ಅಮ್ಮನಿಗೊಂದು ನಮಸ್ಕಾರ
ಅವಳೆಂದರೆ ಅವನಿ
ಜಯಶ್ರೀ ದೇಶಪಾಂಡೆ
‘ಹಸಿರನುಟ್ಟ ಬೆಟ್ಟಗಳಲ್ಲಿ ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸಿರ ನಗಿಸಿದಾಕೆ,
ಮನೆಮನೆಯಲ್ಲಿ ದೀಪವುರಿಸಿ ಹೊತ್ತುಹೊತ್ತಿಗೆ ಅನ್ನವುಣಿಸಿ
ತಂದೆ ಮಗುವ ತಬ್ಬಿದಾಕೆ..ನಿನಗೆ ಬೇರೆ ಹೆಸರು ಬೇಕೇ?
ಸ್ತ್ರೀ ಅಂದರೆ ಅಷ್ಟೇ ಸಾಕೆ?”– ಜಿ ಎಸ್ ಶಿವರುದ್ರಪ್ಪ.
”ಇಂದ್ರಾಬಾಯೀ ಕೂಸಿನ ಕಿಂವೀ ನೆಟ್ಟಗ ಫೂಕರಿಸಿ ಊದರಿ ಮತ್ತ.. ಎಣ್ಣಿ, ನೀರೂ ಎಲ್ಲ ಫಸಾರಂತ ಹೊರಗ ಬರಬೇಕಲ್ಲ..”ನಿತ್ಯ ಮಾಯಿ ತಪ್ಪದೆ ಇಷ್ಟು ಎಚ್ಚರಿಕಿ ಹೇಳವರೇ . ಹಾಂ.. ಹೊಟ್ಟಿಗೆ ಬೀಳುವ ತನ್ನ ಪಾಲಿನ ಅಮೃತ ಕುಡಿದು ಮುಗಿಸಿದ ಕೂಸು ಇಂದ್ರಕ್ಕನ ಕೈಲೇ ಎಣ್ಣಿ ಹಚ್ಚಿ, ಸಳಾ ಸಳಾ ಮೈ ಕೈ ತೀಡಿಸಿಕೊಂಡು ಎಣ್ಣೀಯೊಳಗ ತೇಲಾಡುವ ಮ್ಯಾಣದ ಗೊಂಬಿ. ಇಂದ್ರಕ್ಕನ ಕಾಲಿನ ಮ್ಯಾಲೆಮಲಗಿದ್ರೂ ಜಾರಿ ಜಾರಿ ಕಾಲು ಕೆಳಗಿಟ್ಟು ಕುಲು ಕುಲು ನಕ್ಕು- ಎಣ್ಣೀ ಒತ್ತಿಸಿಗೊಳ್ಳೂದು ಆಟ ಅದಕ್ಕ- ಮತ್ತಿಷ್ಟು ಎಣ್ಣಿ ಮೆತ್ತಿದ ಸುಖ ಅನುಭವಿಸೋವಾಗ್ಲೇ ಮೈ ಮ್ಯಾಲೆ ಬಿದ್ದ ಹದ ಸುಡೋ ನೀರಿಗೆ ‘ಕಿರಿರೋ’ ಅಂತ ತಾರಕದಾಗ ಒದರಿ, ಅತ್ತತ್ತು ಬಿಸಿನೀರಿಗೆ ಮೈ ಮಾರೀ ಎಲ್ಲ ಕೆಂಪು. ಆಗ ನೋಡ್ರಿ ಗುಲಾಬಿ ಹೂವು ಅತ್ತಂಗ..ನೀರು ಬ್ಯಾಡ ಬಿಟ್ಟುಬಿಡರೀ ಅಂದಂಗ. ಇಲ್ಲಿ ಸೊಸೀ ಕರುಳು ಚುರ್ರ್ ಅಂದಂಗ…
ಇಷ್ಟಕ್ಕೆ ಬಿಡತಾರೇನು ಕೂಸಿನ್ನ ಎರೀಲಿಕ್ಕೆ ಬಂದ ಇಂದ್ರಕ್ಕ? ಬಚ್ಚಲ ಗೋಡೆಗೆ ಮಣಿ ಮ್ಯಾಲೆ ಕೂತು ಕತ್ರಿಗಾಲು ಜಮಾಸಿ ಕೂಸಿನ ಸೊಂಟಾನೇ ಬಿಗದು ಹಿಡಿದು ಕೈ ಕಾಲು ನೀವಿದರ ಅದು ಅಲ್ಲೇ ಕುಯಿಂ ಕುಯಿಂ ಅಷ್ಟೇ. ಅಂತೂ ಶಿಶು ಮಜ್ಜನ ಮುಂದುವರಿದು ನೆತ್ತಿಗೆ ಬಜಿಪುಡಿ ಸವರಿ ತಪತಪ ನೀರು ತಟ್ಟಿದ್ದಕ್ಕ ಅದೊಂಚೂರು ಸುಖ ಅನಿಸಿ ಸುಮ್ಮನಾಗಿ ತೇಲುಗಣ್ಣು, ಮೇಲುಗಣ್ಣು, ಮಾಡೂವಾಗ ಮತ್ತೈಷ್ಟು ಮಾರಿಗೆ ಬಿದ್ದ ನೀರಿಗೆ ಕಿರ್ರೋ..! ಹಿಂಗೇ ಮಜ್ಜನ ಪ್ರಸಂಗ ಇಡೀ ಇಂದ್ರಕ್ಕ ‘ ಗಂಗಾ, ಭಾಗೀರತೀ, ಯಮುನಾ.. ಕೃಷ್ಣಾ ನದಿಗಳನ್ನ ಕರೆದು- ಕರೆದದ್ದಕ್ಕ ಅವೆಲ್ಲಾ ಬಂದಿಳಿದು ನಿಂತಂಗೇ.. ಮತ್ತ ಗೋಪಾಲಾ, ವಿಠ್ಠಲಾ, ಚೈ ಚೈ… ಹುಶ್ ಹುಳ್ಳುಳ್ಳಆಯೀ.. ಆತಾತು, ಆತಾತುಗಳ ನಡುವೇನೇ ಅದರ ರಾಗ ಬಜಂತ್ರಿಯ ಸಂಗಡ ಶಿಶುಮಜ್ಜನದ ರಮ್ಯ ಪ್ರಸಂಗಕ್ಕೆ ಮಂಗಳ..
ಇಷ್ಟಾಗೋತನಕ ಸೂಸೀ ಹೊಟ್ಟಿಯೊಳಗ ಕಲಕು ಮಲಕು, ಎದಿ ಧಡಧಡ. ಯಾಕಿಷ್ಟು ಅಳಸ್ತಾರ ಕೂಸಿನ್ನ? ಅನ್ನುವ ಅವ್ಯಕ್ತ ಸಂಕಟ. ಚೊಚ್ಚಿಲ ಹೆರಿಗೆ ಅಂದ್ರೆ ಎಲ್ಲಕ್ಕೂ ಗಾಬರಿ ಹೆಚ್ಚು ಅಲ್ಲೇನು? ಅನುಭವ ಯಾವಾಗ ಬಂದೀತು? ಅದಕ್ಕಿನ್ನೂ ಟೈಮ್ ಅದ..ಇಪ್ಪತ್ತರ ಹುಡುಗೀಗೆ ಹಿಂಗೇ ಅನಿಸೋದು ಸಹಜ.
ಕೂಸಿಗೆ ನೀರು ಹಾಕತಿದ್ದ ಮಾಯಿ, ಇಂದ್ರಕ್ಕ ಇಬ್ರೂ ಸೊಸಿ ತಳಮಳ ಕಂಡು ಮಾರೀ ನೋಡ್ಕೊಂಡು ನಗವ್ರು. ಯಾಕಂದ್ರ ಅವರಿಬ್ಬರೂ ಹದಿನಾರಕ್ಕೇ ಚೊಚ್ಚಲ ಹೆತ್ತವರು.ಯಾಕಂದ್ರ ಆಗಿನ ಕಾಲ ಹಂಗಿತ್ತು. ಮತ್ತು ಹಂಗೇ ಇತ್ತು! ಇನ್ನೆಷ್ಟು ಇಂಥಾ ತಳಮಳ ಕಂಡಿರಬೇಕು ಅವರು ಆ ಹೊತ್ತಿಗೆ? ಮಾತೃತ್ವ ಯಾರೂ ಕಲಿಸಿಕೊಟ್ಟು ಬರುವಂಥದ್ದಲ್ಲ.ಕೂಸಿನ ಅಳು ತಾಯ ಹೃದಯಕ್ಕೆ ಕೊಡುವ ಸಿಗ್ನಲ್ ಗಳ ಬಗ್ಗೆ ವೈದ್ಯರನ್ನು ಕೇಳಿದರೆ ಅದರಲ್ಲೇನು? ಎಲ್ಲ ದೇಹ ಮನಸ್ಸಿನ ಸಂಗತಿಗೆ ಜೆನೆಟಿಕ್ ಕಾರಣ ಇದ್ದೇ ಇರ್ತದ ಅಂದುಬಿಟ್ಟಾರು.
ಇಷ್ಟೆಲ್ಲಾ ಆಗೋವಾಗ ತಾನು ಇಷ್ಟೊತ್ತು ಭೋರಾಡಿ ಅತ್ತದ್ದೇಕೆ ಅನ್ನೋದನ್ನೇ ಮರತಂಗ ಕೂಸು ಅಷ್ಟಷ್ಟೇ ಕುಸು ಕುಸು ಮಾಡಿ ಗಪ್ಪಾಗಿ ಬಾಯಿಗೆ ಮೂರೂ ಬೆರಳು ತುರುಕಿಕೊಂಡು ಚಪಾ ಚಪಾ ಚೀಪಿ ಹೊಟ್ಟಿಗಿನ್ನಷ್ಟು ಬೇಕು ಅನ್ನುವ ಸೂಚನಾ ಕೊಡುವಾಗ ಆ ಬೆಣ್ಣಿ ಮುದ್ದಿಯನ್ನು ಮೆತ್ತಗಿನ ಟವೆಲನೊಳಗ ಚಂದ್ರಬಿಂಬದಂಗ ಮಾರಿ ಮಾತ್ರ ಕಾಣೂವಂಗ ಸುತ್ತಿ ಎದಿಗೆ ಅವುಚಿ ಹಿಡ್ಕೊಂಡು ‘ಅಲ್ಲೆಲ್ಲೇ ಗೌರೀ’ಅಂತ ಎತ್ತಿ ತರತಿದ್ರು ಮಾಯಿ.
ಕೂಸು ಅಳೂದನ್ನ ನಿಲ್ಲಿಸಿದ್ದಕ್ಕ ಮನಸಿನೊಳಗ ತಂಪು ಗಾಳಿ ಬೀಸಿದಂಗಾಗಿ ಏನು ಸಮಾಧಾನ ಕೊಡ್ತದಲ್ಲ ಅದು ಹೆತ್ತ ಹೆಣ್ಣುಮಕ್ಕಳಿಗೆ ಗೊತ್ತಿಲ್ಲದಿದ್ರ ಇನ್ಯಾರಿಗೆ ಗೊತ್ತಿರ್ತದ? ಭಿರಿ ಭಿರಿ ಬೀಸಿದ ಗಾಳಿ ಹಿಂದಿಂದ ರಪ್ ಅಂತ ಬಾರಿಸಿದ ಮಳೀ ನಿಂತು ಭೂಮಿಯೆಲ್ಲ ಶಾಂತ ಸ್ನಿಗ್ಧ.. ತೃಪ್ತ ಆದಂಗ.
ಅಂತೂ ಬಚ್ಚಲು ಮನಿ ಬಿಟ್ಟು ಕೂಸು ಬಾಣಂತಿ ಕೋಣೆಯ ತನಕಾ ತನ್ನ ‘ಆಫ್ಟರ್ ಬಾತ್’ ಮೆರವಣಿಗೆ ಹಿತ್ಲ ಪಡಸಾಲೆ, ನಡುಮನಿ, ಅದರ ಬಾಜೂಕಿನ ಚಹಾದ ಖೋಲಿ, ಅದರ ಬಾಜೂಕಿನ ಕೋಟಿ ಖೋಲಿ, ಅರ್ಥಾತ್ ಸ್ಟೋರ್ ರೂಮು-ಅದರ ಬಾಜೂಕಿನ ಇನ್ನೊಂದು ಹಿತ್ತಲ ಕಟ್ಟಿ ಬಾಗಲ ಎಲ್ಲಾ ದಾಟಿ ಸೊಸೀ ಕೈಗೆ ಬಂದು ಸೇರುವ ಹೊತ್ತಿಗಾಗಲೇ ಅದು ಅರ್ಧ ನಿದ್ದೆಯ ಸುಷುಪ್ತಿಯೊಳಗೆ ಜಾರಿಬಿಟ್ಟಿರ್ತಿತ್ತು!
‘ಇಗೋಳವಾ , ನಿನ್ನ ರಾಜಕುಮಾರಿ. ಹೆಂಗ ಥಳಾ ಥಳಾ ಲಕ್ಷ್ಮೀ ಆಗಿ ಹೊಳೀಲಿಕ್ಕತ್ಯಾಳ.. ಎಂಥಾ ಛಂದ ಎರಿಸಿಗೊಂಡಿತು ಕೂಸು..ಭಂಗಾರ ಕೂಸು, ಲೊಚ್” ಕೂಸನ್ನು ಎತ್ತಿ ತಂದ ಮಾಯಿಯಲ್ಲಿ ಒಂದು ಸಮುದ್ರ,ಅದು ಅಂತಃಕರಣ,ಪ್ರೀತಿ, ವಾತ್ಸಲ್ಯದಿಂದ ಭರ್ತಿ ಆದ ಸಾಗರ. ”ಇನ್ನ ನೀ ಇದ್ದೀ ನಿನ್ನ ಮಗಳಿದ್ದಾಳ…ನಾ ಹೋಗ್ತೀನಿ. ತಡೀರಿ ಇಂದ್ರಕ್ಕಾ ಒಂದಿಷ್ಟು ಅವಲಕ್ಕಿ ಛಾ ಕೊಡ್ತೀನಿ..ತೊಗೊಂಡೇ ಹೋಗ್ರಿ, ಪಾಪ ನಿಮಗ ಇನ್ನ ಮೂರು ಮನೀ ಕೂಸು ಎರೀಲಿಕ್ಕೆ ಹೋಗಬೇಕಲ್ಲ..” ಮಾಯಿ ಇಷ್ಟನ್ನು ಹೇಳಿ ಸರಿವವರು.
ಅಲ್ಲಿಗೆ ಶಿಶು ಮಜ್ಜನದ ನಸುನಸುಕಿನ ಕಾರ್ಯಕ್ರಮದ ಕೊನೆ ಹಂತ. ಅರೆಗಣ್ಣು ಮುಚ್ಚಿ ನಿದ್ದೆಗಿಳಿದ ಕೂಸಿಗೆ ಮೈಯಿಡೀ ಹೂವು ತೀಡಿದಂಗ ಜಾನ್ಸನ್ ಪೌಡರ್ ಪೂಸಿ, ಹುಬ್ಬು ತೀಡಿ, ಮನೆಯೊಳಗೇ ನೀಲಾಂಜನದ ದೀಪಕ್ಕೆ ಬೆಳ್ಳಿಬಟ್ಟಲ ಹಿಡಿದು ಕಾಸಿ ಮಾಡಿದ ಕಪ್ಪಿನ ಸಂಗ್ರಹಕ್ಕೆ
ಮನಿ ಬೆಣ್ಣಿ ಕೂಡಿಸಿ ಮಾಡಿದ್ದ ಕಾಡಿಗೆಯಿಂದ ಹಣೆಗೊಂದು, ಕಪಾಳಕ್ಕೊಂಡು ತೀಟ್ (ದೃಷ್ಟಿಬೊಟ್ಟು) ಇಟ್ಟು ಮೆತ್ತಗಿನ ಬಟ್ಟೆ ತೊಡಿಸಿ, ಛಂದಾತಿ ಛಂದನ್ನ ಕುಸುರೀ ಕಮಾನಿನ ಟೊಪ್ಪಿಗೆ ಕಟ್ಟಿ ಕಾಲಿನೊಳಗಿದ್ದ ಗೆಜ್ಜೆ, ಹಾಲ್ಗಡಗ ಹೆಚ್ಚು ಕಣ ಕಣ ಶಬ್ದ ಮಾಡಲಾರದಂಗ ಎಚ್ಚರಿಕಿಯಿಂದ ಎತ್ತಿ ಜಂತಿಯ ತೊಲೆಯಿಂದ ಇಳಿಬಿಟ್ಟಿದ್ದ ಚಂದನ ಚೌಕೀ ತೊಟ್ಟಲದೊಳಗ ಗುಲಾಬಿ ಹೂ ಇಟ್ಟಂಗ ಮಲಗಿಸಿ ಒಂದೆರಡೇ ಜುರುಕು ತೂಗುವುದರೊಳಗೆ ಶಿಶುವನ್ನು ಆಗಲೇ ಸಪ್ತಮ ಸ್ವರ್ಗದ ನಿದ್ರಾದೇವಿ ಬಂದು ತನ್ನ ತೆಕ್ಕಿಯೊಳಗ ಅವುಚಿ ಲಾಲೀ ಹಾಡ್ಲಿಕ್ಕೆ ಸುರು ಆಗಿಬಿಟ್ಟಿತ್ತು.
ಅದೇ ಲಾಲಿ ಅಮ್ಮನ ಬಾಯೊಳ್ಗ ಮಾಯಿ ಹೇಳಿಕೊಟ್ಟ ಜಾನಪದ ಹಾಡಾಯ್ತು. ಲಲ್ಲಬೈ, ರೈಮಿಂಗ್ ಸಾಂಗ್ಸ್ ಎಲ್ಲ ಅವೇ..ಹೃದಯ ಹಾಡುವ ಅಸ್ಸಲ್ ಮನೆ ಮಾತಿನ ಹಾಡು..
‘‘ಚಿಕು ಚಿಕು ಕಂದಮ್ಮಗ ಚೀಟೀನ ಎರಡಂಗೀ
ಚಿಂತಾಮಣಿಯೆಂಬೋ ಚಿರಗುದರೀ I
ಬಾಲೀ ಆಟವ ನೋಡ ಬಾಳೀ ತ್ವಾಟಾ ನೋಡ
ಬಾಳಿ ಮಲಿಗೇದ ಉಡಿಯೊಳಗss” II
ಅಮ್ಮ! ಯಾರವಳು? ಅವಳಿಗೊಂದು ಮದರ್ಸ್ ಡೇ ಬೇಕೇ? ಒಂದು ದಿನ ನೆನೆದರೆ ಸಾಕೆ?
-ಜಯಶ್ರೀ ದೇಶಪಾಂಡೆ