ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಅಮ್ಮಾ ಎಂಬ ಅಮರಾಕ್ಷರ..

ನೀನು ನಕ್ಕರೆ ನಮ್ಮ ಬಾಳೇ ಸಕ್ಕರೆ
ಸಿಡುಕದೆ ನಿನ್ನ ಮಕ್ಕಳ ಮೇಲೆ
ತೋರಬಾರದೆ ಅಕ್ಕರೆ..

ಚಿಕ್ಕಂದಿನಲ್ಲಿ ನಮಗಿರುವ ಆಸೆಯೇ ಇಷ್ಟು. ಅಮ್ಮ ಸಿಟ್ಟು ಮಾಡಿಕೊಳ್ಳದೆ, ಬೈಯದೆ, ನಗುನಗುತ್ತ ಇದ್ದರೆ ಸಾಕು. ಹಾಲೂಡಿಸಿ ಬೆಳೆಸಿದ ತಾಯಿ, ಗಂಜಿ ಕುಡಿಸಿ ಬೆಳೆಸಿದರೂ ಖುಷಿಯೇ. ಏಟು ಕೊಟ್ಟರೂ ಅದು ನೆನಪಿರುವುದು ಒಂದೆರಡು ಗಂಟೆಗಳಷ್ಟೇ. ಆಮೇಲೆ ಅವಳ ಸೆರಗೇ ಆಸರೆ. ಅವಳ ಮಡಿಲೇ ಜೋಗುಳ. ಮೊದಲ ಗುರುವೂ ಅವಳೇ. ಮೊದಲ ಸ್ನೇಹಿತಳೂ ಕೂಡಾ. ಆಟ, ಪಾಠ, ಒಡನಾಟ ಅವಳೊಂದಿಗೇ.
ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು
ನಿನ್ನ ಸಂಗ ಆಡಲೆಂದು ಬಂದೆ ನಾನು..

ತೂ ಕಿತನೀ ಅಚ್ಛೀ ಹೆ
ತೂ ಕಿತನೀ ಭೋಲೀ ಹೆ
ಪ್ಯಾರಿ ಪ್ಯಾರಿ ಹೆ ಓ ಮಾ
..


ತನ್ನ ಅಮ್ಮನೇ ಅತಿ ಸುಂದರಿ, ಮುಗ್ಧೆ, ಮುದ್ದು ಎಲ್ಲಾ ಎಲ್ಲಾ ಅವಳ ಮರಿಗೆ. ಅವಳಿಗಿಂತ ಚಂದ ಯಾರೂ ಇಲ್ಲ. ಅವಳು ಎಲ್ಲಾ ತಿಳಿದವಳು. ಏನೆಲ್ಲಾ ಕೆಲಸವನ್ನೂ ಮಾಡಬಲ್ಲ ಶಕ್ತಿವಂತೆ. ಪ್ರಪಂಚದಲ್ಲಿ ಎಷ್ಟು ಮುಳ್ಳುಗಳಿದ್ದರೂ ಅದನ್ನೆಲ್ಲ ಮರೆಸುವಂಥ ಹೂವು ಅವಳು.ಮಗುವಿನ ಜೀವ ಅವಳು. ಅವಳನ್ನು ಪಡೆದವರೇ ಪುಣ್ಯವಂತರು. ಅವಳ ನೆರಳಲ್ಲಿ ಜೀವ ಸದಾ ತಂಪು ತಂಪು.
ಮಾ ಬಚ್ಚೋಂಕಿ ಜಾನ್ ಹೋತಿ ಹೆ
ವೋ ಹೋತೆ ಹೆ ಕಿಸ್ಮತ್ ವಾಲೆ ಜಿನ್ಕಿ
ಮಾ ಹೋತಿ ಹೆ
ಕಿತನಿ ಸುಂದರ್ ಹೆ ಕಿತನಿ ಶೀತಲ್ ಹೆ..

ಕೈತುತ್ತು ಕೊಟ್ಟೋಳೆ ಐ ಲವ್ ಯು
ಮೈ ಮದರ್ ಇಂಡಿಯಾ
ಯಾವತ್ತೂ ಕಾಯೋಳೇ
ಐ ಡೋಂಟ್ ಲೀವ್ ಮೈ ಮದರ್ ಇಂಡಿಯಾ
ತಾಯಿಗೆ ಮಿಗಿಲಾದ ಗಾಡ್ ಇಲ್ಲ..

ಕಾಲವೆಷ್ಟೇ ಬದಲಾಗಲಿ, ತಾಯಿ ಎಷ್ಟೇ ಆಧುನಿಕಳಾಗಲಿ, ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಏನೇ ಇರಲಿ ಮಗುವಿಗೆ ಅವಳೇ ದೇವರು.
ಸೇವಂತಿಗೆ ಚೆಂಡಿನಂಥ ಮುದ್ದು ಕೋಳಿ
ತಾಯಿ ಮಡಿಲಿನಲ್ಲಿ ಬೀಡುಬಿಟ್ಟ ಮುದ್ದುಕೋಳಿ
..
ಅವಳ ಹೃದಯ ಮಗುವಿನ ಪಾಲಿಗೆ ಹಿಮಾಲಯ ಪರ್ವತದಷ್ಟು ಎತ್ತರ, ಗಂಗಾನದಿಯಷ್ಟು ಪವಿತ್ರ, ಸಾಗರದಷ್ಟು ಆಳ, ನೀರಿನಷ್ಟು ಅನಿವಾರ್ಯ.
ಈ ತಾಯಿಯ ಹಾರ್ಟು
ಆ ಮೌಂಟ್ ಎವರೆಸ್ಟು
ಆ ಶಿಖರದ ವೇಯ್ಟು ತಿಳಿದವರೆಷ್ಟು?!

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ
ದೂಡು ಹೊರಗೆ ನನ್ನ
ಓಟ ಕಲಿವೆ ಒಳನೋಟ ಕಲಿವೆ
ನಾ ಕಲಿವೆ ಊರ್ಧ್ವಗಮನ
ಓ ಅಗಾಧ ಗಗನ..

ಬೆಳೆಯುತ್ತಿದ್ದಂತೆ  ರೆಕ್ಕೆ ಬಲಿತು ಹಾರುವ ತಾಕತ್ತು ಬಂದಾಗ, ಅಮ್ಮನ ಮಡಿಲಿಂದ ಬಿಡುಗಡೆ ಬಯಸುತ್ತದೆ ಮಗು. ತನ್ನ ಪ್ರಪಂಚವನ್ನು ವಿಸ್ತರಿಸಿಕೊಳ್ಳಲು ಆಕಾಶಕ್ಕೆ ಹಾರುವ ಕನಸು ಮೆಚ್ಚಿನದಾಗುತ್ತದೆ. ಹಾರಲು ಬಿಡೆಂದು ಮಗು ಹಂಬಲಿಸುತ್ತದೆ. ಗೂಡು ಇನ್ನು ಸಾಕು ಎನಿಸುತ್ತದೆ. ಪ್ರೀತಿ, ವಾತ್ಸಲ್ಯಗಳ ಮಹಾಪೂರವನ್ನೇ ಹರಿಸುವ ತಾಯಿಯ ಪ್ರೀತಿ ಮಾಯೆಯೆನಿಸುತ್ತದೆ. ಅಮ್ಮನ ಮಮತೆಯ ಗಾಳದಲ್ಲಿ ಸಿಕ್ಕಿರುವ ಮೀನು ತಾನೆಂದು ಮಗುವಿಗೆ ಅನಿಸಲು ಶುರುವಾಗುತ್ತದೆ. ಸ್ವಾತಂತ್ರ್ಯ ಹಿತವೆನಿಸುತ್ತದೆ. ಕರುಳ ಬಳ್ಳಿಯಲ್ಲಿ ತನ್ನನ್ನು ಬಂಧಿಸಿದ್ದಾಳೆನಿಸುತ್ತದೆ.
ಅಮ್ಮಾ ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ…

ಭೀಡ್ ಮೆ ಯೂ ನಾ ಛೋಡೋ ಮುಝೆ
ಘರ್ ಲೌಟ್ ಕೆ ಭೀ ಆನಾ ಪಾವೂಂ ಮಾ
ಭೇಜ್ ನಾ ಇತನಾ ದೂರ್ ಮುಝೆ ತೂ
ಯಾದ್ ಭಿ ತುಝಕೋ ಆನಾ ಪಾವೂಂ ಮಾ..

ಅಮ್ಮನ ಸೆರಗು ಹಿಡಿದೇ ಬೆಳೆದ ಮಗು ನೂರಾರು ಜನರ ಗುಂಪಲ್ಲಿ ಒಂಟಿಯಾದಾಗ ಹೆದರುತ್ತದೆ. ತನ್ನನ್ನು ಬಿಟ್ಟು ಬರಬೇಡ. ಒಬ್ಬನೇ ಮನೆಗೆ ಬರಲೂ ತನಗೆ ತಿಳಿಯದೇ ಹೋದೀತು. ನೆನಪೇ ಆಗದಷ್ಟು ದೂರ ತನ್ನನ್ನೆಲ್ಲಿಗೂ ಕಳಿಸದಿರು. ತಾನೆಂದಿಗೂ ಅಮ್ಮನ ನೆರಳು ಬಿಟ್ಟು ಹೋಗಲಾರೆ.  ಕತ್ತಲೆಯೆಂದರೆ ಭಯವಾಗುತ್ತದೆ. ಆದರೆ ತಾನ್ಯಾವತ್ತೂ ಅದನ್ನು ಹೇಳಿಕೊಂಡಿಲ್ಲ. ಹೇಳದ್ದನ್ನೂ  ಚೆನ್ನಾಗಿಯೇ ಅರಿತಿರುವವಳು ಮಾತ್ರ ಅಮ್ಮ ಒಬ್ಬಳೇ. ಅವಳಿಂದ ಮಾತ್ರ ಎಂದೂ ಬೇರಾಗಲಾರೆ ಎಂಬ ಭಾವ ಮೊದಲ ಬಾರಿ ಅಮ್ಮನನ್ನಗಲುವ ಮಗುವಿನದು.
ಮೆ ಕಭಿ ಬತಲಾತಾ ನಹಿ


ಪರ್ ಅಂಧೇರೋಂಸೆ ಡರತಾ ಹೂ ಮೆ ಮಾ..
ತುಝೆ ಸಬ್ ಕುಛ್ ಪತಾ ಹೆ ನಾ
ಮಾ..

ಅಮ್ಮಾ ಎಂದರೆ ಏನೋ ಹರುಷವು
ನಮ್ಮ ಪಾಲಿಗೆ ಅವಳೇ ದೈವವು..

ಬೆಳೆದು ನಿಂತು, ಅನಿವಾರ್ಯವಾಗಿ  ಅಮ್ಮನಿಂದ ದೂರ ಇದ್ದಾಗ ಅವಳ ಆದರ ಮತ್ತೆ ಮತ್ತೆ ನೆನಪಾಗುತ್ತದೆ. ಅವಳನ್ನು ನೋಡಬೇಕು. ಮಾತಾಡಬೇಕು. ಉಪಚರಿಸಿಕೊಳ್ಳಬೇಕು. ಅವಳ ತೊಡೆಯ ಮೇಲೆ ಮಲಗಿ ನಿದ್ದೆ ಮಾಡಬೇಕು. ಬಾಲ್ಯದ ಕಥೆಗಳನ್ನು ಕೇಳಬೇಕು. ಕೈರುಚಿ ಸವಿಯಬೇಕು. ನೆತ್ತಿಗೆ ಒಂದಿಷ್ಟು ಎಣ್ಣೆ ತೀಡಿಸಿಕೊಳ್ಳಬೇಕು ಎಂದೆಲ್ಲಾ ಆಸೆಯಾಗುತ್ತದೆ. ಎಲ್ಲಾ ಗೆದ್ದಾದ ಮೇಲೂ, ರೆಂಬೆಕೊಂಬೆಗಳನ್ನು ಚಾಚಿ ಬೆಳೆದ ಮೇಲೂ ಮತ್ತೆ ಮಗುವಾಗಿ ಅಮ್ಮನ ಮಡಿಲು ಸೇರುವ ಬಯಕೆ ಚಿಗುರುತ್ತದೆ.
ಇಂಧನ ತೀರಲು ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ ಮೂರ್ತಪ್ರೇಮದೆಡೆಗೆ..

ಫುಡ್ ಇಲ್ದೆ ಬ್ಲಡ್ ಇಲ್ದೆ ಮಲಗಿದ್ದೆ
ನಾನು ಫುಟ್ಪಾತಲ್ಲೊಂದು ದಿನ
ಬಂದಳು ನಮ್ಮಮ್ಮ ಬಂದಳು
ಎಲ್ಲ ದೇವರ ನಡುಗಿಸಲು
ಪ್ರೀತಿಯ ಔಷಧ ಬಾಡಿಗೆ ಕೊಟ್ಟು
ಮಗನನ್ನ ಬದುಕಿಸಲು..

ಅನಾಥರಾದ ಎಷ್ಟೋ ಮಕ್ಕಳಲ್ಲಿ ಎಲ್ಲೋ ಕೆಲವರಿಗೆ ಸಿಗುತ್ತಾರೆ ಅಮ್ಮನೆಂಬ ಪುಣ್ಯ. ಆಗವರ ಆನಂದ ಮೇರೆ ಮೀರಿದ್ದು. ಏಕೆಂದರೆ ಬಾಯಾರಿದವರಷ್ಟೇ ಬಲ್ಲರು ಅಲ್ಲವೇ ಹನಿ ನೀರಿನ ಮಹತ್ವ! ಅಮ್ಮನಿಲ್ಲದ ಮಕ್ಕಳು ಪ್ರಪಂಚದ ಅತಿ ದುರ್ದೈವಿಗಳು. ದೇಹದ ಪೋಷಣೆಗೆ ಮೊದಲು ಎದೆಹಾಲು ಕೊಟ್ಟು ಪೊರೆಯುವ, ಆಮೇಲೆ ಅನ್ನ ತಿನ್ನಿಸಿ ಉಪಚರಿಸುವ, ಜೊತೆಗೆ ಪ್ರೀತಿಯ ಅಮೃತ ಕುಡಿಸಿ, ಮನುಷ್ಯರಾಗಿಸುವ ಆಲ್ ಇನ್ ವನ್ ಅಮ್ಮನೇ ಅಲ್ಲವೇ. ವಿದ್ಯೆ, ಬುದ್ಧಿ ಕಲಿಸಲು ಅಮ್ಮನಿರಲೇ ಬೇಕು. ಸಂಸ್ಕಾರ ಅಮ್ಮನಿಂದಲೇ ಬರಬೇಕು. ಜೋಗುಳ ಹಾಡಿ ಮಲಗಿಸುವ ಸಹನೆಯಿರುವುದು ಅವಳಿಗಷ್ಟೇ. ಕೇಳಿದಾಗೆಲ್ಲ ಹತ್ತಿರವಿದ್ದು ಜೊತೆ ಕೊಟ್ಟು, ಕೇಳಿದ್ದೆಲ್ಲ ನೀಡುವ ಮಮತಾಮಯಿ ಬೇರೆ ಯಾರಾಗಲು ಸಾಧ್ಯ? ಬೀದಿಯಲ್ಲೇ ಹುಟ್ಟಿ, ಅಲ್ಲೇ ಬೆಳೆವ ನಿರ್ಗತಿಕರಿಗೆ ಉಳಿದೆಲ್ಲರಿಗಿಂತ ಚೆನ್ನಾಗಿಯೇ ಗೊತ್ತಿರುತ್ತದೆ ತಾಯಿಯ ಮಹತ್ವ.
ಅಮ್ಮಾ ಎಂಬ ಮಾತಲಿ ಇದೆಯೋ ಮೆಡಿಸನ್..
ಮಗನೇ ಎಂದ ಕೂಡಲೇ ಲೈಫೋ..

ಉನ್ ಸೆ ಮೆ ಯೆ ಕೆಹೆತಾ ನಹಿ
ಚೆಹೆರೆ ಪೆ ಆನೆ ದೇತಾ ನಹಿ
ದಿಲ್ ಹಿ ದಿಲ್ ಮೆ ಘಬರಾತಾ ಹೂ ಮಾ..

ಯಾರಲ್ಲೂ ಹೇಳಲಾಗದ ಮಾತು ಬಹಳಷ್ಟಿದೆ. ಮುಖದ ಮೇಲೆ ಯಾವ ಭಾವವನ್ನೂ ತೋರಲಾರದ ಅನಿವಾರ್ಯತೆಯಿದೆ. ಆದರೆ ಎದೆಯಲ್ಲಿ ಎಷ್ಟೊಂದು ಭಯವಿದೆ. ಸಾಕಿ, ಸಲಹಿದ ಅಮ್ಮನಿಗೆ ವಯಸ್ಸಾಗುತ್ತದೆ. ಶಕ್ತಿ ಸೋರಿಹೋಗುತ್ತದೆ. ಅವಳ ಅಸಹಾಯಕತೆಯನ್ನು ನೋಡಲು ಸಂಕಟವಾಗುತ್ತದೆ. ಆದರೆ ಅದನ್ನೆಲ್ಲ ವ್ಯಕ್ತಪಡಿಸುವುದು ಅಸಾಧ್ಯ. ಧನ್ಯವಾದ ಹೇಳಬೇಕಿದೆ. ಕ್ಷಮೆ ಕೇಳಬೇಕಿದೆ. ಅವಳನ್ನು ಕಾವಲು ಕಾಯುವ ಹಂಬಲವಿದೆ. ಅವಳನ್ನು ಜೋಪಾನವಾಗಿರಿಸುವ ಆಸೆಯಿದೆ. ಅವಳು ಸದಾ ಆರೋಗ್ಯವಾಗಿ, ಆರಾಮವಾಗಿ ಇರಲಿ ಎಂಬ ಪ್ರಾರ್ಥನೆಯಿದೆ. ನಗುನಗುತ್ತಾ ಇರಲಿ ಎಂಬ ಹಾರೈಕೆಯಿದೆ. ಅವಳ ಬಗೆಗಿನ ಕಾಳಜಿಯನ್ನು ಮಾತ್ರ ತೋರಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಅಷ್ಟೇ..
ಯೂ ತೋ ಮೆ ದಿಖಲಾತಾ ನಹಿ
ತೇರಿ ಪರವಾಹ್ ಕರತಾ ಹೂ ಮೆ ಮಾ..
———————-

ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top