ಕಾವ್ಯ ಸಂಗಾತಿ
ಸುಮನತನಯ ದೇಸಾಯಿ
ಸೆಲ್ಫಿಗೆ ಜೀವನ ಬಲಿಯಾಗದಿರಲಿ..!!
ಹಿಂದಿನ ಕಾಲದ ಜನಜೀವನದ ಶೈಲಿಯನ್ನು ನೋಡಿದರೆ ಇಂದಿನ ಕಾಲಕ್ಕೆ ಹೋಲಿಸಿದಾಗ ಬಹಳಷ್ಟು ವ್ಯತ್ಯಾಸ ಕಂಡುಬರುತ್ತದೆ. ಆಗಿನ ಕಾಲವೇ ಸೊಗಸಾಗಿತ್ತು. ಈಗ ನಾವು ವೈಜ್ಞಾನಿಕವಾಗಿ ಮುಂದುವರೆದು ಏನೆಲ್ಲವನ್ನೂ ಕೂಲಂಕುಷವಾಗಿ ಕಂಡುಹಿಡಿದು ಐಷಾರಾಮಿ ಬದುಕು ಸಾಗಿಸುತ್ತಿದ್ದೆವೆ ಎಂದರೂ ಕೂಡಾ ಸುಖ,ಶಾಂತಿ,ನೆಮ್ಮದಿಯೇ ಇಲ್ಲದಂತಾಗಿದೆ. ಈಗೀಗ ತಂತ್ರಜ್ಞಾನ ಬೆಳೆದಂತೆಲ್ಲಾ ಹೆಚ್ಚೆಚ್ಚು ಅಪಾಯಗಳಿಗೆ,ದುರಂತಗಳಿಗೆ ಆಹ್ವಾನ ನೀಡಿದಂತಾಗುತ್ತಿದೆ ನಮ್ಮ ಜನಜೀವನದ ಇಂದಿನ ಪ್ರಸ್ತುತ ವ್ಯವಸ್ಥೆ. ಅತ್ಯಂತ ಬುದ್ಧಿ ಜೀವಿಯಾದ ಮಾನವ ತನ್ನ ಅನುಕೂಲಕ್ಕಾಗಿ, ಸದುಪಯೋಗಕ್ಕಾಗಿ ಹಲವಾರು ಸುಲಭವಾದ ವಿಧಾನಗಳ ಮೂಲಕ ಆರಾಮದಾಯಕ ಜೀವನ ನಡೆಸಲು ಯಶಸ್ವಿಯಾಗಿ ಮುನ್ನುಗ್ಗುತ್ತಿರುವುದು ನಿಜಕ್ಕೂ ಹೆಮ್ಮೆಯ,ಸಂತಸದ ಸಂಗತಿಯಾಗಿದೆ.ಆದರೆ ಇದು ಇಂದು ದುರುಪಯೋಗವಾಗಿ ದುರಂತಕ್ಕಿಡಾಗುತ್ತಿರುವುದು ವಿಪರ್ಯಾಸವೆಂದೆನಿಸುತ್ತಿದೆ.
ಅನೇಕಾನೇಕ ನವನವೀನ ಸಂಶೋಧನೆಗಳಲ್ಲಿ ಮೊಬೈಲ್ ಅಥವಾ ದೂರವಾಣಿಯ ಕೊಡುಗೆ ಅಮೋಘವಾದದ್ದು. ಇದರ ಸಹಾಯದಿಂದ ಜನರು ಸಾಕಷ್ಟು ಪ್ರಮಾಣದಲ್ಲಿ ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ.
ತನ್ನ ಕಿವುಡು ಹೆಂಡತಿಯ ಅನುಕೂಲಕ್ಕೆಂದು ಈ ದೂರವಾಣಿ ಎಂಬ ಮಾಯಾಶಕ್ತಿಯನ್ನು ಕಂಡುಹಿಡಿದ ಗ್ರಹಾಂಬೆಲ್ ಎಂಬ ಮಹಾಮೇಧಾವಿಯ ಅತ್ಯುತ್ತಮ, ಅತ್ಯದ್ಭುತ ಸಂಶೋಧನೆಯ ಫಲವಾಗಿ ಇಂದು ಗಾಢವಾದ ಪ್ರಭಾವ ಬೀರುತ್ತಿರುವ ಈ ಮೊಬೈಲ್ ಎಂಬ ಮಾಯಾಶಕ್ತಿಯ ಮಹಿಮೆಯನ್ನು, ಅದರ ಗುಣಗಾನವನ್ನು ಮತ್ತು ಅದರ ಅ(ನಾ)ನುಕೂಲಗಳನ್ನು ಕೇವಲ ಪದಗಳಲ್ಲಿ ವರ್ಣಿಸಲು ಸಾದ್ಯವೇ ಇಲ್ಲ. ಹೌದು..! ಈ ಮೊಬೈಲ್ ನಿಂದ ಜಗತ್ತು ಇಂದು ಕಿರಿದಾಗಿ ಕಾಣಿಸುತ್ತಿದೆ. ಯಾವುದೋ ಒಂದು ವಿಷಯವನ್ನು ಜಗತ್ತಿನಾದ್ಯಂತ ಪ್ರಚುರಪಡಿಸಲು ಕೇವಲ ಕೆಲವೇ ಸೆಕೆಂಡುಗಳು ಸಾಕು. ಅದಲ್ಲದೇ ಎಲ್ಲಾ ವಿಷಯಗಳನ್ನು ಒಳಗೊಂಡ ಪರಮಶ್ರೇಷ್ಠ ಪಂಡಿತನಂತೆ, ಮೇಧಾವಿಯಂತೆ (ಗೂಗಲ್) ಕಾರ್ಯನಿರ್ವಹಿಸುತ್ತದೆ ಈ ಮೊಬೈಲ್. ಹೀಗಾಗಿ ಈಗಿನ ಮಕ್ಕಳು ಕೂಡಾ ತಮ್ಮ ಪಠ್ಯಪುಸ್ತಕಗಳನ್ನು ಇದರಲ್ಲಿಯೇ ಪಡೆದುಕೊಂಡು,ಇದರಲ್ಲಿಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವುದು ಅಗಾಧವಾಗಿ ಗೋಚರಿಸುತ್ತಿದೆ. ಅದೇನೆ ಇರಲಿ ನಾವು ಇತ್ತೀಚಿನ ದಿನಗಳಲ್ಲಿ ಈ ಮೊಬೈಲ್ ನ ಅವಾಂತರಗಳನ್ನು ಕಂಡು ವಿಸ್ಮಯದ ಜೊತೆಗೆ ಆಘಾತಕಾರಿಯಾದ ಅನುಭವವನ್ನು ಕೂಡಾ ನಾವಿಂದು ಮನಗಂಡಿದ್ದೇವೆ.
ಇದು ಮಳೆಗಾಲವಾದ್ದರಿಂದ ಈಗೀಗ ಎಲ್ಲಾ ಕಡೆಗಳಲ್ಲೂ ಅತೀವ ಮಳೆಯಾಗಿ ಜಲಪಾತಗಳು ತುಂಬಿ ಧುಮ್ಮಿಕ್ಕಿ ಹರಿಯುತ್ತಿವೆ. ಇಂತಹ ಸನ್ನಿವೇಶಗಳಲ್ಲಿ, ಇಂತಹ ಅನೇಕಾನೇಕ ಪ್ರವಾಸಿ ಸ್ಥಳಗಳಲ್ಲಿ ಮೊಬೈಲ್ ಎಂಬ ಯಮದೂತನ ಸಹಾಯದಿಂದ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲುಜಾರಿ ಬಿದ್ದೋ ಅಥವಾ ಇನ್ಯಾವುದೋ ಅನಾಹುತಕ್ಕೀಡಾಗಿ ಹೇಳಹೆಸರಿಲ್ಲದಂತೆ ಬಲಿಯಾಗುತ್ತಿರುವುದನ್ನು ನೋಡಿದಾಗ ಅಕ್ಷರಶಃ ಇದೊಂದು ಅಪ್ರಬುದ್ಧ, ಅನಾಗರಿಕ, ಅಸಂಬದ್ಧವಾದ ಅನಾಹುತದ ಕೆಲಸವೆಂದೆನಿಸುತ್ತದೆಯಲ್ಲವೆ..? ಗೊತ್ತಿದ್ದೂ ಕೂಡಾ ಇಂತಹ ದುಸ್ಸಾಹಸಕ್ಕೆ ಕೈಹಾಕಿ ನಿಮ್ಮನ್ನು ನೀವೇ ಬಲಿಕೊಟ್ಟುಕೊಳ್ಳುತ್ತಿರುವುದು ಶೋಚನೀಯ ಸಂಗತಿ ಎಂದೆನಿಸುತ್ತದೆ.
ಅಷ್ಟೇ ಅಲ್ಲ ನದಿ-ಸಾಗರಗಳ ಆಳಕ್ಕೆ ಇಳಿದು, ಬೆಟ್ಟ-ಗುಡ್ಡಗಳ ತುಟ್ಟತುದಿಯಲ್ಲಿ ನಿಂತುಕೊಂಡು, ಕಾಡುಮೃಗಗಳ,ವಿಷಜಂತುಗಳ ಬಾಯಲ್ಲಿ ಕೈಹಾಕುವಂತಹ ನೂರಾರು ದುಸ್ಸಾಹಸಗಳಿಗೆ ಎಣೆಮಾಡಿಕೊಟ್ಟು ಎಳೆವಯಸ್ಸಿನಲ್ಲಿಯೇ, ಹದಿಹರೆಯದಲ್ಲಿಯೇ ಅನಾವಶ್ಯಕವಾಗಿ ಅತ್ಯಮೂಲ್ಯವಾದ ಪ್ರಾಣವನ್ನು ಕಳೆದುಕೊಳ್ಳುತ್ತಿರುವುದನ್ನು ದಿನವೂ ನೋಡುತ್ತಿದ್ದೇವೆ. ವಾರ್ತಾಪ್ರಸಾರದಲ್ಲಿ, ದಿನಪತ್ರಿಕೆಗಳಲ್ಲಿ ಸೆಲ್ಫಿಯ ಆವಾಂತರದಿಂದ ಪ್ರಾಣ ಕಳೆದುಕೊಂಡವರ ವರದಿ ಇದ್ದೇ ಇರುತ್ತದೆ. ಸುಂದರವಾಗಿದ್ದ ಬದುಕನ್ನು ಈ ಹುಚ್ಚು ಸೆಲ್ಫಿಯ ವ್ಯಾಮೋಹಕ್ಕೆ ಒಳಗಾಗಿ ಬಲಿ ಕೊಡುತ್ತಿರುವುದು ದರಂತವೂ ಹೌದು,ವಿಪರ್ಯಾಸವೂ ಕೂಡಾ. ಫೇಸ್ಬುಕ್, ಟ್ವೀಟರ್, ವ್ಯಾಟ್ಸಾಪ್ ಗಳಂತಹ ಸಾಮಾಜಿಕ ಜಸಲತಾಣದಲ್ಲಿ ಹಲವಾರು ಜನರ ಸಾವಿರಾರು ಲೈಕ್ ಸಿಗಲಿ ಎಂಬ ಮೂರ್ಖತನದ ಪರಮಾವಧಿಯಲ್ಲಿ ಸಾಮಾಜಿಕ ಜಾಲತಾಣದ ಫೋಭಿಯಾಕ್ಕೆ ಒಳಗಾಗಿ ಸಾಕಷ್ಟು ಜನರನ್ನು ತಮ್ಮತ್ತ ಸೆಳೆಯುವ ದುಸ್ಸಾಹಸದ ಪ್ರತಿಫಲವೇ ಈ ದುರಂತ ಸೆಲ್ಫಿ…!!
ಈ ಸೆಲ್ಫಿ ಎಂದರೇನು…?
ಈ ಸೆಲ್ಫಿ ಎನ್ನುವುದು ಸ್ವಯಂ-ಭಾವಚಿತ್ರ ಛಾಯಾಚಿತ್ರವಾಗಿದೆ. ಇದನ್ನು ಸಾಮಾನ್ಯವಾಗಿ ಡಿಜಿಟಲ್ ಕ್ಯಾಮೆರಾ ಅಥವಾ ಸ್ಮಾರ್ಟ್‌ಫೋನ್‌ನಿಂದ ತೆಗೆದುಕೊಳ್ಳಲಾಗುತ್ತದೆ. ಇದನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳಬಹುದು ಅಥವಾ ಸೆಲ್ಫಿಸ್ಟಿಕ್‌ನ ಸಹಾಯದಿಂದಲೂ ಕೂಡಾ ದೂರದ ಏರಿಯಾವನ್ನು ಸಂಪೂರ್ಣವಾಗಿ ಕವರ್ ಮಾಡಲು ಬಳಸುವ ಒಂದು ಭಾವಚಿತ್ರ ಎಂದು ಇದನ್ನು ಬೆಂಬಲಿಸಲಾಗುತ್ತದೆ.
ಇದಕ್ಕೆ ಬಲಿಯಾಗುತ್ತಿರುವವರಲ್ಲಿ ಎಳೆಯ ಪ್ರಾಯದ ಮಕ್ಕಳು, ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಸಾಮಾಜಿಕ ಜಾಲತಾಣದ ಪ್ರಭಾವಕ್ಕೆ ಒಳಗಾದವರು, ದುಸ್ಸಾಹಸದ ಪ್ರವೃತ್ತಿಯನ್ನು ಹೊಂದಿರುವವರು, ತಮ್ಮ ಸೌಂದರ್ಯದ ಆಲಾಪನೆಯ ವ್ಯಾಮೋಹಕ್ಕೊಳಗಾದವರು ಹಾಗೂ ಪುಕ್ಕಟೆಯಾಗಿ ಹೆಸರು ಗಳಿಸಲು ಪ್ರಯತ್ನಿಸುತ್ತಿರುವ ಪ್ರಚಾರಪ್ರಿಯರೂ ಕೂಡಾ ಇದರ ಪ್ರಭಾವಕ್ಕೆ ಒಳಗಾಗುತ್ತಿರುದನ್ನು ನಾವು ಇಂದು ಗಮನಾರ್ಹವಾಗಿ ನೋಡುತ್ತಿದ್ದೇವೆ.
ಅದರಲ್ಲೂ ಈ ಸೆಲ್ಫಿ ಹುಚ್ಚು ಇತ್ತೀಚೆಗೆ ವಿಪರೀತವಾಗಿದೆ ಎಂದೆ ಸಮೀಕ್ಷೆಗಳು ಹೇಳುತ್ತಿವೆ. ಯಾವುದಾದರೊಂದು ಸುಂದರವಾದ ಜಲಪಾತ, ಕಾಡುಪ್ರಾಣಿ- ಪಕ್ಷಿಗಳ, ಬೆಟ್ಟ- ಗುಡ್ಡಗಳ ಅಪರೂಪದ ದೃಶ್ಯಾವಳಿಗಳನ್ನು ಕಂಡ ಕೂಡಲೇ ಮೈಮರೆತು ಸೆಲ್ಫಿಗಾಗಿ ಎಗ್ಗಿಲ್ಕದೇ ಮುಗಿಬೀಳುತ್ತಾರೆ. ತತ್ಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮಿಸುವ ಆತುರಾತರದಲ್ಲಿ ಅದೆಷ್ಟೋ ಮುಗ್ದ ಜೀವಗಳು, ಸಾಕಷ್ಟು ಅಮಾಯಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಸಂಗತಿ ಇಂದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹಿಂದೆ ಮುಂದೆ ಏನಿದೆ? ಏನಾಗುತ್ತಿದೆ ಎಂಬ ಪರಿವೇ ಇಲ್ಲದೇ ಸೆಲ್ಫಿ ತೆಗೆಯಲು ಮುಗಿಬಿಳುವವರು ಹೆಚ್ಚಿನ ಕಾಳಜಿ ವಹಿಸಬೇಕು. ಇಂತಹ ವಿಕೃತ ಮನಸ್ಸಿನ ಜನರು ದುಸ್ಸಾಹಸ ಮಾಡಿ ಕಲವೇ ಕ್ಷಣಗಳಲ್ಲಿ ಪ್ರಸಿದ್ಧರಾಗಲು ಹೋಗಿ ಕುಪ್ರಸಿದ್ದರಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಪರಿಹಾರೋಪಾಯಗಳು:-
ಇಂತಹ ಅಸಂಬದ್ಧ ಮನಸ್ಸಿನ ದಾಸರಾಗಿ ಅವಘಡಕ್ಕೆ ಬಲಿಯಾಗುತ್ತಿರುವ ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಅನಾಹುತಕ್ಕೆ ಬಲಿಯಾಗುತ್ತಿರುವವರ ಕುಟುಂಬದ ಸದಸ್ಯರ ನೋವು, ದುಃಖ ಹೇಳತೀರದು. ಈ ಯುವಸಮೂಹವನ್ನು ನಾವೆಲ್ಲಾ ಸೇರಿ ಸೂಕ್ತ ಸಲಹೆಗಳೊಂದಿಗೆ ರಕ್ಷಿಸಬೇಕಾಗಿದೆ. ಹೀಗೆ ದುರಂತಮಯ ಸಾವಿಗೀಡಾದವರ ಜ್ವಲಂತ ದೃಷ್ಟಾಂತಗಳನ್ನು ಮನಮುಟ್ಟುವಂತೆ ಎಲ್ಲಾ ಕಡೆಗಳಲ್ಲು ಹೆಚ್ಚೆಚ್ಚು ಪ್ರಚುರಪಡಿಸಬೇಕು.ಈ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಸರ್ಕಾರ ಮತ್ತು ಸಮುದಾಯಗಳು ಒಟ್ಟಿಗೆ ಸೇರಿ ಮಾಡಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕೇಂದ್ರ ಹಾಗೂ ಹಾಗೂ ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಗೊಳಪಡುವ ಪ್ರವಾಸಿ ತಾಣಗಳಲ್ಲಿ ಸೆಲ್ಫಿಯ ನಿಷೇಧಿತ ವಲಯ ಎಂದು ದೊಡ್ಡದಾಗಿ ಎಲ್ಲರಿಗೂ ಕಾಣುವ ಹಾಗೆ ಸೂಚನಾ ಫಲಕವನ್ನು ಹಾಕಬೇಕು.ಇದಕ್ಕಾಗಿಯೇ ಒಂದಿಬ್ಬರು ಸಿಬ್ಬಂದಿಯನ್ನು ನೇಮಕ ಮಾಡಿ ಎಚ್ಚರಿಕೆಯಿಂದ ಇರಲು ಮಾಹಿತಿ ನೀಡಬೇಕು. ಇಂತಹ ನಿಷೇಧಿತ ವಲಯದಲ್ಲಿ ಮೊಬೈಲ್ ಬಳಸದಂತೆ ಪಾಲಕರೂ ಕೂಡಾ ಮಕ್ಕಳಿಗೆ ಮುನ್ನೆಚ್ಚರಿಕೆ ಕೊಡಬೇಕು. ಸೆಲ್ಫಿಯ ಆವಾಂತರಗಳನ್ನು ಸ್ಪಷ್ಟವಾಗಿ ಎಲ್ಲರಿಗೂ ತಿಳಿಸಿಕೊಟ್ಟು ಮುಗ್ದ ಮಕ್ಕಳ, ಯುವಜನರ ಹಾಗೂ ಸೆಲ್ಫಿಯ ವ್ಯಾಮೋಹ ಇರುವ ಪ್ರತಿಯೊಬ್ಬರಿಗೂ ಅರಿವು ಮೂಡಿಸುವ ಕೆಲಸಕಾರ್ಯಗಳನ್ನು ಎಲ್ಲರೂ ಸೇರಿ ಮಾಡೋಣ ಬನ್ನಿ..! ಈ ನಿಟ್ಟಿನಲ್ಲಿ ಸೆಲ್ಫಿಯೆಂಬ ಪೆಡಂಭೂತದಿಂದ ಬಲಿಯಾಗುವುದನ್ನು ತಪ್ಪಿಸೋಣ, ಜಾಗೃತಿಯೊಂದಿಗೆ ಅಂತಹ ಮಹಾನುಭಾವರೆಲ್ಲರನ್ನೂ ರಕ್ಷಿಸೋಣ ಬನ್ನಿ…!!
-ಸುಮನತನಯ ದೇಸಾಯಿ,