ಕಾವ್ಯ ಸಂಗಾತಿ
ಗುಣಾಜೆ ರಾಮಚಂದ್ರ ಭಟ್
ಗಾನಾಲಾಪನ

ಸಂಗೀತ ಕೇಳುತ್ತ ರಂಗಾದ ಭಾವಗಳು
ಮುಂಗಾರು ಹನಿದಂತೆ ಹರ್ಷ ಮೇಳ
ಕಂಗಾಲು ಆದೆಲ್ಲ ಈ ಬುವಿಯ ಜೀವಗಳು
ಸಂಗಾತಿಯೊಡನಿರಲು ತಕ್ಕ ತಾಳ..
ಹರಿವಲ್ಲಿ ಓಳಿಗಳು ನಾದದಲೆ ಹೊಮ್ಮಿಸುತ
ಸುರಿಯವವು ಜೇನಂತೆ ಗಾನ ಪಾನ ..
ಸರಿಯುತ್ತಯೆಲರೆಲ್ಲ ಬಾರಿಸುತ ಕೊಳಲನ್ನು
ಸರಿಗಮದ ರಾಗದಲಿ ಹಾಡ ತಾನ..
ಹಕ್ಕಿಗಳ ಉಲ್ಲಾಸದುಲಿಯಲ್ಲಿ ಚೇತನವು
ಉಕ್ಕುತ್ತ ಚಿಮ್ಮುತಿದೆ ಪುಳಕ ಪೂರ..
ಅಕ್ಕರೆಯ ಸೂಸುತ್ತ ಮಾತಾಯಿ ಕಂದನಿಗೆ
ಸಕ್ಕರೆಯ ಜೋಗುಳವ ತೊಡಿಸಿ ಹಾರ..
ವೇದನೆಯ ಸರಿಸುತ್ತ ಮೋದವನು ತುಂಬುತ್ತ
ನಾದ ಮಯ ಲೋಕದಲಿ ಸಾನಂದವೆ ..
ಕಾದಿರುವ ಬುವಿಗೆಲ್ಲ ಮೊದಲ ಮಳೆ ಮುತ್ತಂತೆ
ವೇದಗಳ ಲಯವಿಲ್ಲಿ ಹೊಮ್ಮುತ್ತಿವೆ..
ಗುಣಾಜೆ ರಾಮಚಂದ್ರ ಭಟ್
