ಗಜಲ್ ಲೋಕ

ರತ್ನರಾಯಮಲ್ಲ

ಅಂಬಮ್ಮ ಪ್ರತಾಪಸಿಂಗ್ ರವರ

ಗಜಲ್ ಗಳಲ್ಲಿ ಜೀವನ ಶ್ರದ್ಧೆ

ಗಜಲ್ ಪ್ರೀತಿಸುವ ಎಲ್ಲ ಮನಸುಗಳಿಗೆ ನಮಸ್ಕಾರಗಳು..

      ‘ಗಜಲ್’ ಕಾರವಾನ್ ಮುದುಡಿದ ಮನಸುಗಳಿಗೂ, ಬಳಲಿದ ಹೃದಯಗಳಿಗೂ ಮುದ ನೀಡುತ್ತದೆ ಅಲ್ಲವೇ..! ಹೌದು, ಅದರ ಅನುಭವ ನನಗಾಗಿದೆ, ಆ ಅನುಭವವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಗುರುವಾರಕ್ಕಾಗಿ ಕಾಯುತ್ತಿರುವೆ ಎಂದರೆ ನೀವು ನಂಬಲೇಬೇಕು. ನಮ್ಮ ಮಧ್ಯೆಯಿರುವ ಒಬ್ಬ ವಿಶಿಷ್ಟ ಸುಖನವರ್ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ಇಂದು ತಮ್ಮ ಮುಂದೆ ಬಂದಿರುವೆ. ಮತ್ತೇಕೆ ತಡ, ಯಥಾರೀತಿ ಷೇರ್ ನ ದೇಹಲೀಜ್ ದಾಟುತ್ತ ಆರಂಭಿಸೋಣವೆ…!

ಭೇಟಿಯಾದಾಗಲೆಲ್ಲ ಅಪರಿಚಿತಳೆಂದು ಅನಿಸುತ್ತದೆ ಏಕೆ
ಜೀವನವು ಪ್ರತಿದಿನ ಬಣ್ಣಗಳನ್ನು ಬದಲಾಯಿಸುತ್ತದೆ ಏಕೆ”
-ಶಹರಯಾರ್

       ಒಂದು ಕೋಣೆಯಲ್ಲಿ ಶಾಂತವಾಗಿ ಕುಳಿತುಕೊಳ್ಳಲು ಸಾಧ್ಯವಾಗದ ಕಾರಣದಿಂದ ಮನುಕುಲವು ದುಃಖದಲ್ಲಿ ಮುಳುಗಿದೆ, ಮುಳುಗುತ್ತಿದೆ;….! ‘ನನ್ನ’ ಮತ್ತು ‘ನಿನ್ನ’ ಎಂಬ ಈ ಎರಡು ಪದಗಳನ್ನು ತೊರೆದರೆ ಮನುಷ್ಯ ಶಾಂತವಾಗಿ ಬದುಕಲು ಸಾಧ್ಯ. ಶಬ್ದವು ಹೆಚ್ಚಾಗಿ ಮೌನದ ಸಾವನ್ನು ಧ್ವನಿಸುತ್ತದೆ. ಸಂಪೂರ್ಣ ನಿಶ್ಯಬ್ದವನ್ನು ಅರ್ಥಮಾಡಿಕೊಂಡಾಗ ಮಾತ್ರ ಮಾನವೀಯತೆಯ ಅತ್ಯುನ್ನತ ಗುಣ ಸಾಕಾರರೂಪ ಪಡೆದುಕೊಳ್ಳಲು ಸಾಧ್ಯ. ಮಾತು ಅಗ್ಗವಾದರೆ ಮೌನವಾಗಿರುವುದು ದುಬಾರಿಯಾಗುತ್ತದೆ. ಮನುಷ್ಯ ಹೊರಗೆ ಶಾಂತವಾಗಿದ್ದಂತೆ ಕಂಡರೂ ಒಳಗಡೆ ಕಲ್ಪನೆಯು ಜೋರಾಗಿ ಕೂಗುತ್ತ ಓಡುತ್ತಿರುತ್ತದೆ. ಈ ಕಾರಣಕ್ಕಾಗಿಯೇ ಒಬ್ಬ ವ್ಯಕ್ತಿಯು ಹೆಚ್ಚು ತಿಳಿಯುತ್ತ ಹೋದಂತೆ ಅಂತರ್ಮುಖಿಯಾಗುತ್ತ ಹೋಗುತ್ತಾನೆ. ಹೂಜಿಯನ್ನು ಸ್ವಚ್ಛವಾಗಿ ತುಂಬುವ ಮೊದಲು ಅದರಲ್ಲಿಯ ಕೊಳಕು ನೀರನ್ನು ಖಾಲಿ ಮಾಡಬೇಕಾಗುತ್ತದೆ. ಇದು ಮನುಷ್ಯನ ಅಂತರಂಗದ ತಾಕಲಾಟವನ್ನೂ ಪ್ರತಿನಿಧಿಸುತ್ತದೆ. ಅಂತೆಯೇ ಮೌನದಲ್ಲಿ ಮಾತ್ರ ನಮ್ಮೊಳಗಿನ ಧ್ವನಿಯನ್ನು ಆಲಿಸಬಹುದು ಎನ್ನಲಾಗುತ್ತದೆ. ಮೌನವಿಲ್ಲದೆ ನಾವು ನಮ್ಮನ್ನು, ಇನ್ನೊಬ್ಬರನ್ನು ಅಥವಾ ಸುಂದರವಾದ ಯಾವುದರ ಆಳವನ್ನೂ ತಿಳಿಯಲಾಗುವುದಿಲ್ಲ. ಶಬ್ದದೊಳಗಿನ ಮೌನವನ್ನು ಹೇಗೆ ತೆಗೆದುಕೊಳ್ಳಬೇಕೆಂದು ನಾವು ಕಲಿಯುತ್ತೇವೆ. ಅದು ನಮಗೆ ಶಾಂತಿಯನ್ನು ನೀಡುತ್ತದೆ. ಮೌನ ಮತ್ತು ನಿಶ್ಚಲತೆ ತನ್ನದೇ ಆದ ಗುಣಗಳನ್ನು ಹೊಂದಿವೆ. ನಮ್ಮೊಳಗಿರುವ ಮೌನದೊಂದಿಗೆ ಅನುಸಂಧಾನಗೈಯುತಿದ್ದರೆ ನಾವು ನಿಶ್ಚಲತೆಯನ್ನು, ಹಿಂದೆಂದೂ ಅನುಭವಿಸದ ಶಾಂತಿಯನ್ನು ಅನುಭವಿಸಲು ಸಾಧ್ಯ. ಶಾಂತಿಯಲ್ಲಿ ಸಾಕಷ್ಟು ಸೌಂದರ್ಯವಿದೆ, ಶಾಂತ ಮನೋಭಾವದಲ್ಲಿ ಶಕ್ತಿಯೂ ಇದೆ. ಇಂಥಹ ಶಾಂತವಾದ ಸಮಯವು ನಮ್ಮ ಮನಸ್ಸಿಗೆ ಸುಪ್ತಾವಸ್ಥೆಯ ಆಲೋಚನೆಗಳು ಮೇಲ್ಮೈಗೆ ಏರಲು ಅವಕಾಶವನ್ನು ನೀಡುತ್ತದೆ. ನಮ್ಮ ಸುಪ್ತಾವಸ್ಥೆಯ ಆಲೋಚನೆಗಳು ನಮ್ಮ ಪ್ರಜ್ಞೆಗಿಂತ ಹೆಚ್ಚು ನಮ್ಮ ಜೀವನವನ್ನು ಮುನ್ನಡೆಸುತ್ತವೆ ಮತ್ತು ರೂಪಿಸುತ್ತವೆ. ಈ ದಿಸೆಯಲ್ಲಿ ಗಮನಿಸಿದಾಗ ಮನುಷ್ಯನಿಗೆ ಶಾಂತಿ, ನೆಮ್ಮದಿಯ ಅವಶ್ಯಕತೆ ಎಷ್ಟಿದೆ ಎಂಬುದು ಮನವರಿಕೆಯಾಗುತ್ತದೆ. ಇದರೊಂದಿಗೆ ‘ಶಾಂತಿ-ನೆಮ್ಮದಿ ಎಲ್ಲಿ ಸಿಗುತ್ತದೆ, ಸಿಗಬಹುದು’ ಎಂಬ ಪ್ರಶ್ನೆಯೊಂದು ನಮ್ಮ ಮುಂದೆ ಉದ್ಭವಿಸುತ್ತದೆ. ಉತ್ತರ ಸರಳವಲ್ಲವಾದರೂ ‘ಅವರವರ ಆಸಕ್ತಿ, ಅಭಿರುಚಿ; ಪ್ಯಾಷನ್ ನಲ್ಲಿ’ ಸಿಗುತ್ತದೆ, ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಹೇಳಬಹುದು. ಆದರೆ ಸಾರ್ವತ್ರಿಕತೆಯತ್ತ ನಾವು ಹೆಜ್ಜೆ ಹಾಕಿದಾಗ ನಮಗೆ ಗೋಚರಿಸುವುದು ಸಂಗೀತ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಎಂಬುದು. ಇವೆಲ್ಲಕ್ಕೂ ಮೂಲವಾಗಿರುವ ಸಾಹಿತ್ಯ ಅನಾದಿಕಾಲದಿಂದಲೂ ಮನುಕುಲಕ್ಕೆ ಶಾಂತಿ, ನೆಮ್ಮದಿ ಹಾಗೂ ಪ್ರೀತಿಯನ್ನು ಹಂಚುತ್ತ ಬಂದಿದೆ. “ಒಂದು ಗ್ರಂಥಾಲಯ ಮಾತ್ರ ಒದಗಿಸುವ ಶಾಂತ ಸೌಹಾರ್ದತೆಗಾಗಿ ನಾನು ಹಾತೊರೆಯುತ್ತೇನೆ” ಎಂಬ ಅಮೇರಿಕನ್ ಕಾದಂಬರಿಕಾರ ರಿಲೇ ಸಾಗರ್ ಅವರ ಮಾತನ್ನು ಅನುಮೋದಿಸಬಹುದು. ಉರ್ದು ಕಾವ್ಯ ರಾಣಿಯಾದ ಗಜಲ್ ಮನಸ್ಸಿಗೆ ಮುದ ನೀಡುವ ಸಾಹಿತ್ಯ ಪ್ರಕಾರ ಎಂಬುದು ಜಾಗತಿಕ ಮಟ್ಟದಲ್ಲಿ ಚಿರಸ್ಥಾಯಿಯಾಗಿದೆ. ಇಂಥಹ ಗಜಲ್ ಕಾವ್ಯ ಪ್ರಕಾರ ಜಗತ್ತಿನ ಎಲ್ಲ ರಸಿಕರನ್ನು ತನ್ನೆಡೆಗೆ ಆಕರ್ಷಿಸುತ್ತಿರುವಾಗ ಕನ್ನಡಿಗರ ಹೃದಯವನ್ನು ಗೆಲ್ಲದಿರಲು ಸಾಧ್ಯವೆ? ಇಲ್ಲ. ಇಂದು ಕನ್ನಡದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಕೃಷಿಯಲ್ಲಿ ನಿರತರಾಗಿದ್ದಾರೆ. ಅವರಲ್ಲಿ ಶ್ರೀಮತಿ ಅಂಬಮ್ಮ ಪ್ರತಾಪಸಿಂಗ್ ರವರೂ ಒಬ್ಬರು.

       ಶ್ರೀಮತಿ ಅಂಬಮ್ಮ ಪ್ರತಾಪ್ ಸಿಂಗ್ ರವರು ೧೯೭೯ ರ ಮೇ ತಿಂಗಳ ಎರಡನೇ ತಾರೀಖಿನಂದು ಜನಿಸಿದ್ದಾರೆ. ಬಿ.ಎ., ಡಿ.ಇಡಿ ಪದವೀಧರರಾದ ಇವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚಡನ ಈ.ಸ.ಹಿ.ಪ್ರಾ.ಶಾಲೆಯಲ್ಲ ಸಹಶಿಕ್ಷಕಿಯಾಗಿ ಕಾರ್ಯವನ್ನು ನಿರ್ವಹಿಸುತಿದ್ದಾರೆ. ಬೋಧನೆಯೊಂದಿಗೆ ಸಾಹಿತ್ಯಿಕ ಪ್ರೀತಿಯನ್ನು ಹೊಂದಿರುವ ಅಂಬಮ್ಮ ಅವರು ಕಾವ್ಯ, ಹೈಕು, ಬಿಡಿ ಲೇಖನ, ವಿಮರ್ಶೆ ಮತ್ತು ಗಜಲ್ ಗಳನ್ನು ನಿರಂತರವಾಗಿ ಬರೆಯುವುದರ ಮೂಲಕ ತಮ್ಮೊಳಗಿನ ಬರಹದ ಶಕ್ತಿಯನ್ನು ಜೀವಂತವಾಗಿಟ್ಟಿದ್ದಾರೆ. ‘ಮನಸ್ಸು’ ಎಂಬ ಕವನ ಸಂಕಲನ, ‘ವಿಚಾರಧಾರೆ’ ಎಂಬ ಪ್ರಬಂಧ ಸಂಕಲನ, ‘ಜೀವನಪಥ’ ಎಂಬ ಲೇಖನಗಳ ಸಂಕಲನ, ‘ಅಂತರ್ಧ್ವನಿ’ ಎಂಬ ಸಂವೇದನಾಶೀಲ ಕೃತಿ ಹಾಗೂ ‘ಮೌನದೊಡಲ ಮಾತು’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

      ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಶ್ರೀಮತಿ ಅಂಬಮ್ಮ ಪ್ರತಾಪಸಿಂಗ್ ರವರ ಅನೇಕ ಲೇಖನಗಳು, ಕವನಗಳು, ಪ್ರಬಂಧಗಳು, ಗಜಲ್ ಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ವಿವಿಧ ಕವಿಗೋಷ್ಠಿಗಳಲ್ಲಿ, ಗಜಲ್ ಗೋಷ್ಠಿಗಳಲ್ಲಿ ಪಾಲ್ಗೊಂಡು ಸಹೃದಯಿಗಳ ಮನವನ್ನು ಗೆದ್ದಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ಹಲವು ಸಂಘಟನೆಗಳು ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಜನಪ್ರಿಯ ಪ್ರಕಾಶನ ಬೀದರ್ ನಾ “ಸಾಹಿತ್ಯ ಸಿರಿ” ಪ್ರಶಸ್ತಿ, ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ನ
” ಸಾಹಿತ್ಯ ಸಿಂಧು” ಪ್ರಶಸ್ತಿ, ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಮೈಸೂರು ನೀಡುವ “ದ.ರಾ.ಬೇಂದ್ರೆ” ಕಾವ್ಯ ಪುರಸ್ಕಾರ, ಚೇತನ ಪ್ರಕಾಶನ ಹುಬ್ಬಳ್ಳಿಯ “ಚೇತನ ಸಾಹಿತ್ಯ ಪುರಸ್ಕಾರ”… ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದು.

        “ನಾನು ಯಾವ ಧರ್ಮಕ್ಕೂ ಸೇರಿಲ್ಲ. ನನ್ನ ಧರ್ಮ ಪ್ರೀತಿ. ಪ್ರತಿಯೊಂದು ಹೃದಯವೂ ನನ್ನ ದೇವಾಲಯ” ಎಂಬ ರೂಮಿಯವರ ಮಾತನ್ನು ನಾವು ಗಜಲ್ ನ ಸ್ಥಾಯಿ ಭಾವದಲ್ಲಿ ಹುಡುಕಬೇಕಾಗಿದೆ, ಕಂಡುಕೊಳ್ಳಬೇಕಾಗಿದೆ. ಈ ನೆಲೆಯಲ್ಲಿ ಗಜಲ್ ಎಂದರೆ ವಾಸನಾರಹಿತ ಪ್ರೀತಿ, ಪ್ರೇಮದ ಆರಾಧನೆಯ ಮಂದಿರ. ಇಲ್ಲಿ ಭಾವನೆಗಳೆ ದೇವರುಗಳು! ಭಾವನಾಜೀವಿಯ ಒಡನಾಡಿಯಾದ ಗಜಲ್ ಹೃದಯಗಳನ್ನು ಬೆಸೆಯುವ, ಮನಸುಗಳನ್ನು ಶುಚಿಗೊಳಿಸುವ ಕಾರ್ಯವನ್ನು ತನ್ನ ಅಶಅರ್ ಮೂಲಕ ಸದ್ದಿಲ್ಲದೆ ಮಾಡುತ್ತಾ ಬಂದಿದೆ, ಬರುತ್ತಿದೆ. ಇಂದಿನ ಬರಡು ಮನೋಭಾವದ ಸ್ಥಿತಿಯಲ್ಲಿ ಶಾಂತಿದೂತ, ಪ್ರೇಮದೂತದ ಪ್ರತೀಕವಾಗಿರುವ ಗಜಲ್ ಸಾಹಿತ್ಯ ವಲಯದಲ್ಲೊಂದು ಆಶಾಕಿರಣವಾಗಿದೆ. ಗಜಲ್ ಗೋ ಶ್ರೀಮತಿ ಅಂಬಮ್ಮ ಪ್ರತಾಪಸಿಂಗ್ ರವರ ‘ಮೌನದೊಡಲ ಮಾತು’ ಗಜಲ್ ಸಂಕಲನದಲ್ಲಿ ಜೀವನ ಪ್ರೀತಿ, ಪ್ರೀತಿ, ಪ್ರೇಮ, ಪ್ರಣಯ, ವಿರಹ, ಕನವರಿಕೆ, ಹತಾಶೆ, ವ್ಯವಸ್ಥೆಯ ತಾಕಲಾಟ, ವರ್ತಮಾನದ ತಲ್ಲಣ-ತವಕಗಳು, ಬದುಕಿನ ಬವಣೆಗಳು, ಸ್ತ್ರೀ ಸಂವೇದನೆಯ ಆಲಾಪ, ನಾಡು ನುಡಿಯ ಅಭಿಮಾನ, ರಾಜಕೀಯ, ಧಾರ್ಮಿಕ ಚಿತ್ರಣ, ಮೌಲ್ಯಗಳ ಹುಡುಕಾಟ… ಎಲ್ಲವೂ ಹದವರಿತು ಮುಪ್ಪರಿಗೊಂಡಿವೆ.

     ಜಗತ್ತಿನಲ್ಲಿ ನಿಜವಾದ ಕತ್ತಲೆಯ ಹೊರತಾಗಿಯೂ, ಬೆಳಕನ್ನು ಸೃಷ್ಟಿಸುವ ಮತ್ತು ಸಕಾರಾತ್ಮಕ ವ್ಯತ್ಯಾಸವನ್ನು ಮಾಡುವ ಜನರ ಕೊರತೆಯಿಲ್ಲ. ಉತ್ತಮ ಆಲೋಚನೆಗಳು ಜಗತ್ತನ್ನು ಉತ್ತಮವಾಗಿ ರೂಪಿಸುತ್ತವೆ. ನಾವು ಕತ್ತಲೆಯಲ್ಲಿ ಬೆಳಕನ್ನು ಹೊಳೆಯುವ ರೂಪಕವನ್ನು ಪ್ರೀತಿಸುತ್ತೇವೆ, ಕಾರಣ ನಾವೆಲ್ಲರೂ ಬೆಳಕನ್ನು ಹುಡುಕುವ ಮತ್ತು ಬೆಳಕಾಗಿರುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಒಳಗಿನಿಂದ ಹೊಳೆಯುವ ಬೆಳಕನ್ನು ಯಾವುದೂ ಮಂದಗೊಳಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಸುಖನವರ್ ಶ್ರೀಮತಿ ಅಂಬಮ್ಮ ಪ್ರತಾಪಸಿಂಗ್ ರವರು ‘ದೀಪ ಹಚ್ಚೋಣ’ ಎನ್ನುವ ರದೀಫ್ ಮೂಲಕ ಕತ್ತಲೆಯನ್ನು ಹೊಡೆದೋಡಿಸುವ ಆಶಾಭಾವವನ್ನು ವ್ಯಕ್ತಪಡಿಸಿರುವ ಈ ಕೆಳಗಿನ ಷೇರ್ ಅನ್ನು ಒಮ್ಮೆ ಗಮನಿಸೋಣ.‌

ಜಗದ ಕತ್ತಲೆಯನು ಕಳೆಯಲು ದೀಪ ಹಚ್ಚೋಣ
ಮನದ ಅಂಧಕಾರವ ತೊಳೆಯಲು ದೀಪ ಹಚ್ಚೋಣ”

ಎಲ್ಲಾ ಕತ್ತಲೆಯ ಹೊರತಾಗಿಯೂ ಬೆಳಕು ಇದೆ ಎಂಬ ಭರವಸೆಯನ್ನು ಈ ಷೇರ್ ದಾಖಲಿಸುತ್ತದೆ. ನಾವು ನಮ್ಮ ಬೆಳಕನ್ನು ಬೆಳಗಲು ಬಿಡುತ್ತಿದ್ದಂತೆ, ನಾವು ಅರಿವಿಲ್ಲದೆಯೇ ಇತರ ಜನರಿಗೆ ಅದೇ ರೀತಿ ಮಾಡಲು ಪ್ರೇರೇಪಿಸುತ್ತೇವೆ. ನಾವು ನಮ್ಮ ಭಯದಿಂದ ವಿಮೋಚನೆಗೊಂಡಂತೆ, ನಮ್ಮ ಉಪಸ್ಥಿತಿಯು ವಾಸ್ತವವಾಗಿ ಇತರರನ್ನೂ ಕತ್ತಲೆಯಿಂದ ಬಿಡುಗಡೆ ಮಾಡುತ್ತದೆ. ನಾವು ಇತರರಿಗೆ ಬೆಳಕನ್ನು ಸೃಷ್ಟಿಸಲು ನೆರವಾದಾಗ ಸ್ವಾಭಾವಿಕವಾಗಿ ನಮ್ಮದೇ ಆದ ರೀತಿಯಲ್ಲಿ ಬೆಳಗುತ್ತೇವೆ ಎಂಬ ಸಂದೇಶವನ್ನು ಈ ಷೇರ್ ಪ್ರಚುರಪಡಿಸುತ್ತದೆ.

    ರಾಷ್ಟ್ರವನ್ನು ನಾಶಮಾಡಲು ಯಾವ ಪರಮಾಣು ಬಾಂಬ್‌ಗಳ ಅಗತ್ಯವಿಲ್ಲ. ಜನಸಾಮಾನ್ಯರ ಪ್ರಾಣಕ್ಕಿಂತ ತಮ್ಮ ಜೇಬಿಗೆ ಬೆಲೆ ಕೊಡುವ ರಾಜಕಾರಣಿಗಳಿದ್ದರೆ ಸಾಕು, ದೇಶ ಅಧಃಪತನದತ್ತ ಮುಖ ಮಾಡುತ್ತದೆ. ಕುತಂತ್ರದ ರಾಜಕಾರಣಿಗಳಿಂದ ಸತತವಾಗಿ ಮೂರ್ಖರಾಗುವ, ಪದೇ ಪದೇ ಮೋಸಗೊಳ್ಳುವ ಜನತೆ ಜಾಗೃತರಾಗಬೇಕಿದೆ. ದೇಶಪ್ರೇಮ ಎನ್ನುವುದು ಮೂಲಭೂತವಾಗಿ ಒಂದು ನಿರ್ದಿಷ್ಟ ದೇಶವು ಜಗತ್ತಿನಲ್ಲಿಯೇ ಅತ್ಯುತ್ತಮವಾಗಿದೆ ಎಂಬ ನಂಬಿಕೆಯಾಗಿದೆ. ದೃಷ್ಟಿ, ಏಕಾಗ್ರತೆ, ಆತ್ಮಸಾಕ್ಷಿ, ಸಮಗ್ರತೆ, ಸಹಾನುಭೂತಿ ಮತ್ತು ಸಾಮಾನ್ಯ ಜ್ಞಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತವೆ. ಪ್ರತಿಯೊಬ್ಬರೂ ತಮ್ಮೊಳಗೆ ಪ್ರತಿಯೊಂದು ಧರ್ಮ, ಪ್ರತಿಯೊಂದು ಸಂಸ್ಕೃತಿ, ಪ್ರತಿಯೊಂದು ಸಂಪ್ರದಾಯ ಮತ್ತು ಪ್ರತಿಯೊಂದು ಭಾಷೆಯ ಒಂದು ಭಾಗವಿದೆ ಎಂಬುದನ್ನು ಮನಗಾಣಬೇಕಿದೆ. ಈ ಹಿನ್ನೆಲೆಯಲ್ಲಿ ಗಜಲ್ ಗೋ ಶ್ರೀಮತಿ ಅಂಬಮ್ಮ ಪ್ರತಾಪಸಿಂಗ್ ರವರ ಈ ಷೇರ್ ಹೆಚ್ಚು ಮುನ್ನೆಲೆಗೆ ಬರುತ್ತದೆ. ಇಲ್ಲಿ ಆಶಯವಿದೆ, ಹಂಬಲವಿದೆ, ಕನಸು ಇದೆ. ಇವೆಲ್ಲಕ್ಕಿಂತ ಹೆಚ್ಚಾಗಿ ದೇಶಾಭಿಮಾನವಿದೆ. ತನ್ನ ರಾಷ್ಟ್ರ, ಸಂಸ್ಥೆ ಅಥವಾ ಕುಟುಂಬದ ಬಗ್ಗೆ ಹೆಮ್ಮೆಪಡದವನು ತನ್ನ ಬಗ್ಗೆ ಹೆಮ್ಮೆ ಪಡುವುದಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.

“ಜಗತ್ತಿಗೆ ತಾನೇ ಜಗದ್ಗುರುವಾಗಿ ಬೆಳಗಲಿ ಭಾರತ
ಸ್ನೇಹ ಸೌಹಾರ್ದತೆಗೆ ಬೆಳಕಾಗಿ ಬೆಳಗಲಿ ಭಾರತ”

   ನಾವು ಪ್ರೀತಿಗೆ ಅಂಟಿಕೊಳ್ಳಲು ನಿರ್ಧರಿಸಿಬೇಕಾಗಿದೆ. ದ್ವೇಷ ತುಂಬಾ ಭಾರವಾದ ಹೊರೆಯಾಗಿದೆ. ಪ್ರೀತಿಯ ಆನಂದಕ್ಕಿಂತ, ಪ್ರೀತಿಯ ನೋವು ಜೀವನದುದ್ದಕ್ಕೂ ಇರುತ್ತದೆ ಎಂಬುದನ್ನು ಗಜಲ್ ಜನ್ನತ್ ಪರಂಪರಾಗತವಾಗಿ ಸಾರುತ್ತಲೆ ಬಂದಿದೆ. ಈ ಮಾರ್ಗದಲ್ಲಿ ಚಿಗುರೊಡೆಯುವ, ನಳನಳಿಸುವ ಗಜಲ್ ಗಳು ಶಾಯರ್ ಶ್ರೀಮತಿ ಅಂಬಮ್ಮ ಪ್ರತಾಪಸಿಂಗ್ ರವರಿಂದ ಮತ್ತಷ್ಟು ಮೊಗೆದಷ್ಟೂ ರಚನೆಯಾಗಲಿ, ಸಹೃದಯಿಗಳ ಮನವನ್ನು ತಣಿಸಲಿ ಎಂದು ಶುಭ ಕೋರುತ್ತೇನೆ.

“ಹೃದಯದ ಭಾಷೆಯನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ
ಇಲ್ಲಿ ಹೃದಯವನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ”
-ರಸಾ ಚುಗತಾಈ

ಅದೇನೋ ಗೊತ್ತಿಲ್ಲ, ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ಗಜಲ್ ನ ಪರಂಪರೆ ಬಗ್ಗೆ ಮಾತಾಡುತಿದ್ದರೆ, ಬರೆಯುತಿದ್ದರೆ ಗಡಿಯಾರಕ್ಕೆ ಮುಳ್ಳಿಗಳಿವೆ ಎಂಬುದನ್ನೇ ಮರೆಯುತ್ತೇನೆ. ಮರೆತರೂ, ಆ ಮುಳ್ಳುಗಳು ಮಾತ್ರ ಚುಚ್ಚಿ ಚುಚ್ಚಿ ತನ್ನ ಇರುವಿಕೆಯನ್ನು ನೆನಪಿಸುತ್ತ ಸಮಯದ ಮಹತ್ವವನ್ನು ಸಾರುತ್ತಲೇ ಇದೆ, ಇರುತ್ತದೆ.  ಹಾಗಾಗಿ ಈ ಲೇಖನಿಗೆ, ಲೇಖನಕ್ಕೆ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಸಿ-ಯುವ್, ಟೇಕೇರ್…!!

ಧನ್ಯವಾದಗಳು..


ಡಾ. ಮಲ್ಲಿನಾಥ ಎಸ್. ತಳವಾರ, 

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top