ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಸುಳ್ಯ
ಗಜಲ್
ಕಣ್ಣಾಲಿಗಳು ತುಂಬಿ ತುಳುಕುತಿದೆ ಪ್ರಿಯ ಗೆಳೆಯ
ಮಧುರ ಪ್ರೇಮದ ಅಂತ್ಯಕೆ ಕಣ್ಣೀರು ಹರಿಸಿದೆ ಪ್ರಿಯ ಗೆಳೆಯ
ಮಾತಿಲ್ಲದೆ ಮೌನವಾಗಿ ನನ್ನೀ ಮನವು ರೋಧಿಸುತಿದೆ
ನೀನಿಲ್ಲದ ವಿರಹದ ತಾಪಕೆ ತನುಮನ ನೊಂದಿದೆ ಪ್ರಿಯ ಗೆಳೆಯ
ಹಗಲಿರುಳು ನೀನಿಲ್ಲದೆ ಏಕಾಂತ ಏಕಾಂಗಿಯಾಗಿ ಕಾಡುತಿದೆ
ಮಿಡಿಯುತ ಹೃದಯ ನಿನಗಾಗಿ ಹಂಬಲಿಸಿದೆ ಪ್ರಿಯ ಗೆಳೆಯ
ಅಧರಗಳು ಪ್ರೀತಿ ಕಾಣದೆ ಬರಡು ಭೂಮಿಯಾಗಿದೆ
ಒಣಗಿಹ ತುಟಿಗಳು ನಿನ್ನ ಸಿಹಿ ಮುತ್ತಿಗೆ ಪರಿತಪಿಸಿದೆ ಪ್ರಿಯ ಗೆಳೆಯ
ಬೀಸುತಿಹ ತಂಗಾಳಿಯಲು ಬಿಸಿಯಪ್ಪುಗೆಯ ನೆನಪಲಿ ಬೆವರುತಿದೆ
ನೀನಿಲ್ಲದ ಇರುಳಲಿ ಹೃದಯ ನಲುಗಿದೆ ಪ್ರಿಯ ಗೆಳೆಯ
ಅಮರಪ್ರೇಮದ ಆಸೆಯ ತೋರಿಸಿ ಎಲ್ಲಿ ಮಾಯವಾದೆ
ಬಿರುಕಾದ ಪ್ರೇಮಕೆ ಮನ ಛಿದ್ರಗೊಂಡಿದೆ ಪ್ರಿಯ ಗೆಳೆಯ
ನಿನ್ನ ನೆನಪಿನ ಗುಂಗಿನಲಿ ಅರಮನೆಯು ಸೆರೆಮನೆಯಾಗಿದೆ
ಪಾರಿವಾಳ ಪ್ರೇಮಕೆ ಅಂತ್ಯಹಾಡಲು ಮಸಣದ ಹಾದಿ ಹಿಡಿಯುತಿದೆ ಪ್ರಿಯ ಗೆಳೆಯ
———————-
ಪರಿಮಳ ಐವರ್ನಾಡು ಸುಳ್ಯ