ಅಂಕಣ ಬರಹ
ಕ್ಷಿತಿಜ
ಭಾರತಿ ನಲವಡೆ
ನಗು
ನಗುವೆಂಬ ಆಭರಣ ಮೊಗದ ಮೇಲಿದ್ದರೇ ಅದು ಸುಂದರ ಕಳೆ ಮನದಿ ಶಾಂತತೆಯ ಮಳೆ.ಆಗ ನಮ್ಮ ದೇಹ ಮನಸುಗಳಲಿ ಸಂತೃಪ್ತಿಯ ಹೊಳೆ.
ವಿನೋದ ಕೆಲವೊಮ್ಮೆ ಶಾಲೆಯಲ್ಲಿ ಕ್ಲೇಶದಿಂದ ತನ್ನಷ್ಟಕ್ಕೆ ತಾನೇ ಬೇಸರ ಪಟ್ಟುಕೊಂಡು ಸುಮ್ಮನೆ ಏನನ್ನೋ ವಿಚಾರಿಸುತ್ತ ಕುಳಿತುಬಿಡುತ್ತಾನೆ.ಅವನ ಸ್ನೇಹಿತರು ಆಟಕ್ಕೆ ಕರೆದರೂ ಹೋಗಲ್ಲ.ಇದರ ಬಗ್ಗೆ ಅವನ ನೆಚ್ಚಿನಗೆಳೆಯ ಉಮೇಶ ಒತ್ತಾಯ ಮಾಡಿ ಕೇಳಿದಾಗ ವಿನೋದ”ನನ್ನ ತಂದೆ ನಾನು ಏನೂ ತಪ್ಪು ಮಾಡದಿದ್ದರೂ ಬಯ್ಯುತ್ತಾರೆ.ನಾನೇಷ್ಟೇ ಚನ್ನಾಗಿ ಅಂಕ ತೆಗೆದರೂ ಖುಷಿ ಪಡಲ್ಲ ಬದಲಾಗಿ ಮತ್ತೊಬ್ಬರೊಡನೆ ಹೋಲಿಕೆ ಮಾಡಿ ಸದಾ ಇನ್ನೂ ಚನ್ನಾಗಿ ಮಾಡಬೇಕಿತ್ತು ಎನ್ನುತ್ತಾರಲ್ಲದೆ ಯಾವಾಗಲೂ ಕೋಪದಿಂದ ಕೆಂಡಾಮಂಡಲವಾಗಿರುತ್ತಾರೆ.ಅಪ್ಪಿ ತಪ್ಪಿ ಅಪ್ಪ ನಕ್ಕಿದ್ದನ್ನು ನಾ ಇನ್ನೂ ಕಂಡಿಲ್ಲ.ಇದರಿಂದ ನನಗೆ ತುಂಬಾ ಬೇಸರವಾಗುತ್ತೆ.ನನಗಿಂತ ಕಡಿಮೆ ಅಂಕ ಪಡೆದ ರೋಹನನ ತಂದೆ ಅವನಿಗೆ ಸೈಕಲ್ ಹೊಸಬಟ್ಟೆ,ಪಾರ್ಕಿಗೆ ಕರೆದುಕೊಂಡು ಅವನೊಂದಿಗೆ ಖುಷಿ ಪಡುವ ಕ್ಷಣಗಳನ್ನು ನೋಡಿದಾಗ ತನಗೆ ಆ ಭಾಗ್ಯ ಇಲ್ಲ ಎಂದು ಮನದಾಳದ ಕನವರಿಕೆ ಮೋಡ ಕವಿದಂತಿರುತ್ತದೆ.ಅಮ್ಮನನ್ನು ಕೇಳಿದಾಗ” ನಿನ್ನ ಬಿಟ್ಟು ನಿನ್ನ ತಂದೆಗೆ ಬೇರೆ ಯಾರಿಲ್ಲ ಕಂದ, ನೀನು ಚನ್ನಾಗಿ ಓದಲಿ ಜವಾಬ್ದಾರಿ ತಿಳಿಯಲಿ ಎಂಬ ಉದ್ದೇಶಕ್ಕೆ ಹಾಗೆ ಮಾಡುತ್ತಾರೆ” ಎಂದಾಗ ಕವಿದ ಮೋಡ ವರ್ಷಧಾರೆಯಾದಂತ ಅಶ್ರುತರ್ಪಣ. ನಿಜ ಅಪ್ಪ ನನ್ನ ಒಳ್ಳೆಯದಕ್ಕೆ ಮಾಡಲಿ ಪರವಾಗಿಲ್ಲ.ಒಂದು ಆತ್ಮೀಯತೆ ಯ ಮಾತು ಇಲ್ಲ ಎಂಬ ವಿಚಾರಬಂದಾಗ ಆಗುವದೆಲ್ಲ ಒಳ್ಳೆಯದಕ್ಕೆ ಎನ್ನುವ ಅಮ್ಮನ ಮಾತು ನೆನಪಾದಾಗ ಮತ್ತೆ ತನ್ನ ಅಭ್ಯಾಸ,ಗೆಳೆಯರೊಡನೆ ಆಟ ಯಾಂತ್ರಿಕವಾಗಿರುತ್ತಿತ್ತು.
ನಿಜ ನಗುಮುಖದ ಒಂದು ಮಾತು ಒಂದು ಧೈರ್ಯ ಮನದ ತಾಕಲಾಟದಲಿ ಧುಮುಕಿ ಸಂಭ್ರಮವನ್ನು ಆಪ್ತತೆಯನ್ನು ಬೆಸೆಯುತ್ತದೆ.
ಮನುಷ್ಯರಿಗೂ ಪ್ರಾಣಿಗಳಿಗೂ ಮಧ್ಯ ಇರುವ ಮುಖ್ಯವಾದ ಒಂದು ವ್ಯತ್ಯಾಸವೆಂದರೆ ಅದೇ ಆನಂದ.ಒಬ್ಬ ಮನುಷ್ಯ ಗಂಭೀರವಾಗಿರದೇ ನಗುತ್ತಾ ಇರುವುದರೊಂದಿಗೆ ಆಹ್ಲಾದಕರವಾಗಿ ಆನಂದದಿಂದ ಇರುವದು! ಗೆಲುವಿನ ಸಂಪೂರ್ಣ ತೃಪ್ತಿಯನ್ನುಹಾಯಾಗಿ ಅನುಭವಿಸುವುದು.ಮತ್ತೊಬ್ಬರ ಸಂತೋಷವನ್ನು ತಾನು ಕೂಡ ಹಂಚಿಕೊಳ್ಳುವದು.
ಆಫೀಸಿನಿಂದ ಮನೆಗೆ ಬರುತ್ತಿದ್ದ ತಂದೆಯನ್ನು ಕಂಡು ಮಕ್ಕಳಿಬ್ಬರು ಸಾಹೇಬರು ಬರುತ್ತಿದ್ದಾರೆ ಸ್ವಾಗತಿಸಿ!”ಕಿರುಚುತಿದ್ದಂತೆ ಓಡೋಡಿ ಬಂದು ಕೈಯಲ್ಲಿಯ ಬ್ಯಾಗನ್ನು ಹಿಡಿದು ಬರುವದನ್ನು ಕಂಡ ಶ್ರೀಮತಿ ನಕ್ಕು ತಿಂಡಿ ಚಹದೊಂದಿಗೆ ಎಲ್ಲರೂ ಕೂಡಿ ನಗುತ ಸವಿವ ಸಂತಸ ಬಣ್ಣಿಸಲಾಗದು.
ಇಲ್ಲಿ ಈ ಸಂದರ್ಭವನ್ನು ಗಮನಿಸಿದಾಗ ಅದು ಸ್ಥಿತಪ್ರಜ್ಞೆಗೆ ಸಂಬಂಧಿಸಿದ್ದು.ಪ್ರಶಾಂತವಾಗಿರುವದು,ಮಂದಸ್ಮಿತವದನ ಅವರು ಯಾವುದೇ ಕೆಲಸದಲ್ಲಿದ್ದರೂ ಅರ್ಧ ಗೆದ್ದಂತೆ.ತನ್ನ ತಪ್ಪುಗಳನ್ನು ಎಷ್ಟು ಬೇಗ ತಿಳಿದುಕೊಳ್ಳಲಿಲ್ಲ ಎನ್ನುವುದು ಕೂಡ ಮನುಷ್ಯನ ವ್ಯಕ್ತಿತ್ದ ಮೇಲೆ ಆಧಾರವಾಗಿರುತ್ತದೆ.ತನ್ನ ತಪ್ಪುಗಳನ್ನುನೋಡಿ ನಗುವದು ಒಪ್ಪಿಕೊಳ್ಳುವದು ಕೂಡ
ದೊಡ್ಡ ಕಲೆಯೇ.ಯಾವುದೋ ಒಂದು ವಾದವನ್ನು ರೂಪಿಸಿ ನಗೆಯನ್ನು ಹೊಗೆಯಾಗಿಸುವ ಮನಸ್ಸಾಕ್ಷಿ ಇಲ್ಲದ ಕಲೆ ಕೆಲವರಿಗೆ ಕರತಲಾಮಲಕ.
ನಗು ಪ್ರೀತಿ,ಮಮತೆ, ಹೃದಯವೈಶಾಲ್ಯತೆಗೆ ನಿದರ್ಶನ.ಮೊಗದಲ್ಲಿ ಪ್ರಸನ್ನತೆ ಮುಗುಳ್ನಗೆ ಎನ್ನುವದು ಪ್ರೀತಿಯಿಂದ ಸರ್ವರನ್ನು ಸಮತಾಭಾವದಿಂದ ಸಹನೆಯಿಂದ ಅರಿತು ಬೆರೆತಾಗ ಬರುತ್ತದೆ.
ಕೋಪದಿಂದ ಸಾಧಿಸಲಾಗದ ಕಾರ್ಯ ನಗು ಸಮಾಧಾನದಿಂದ ಸಾಮರಸ್ಯದಿಂದ ಸಾಧಿಸಬಹುದು.
ನಗುವು ಮನದ ಪ್ರಸನ್ನತೆಯನ್ನು ಪ್ರಜ್ವಲಿಸುವಂತೆ ಮಾಡಿ ಮಾತು ಬಲ್ಲವ ಮಾಣಿಕ್ಯ ತಂದ ಎಂಬ ಮಾತಿನಂತೆ ಧನಾತ್ಮಕ ಫಲಿತಾಂಶವನ್ನು ನೀಡುತ್ತದೆ.
ನಗುವುದಕ್ಕೂ ಅದರದೇ ಆದ ಸಮಯ ಸಂದರ್ಭ ಎಂಬ ಇತಿಮಿತಿಗಳಿವೆ.ಯಾರದೋ ದುಃಖ ಕಷ್ಟವಿದ್ದಾಗ ನಗು ಆಭಾಸವಾಗುತ್ತದೆಯಾದರೂ ಆತ್ಮಸ್ಥೈರ್ಯ ತುಂಬಿ ಒಂದು ಮಂದಸ್ಮಿತ ಗೆಲುವಿಗೆ ಪ್ರೇರಣೆ,ಧೈರ್ಯವನ್ನು ನೀಡುತ್ತದೆ.
ನಗುವೇ ನಮ್ಮ ಆಯುಷ್ಯದ,ಆರೋಗ್ಯದ ಗುಟ್ಟು.ಇಂದು ಒತ್ತಡದ ಬದುಕಲಿ ನಗು ಎಂಬುದೇ ಮರೆತು ಹೋಗಿ ಹಲವಾರು ಕಾಯಿಲೆಗೊಳಗಾದ ಮೇಲೆ ದುಡ್ಡು ಕೊಟ್ಟು ನಗುವ ಕೊಳ್ಳಲು ಹಾಸ್ಯಲಾಸ್ಯ, ನಗುವ ಕೂಟವನ್ನು ಸೇರಲಾಗುತ್ತಿದೆ. ಇದಕ್ಕೆಲ್ಲ ನಾವೇ ಪರಿಹಾರ ಕಂಡುಕೊಳ್ಳಬೇಕು.ಕಷ್ಟಗಳು ಮನುಷ್ಯರಿಗೆ ಬರದೇ ಮರಕ್ಕೆ ಬರುವದಿಲ್ಲ.ಎಂತಹ ಸನ್ನಿವೇಶ ಬಂದರೂ ಬೆದರದೇ ಬೆಚ್ಚದೇ ನಗುನಗುತ ಎದುರಿಸುವ ಛಾತಿ ನಮ್ಮದಾಗಬೇಕು.
ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ನಗುವ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತಬಾಳುವಂತೆ
ಮಿಗೆ ನೀನು ಬೇಡಿಕೊಳ್ಳೊ
—ಮಂಕುತಿಮ್ಮ
ಎಂಬ ಡಿ. ವಿ.ಗುಂಡಪ್ಪನವರ ಕಗ್ಗದ ಸಾರದಂತೆ ನಗುವದು ಮಾನವನ ಸಹಜವಾದ ಧರ್ಮ
ನಗಿಸುವದು ನಾವು ಆಚರಿಸಬೇಕಾದ ಪರಧರ್ಮ,ಮತ್ತೊಬ್ಬರ ನಗುವನ್ನು ಕೇಳುತ್ತಾ ನಾವು ನಗುವದು ಅತಿಶಯದ ಧರ್ಮ.ನಾವು ನಗುವ,ನಗಿಸುವ ಮತ್ತೊಬ್ಬರನ್ನು ನಗಿಸುತ್ತ ನಾವೂ ನಗುವಂತ ಭಾವವಿರಲಿ ಎಂದು ಆ ವರವನ್ನು ನೀನು ಅಧಿಕವಾಗಿ ಪರಮಾತ್ಮನಲ್ಲಿ ಬೇಡಿಕೊಳ್ಳು ಎಂಬ ಡಿ.ವಿ.ಜಿಯವರ ಕಗ್ಗದ ನುಡಿ ಸರ್ವಕಾಲಿಕ ಔಷಧಿಯಿದ್ದಂತೆ.ನಗುತ ನಗಿಸುತ ಬಾಳ ಪಯಣ ಸವೆಸೋಣ ಅಲ್ಲವೇ?
ಭಾರತಿ ನಲವಡೆ
ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ