Leave a Reply

Back To Top