ಅರ್ಚನಾ ಯಳಬೇರು-ತರಹಿ ಗಜಲ್

ಕಾವ್ಯ ಸಂಗಾತಿ

ಅರ್ಚನಾ ಯಳಬೇರು

ತರಹಿ ಗಜಲ್

ನಯನ ಭಟ್ ಅವರ ಊಲಾ ಮಿಸ್ರ

ಕನಸೊಂದು ಹಣತೆ ಪ್ರಜ್ವಲಿಸುತಿರಲು ಕಾಯಬೇಕದನು ಆರದಂತೆ
ಮನಸೊಂದು ಕನ್ನಡಿ ಫಲಿಸುತಿರಲು ಕಾಪಾಡಬೇಕದನು ಗಾಜಿನಂತೆ

ಮೌನದ ಉತ್ತರವೇ ಅಸುವಿನೊಳು ಪುಟಿದೇಳುವ ಎದೆಗುದಿಗೆ ಮುದ್ದು
ಭಾವವೊಂದು ಜ್ಯೋತಿ ಬೆಳಗುತಿರಲು ಜ್ವಲಿಸಬೇಕದನು ಪ್ರಣತಿಯಂತೆ

ಹಸಿರಾಗಬೇಕಿದೆ ಹೃದಯದ ಅವನಿಯು ಹಸನಾದ ಸಿಹಿ ನೆನಹುಗಳಿಂದ
ಬದುಕೊಂದು ಚಕ್ಕಡಿ ಪಯಣಿಸುತಿರಲು ಸವೆಸಬೇಕದನು ಗಾಲಿಯಂತೆ

ವಿಹರಿಸಬೇಕಿದೆ ಆವರಿಸುವ ವ್ಯಥೆಗಳ ಜಾಡಿನ ಜಾಲವನು ಸೀಳುತಲಿ
ಚಿತ್ತವೊಂದು ಹೊತ್ತಗೆ ಗ್ರಂಥದಂತಿರಲು ಪಠಿಸಬೇಕದನು ಜ್ಞಾನಿಯಂತೆ

ಪ್ರಸವವಾದೀತೇ ಬವಣೆಗಳ ಬಸಿರ ಹೊತ್ತ ಉಸಿರಿನಲ್ಲಿ ನೆಮ್ಮದಿಯು
ಜಸವೊಂದು ಮರೀಚಿಕೆ ಕಾಡುತಿರಲು ಬೆನ್ನತ್ತಬೇಕದನು ಬೇತಾಳದಂತೆ

ಅರಳುತಿದೆ ಅರ್ಚನಾಳ ಹಿತ ಕಾಮನೆಗಳು ಬಾಡುವೆನೆಂಬ ಅರಿವಿಲ್ಲದೆ
ಕಾವ್ಯವೊಂದು ಸುಮ ಘಮಿಸುತಿರಲು ಆಸ್ವಾದಿಸಬೇಕದನು ಭ್ರಂಗದಂತೆ


One thought on “ಅರ್ಚನಾ ಯಳಬೇರು-ತರಹಿ ಗಜಲ್

Leave a Reply

Back To Top