ಅಮ್ಮನಿಗೊಂದು ನಮಸ್ಕಾರ
ಭಾರತಿ ನಲವಡೆ
ಮಾತೃದೇವೋಭವ
ಕಂದನಲಿ ಶಿವನ ಕಾಣುವ ಬಂಧನವೇ ಮುಕ್ತಿ’ಎಂದು ಕವಿ ಕುವೆಂಪು ಮಕ್ಕಳಲ್ಲಿ ದೈವತ್ವವನ್ನು ಕಂಡು ಮಾಡುವ ಸೇವೆಯೇ ದೇವರಸೇವೆ.ಇಂತ ಪವಿತ್ರಭಾವದ ಭಾವದೆಳೆಯ ಬೆಸೆವ ಅನುಬಂಧದ ಮೂರ್ತಿಯೇ ತಾಯಿ.ದೇವರು ಎಲ್ಲೆಡೆ ತನಗಿರಲಾಗದು ಎಂಬ ಉದ್ದೇಶದಿಂದ ತಾಯಿ ಎಂಬ ದೇವರನ್ನು ಸೃಷ್ಟಿ ಮಾಡಿದ.ರಕ್ತ ಮಾಂಸವ ಬಸಿದು ಭಾವದೆಳೆಗಳ ಹೊಸೆದು ನವಮಾಸದಿ ಗರ್ಭದಿ ಹೊತ್ತು ತನ್ನ ಪ್ರಾಣವನ್ನೆ ಪಣಕ್ಕಿಟ್ಟು ಸತ್ತು ಹುಟ್ಟುತ್ತ ಬಸಿರ ಕುಡಿಗೆ ಉಸಿರ ನೀಡಿ ಜಗದಿ ಹೆಸರಾಗುವ ಸಂಸ್ಕಾರ ನೀಡುವ ಜನನಿಯ ಋಣವನ್ನು ಎಂದೂ ತೀರಿಸಲಾಗದು.
ಸಂಸಾರದ ನೊಗವನು ಹೊತ್ತು ಗಾಣದೆತ್ತಿನಂತೆ ಕ್ಷಣವೂ ವಿಶ್ರಮಿಸದ ಜೀವ ಮನೆ,ಗಂಡ,ಮಕ್ಕಳೆಂಬ ಪ್ರಪಂಚವನ್ನು ಸೊಗವಾಗಿಸುವ ಪ್ರಣತಿ.
ಸಾಸಿವೆ ಡಬ್ಬಗಳೆ ಅವಳ ಚಿಲ್ಲರೆಯ ಬ್ಯಾಂಕ್.ಹಬ್ಬ ಹರಿದಿನಗಳಲ್ಲಿ ಸಾಲಸೋಲ ಮಾಡಿಯಾದರೂ ಪತಿಯ ಮನ ಒಲಿಸಿ ಹಬ್ಬದಡಿಗೆ ತಯಾರಿಸಿ ಮಕ್ಕಳ ಊಟದಿಂದ ಪಡುವ ತೃಪ್ತಿಯಿಂದ ತೇಗುವ ತಾಯಿ ಜೀವ ನೋವು ನಲಿವುಗಳಲ್ಲೂ ಮನೆತನದ ಮಾನ ಕಾಯುವ ತಾಳ್ಮೆಯ ಒಡತಿ.ಉದ್ಯೋಗಸ್ಥ ಮಹಿಳೆಯಾದರಂತೂ ಮೊದಲನೇ ಇನ್ನಿಂಗ್ಸ ಮನೆಯಲ್ಲಿ ಎರಡನೇ ಇನ್ನಿಂಗ್ಸ ಕಛೇರಿಯಲ್ಲಿ ಎರಡನ್ನೂ ನಿರ್ವಹಣೆ ಮಾಡುವ ಅವಳ ಬದ್ಧತೆಗೆ ಯಾರೂ ಸಾಟಿ ಇಲ್ಲ
ಬೆಳಗಿನಿಂದ ಸಂಜೆವರೆಗೂ ಮಕ್ಕಳನ್ನು ಎಬ್ಬಿಸುವದರಿಂದ ರಾತ್ರಿ ಮಲಗಿದ ಮಕ್ಕಳಿಗೆ ಹೊದಿಸಿ ಮರುದಿನದ ತಿಂಡಿ ಅಡುಗೆಗೆ ತಯಾರಿ ಮಾಡುವ ಮನದ ವೇಳಾಪಟ್ಟಿಯು ಪೂರ್ತಿಗೊಳಿಸಲು ಪ್ರೇರೇಪಿಸುತ್ತದೆ.ಇವುಗಳ ಮಧ್ಯೆ ತಂದೆ ಮಕ್ಕಳ ಸ್ನಾನಕ್ಕೆ ಅಣಿ ಮಾಡಿ ಅವರಿಗೆ ಬಟ್ಟೆ ,ಟಾವೆರ್, ಕರವಸ್ತ್ರ ಹುಡುಕಿಕೊಟ್ಟು ಅವರಿಷ್ಟದ ತಿಂಡಿ ತಯಾರಿಸಿ ಬಡಿಸಿಸುವಳು. ಕಸ,ಮುಸುರೆ,ಅಡುಗೆ
ಜೊತೆಗೆ ಮನೆಯಲಿ ಹಿರಿಯರಾದ್ದರೆ ಅವರ ಪಥ್ಯದ ಅಡುಗೆ, ಮಾತ್ರೆಗಳ ಪೂರೈಕೆ ಸಂಜೆಯ,ಚಹ ರಾತ್ರಿಯ ಊಟ ತಯಾರಿಸಿ ಬಡಿಸುವದು.ಇವುಗಳ ನಡುವೆ ಅವಳಿಗೆ ತನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳಲು ಸಮಯವಿರದು. “ನನ್ನ ಮಗುವಿಗೆ ತುಂಬಾ ಜ್ವರ ಊಟ ಸೇರ್ತಿಲ್ಲ ಡಾಕ್ಟರ ಗಂಜಿ ಕೊಡಿ ಎಂದಿದ್ದಾರೆ.ರಾತ್ರಿಯಿಡೀ ತಣ್ಣೀರು ಪಟ್ಟಿ ಹಾಕಿದೆ ಇವತ್ತು ಮುಂಜಾನೆ ಸ್ವಲ್ಪ ಪರ್ವಾಗಿಲ್ಲ ಅನಿಸ್ತಾ ಇದೆ”ಅನ್ನುವಳೇ ವಿನಃ ತಾನು ರಾತ್ರಿಯಿಡೀ ತ್ಯಾಗ ಮಾಡಿದ ಊಟ,ನಿದ್ದೆಯ ಕುರಿತು ಅಪ್ಪಿ ತಪ್ಪಿಯೂ ಹೇಳಲಾರಳು.
ಒಮ್ಮೆ ವಿಚಾರ ಮಾಡಿ ಅವಳು ಮಾಡೀವ ಪ್ರತಿ ಕೆಲಸದ ಸಂಬಳದ ಬಗ್ಗೆ ವಿಚಾರಿಸಿದಾಗ ಸರಿಸುಮಾರು 10000ದಿಂದ 15000 ಸಾವಿರವಾಗುತ್ತೆ!ಅಲ್ವಾ. ಸಂಬಳ ಬಯಸದ ಸಂಬಂಧಗಳ ಹಸಿರಾಗಿಸುವ ಬರದಿ ಉಸಿರುಬಿಡದೆ ಮನೆತನದ ಹೆಸರ ಉಳಿಸಲು ಹೆಣಗುವ ಮನೆಯ ಲಕ್ಷ್ಮೀಯ ಕಾಯಕ ನಿಜವಾಗಿಯೂ ಪ್ರೀತಿ ನಿಸ್ವಾರ್ಥದ ದ್ಯೋತಕ.
ತನ್ನ ಹೆತ್ತವರ ತೊರೆದು ಪತಿಯೇಪರದೈವ ಎಂದು ಪೊರೆವ ಬಾಳಗೆಳತಿಗೆ ಒಂದು ದಿನವಾದರೂ ಸಮಯನೀಡಿ ಅವಳ ಬೇಕು ಬೇಡಗಳ ಕುರಿತು ಮಾತನಾಡಲು ಅವಳಿಗಿಷ್ಟವಾದ ಉಡುಗೊರೆ ನೀಡಿ ಸಂತೈಸಲೂ ಕೂಡ ಒತ್ತಡ. ತಾಯಿ ಎಂಬ ದೇವತೆಯು ನಮ್ಮ ಭವಿಷ್ಯಕೆ ದಾರಿ ತೋರುವ ಗುರುವಾಗಿ ಮಕ್ಕಳ ಸಂತಸದಲ್ಲೇ ತನ್ನ ಸಂತೋಷ ಕಾಣುವಳು.’ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ಎಂಬ ಮಾತಿನಂತೆ ತನ್ನ ಸರ್ವಸ್ವವನ್ನು ಧಾರೆ ಎರೆದು ಹೆತ್ತವರ ಹೆಸರನ್ನು ಉಳಿಸುವಳು.ಆದರೆ ವೃದ್ಧಾಪ್ಯದಲ್ಲಿ ಉನ್ನತ ಸ್ಥಾನದಲ್ಲಿರುವ ಮಕ್ಕಳು ಅದೇ ತಾಯಿಯನ್ನು ನೋಟುಗಳ ಎಣಿಸಿ ಫೈವ್ ಸ್ಟಾರ್ ನಂತ ವೃದ್ಧಾಶ್ರಮಗಳಲ್ಲಿ ಇರಿಸಿ ಜಂಭ ಕೊಚ್ಚುವದನ್ನು ನೋಡಿದಾಗ ಹೇಗಾಗಿರಬೇಡ? ತಾಯಿ ಜೀವ. ಅವಳು ಮಾಡಿದ ತ್ಯಾಗ ಪ್ರೀತಿಯನ್ನು ಮಕ್ಕಳು ಬಡ್ಡಿ ಸಮೇತ ತೀರಿಸಲು ಸಾಧ್ಯವೇ?
ಸಾಧ್ಯವಿಲ್ಲ. ಅವಳನ್ನು ವೃದ್ಧಾಪ್ಯದಲ್ಲಿ ಅವಳು ನಮ್ಮನ್ನು ಚಿಕ್ಕವರಿದ್ದಾಗ ಸಲಹಿದಂತೆ ಅವಳನ್ನು ನಮ್ಮ ಮಡಿಲ ಮಗುವಾಗಿಸಿಕೊಂಡು ಸುಖವಾಗಿ ನೋಡಿಕೊಳ್ಳೋಣ. ತಾಯಂದಿರ ದಿನಾಚರಣೆಯ ದಿನ ಅವಳ ತ್ಯಾಗ ಪ್ರೀತಿಗೆ ಒಂದು ಸಲಾಮ ಹೇಳಿ ಅವಳ ಸಂತೋಷಕ್ಕೆ ಭಾಜನರಾಗಿ ಮುಂದೆ ಕೂಡ ಚನ್ನಾಗಿ ನೋಡಿಕೊಳ್ಳೋಣ ಅಲ್ಲವೇ?ಮಾತೃದೆವೋಭವ ಎಂದು ಅವಳ ಪಾದಧೂಳಿಯ ತಿಲಕವನ್ನಿಟ್ಟು ನಡೆದರೆ ಯಾವುದೇ ಕೆಲಸ ಕೂಡ ನಿಷ್ಫಲವಾಗದು.ಮಾತೃ ಶಕ್ತಿಯಿಂದಲೆ ಛತ್ರಪತಿ ಶಿವಾಜಿ,ಸ್ವಾಮಿ ವಿವೇಕಾನಂದ,ಮಹಾತ್ಮಾಗಾಂಧಿ,ಥಾಮಸ್ ಅಲ್ವಾ ಎಡಿಸನ್ ಈ ಎಲ್ಲರ ಸಾಧನೆಗಳು ದಾಖಲಾಗಿ ನಮಗೆಲ್ಲ ಪಾಠಗಳಾಗಿವೆ.
ತೀರಿಸಲಾಗದು ತಾಯ ಋಣ
ಪೊರೆಯೋಣ ಅರಿತುಗುಣ
ಬದುಕ ಸವೆಸಿದ ದೇವಿಗೆ ನೀಡಿ ಮಾನ್ಯತೆ
ಆಗ ಸಾರ್ಥಕ ಬದುಕಿಗಿದೆ ಧನ್ಯತೆ.
ಭಾರತಿ ನಲವಡೆ
ಮೇಡಂ ನೀವು ಬರೆದ ಕವನ ಚನ್ನಾಗಿ ಮೂಡಿಬಂದಿದೆ.