ಸಿನಿಮಾ ಸಂಗಾತಿ
ಚಂದ್ರಶೇಖರ್ ಕುಲಗಾಣ
ಡೇರ್ ಡೆವಿಲ್ ಮುಸ್ತಫಾ –
ಪೂಚಂತೇ ಅಭಿಮಾನಿಗಳ ಸಿನಿಮಾ
ಕನ್ನಡದ ಖ್ಯಾತ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ ನಾಡಿನಾದ್ಯಂತ ಬಹು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗಲೂ ಅವರ ಕೃತಿಗಳನ್ನು ಮೊದಲಬಾರಿಗೆ ಓದಿದ ಅನೇಕರು ಅಭಿಮಾನಿಗಳ ಪಟ್ಟಿಯಲ್ಲಿ ಸೇರುತ್ತಿದ್ದಾರೆ. ಪೂಚಂತೇ ಅವರ ಅಭಿಮಾನಿಗಳು ಕೇವಲ ಒಂದೆರಡು ವರ್ಗಕ್ಕೆ ಸೇರದೆ ಬಹುತೇಕ ಎಲ್ಲಾ ವರ್ಗದಲ್ಲಿರುವುದು ವಿಶೇಷವೇ ಸರಿ. ಯುವಕರಲ್ಲದೆ ಮಕ್ಕಳು, ಮಹಿಳೆಯರು, ವಯಸ್ಸಾದವರು, ತರಕಾರಿ ಮಾರುವವರು, ಕಿರಾಣಿ ಅಂಗಡಿಯವರು, ಆಟೋ ಚಾಲಕರು ಇನ್ನೂ ಅನೇಕ ವೃತ್ತಿಗಳಲ್ಲಿ ಇರುವವರು, ಕಡಿಮೆ ಓದುವ ಹವ್ಯಾಸ ಇರುವವರು ಕೂಡ ಪೂಚಂತೇ ಅವರ ಅಭಿಮಾನಿಗಳಾಗಿರುವುದು ಅವರ ಸರಳ ಭಾಷೆಯ ಬರಹದ ಮಾಂತ್ರಿಕ ಶಕ್ತಿ ಎಂದೇ ಹೇಳಬಹುದು.
ಅವರು ಬದುಕಿದ್ದಾಗ ಜುಗಾರಿ ಕ್ರಾಸ್ ಹಾಗು ಕೃಷ್ಣೇಗೌಡನ ಆನೆ ಎಂಬ ಪುಸ್ತಕಗಳನ್ನು ಸಿನಿಮಾ ಮಾಡಲು ಸಾಕಷ್ಟು ಜನರು ಮುಂದೆ ಬಂದಿದ್ದರು, ಜುಗಾರಿ ಕ್ರಾಸ್ ಡಾ. ಶಿವರಾಜಕುಮಾರ್ ಅಭಿನಯದಲ್ಲಿ ಮೂಡಿಬರಲಿರುವ ಸಿನಿಮಾ ಎಂದು ಪತ್ರಿಕಾ ಪ್ರಕಟಣೆಗಳನ್ನು ಮಾಡಿಯೂ ಸಹ ಇವೆರಡು ಬೆಳ್ಳಿ ತೆರೆಯಲ್ಲಿ ಯಾಕೋ ಸೆಟ್ಟೇರಲೇ ಇಲ್ಲ!. ಅವರ ಬರಹಗಳು ಸಿನಿಮಾ ರೂಪದಲ್ಲಿ ಬಂದದ್ದು ಮೊದಲಿಗೆ ತಬರನ ಕಥೆ 1987 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಸಿನಿಮಾ, 1992 ರಲ್ಲಿ ಸದಾನಂದ ಸುವರ್ಣ ಅವರ ನಿರ್ದೇಶನದಲ್ಲಿ ಕುಬಿ ಮತ್ತು ಇಯಾಲ ಮತ್ತು 2016 ರಲ್ಲಿ ಸುಮನಾ ಕಿತ್ತೂರು ಅವರ ನಿರ್ದೇಶನದಲ್ಲಿ ಬಂದಂತಹ ಕಿರಗೂರಿನ ಗಯ್ಯಾಳಿಗಳು ಚಿತ್ರ. ಈ ಮೂರೂ ಚಿತ್ರಗಳು ಜನಮೆಚ್ಚುಗೆಗೆ ಪಾತ್ರವಾಗಿವೆ.
1973 ರಲ್ಲಿ ಬಿಡುಗಡೆಗೊಂಡ ಪೂಚಂತೇ ಅವರ ಅಬಚೂರಿನ ಪೋಸ್ಟಾಫೀಸು ಎಂಬ ಕಥಾಸಂಕಲನವು 20 ಕ್ಕೂ ಹೆಚ್ಚು ಮುದ್ರಣಗೊಂಡಿದೆ. ಇದೇ ಪುಸ್ತಕದಲ್ಲಿನ ತಬರನ ಕಥೆ ಹಾಗು ಕುಬಿ ಮತ್ತು ಇಯಾಲ ಕಥೆಗಳು ಚಲನಚಿತ್ರಗಳಾಗಿ ಯಶಸ್ವಿಯಾಗಿದ್ದವು. ಅದರಲ್ಲಿನ ಡೇರ್ ಡೆವಿಲ್ ಮುಸ್ತಫಾ ಎಂಬ ಇನ್ನೊಂದು ಕಥೆ ಇದೀಗ ತೆರೆಯ ಮೇಲೆ ಇದೇ ಮೇ ತಿಂಗಳ 19 ರಂದು ಮೂಡಿಬರುತ್ತಿದೆ ಎಂಬುದು ಪೂಚಂತೇ ಅಭಿಮಾನಿಗಳಿಗೆ ಸಂತಸದ ಸಂಗತಿ.
ಕಳೆದ ಎರಡು ವರ್ಷಗಳಿಂದ ಸತತವಾಗಿ ಸುದ್ದಿಯಲ್ಲಿದ್ದ ಈ ಚಿತ್ರಕ್ಕೆ ಪೂಚಂತೇ ಅವರ ಅಭಿಮಾನಿಯಾದ ಶಶಾಂಕ್ ಸೋಗಾಲ ರವರು ನಿರ್ದೇಶಕರು. ಕನ್ನಡ ಸಾಹಿತ್ಯವನಾದರಿಸಿದ ಚಿತ್ರಗಳಿಗೆ ದುಡ್ಡು ಹಾಕಲು ನಿರ್ಮಾಪಕರ ಕೊರತೆಯಿರುವ ಈ ಸಂದರ್ಭದಲ್ಲಿ ಶಶಾಂಕ್ ಸೋಗಾಲ ರವರಿಗೆ 100 ಪೂಚಂತೇ ಅಭಿಮಾನಿಗಳು ಸೇರಿ ಬಂಡವಾಳ ಹೂಡಿರುವುದು ವಿಶೇಷವಾದ ಸಂಗತಿ. ಇದನ್ನು ಅಕ್ಷರಶ ಫ್ಯಾನ್ ಮೇಡ್ ಸಿನಿಮಾ ಎಂದೇ ಕರೆಯಬಹುದು. ಜೊತೆಗೆ ಪೂಚಂತೇ ಅವರ ಅಭಿಮಾನಿಯಾದ ಜನಪ್ರಿಯ ನಟ ಡಾಲಿ ಧನಂಜಯ್ ರವರು ಈ ಚಿತ್ರದ ಪ್ರಚಾರಕ್ಕೆ ತಮ್ಮ ಹೆಗಲು ಕೊಟ್ಟಿದ್ದಾರೆ.
ಕಳೆದ ಎರಡು ವಾರದ ಹಿಂದೆ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡು ಹೆಚ್ಚು ಪ್ರಚಾರಗೊಳಿಸುತ್ತಿದೆ. ಶಶಾಂಕ್ ಸೋಗಾಲ ರವರ ತಂಡ ಈ ಸಿನಿಮಾದ ಟ್ರೈಲರ್ ಅನ್ನು ಕೃತಕ ಬುದ್ದಿಮತ್ತೆ (AI) ಯನ್ನು ಉಪಯೋಗಿಸಿ ಸುಂದರವಾಗಿ ಮೂಡಿಬರುವಂತೆ ಮಾಡಿದ್ದಾರೆ. ತಮ್ಮ ಅನೇಕ ಪ್ರವಾಸಗಳಿಂದ ಸಾಮಾಜಿಕ ತಾಣದಲ್ಲಿ ಬಹು ಹೆಚ್ಚಿನ ಅಭಿಮಾನಿಗಳನ್ನು ಒಂದಿರುವ Dr Bro ಈ ಟ್ರೈಲರ್ ಗೆ ಕಂಠದಾನ ಮಾಡಿರುವುದು ಆಕರ್ಷಿತವಾಗಿದೆ. ಟ್ರೈಲರ್ ಜೊತೆಗೆ ಕಥೆಯಲ್ಲಿನ ಒಂದೊಂದೇ ಪಾತ್ರಗಳನ್ನೂ ಉಪಯೋಗಿಸಿ ದಿನಕ್ಕೊಂದು ಬಿಟ್ ಗಳನ್ನೂ ಟ್ರೈಲರ್ ಜೊತೆ ಮೂಡಿಸುತ್ತಿರುವುದು ವಿಶೇಷವಾಗಿದೆ. ಈ ಚಿತ್ರವು 70 ರ ದಶಕದಲ್ಲಿ ನೆಡೆಯುವ ಘಟನೆಗಳನ್ನು ಒಳಗೊಂಡಿದ್ದು ಕೋಮುಸಾಮರಸ್ಯವೇ ಇದರ ಮುಖ್ಯ ವಿಷಯವಾಗಿದೆ. ಟ್ರೈಲರ್ ನೋಡಿದವರಿಗೆ ಶಶಾಂಕ್ ಸೋಗಾಲ ಮತ್ತು ಅವರ ತಂಡವು ಆ ಕಾಲದ ಘಟನೆಗಳನ್ನು ಇಂದಿನ ಸಂದರ್ಭಕ್ಕೆ ತರಲು ಸಾಕಷ್ಟು ಮುತುವರ್ಜಿ ವಹಿಸಿರುವುದು ತಿಳಿಯುತ್ತದೆ. ಇನ್ನು ಎಲ್ಲರೂ ಚಿತ್ರವನ್ನು ಕಣ್ತುಂಬಿಸಿಕೊಳ್ಳುವುದು ಒಂದೇ ಬಾಕಿ.
ಸಿನಿಮಾ ಪ್ರಚಾರವಾಗಿ ಚಿತ್ರತಂಡವು ಚಿತ್ರದ ಬ್ಯಾಡ್ಜ್ ಗಳನ್ನೂ https://iruve.in/ ಎಂಬ ವೆಬ್ ಸೈಟ್ ನಲ್ಲಿ 50 ರುಪಾಯಿಗೆ ಒಂದರಂತೆ ವಿತರಿಸುತ್ತಿದ್ದಾರೆ. ಬ್ಯಾಡ್ಜ್ ಪಡೆದವರು ಚಿತ್ರವನ್ನು ಮೊದಲ ವಾರದಲ್ಲೇ ವೀಕ್ಷಿಸಿ (ಮೇ 19 ರಿಂದ 25 ರ ವೊಳಗೆ) ಬ್ಯಾಡ್ಜ್ ಖರೀದಿಸಿದಾಗ ಸಿಗುವ ಕೂಪನ್ ಕೋಡ್, ಸಿನಿಮಾ ಟಿಕೆಟ್ ನ ಫೋಟೋ ಹಾಗು ಯು ಪಿ ಐ ಐಡಿ ಯನ್ನು ವಾಟ್ಸಪ್ ಸಂಖ್ಯೆ 91-8762032288 ಗೆ ಕಳುಹಿಸಿದರೆ 100 ರೂಪಾಯಿ ಕ್ಯಾಶ್ ಬ್ಯಾಕ್ ಸಿಗುತ್ತದೆ.
ಕನ್ನಡ ಸಾಹಿತ್ಯಗಳನ್ನು ಚಿತ್ರರಂಗವು ದೂರ ಇಟ್ಟಿರುವ ಈ ಸಂದರ್ಭದಲ್ಲಿ ಪೂಚಂತೇ ಯವರ ಕಥೆಯನ್ನು ಶಶಾಂಕ್ ಸೋಗಾಲ ಮತ್ತು ಅವರ ತಂಡ ತೆರೆಗೆ ತಂದಿರುವ ಸಾಹಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ಸಿಗುತ್ತಿದೆ. ಈ ಚಿತ್ರದಲ್ಲಿ ಕಾರ್ತಿಕ್ ಪತ್ತರ್, ಮಂಡ್ಯ ರಮೇಶ್, ಉಮೇಶ್, ನಾಗಭೂಷಣ, ಪೂರ್ಣಚಂದ್ರ ಮೈಸೂರ್, ವೀಣಾ ಸುಂದರ್, ಚೈತ್ರ ಶೆಟ್ಟಿ ಮುಂತಾದವರ ತಾರಾಗಣ ಇದೆ ಹಾಗಿದ್ದರೆ ಕನ್ನಡ ಸಾಹಿತ್ಯಾಭಿಮಾನಿಗಳು ಹಾಗು ಚಿತ್ರಪ್ರೇಮಿಗಳು ಡೇರ್ ಡೆವಿಲ್ ಮುಸ್ತಫಾ ಕನ್ನಡ ಸಿನೆಮಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಚಿತ್ರವನ್ನು ಯಶಸ್ವಿಗೊಳಿಸೋಣ ಹಾಗು ಮುಂದೆ ಇನ್ನೂ ಹೆಚ್ಚು ಸಾಹಿತ್ಯವನ್ನಾದರಿಸಿ ಕನ್ನಡ ಚಲನಚಿತ್ರಗಳು ಬರಲಿ ಎಂದು ಆಶಿಶೋಣ.
ಚಂದ್ರಶೇಖರ್ ಕುಲಗಾಣ