ಲಹರಿ ಸಂಗಾತಿ
ಸುಜಾತಾ ರವೀಶ್
ಹೊಸದಿನಕೆ ಸ್ವಾಗತ
ತಿ ಬೆಳಗೂ ಹೊಸ ಜನ್ಮವೇ! ಬೇಂದ್ರೆಯವರು ನುಡಿದಂತೆ “ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ” ಎನ್ನುವ ಭಾವವೇ ಈಗ ಹೆಚ್ಚು ಪ್ರಸ್ತುತ. ನಮ್ಮ ಪ್ರಪಂಚವೇ ಒಂದು ಬಗೆಯ ದುಗುಡದ ಕಾರ್ಮೋಡ ಮುಸುಕಿದ ವಾತಾವರಣ. ಕಾಲಮಿತಿ ಅರಿಯದ ನಿರಂತರ ಓಟ. ಹಾಗಿರುವಾಗ ಪ್ರಯತ್ನಪೂರ್ವಕವಾಗಿ ಉತ್ಸಾಹ ಬರಿಸಿಕೊಳ್ಳಬೇಕಿದೆ ಭರವಸೆ ತರಿಸಿಕೊಳ್ಳಬೇಕಿದೆ. ಏನೋ ಎಂತೋ ಎಂಬ ಆತಂಕದಲ್ಲಿ ದಿನ ಆರಂಭಿಸುವ ಬದಲು ಎಲ್ಲಾ ಒಳಿತಾಗುವುದು, ಆಗಲಿ ಎಂಬ ಆಶಾವಾದ ಶುಭ ಹಾರೈಕೆಯಿಂದ ದಿನ ಆರಂಭಿಸಿದರೆ “ಯದ್ಭಾವಂ ತದ್ಭವತಿ” ಎಂಬಂತೆ ಶುಭವೇ ಆಗುವುದು. ಇಂದಿನ ಈ ಕ್ಲಿಷ್ಟಕರ ಪರೀಕ್ಷಾ ಸಮಯದಲ್ಲಿ ನಾವು ಸ್ವಲ್ಪ ಹೆಚ್ಚಿನ ಪರಿಶ್ರಮ ಹಾಕಲೇಬೇಕಾಗುತ್ತದೆ, ಯಶ ಸಾಧಿಸಿ ತೇರ್ಗಡೆಯಾಗಬೇಕು ಎಂಬ ಅಭಿಲಾಷೆ ಇದ್ದರೆ.
ಆರೋಗ್ಯದ ದೃಷ್ಟಿಯಿಂದಲೂ ಬೇಗ ಏಳುವುದು ಮನಸ್ಸಿಗೆ ಚೇತೋಹಾರಿ. ಸುತ್ತಲಿನ, ಉದ್ಯಾನವನಗಳ ಹಸಿರನ್ನೇ ಕಣ್ತುಂಬಿಸಿಕೊಳ್ಳುವುದು. ಹಬ್ಬಿದಌ ಮುದ ನೀಡಲು ಚೈತನ್ಯ ತುಂಬಲು ಪ್ರಕೃತಿಗಿಂತ ಬೇರೆ ಸಾಧನ ಯಾವುದೂ ಇಲ್ಲ. ದೇವರನಾಮ, ಸಂಗೀತ ಮಂಕುತಿಮ್ಮನ ಕಗ್ಗ ಉಮರನ ಒಸಗೆ ವ್ಯಾಖ್ಯಾನಗಳು ಮತ್ತು ಕೆಲವು ಆಧ್ಯಾತ್ಮಿಕ ವಿಷಯಗಳ ಮೇಲಿನ ಭಾಷಣಗಳು. ಬೆಳಗಿನ ತಾಜಾ ಮನದ ಮೇಲೆ ಇವು ಬೀರುವ ಪರಿಣಾಮ ಅಷ್ಟಿಷ್ಟಲ್ಲ. ಋಣಾತ್ಮಕ ಚಿಂತನೆಗಳನ್ನು ನಾಶ ಮಾಡಿ ಧನಾತ್ಮಕತೆಯನ್ನು ಬೆಳೆಸುವಲ್ಲಿ ಇಂತಹ ಸದ್ವಿಚಾರಗಳ ಆಲಿಸುವಿಕೆ ತುಂಬಾ ಪ್ರಭಾವಶಾಲಿ .ನಡಿಗೆ ಕೇಳುವಿಕೆ ಎರಡೂ ಒಟ್ಟಿಗೆ ನಡೆಯುವುದರಿಂದ ಸಮಯವೂ ಉಳಿತಾಯ.ಮನಸ್ಸಿಗೆ ಸಮಾಧಾನ ಕೊಟ್ಟು ಇಡೀ ದಿನದ ಚಲಿಸುವಿಕೆಗೆ ಇಂಧನ ವ್ಯಾಯಾಮದೊಡನಿನ ಆಲಿಸುವಿಕೆಯ ಆಯಾಮ .
ಇಲ್ಲಿ ಕಗ್ಗದ ಮುಕ್ತಕವೊಂದು ನೆನಪಿಗೆ ಬರುತ್ತವೆ.
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು
ಗುರುತಿಸೊಳಿತಿರುವುದನು ಕೇಡುಗಳ ನಡುವೆ
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯೆಲೊ _ ಮಂಕುತಿಮ್ಮ
ಇಷ್ಟರಮಟ್ಟಿಗೆ ಇರುವೆವಲ್ಲ ಎಂದು ದೈವವನ್ನು ನಮಿಸಬೇಕು .ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬ ಆಶಾವಾದ ಬೇಕು. ಅದಿಲ್ಲ ಇದಿಲ್ಲವೆಂಬುದನ್ನು ಬಿಟ್ಟು ನಮಗಿಂತ ಕಷ್ಟದಲ್ಲಿರುವವರನ್ನು ನೋಡಿ ಆದಷ್ಟು ಸಹಾಯ ಮಾಡಬೇಕು . ಅದೇ ಹರ್ಷಕ್ಕೆ ದಾರಿ. ಈ ನೀತಿಯನ್ನು ಅಳವಡಿಸಿಕೊಂಡರೆ ಸಂತಸ ಪಡೆಯುವ ಪ್ರಯತ್ನಕ್ಕೆ ಮೊದಲ ಹೆಜ್ಜೆ ಇಟ್ಟಂತೆ.
ಇನ್ನೊಂದು ದೇವರ ಮೇಲೆ ನಂಬಿಕೆ ಭಕ್ತಿ. “ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ” ಎಂದು ಎಲ್ಲವನ್ನು ದೈವೇಚ್ಛೆಗೆ ಬಿಟ್ಟು ನಾವು ನಿಮಿತ್ತ ಮಾತ್ರರೆಂದು ಭಾವಿಸುವುದು . ಕೆ.ಎಸ್ ನರಸಿಂಹಸ್ವಾಮಿ ಅವರು ಹೇಳಿದಂತೆ “ದೇವ ನಿನ್ನ ಮಾಯೆಗಂಜಿ ನಡುಗಿ ಬಾಡೆನು ನಿನ್ನ ಇಚ್ಛೆಯಂತೆ ನಡೆವೆನಡ್ಡಿ ಮಾಡೆನು” ಎಂದು ಸಂಪೂರ್ಣ ಶರಣಾಗತಿ ಹೊಂದುವುದು. ಆಗ ನಿಚ್ಚಳ ನೆಮ್ಮದಿ ಸಿಕ್ಕು ಆತಂಕ ಮಾಯವಾಗಿ ಸಂತಸ ತುಂಬುತ್ತದೆ. ಆತ್ಮದಾನಂದ ತಾನೇ ತಾನಾಗಿ ಅನುಭವವಾಗುತ್ತದೆ.
ಹೀಗೆ ಪ್ರತಿ ದಿನವನ್ನು ಹೊಸತನದೊಂದಿಗೆ ಸ್ವಾಗತಿಸಿದಾಗ ಚೈತನ್ಯ ಮೂಡುತ್ತದೆ . ಬಾಳ ಕಾದಂಬರಿಯ ಹೊಸಪುಟ ತೆರೆದಂತಾಗುತ್ತದೆ ನಿತ್ಯ ನಾವೀನ್ಯಕ್ಕೆ ಮೈ ಮನ ತುಂಬುತ್ತದೆ .
ಸುಜಾತಾ ರವೀಶ್