ಕಾವ್ಯ ಸಂಗಾತಿ
ಸ್ಮಿತಾ ಬನಹಟ್ಟಿ
ಮಾತೆ-ಸುತೆ
ಭೋರ್ಗರೆವ ವಾತ್ಸಲ್ಯದ ಕಡಲು ಜನ್ಮದಾತೆ ಚಿಪ್ಪೊಳಗಿನ ಸ್ವಾತಿಯ ಮುತ್ತಂತೆ ತನುಜಾತೆ
ಜತನದಿ ಕಾಯ್ವಳು ಕರುಳಕುಡಿಯನು ಮಾತೆ
ಅವಳ ಪ್ರತಿರೂಪವಾಗಿ ಬೆಳೆಯುವಳು ಸುತೆ
ಮಡಿಲನು ಬಯಸಿ ಕೊರಳ ಬಳಸಲು ಪುತ್ರಿ
ಅಕ್ಕರಯಿಂದ ಮುದ್ದಿಸುತ ನುಡಿವಳು ಧಾತ್ರಿ
ಪ್ರೇಮದಿಂದಿರಲೆಂದು ಈ ಬಾಂಧವ್ಯದ ಮೈತ್ರಿ
ಮನದುಂಬಿ ಆಶೀರ್ವದಿಸಿಲು ಯಶವು ಖಾತ್ರಿ
ರಾಜಕುಮಾರಿಯಂತೆ ಸಲಹುವರು ಹೆತ್ತವರು
ದಣಿವಿರದ ಅಮ್ಮನ ಕಕ್ಕುಲತೆ, ಅಪ್ಪನ ಬೆವರು
ಅಪರಿಚಿತವಾಗುವುದು ತಾಯಿಯಿಲ್ಲದ ತವರು
ಕರುಣಿಸಿಹನು ತನ್ನ ಪ್ರತಿನಿಧಿಯಾಗಿ ದೇವರು
ಕರೆದಾಗಲೆಲ್ಲ ಸಂತಸವು ‘ಅಮ್ಮಾ’ ಎಂಬ ಉಕ್ತಿ
ಪದದಲ್ಲಿ ಅಡಗಿಹುದಲ್ಲಾ ಅದೆಂತಹ ಮಹಾಶಕ್ತಿ
ಮಗಳಾಗಿ ಮರೆಯದಿರೆಂದು ಪ್ರೀತಿ, ಗೌರವಭಕ್ತಿ
ಸಿಗುವುದಾಗಲೆ ತಾಯಿಯ ಹಾರೈಕೆಗಳಾಗಿ ಮುಕ್ತಿ