ಕಾವ್ಯ ಸಂಗಾತಿ
ಸೋಲು ಗೆಲುವಿನ ಮೆಟ್ಟಿಲು
ಇಂದಿರಾ ಮೋಟೆಬೆನ್ನೂರ.
ಸೋತಾಗ ಕುಗ್ಗದೇ
ಗೆದ್ದಾಗ ಹಿಗ್ಗದೇ
ಮುನ್ನುಗ್ಗಿ ಬಾಳುವುದೇ
ಜೀವನ….
ಸೋತೆನೆಂದು ಮುಂದಿಟ್ಟ
ಹೆಜ್ಜೆ ಹಿಂದಿಡಬೇಡ…
ಸೋಲದು ಗೆಲುವಿಗೆ
ಸೋಪಾನ….
ಹಾದಿಯಲಿ ನಡೆವಾಗ
ಎಡವಿ ಬೀಳುವುದು ಸಹಜ…
ನೋವುಂಡ ಹೃದಯಕ್ಕೆ ಗೊತ್ತು
ಹೂವಲ್ಲ ಅದು ನೋವ ಕಣಜ…
ಉಳಿಪೆಟ್ಟು ಬೀಳದೆ ಶಿಲೆ
ಮೂರ್ತಿ ಹೇಗಾದೀತು..?
ಕಹಿ ಸವಿದ ಮನಕೆ ಗೊತ್ತು
ಸಿಹಿಯ ಸವಿ ಬೆಲೆಯೇನೆಂದು…..
ಸೋತು ಗೆಲ್ಲಬೇಕು ಜೀವನದ
ಅದಮ್ಯ ಪ್ರೀತಿ…
ದೂರವಿದ್ದು ಮೆಲ್ಲಬೇಕು ಸನಿಹವ
ಅನನ್ಯ ರೀತಿ….
ಸೋಲು ಗೆಲುವಿನ ಮೆಟ್ಟಿಲು
ಮಾತಿದು ಮನ ಮುಟ್ಟಲು
ಹೃದಯ ಕದ ತಟ್ಟಲು
ಸಾಧಿಸುವ ಛಲ ಹುಟ್ಟಲು
ಬಾಳಿದು ಬೆಳಕಿನ ತೊಟ್ಟಿಲು…..
ಋತು ಚಕ್ರದುರುಳಿನಲಿ
ಹಗಲಿರುಳಿನ ಓಟದಲೀ
ಕಾಲಚಕ್ರದಲುಗಿನ ನೋಟದಲಿ
ಸೋಲು ಗೆಲುವಿನ
ಚದುರಂಗದಾಟ…
ನೋವು ನಲಿವ ಸೋತು ಗೆಲುವ
ಅಳಿವ ಉಳಿವ ಪಗಡೆಯಾಟ…
ಕತ್ತಲು ಬೆಳಕಿನ ನೆರಳಿನಾಟ..
ಸೋಲಿನ ದಾರಿಗೆ ಎಸೆದ ಕಲ್ಲುಗಳ
ಜೋಪಾನವಾಗಿ ಎತ್ತಿಟ್ಟು ಕೊಳ್ಳು..
ಮುಂದೊಂದು ದಿನ
ಚೆಂದದ ಮನೆ ಕಟ್ಟಿ
ತಂಗೋಣವಲ್ಲಿ… ತಂಬೆಳಕಿನಲ್ಲಿ…
ಕಲ್ಲೆಸೆದವರ ಕಣ್ಣು
ಅಚ್ಚರಿಯಲ್ಲಿ ಅರಳುವುದು ನೋಡು…
ಮಾನಾಪಮಾನಗಳ ನೋವ
ಜೀವ ಹೂವಾಗಿಸಿ….
ಭಾವ ಜೇನಾಗಿಸಿ…
ಛಲದಂಕ ಮಲ್ಲನಂತೆ….
ಅರ್ಜುನನ ಬಾಣದಂತೆ…
ಗುರಿ ಸಾಧನೆಯತ್ತ..
ಕೊಂಕು ಮಾತುಗಳ
ಡೊಂಕು ನೋಟಗಳ
ಬದಿಗೆ ಸರಿಸುತ್ತ
ಹಾಕೋಣ ಹೆಜ್ಜೆ….ದೃಢತೆಯಿಂದ
ಎಲ್ಲವಳಿದರೂ ಎದೆಗುಂದದೆ
ಫೀನಿಕ್ಸ್ ಪಕ್ಷಿಯಂತೆ
ಹೊಸ ನಾಡ ಕಟ್ಟೋಣ….
ಸೋಲಲ್ಲೇ ಗೆಲುವಿನಾತ್ಮವ
ಬಿತ್ತೋಣ….
ಗೆಲುವು ತಲೆ ಬಾಗಿ ಮಣಿದು
ನಮಿಸಿ ನಿನ್ನಡಿಗೆ..ಸ್ಫುರಿಸಿ ನಿನ್ನುಡಿಗೆ..
ಮಮತೆ ಸಮತೆಯ ಗೂಡಿಗೆ….
ಗುರಿ ಸಾಧನೆಯ ಹಾದಿಯಲಿ
ಮುಳ್ಳುಗಳ ಹಾಸಿಗೆ….
ಗೆಲುವಿನ ಗುಲಾಬಿ ಬಾಡದಿರಲಿ..
ಸೋಲಿನ ಕಾವಿಗೆ….
ಸೋಲಿನೆದೆಯ ಮೇಲೆ
ಕಾಲನೂರುತ ಚಿಮ್ಮಿ ಗೆಲುವಿನೆದೆಗೆ
ಕನ್ನ ಹಾಕುವ ನಡೆಬೇಗ ಗೆಳತಿ……
ಇಂದಿರಾ ಮೋಟೆಬೆನ್ನೂರ.