ನಿಲ್ಲು ನಿಲ್ಲು ಒಂದೇ ನಿಮಿಷ ಕೊಟ್ಟೆ ಹೃದಯ ನಿನಗೆ

ಲಹರಿ

ಜಯಶ್ರೀ.ಜೆ. ಅಬ್ಬಿಗೇರಿ

ನಿಲ್ಲು ನಿಲ್ಲು ಒಂದೇ ನಿಮಿಷ

ಕೊಟ್ಟೆ ಹೃದಯ ನಿನಗೆ

ನನ್ನೊಲವಿನ ಶ್ಯಾಮು (ಶ್ಯಾಮ)

ನೀ ಕೊಟ್ಟ ಸವಿಮುತ್ತುಗಳ ಹಾಡುಹಗಲೇ ಹರವಿಕೊಂಡು ಮುತ್ತುಗಳ ಮತ್ತಲ್ಲಿ ಮೂಕಳಾಗುವೆ. ಇನಿಯನಿಂದ ಹೂಮುತ್ತು ಪಡೆದ ನೀನೇ ಧನ್ಯ ಎಂದು ಹಣೆಯನ್ನು ಮೃದುವಾಗಿ ಸವರಿ ನಗುವೆ. ನಗುವ ರಭಸಕ್ಕೆ ಕೆಂಪಾಗುತ್ತದೆ ಕೆನ್ನೆ. ಕೆನ್ನೆ ತಾನು ಪಡೆದ ಸವಿಜೇನಿನ ಲೆಕ್ಕ ಹಾಕಲು ಮುಂದಾಗುತ್ತದೆ. ಅವುಗಳನ್ನೆಲ್ಲ ಎಣಿಸುತ್ತ ಕನ್ನಡಿಯತ್ತ ಬಂದು ನಿಂತಾಗ ಬೆನ್ನ ಹಿಂದೆ ನಿಂತು ನೀನು ತೋಳು ಬಳಸಿದ್ದು ನೆನಪಾಗಿ ಕಾಮನಬಿಲ್ಲು ಕಂಡವಳಂತೆ ಕುಣಿಯುವೆ. ನಲ್ಲನ ಗಲ್ಲಕೆ ಈ ಗಲ್ಲವೇ ಅಲ್ಲವೇ ತಿಕ್ಕಿ ತುಂಟತನದಿಂದ ನಕ್ಕಿದ್ದು ಎಂದು ನನ್ನ ಗಲ್ಲವನ್ನೇ ಸಣ್ಣಗೆ ಚಿವುಟಿ ಖುಷಿ ಪಡುವೆ. ನಿನ್ನ ಕುಡಿಮೀಸೆ ಚುಚ್ಚಿದಾಗ ಕಚಗುಳಿಯಿಟ್ಟಂತಾಗಿ ಸಣ್ಣದಾಗಿ ರೋಮಾಂಚಿತಳಾಗಿದ್ದು. ಅದೇ ಸನಿಹ ಇನ್ನೂ ಇದ್ದಿದ್ದರೆ ಎಷ್ಟು ಚೆಂದ ಅಲ್ಲವೇ? ಎಂದು ಮನದಲ್ಲೇ ಅಂದುಕೊಳ್ಳುತ್ತೇನೆ. ಅಬ್ಬಬ್ಬಾ! ಅವೆಲ್ಲ ನೆನದರೆ ಸರಸ ಸಲ್ಲಾಪವ ಹಿಡಿದಿಡಲು ಕಾಳಿದಾಸನ ಲೇಖನಿಯೂ ಬಡವಾದಂತೆ ಅನಿಸಿದ್ದೂ ಉಂಟು. ಇದೆಲ್ಲ ಸಾಲದೆಂಬಂತೆ ಉದುರಿದ ತರಗೆಲೆಗಳ ನಡುವೆ ನಡೆಯುವಾಗಲೂ ಬರುವ ಶಬ್ದದಲಿ ಕೈ ಕೈ ಹಿಡಿದು ನಡೆದ ನೂರಾರು ನೆನಪುಗಳಿಗೆ ಮನದಲ್ಲಿ ಸುಖದ ಹೂಗಳು ಅರಳುವವು. ಎಲ್ಲಿಂದ ಧುಮ್ಮಿಕ್ಕಿ ಬರುತ್ತವೆಯೋ ಏನೋ ಈ ನೆನಪುಗಳು ಬಿಕ್ಕಿ ಬಿಕ್ಕಿ ಅಳುವಂತೆ ಮಾಡಿ ಬಿಡುತ್ತವೆ. ನೆನಪುಗಳ ಸಹವಾಸವನ್ನೇ ಬಿಟ್ಟುಬಿಡಬೇಕೆಂದು ಅದೆಷ್ಟೋ ಸಲ ಗಟ್ಟಿ ನಿರ್ಧಾರ ಮಾಡಿದರೂ ಪದೇ ಪದೇ ನಿನ್ನದೇ ನೆನಪುಗಳು ಮೌನದಲ್ಲಿ ಕಣ್ಣಂಚನು ತೇವಗೊಳಿಸುತ್ತಿವೆ. ಒಮ್ಮೊಮ್ಮೆ ನನಗೆ ನಾನೇ ಅಂದುಕೊಳ್ಳುತ್ತೇನೆ ಬಿಸಿಲುಗುದುರೆಯೇರಿ ಚಂದ್ರ ತಾರೆಗಳಿಗೆ ಲಗ್ಗೆ ಹಾಕುವ ಕನಸು ಕಾಣುತ್ತಿದ್ದೇನೇನೋ ಎಂದು!

ನಯವಂಚಕನ ದ್ರೋಹದಲ್ಲಿ ಪ್ರೀತಿಯಿಂದ ದೂರಾದ ನನಗೆ, ಸಭ್ಯ ಸಜ್ಜನಿಕೆಯ ಚೆಲುವನಾದ ನೀನು ಕಣ್ಣಿಗೆ ಬಿದ್ದೆ. ಮತ್ತೊಮ್ಮೆ ಗರಿಗೆದರಿ ಹಾರಿದಂತಾಯಿತು. ಮೊದಲ ಸಲದ ಪ್ರೀತಿಯಲ್ಲಿ ಕೈ ಸುಟ್ಟುಕೊಂಡ ನನಗೆ ಬದುಕೇ ಬೇಡವಾಗಿತ್ತು. ಆ ಮೋಸಗಾರ ಎಸೆದ ಒಲವೆಂಬ ಮಾಯದ ಹೂವು ಎದೆಯ ತಲೆಯೊಡೆದು ರಕ್ತ ಚಿಮ್ಮಿಸಿತು. ಹೃದಯದಂಚನು ತಾಗಿ ಸುಮ್ಮನದು ಮಾಯವಾಗಲಿಲ್ಲ. ಮೋಹಪಾಶದಲ್ಲಿ ಸಿಕ್ಕಿ ವಿಲ ವಿಲ ಒದ್ದಾಡಿದ ಕಾಲವದು. ನೆನಪುಗಳು ದಿನವೂ ಕೆಣಕಿ ನೋಯಿಸುತ್ತಿದ್ದ, ಕೆನ್ನೆ ತೋಯಿಸುತ್ತಿದ್ದ ಕಾಲವದು. ಆಗ ಹೃದಯಕ್ಕೆ ಹತ್ತಿರವಾದವನೇ ನೀನು. ಜೀವನಕ್ಕೆ ಪ್ರಧಾನವಾದ ಪ್ರೀತಿ ಮೊದಮೊದಲು ನೋಡಲು ಪರಾಕಾಷ್ಟೆಯಲ್ಲಿದೆ ಎಂದೆನಿಸಿದರೂ ಒಳಗೊಳಗೆ ತುಂಬ ತೆಳ್ಳಗಿರುತ್ತದೆ. ಬರಬರುತ್ತ ತಾನೂ ಬಲಗೊಳ್ಳುತ್ತ ಬದುಕನ್ನು ಬಲಗೊಳಿಸುತ್ತ ಬಲಿಷ್ಟವಾಗಿ ಬೆಳೆಯುತ್ತದೆ. ಜೀವಕ್ಕೆ ಆಸರೆಯಾಗಿ ಎದೆಯುದ್ದ ಎದ್ದು ನಿಲ್ಲುತ್ತದೆ. ಹರೆಯದ ಅರಿಯದ ಆಸೆಗಳಿಗೆ ಇಂಬು ಕೊಟ್ಟಿದ್ದು ಮೈಗೆ ಖುಷಿ ನೀಡೀತು. ಆದರೆ ಅದು ಜೀವನದ ಹಾದಿಯುದ್ದಕ್ಕೂ ಸಾಗುವ ಪವಿತ್ರ ಪ್ರೇಮವಾಗಲಾರದು. ಅವನು ಕೈ ಕೊಡದಿದ್ದರೆ ನಾನು ಎಂಥ ಸಂಕಷ್ಟಕ್ಕೆ ಸಿಲುಕಿಹಾಕಿಕೊಳ್ಳುತ್ತಿದ್ದೆ ಎಂಬುದನ್ನು ಮನಮುಟ್ಟುವಂತೆ ತಿಳಿಸಿದ ಸೊಗಸುಗಾರ ನೀನು. ಒಡಲಿನ ಒಳಗಿನ ಭಯವನ್ನು ಸರಿಸಿ ಹೃದಯವೀಣೆ ಮೀಟಿದವನು.

ಬದುಕಿಗೆ ಪ್ರೀತಿ ಎನ್ನುವುದು ಒಂದು ನೆಪ ಅಥವಾ ಒಂದು ತೆಳ್ಳಗಿನ ಚೌಕಟ್ಟು. ಎಲ್ಲವೂ ಸ್ವಾರ್ಥದ ಮೂಸೆಯಲ್ಲೇ ನಡೆಯೋದು. ಪ್ರೀತಿಯೂ ಅದಕ್ಕೆ ಹೊರತಲ್ಲ. ಪ್ರೀತಿ ಸ್ವಾರ್ಥಕ್ಕೆ ಪೂರಕವಾಗದು ಎಂದು ತಿಳಿದಾಗ ಎಷ್ಟೋ ಸಮಯದಿಂದ ಅಂದಗಾಣಿಸಿದ ಒಲವನ್ನು ಮುರಿಯಲು ಮುಂದಾಗುತ್ತೇವೆ. ಪ್ರೀತಿಯನ್ನು ರೂಪಿಸುವುದು; ನಿಸ್ವಾರ್ಥ, ಪರಿಶುದ್ಧ ನಿಷ್ಕಲ್ಮಷ ಮನಸ್ಸು ಮಾತ್ರ ಎಂಬುದನ್ನು ನಾನು ನಂಬುತ್ತಿರಲಿಲ್ಲ ಕಣೋ. ಹದಿಹರೆಯದ, ಹದಗೊಳ್ಳದ, ಮನಸ್ಸಿನ ಬಯಕೆಗಳಿಗೆ, ತುಡಿತಗಳಿಗೆ ತಲೆ ಕೆಡಿಸಿಕೊಳ್ಳುವುದಕ್ಕೆ ಪ್ರೀತಿ ಎನ್ನುವರು ಅಂಬೋದು ನನ್ನ ನಂಬಿಕೆಯಾಗಿತ್ತು. ಅದನ್ನೆಲ್ಲ ಹುಸಿಗೊಳಿಸಿದ ಮಾಯಗಾರ ನೀನು. ಬದುಕಿನ ಎಲ್ಲ ಆಗು ಹೋಗುಗಳನ್ನು ಅಂಗೈನೆಲ್ಲಿ ಮಾಡಿಕೊಂಡು ಎದೆಯಲ್ಲಿ ಒಲವಿನರಮನೆ ಕಟ್ಟಿ ತೊರಿಸಿದ ಜಾದೂಗಾರ.
ಸಕಲವನ್ನು ಅರಗಿಸಿಕೊಳ್ಳುವ ಶಕ್ತಿ ಪ್ರೀತಿಗಿದೆ. ಸದ್ಯ ಪ್ರೀತಿ ಕೊಂಚ ಬರಡಾಗಿದೆ ಎಂದ ಮಾತ್ರಕ್ಕೆ ಮುಂದೆಯೂ ಹಾಗೆಯೇ ಎಂದು ಭಾವಿಸಬೇಕಾಗಿಲ್ಲ. ಅದರ ಚೆಂದದ ಸ್ವರೂಪ ಶಕ್ತಿ ಅಭಿವ್ಯಕ್ತಿ ಪಡೆಯಬೇಕಾದರೆ ಕಾಲ ಕೂಡಿ ಬರಬೇಕು. ಆ ಬಗ್ಗೆ ಭರವಸೆ ಕಳೆದುಕೊಳ್ಳಬೇಕಿಲ್ಲ. ಪ್ರೀತಿಗೆ ಮರುಹುಟ್ಟು ಇದೆ ಎಂದು ತಿಳಿತಿಳಿಯಾಗಿ ತಿಳಿ ಹೇಳಿ ನನಗೆ ಮರುಹುಟ್ಟು ನೀಡಿದವನು ನೀನು. ದಿಕ್ಕು ತಪ್ಪಿದ ಬದುಕಿನ ಹಡಗಿಗೆ ದಿಕ್ಸೂಚಿಯಾದೆ. ನಿನ್ನೊಲವಿನ ಘಮಲು ನಾಸಿಕಕ್ಕೆ ಬಡಿದು ಈ ಸರಿ ಮಧ್ಯರಾತ್ರಿಯಲ್ಲೂ ಆಘ್ರಾಣಿಸಿಕೊಳ್ಳುವಂತೆ ಮಾಡುತ್ತಿದೆ. ನಿನ್ನ ಪ್ರಣಯದಾಟಕೆ ಮೈಯಾಗುವ ಹಸಿವು ವಿಶಾಲವಾಗಿ ಹರಡುತ್ತಿದೆ.

‘ಒಲವಿನ ವಲಯದಲ್ಲಿ ಸ್ತಬ್ಧ ವಾತಾವರಣವಿದೆ ಎಂದು ಭಾವಿಸದಿರು. ಒಲವಿನ ಚಟುವಟಿಕೆಗಳು ಒಳನಾಡಿಗೆ ನುಗ್ಗಿವೆ ಅಷ್ಟೇ. ಅವು ಜೀವನಾಡಿಗೆ ನುಗ್ಗಿದರೆ ಜೀವ ಪುಟಿದೇಳುತ್ತದೆ ಪ್ರೀತಿ ಕೈ ಹಿಡಿಯುತ್ತದೆ ಬದುಕಿನಲ್ಲಿ ಕೇವಲ ಸ್ವಾರ್ಥ ತುಂಬಿದೆ ಎಂಬ ಭ್ರಮಾತ್ಮಕತೆಯನ್ನೇ ವಾಸ್ತವವೆಂದು ತಿಳಿದರೆ ಪ್ರೀತಿಯ ತಾಯಿಬೇರುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಹುಷಾರು!’ ಎಂದು ಎಚ್ಚರಿಸಿದವನು. ಜೀವನ ಯಾಂತ್ರಿಕವಾದದ್ದು ಎನ್ನುವ ಪರಿಕಲ್ಪನೆ ಮಾನವೀಯ ಸಂವೇದನೆಗಳಿಗೆ ಅಪಾಯಕಾರಿಯಾದದ್ದು. ಅದು ಪ್ರೀತಿಯ ಚಲನೆಯನ್ನೂ ವ್ಯಾಪಾರೀಕರಣಕ್ಕೆ ತುಡಿಯುವಂತೆ ಮಾಡಿಬಿಡಬಹುದು.ಜಾಗರೂಕಳಾಗಿರು! ಚಿಂತೆ ಬಿಡು, ಪ್ರಸನ್ನವಾಗಿರು
ಆನಂದವಾಗಿರು.ಎಂದೆಲ್ಲ ಕಿವಿಮಾತುಗಳನ್ನು ಹೇಳಿ ಜೀವಕೆ ಜೀವ ತುಂಬಿದವನು.

ಅದೊಂದು ಮುಂಜಾವು ಚಳಿಗಾಲದ ತೆಳ್ಳನೆಯ ಮಂಜು, ಸುಳಿಯುತ್ತಿದ್ದ ಸಣ್ಣ ಗಾಳಿಗೆ ಎದ್ದೇಳುತ್ತಿದ್ದ ನೆಲದ ಮೇಲಿನ ಧೂಳಿನೊಂದಿಗೆ ಬೆರೆತು ಆಟ ಆಡುತ್ತಿತ್ತು. ಅದನ್ನು ನೋಡಿದ ಮನಸ್ಸು ಹೀಗೆ ಬೆರೆಯುವ ಆಟಕ್ಕೆ ನೀ ಬೇಕೇ ಬೇಕು ಎಂದು ಹಟ ಹಿಡಿದಿತ್ತು. ಅಕಸ್ಮಾತ್ತಾಗಿ ಅದೇ ಸಂಜೆ ನನ್ನ ನಿನ್ನ ಭೇಟಿ ಕಡಲ ತೀರದಲ್ಲಿ. ಅಲೆಗಳು ತೀರಕೆ ಅಪ್ಪಳಿಸಿ ಹಿಂತಿರುಗುತ್ತಿದ್ದವು. ಅದೇ ನೀರು ಹೊಸ ಅಲೆಯಾಗಿ ಮತ್ತೆ ಬಂದು ತೀರವನ್ನು ಮುದ್ದಿಸಿ ಹೋಗುತ್ತಿತ್ತು. ಅದನ್ನು ಕಂಡ ನಾನು ಹೊಸ ಅಲೆ ಬಂದು ತೀರವನ್ನು ಮುದ್ದಿಸಿದಾಗಲೊಮ್ಮೆ ನಿನ್ನ ಮುದ್ದಿಸಿ ನಗುತ್ತಿದ್ದೆ. ನಮ್ಮೂರೇ ಆದ್ದರಿಂದ ಬಾಲ್ಯದ ಅದೆಷ್ಟೋ ನೆನಪುಗಳು ಕಾಲಿಟ್ಟ ಜಾಗದಲ್ಲಿ ಉಕ್ಕಿ ಬರುವ ಜಾಗವದು. ಜೋಗದ ಜಲಪಾತದ ಜಲದಾಟ ಉತ್ಸಾಹ ಉಕ್ಕೇರಿ ಉಲ್ಲಾಸ ಸಂತಸ ತರುತ್ತಿತ್ತು. ನೆನೆದು ನೀರಲಿ ಜಳಕ ಆಹಾ! ಪ್ರತಿ ನಿಮಿಷವೂ ತನನವೆನುವ ಭಾವ.
ತುಂಟಾಟ ಚೆಲ್ಲಾಟದಲ್ಲಿ ಸಮಯ ಸರಿದಿದ್ದೇ ಗೊತ್ತಾಗಲಿಲ್ಲ. ಕತ್ತಲು ಆವರಿಸತೊಡಗಿತ್ತು.

ವಿಶಾಲವಾದ ಮೈದಾನದಲ್ಲಿ ತುಂಬಿ ತುಳುಕುತ್ತಿದ್ದ ಎತ್ತರವಾದ ದಟ್ಟೆಲೆಯ ಸಾಲು ಸಾಲು ಮರಗಳು. ನನ್ನ ಕೈಯಲ್ಲಿನ ಕೆಂಪು ಬಳೆಗಳ ಬಂಗಾರದ ಗೀರುಗಳು ಆ ಮಂದ ಬೆಳಕಿನಲ್ಲಿ ಕಣ್ಣಿಗೆ ಕುಕ್ಕುತ್ತಿದ್ದವು. ನನ್ನತ್ತ ದಿಟ್ಟಿಸುತ್ತಿದ್ದ ನಿನ್ನ ಕಂಗಳು ಸವಿಸವಿಯಾಗಿ ಮತ್ತೇನೋ ಬೇಕೆನ್ನುವಂತೆ ನೋಡುತ್ತಿದ್ದವು. ಅಲ್ಲೇ ಇದ್ದ ಹೆಬ್ಬಂಡೆಯ ಮೇಲೆ ನಾಜೂಕಾಗಿ ಕೂತೆ. ಮೆಲ್ಲನೇ ನಿನ್ನ ಕೈ ಹಿಡಿದು ಕುಳ್ಳರಿಸಿದೆ. ನಾನೇ ಧೈರ್ಯ ಮಾಡಿ ಭುಜಕ್ಕೆ ಭುಜ ತಾಗಿಸಿದೆ. ಬೆರಳುಗಳ ಸಂದಿಯಲ್ಲಿ ನಿನ್ನ ಬೆರಳುಗಳು ಜಾಗ ಮಾಡಿಕೊಂಡವು. ಇದೇ ಅನುಮತಿಗೆ ಕಾಯುತ್ತಿದ್ದವನಂತೆ ಕೆಂದುಟಿಯಂಚಿಗೆ ಮೆಲ್ಲಗೆ ತುಟಿಗಳನು ಸೇರಿಸಿದೆ. ತೋಳುಗಳು ಅದಾವಾಗ ಒಂದಕ್ಕೊಂದು ಬಂಧಿಯಾದವೋ ತಿಳಿಯಲೇ ಇಲ್ಲ. ಬೆಚ್ಚನೆಯ ಬಿಸಿ ಉಸಿರಿನಲ್ಲಿ ದೀರ್ಘವಾದ ಆಲಿಂಗನ ಮುಂದುವರೆದಿತ್ತು. ಅದೇ ಸಮಯದಲ್ಲಿ ಉಬ್ಬಿದೆದೆಗೆ ಕೈ ತಾಗಿದಂತಾಗಿ ಒಮ್ಮೆಲೇ ಬೆಚ್ಚಿ ಬಿದ್ದೆ. ಏನೂ ಅರ್ಥವಾಗದೇ ದೂರ ಸರಿದು ಸುಮ್ಮನೇ ನಿಂತೆ.ಎಡವಿದ ಕಾಲು ಮತ್ತೆ ಎಡವಿತೆ? ಎಂದು ಭಯಗೊಂಡೆ.
ಏಕಾಂತದ ಕತ್ತಲಲ್ಲಿ ನಿಶ್ಯಬ್ದದಲ್ಲಿ ತುಸು ಹೊತ್ತು ಗಾಳಿ ಸಹ ನಿಂತು ಇಬ್ಬರೂ ಬೆವರುತ್ತಿದ್ದೆವು. ಒಂದು ಕ್ಷಣ ತಡೆದು ಸಣ್ಣಗೆ ಕಿರುನಗೆಯನು ತಂದುಕೊಂಡು ಸರಸದ ವಾತಾವರಣ ತುಸು ತಿಳಿ ಮಾಡಲು ನೋಡಿದೆ. ನೀನು ಜೋರಾಗಿ ನಕ್ಕಿದ್ದಕ್ಕೆ ಹೆಪ್ಪಗಟ್ಟಿದ ಕತ್ತಲು ತಿಳಿಯಾದಂತೆ ಆಯ್ತು. ‘ಹೆದರದಿರು ಜಿಂಕೆ ಮರಿ, ಸುಂದರಿ, ಶೀಲವಂತೆ, ಮುಗ್ದೆ, ನಿನಗೊಂದು ನೆಲೆ ಕೊಡುವೆ ಆಮೇಲೆ ಸರಸದಾಟ ಮುಂದುವರೆಸುವೆ.’ ಎನ್ನುತ್ತ ಬಿಗಿಯಾಗಿ ಕೈ ಹಿಡಿದುಕೊಂಡೆ. ಬೀಸಿದ ತಂಗಾಳಿ ತಣ್ಣಗೆ ಮೈಗಳ ತೀಡುತ್ತಿತ್ತು. ‘ನಿಧಾನ ನಿಧಾನ ತಾಳ್ಮೆಗಡಬೇಡಿ. ಒಲವಿನ ಗರಡಿಯಲಿ ಪಳಗಿ ಪಯಣಿಸಲಿ ಪ್ರಣಯ ’ ಎಂದು ತಿಳಿಹೇಳುತ್ತಿತ್ತು.

‘ನಿಲ್ಲು ನಿಲ್ಲು ಒಂದೇ ನಿಮಿಷ ಕೊಟ್ಟೆ ಹೃದಯ ನಿನಗೆ

ಇಲ್ಲ ಇಲ್ಲ ಬೇರೆ ಕೆಲಸ ನಿನ್ನ ಬಿಟ್ಟು ನನಗೆ

ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ’

ಎಂದು ನನಗೆ ಛೇಷ್ಟೆ ಮಾಡಿ ಹಾಡುತ್ತ ಚೆಲ್ಲಿದ ಬೆಳದಿಂಗಳಲ್ಲಿ ದೂರವಾದ ಚೆಲುವ. ಇನ್ನು ನೀ ಹೋಗೋ ಹಾಗಿಲ್ಲ ಕಣ್ಣ ಮರೆಗೆ. ನೀ ದೂರವಿದ್ದಷ್ಟು ಏನೋ ಕಳವಳ. ಚೂರು ವೇಗ ಹೆಚ್ಚಿಸಿಕೊಂಡು ಬೇಗ ಬಂದು ಬಿಡು. ಸಿದ್ಧವಾಗಿದೆ ಮಾಂಗಲ್ಯ ಧಾರಣೆಗೆ ಕೊರಳು.ಕಾದಿಹುದು ತನು ಹೂವಾಗಲು. ದಿನ ರಾತ್ರಿಯ ರಸಮಂಜರಿಗೆ ತುದಿಗಾಲಲಿ ನಿಂತಿವೆ ಮೈಮನಸ್ಸುಗಳು.
ನಿನ್ನ ನಿರೀಕ್ಷೆಯಲ್ಲಿರುವ
ನಿನ್ನ ನಿಮ್ಮು (ನಿರ್ಮಲ)


ಜಯಶ್ರೀ.ಜೆ. ಅಬ್ಬಿಗೇರಿ

3 thoughts on “ನಿಲ್ಲು ನಿಲ್ಲು ಒಂದೇ ನಿಮಿಷ ಕೊಟ್ಟೆ ಹೃದಯ ನಿನಗೆ

Leave a Reply

Back To Top